×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣುಮಕ್ಕಳ ಸುರಕ್ಷತೆಗಾಗಿ ಶೌಚಾಲಯ ನಿರ್ಮಿಸಿ

ರೇಣುಕಾಪುರದಲ್ಲಿ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಲಹೆ
Published : 17 ಅಕ್ಟೋಬರ್ 2021, 4:34 IST
ಫಾಲೋ ಮಾಡಿ
Comments

ನಾಯಕನಹಟ್ಟಿ: ‘ಗ್ರಾಮದ ಮನೆಗಳಲ್ಲಿ ಶೌಚಾಲಯಗಳ ಕೊರತೆ ಹೆಚ್ಚಾಗಿದೆ. ಶೌಚಾಲಯಗಳನ್ನು ನಿರ್ಮಿಸಿ, ಹೆಣ್ಣುಮಕ್ಕಳ ಸುರಕ್ಷತೆಗೆ ಆದ್ಯತೆ ನಿಡಬೇಕು. ಈ ಕುರಿತು ಗಂಡು ಮಕ್ಕಳಿಗೆ ನೀತಿಪಾಠ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸಲಹೆ ನೀಡಿದರು.

ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉತ್ತಮ ಶಿಕ್ಷಣದಿಂದ ಜ್ಞಾನವೃದ್ಧಿಯಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹಾಗಾಗಿ ಗ್ರಾಮದ ಯಾವ ಪ್ರಜೆಯೂ ಶಿಕ್ಷಣದಿಂದ ವಂಚಿತರಾಗಬಾರದು’ ಎಂದು ಅವರು
ಹೇಳಿದರು.

‘ಶಿಕ್ಷಣದ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುತ್ತವೆ. ಇಂತಹ ಕೃತ್ಯಗಳು ಶಿಕ್ಷಾರ್ಹ ಅಪರಾಧವಾಗಿವೆ. ಸರ್ಕಾರ ಬಾಲ್ಯವಿವಾಹಗಳನ್ನು ನಿಷೇಧಿಸಿದ್ದು, ವಿವಾಹ ಮಾಡಲು ಹುಡುಗಿಯರಿಗೆ ಕನಿಷ್ಠ 18 ಹಾಗೂ ಹುಡುಗರಿಗೆ 21 ವರ್ಷ ನಿಗದಿಪಡಿಸಲಾಗಿದೆ. ಯಾರೂ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ, 21 ವರ್ಷದೊಳಗಿನ ಹುಡುಗರಿಗೆ ಮದುವೆ ಮಾಡಬೇಡಿ, ಅಂತಹ ಮದುವೆಗಳು ಅಸಿಂಧುವಾಗುತ್ತವೆ. ಬದಲಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ’ ಎಂದು ಕಿವಿ ಮಾತು ಹೇಳಿದರು.

‘ಗ್ರಾಮದಲ್ಲಿ ಎಲ್ಲ 1,486 ಜನ ಸಂರ್ಪೂಣ ಲಸಿಕೆ ಪಡೆದಿರುವುದು ಸಂತೋಷದ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ‘ಚಳ್ಳಕೆರೆ ತಾಲ್ಲೂಕಿನ 8 ಗ್ರಾಮಗಳನ್ನು ಈಗಾಗಲೇ ಸಮಸ್ಯೆ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಇಡೀ ತಾಲ್ಲೂಕು ಆಡಳಿತ ಗ್ರಾಮಗಳ ಕಲ್ಯಾಣಕ್ಕೆ ಬದ್ಧವಾಗಿದೆ’ ಎಂದರು.

ಗ್ರಾಮಸ್ಥರು, ‘ರೇಣುಕಾಪುರಕ್ಕೆ ರೈತ ಸಂಪರ್ಕ ಉಪಕೇಂದ್ರ ಆರಂಭ, ಶೇಂಗಾ ಬೀಜ ವಿತರಣೆ ದಾಸ್ತಾನು ಆರಂಭ, ಆರೋಗ್ಯ ಉಪಕೇಂದ್ರ, ಬಸ್‌ಸೌಕರ್ಯ, ರಸ್ತೆ ವಿಸ್ತರಣೆ, ಶಾಲಾ ಕಟ್ಟಡ ದುರಸ್ತಿ, ಬ್ಯಾಂಕ್ ಶಾಖೆ ಮುಂತಾದ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಅವರು ರೇಣುಕಾಪುರದ ಹಲವು ಮನೆಗಳಿಗೆ ಭೇಟಿ ನೀಡಿ ಮನೆಯ ಸದಸ್ಯರ ಯೋಗಕ್ಷೇಮ ವಿಚಾರಿಸಿ, ಸಮಸ್ಯೆಗಳ ಮಾಹಿತಿ ಪಡೆದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನದ ಅಡಿಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಂದ ಶ್ರಮದಾನ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ರೇಣುಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಕ್ಕ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ರೇಣುಕಾಪುರ ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಇತ್ಯರ್ಥ ಪಡಿಸಿದ ಅರ್ಜಿಗಳು

23 ಪೌತಿ ಖಾತೆಗೆ ಸಂಬಂಧಿಸಿ ಅರ್ಜಿಗಳು, ಬಗರ್ ಹುಕುಂಗೆ ಸಂಬಂಧಿಸಿ 142 ಅರ್ಜಿ, 530 ಬೆಳೆ ಪರಿಹಾರ ಅರ್ಜಿಗಳು ಸ್ವೀಕಾರಗೊಂಡಿದ್ದು, ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಸ್ಮಶಾನ ಒತ್ತುವರಿ ತೆರವು ಹಾಗೂ ಎರಡು ಎಕರೆ ಜಾಗವನ್ನು ಘನತ್ಯಾಜ್ಯ ವಿಲೇವಾರಿಗಾಗಿ ಗ್ರಾಮ ಪಂಚಾಯಿತಿ ಜಾಗವನ್ನು ನೀಡಲಾಗಿದೆ. ಇಂದಿರಾ ಗಾಂಧಿ ರಾಷ್ಟಿಯ ವೃದ್ಧಾಪ್ಯ ವೇತನ 3 ಅರ್ಜಿಗಳು, ನಿರ್ಗತಿಕ ವಿಧವಾ ವೇತನ 2 ಅರ್ಜಿ, ಸಂಧ್ಯಾ ಸುರಕ್ಷಾ 7 ಅರ್ಜಿ, ಮನಸ್ವಿನಿ 1 ಅರ್ಜಿ ಸೇರಿದಂತೆ ಒಟ್ಟು 13 ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.

ಉತ್ತಮವಾದ ಶಿಕ್ಷಣದಿಂದ ಜ್ಞಾನವೃದ್ಧಿಯಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಹಾಗಾಗಿ ಗ್ರಾಮದ ಯಾವ ಪ್ರಜೆಯು ಶಿಕ್ಷಣದಿಂದ ವಂಚಿತವಾಗದೇ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT