×
ADVERTISEMENT
ಈ ಕ್ಷಣ :
ADVERTISEMENT

ದೇವರ ಭೂಮಿಯಲ್ಲಿ ಪರಿಸರ ಕಾಯಕ

ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಪೇಂಟರ್ ಕೆಲಸದ ಯುವಕರು
Published : 21 ಜನವರಿ 2022, 6:21 IST
ಫಾಲೋ ಮಾಡಿ
Comments

ಹಿರಿಯೂರು: ಶತಮಾನದ ಇತಿಹಾಸ ಇರುವ ದೇವರ ಹೆಸರಿನಲ್ಲಿರುವ ಭೂಮಿಯಲ್ಲಿ ತಮ್ಮ ಬಡತನವನ್ನು ಲೆಕ್ಕಿಸದೇ ಹಸಿರು ಮೂಡಿಸುವ ಕಾರ್ಯದ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಯುವಕರು, ಹೀಗೂ ದೇವರ ಪೂಜೆ ಸಾಧ್ಯವಲ್ಲವೇ? ಎಂಬುದನ್ನು ಸಾಕ್ಷೀಕರಿಸಿದ್ದಾರೆ.

ತಾಲ್ಲೂಕಿನ ಧರ್ಮಪುರ ರಸ್ತೆಯಲ್ಲಿ ಭೀಮನ ಬಂಡೆಯಿಂದ ಅರ್ಧ ಕಿಲೋಮೀಟರ್ ಒಳಗೆ ಹೋದರೆ ಅಲ್ಲಿ ‘ಯಾಪ್ರಾಳಮ್ಮ’ ಎಂಬ ಜಾನಪದ ಹಿನ್ನೆಲೆ ಇರುವ ದೇವಿಯ ಗುಡಿಯಿದೆ. ದೇಗುಲ ನಿರ್ಮಿಸಿದ ಹಿರಿಯರು ದೇವಸ್ಥಾನಕ್ಕೆಂದು ಮೀಸಲಿಟ್ಟಿರುವ ಒಂದು ಎಕರೆ ಭೂಮಿಯಲ್ಲಿ ಪುಟ್ಟ ದೇಗುಲ ಕಾಣದ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿದ್ದವು. ನೂರಾರು ವರ್ಷಗಳಿಂದ ದೇವರಿಗೆ ನಡೆದುಕೊಳ್ಳುವ ಭಕ್ತರು ಕಲ್ಲುಮುಳ್ಳು ತುಳಿದುಕೊಂಡೇ ದೇವಿಯ ದರ್ಶನ ಪಡೆಯಬೇಕಿತ್ತು.

ದೇವರಿಗೂ ಒಳ್ಳೆಯ ಕಾಲ: ‘ನಮ್ಮ ತಾತನ ಕಾಲದಿಂದ ಯಾಪ್ರಾಳಮ್ಮ ದೇವಿಗೆ ನಡೆದುಕೊಳ್ಳುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ದೇವಿಯ ದರ್ಶನಕ್ಕೆ ಬಂದಿದ್ದಾಗ ದೇವಸ್ಥಾನದ ಸುತ್ತಮುತ್ತಲ ಪರಿಸರ ನೋಡಿ ಬೇಸರ ಎನಿಸಿತು. ಗೆಳೆಯರಾದ ರಾಘವೇಂದ್ರ ಮತ್ತು ಹರೀಶ್ ಜೊತೆ ಈ ಬಗ್ಗೆ ಚರ್ಚಿಸಿದೆ. ತಕ್ಷಣ ಹುಲ್ಲು ಕತ್ತರಿಸುವ ಯಂತ್ರ ತಂದು ಮೂವರೂ ಗಿಡಗಂಟಿಗಳನ್ನೆಲ್ಲ ಕತ್ತರಿಸಿದೆವು. ಆಗ ಇಡೀ ಆವರಣ ಹೊಸ ಮೈದಾನದಂತೆ ಕಾಣತೊಡಗಿತು. ಜಮೀನಿನಲ್ಲಿ ಗಿಡ ನೆಟ್ಟರೆ ಹೇಗೆ? ಎಂಬ ಯೋಚನೆ ಬಂದಿತು. ಗುಂಡಿ ತೋಡಿ ಸಸಿ ನೆಡುವುದು, ಕುರಿ–ಮೇಕೆ, ದನ–ಕರುಗಳು ಗಿಡಗಳನ್ನು ತಿನ್ನದಂತೆ ಶೇಡ್ ನೆಟ್ ಹಾಕಿ ರಕ್ಷಣಾ ವ್ಯವಸ್ಥೆ ಮಾಡುವುದು ಕಷ್ಟ ಎನಿಸಲಿಲ್ಲ. ಆದರೆ ಗಿಡಗಳಿಗೆ ನೀರುಣಿಸುವುದು ಸವಾಲಾಯಿತು’ ಎನ್ನುತ್ತಾರೆ ಗೆಳೆಯರ ಜೊತೆ ಪೇಂಟಿಂಗ್ ಕೆಲಸದ ಕೂಲಿ ಮಾಡುವ ಪುಟ್ಟಯ್ಯನಕಟ್ಟೆ ಗ್ರಾಮದ ಓಬಳನಾಯಕ.

‘ಒಂದು ಎಕರೆ ಜಮೀನಿನಲ್ಲಿ ಹಲಸು, ಮಾವು, ನೇರಳೆ, ಬೇವು, ತೆಂಗು, ಹೊಂಗೆ, ಗಸಗಸೆ, ಹತ್ತಿ, ಕಾಡು ಬಾದಾಮಿ ಒಳಗೊಂಡಂತೆ ಹಲವು ಬಗೆಯ ಸಸಿಗಳನ್ನು, ಹೂವಿನ ಗಿಡಗಳನ್ನು ನಾಟಿ ಮಾಡಿದ್ದೇವೆ. ಒಂದು ವರ್ಷದಿಂದ ಮೂರ್ನಾಲ್ಕು ಫರ್ಲಾಂಗು ದೂರದಿಂದ ನೀರು ತಂದು ಗಿಡಗಳಿಗೆ ಉಣಿಸುತ್ತಿದ್ದೇವೆ. ಆಗಾಗ ಹುಲ್ಲನ್ನು ಯಂತ್ರ ಬಳಸಿ ಕತ್ತರಿಸುತ್ತಿದ್ದೇವೆ. ಕೆಲವು ಬಾರಿ ಗಿಡಗಳು ಬಾಡುವುದನ್ನು ನೋಡಲಾಗದೇ ಬಾಡಿಗೆ ಕೊಟ್ಟು ಟ್ಯಾಂಕರ್‌ನಿಂದ ನೀರು ಬಿಟ್ಟಿದ್ದೇವೆ. ಲಾಕ್‌ಡೌನ್ ಸಮಯದಲ್ಲಿ ಬದುಕು ನಡೆಸುವುದೇ ಕಷ್ಟವಾಗಿತ್ತು. ಅದರ ನಡುವೆಯೂ ಹಿಡಿದ ಕೆಲಸ ಬಿಡಬಾರದು ಎಂದು ಗಿಡಗಳ ರಕ್ಷಣೆ ಮಾಡುತ್ತಿದ್ದೇವೆ’ ಎಂದು ಓಬಳನಾಯಕ ತಿಳಿಸಿದರು.

‘ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ದಾನಿಗಳು, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಅಥವಾ ಶಾಸಕರು ಈ ಜಾಗದಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್ ಅಳವಡಿಸಿಕೊಟ್ಟಲ್ಲಿ ಒಂದೆರಡು ವರ್ಷಗಳಲ್ಲಿ ಸುಂದರವಾದ ವನ ನಿರ್ಮಿಸುತ್ತೇವೆ. ಗುಂಡಿ ತೆಗೆಸಲು, ಶೇಡ್ ನೆಟ್‌ಗೆ, ಟ್ಯಾಂಕರ್‌ನಲ್ಲಿ ನೀರು ಹಾಯಿಸಲು ಐದಾರು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಪೇಂಟಿಂಗ್ ಕೂಲಿ ಇಲ್ಲದ ಸಮಯದಲ್ಲಿ ಇಲ್ಲಿಯ ಕೆಲಸ ಮಾಡುತ್ತೇವೆ’ ಎನ್ನುವ ಓಬಳನಾಯಕ, ಶಿಥಿಲವಾಗಿರುವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಕನಸು
ಹೊಂದಿದ್ದಾರೆ.

ಶತಮಾನದ ಇತಿಹಾಸ ಇರುವ ದೇವರ ಹೆಸರಿನಲ್ಲಿರುವ ಭೂಮಿಯಲ್ಲಿ ತಮ್ಮ ಬಡತನವನ್ನು ಲೆಕ್ಕಿಸದೆ ಹಸಿರು ಮೂಡಿಸುವ ಕಾರ್ಯದ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಯುವಕರು, ಹೀಗೂ ದೇವರ ಪೂಜೆ ಸಾಧ್ಯವಲ್ಲವೇ? ಎಂಬುದನ್ನು ಸಾಕ್ಷೀಕರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT