×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಕೋವಿಡ್‌ ಭತ್ಯೆಗೆ ಶುಶ್ರೂಷಕರ ಪ್ರತಿಭಟನೆ

ಕಪ್ಪು ಪಟ್ಟಿ ಧರಿಸಿ ಸಿಮ್ಸ್‌ನಲ್ಲಿ ಕಾರ್ಯನಿರ್ವಹಣೆ, ಇನ್ನೂ ಆರು ದಿನ ಪ್ರತಿಭಟನೆ
Published : 17 ಜನವರಿ 2022, 16:34 IST
ಫಾಲೋ ಮಾಡಿ
Comments

ಚಾಮರಾಜನಗರ: ಸರ್ಕಾರ ಮಾಡಿರುವ ಘೋಷಣೆಯಂತೆ ಕೋವಿಡ್‌ ಅಪಾಯ ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆಯಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಶುಶ್ರೂಷಕಾಧಿಕಾರಿಗಳು (ನರ್ಸ್‌ಗಳು) ಸೋಮವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು. 

ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಶುಶ್ರೂಷಕಾಧಿಕಾರಿಗಳು, ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘದ ಅಡಿಯಲ್ಲಿ ರಾಜ್ಯದಾದ್ಯಂತ ಸಾಂಕೇತಿಕ ಪ್ರತಿಭಟನೆ ಆರಂಭಿಸಿದ್ದು, ಇನ್ನೂ ಆರು ದಿನಗಳ ಕಾಲ ಮುಂದುವರೆಯಲಿದೆ. 

ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿರುವ ಶುಶ್ರೂಷಕಾಧಿಕಾರಿಗಳು ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ತಮ್ಮ ಕರ್ತವ್ಯ ನಿರ್ವಹಿಸಿದರು. ಸಂಸ್ಥೆಯ ಡೀನ್‌ ಹಾಗೂ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದರು.   

’ಕೋವಿಡ್‌ ಸೇನಾನಿಗಳಾಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಶುಶ್ರೂಷಕಾಧಿಕಾರಿಗಳಿಗೆ ಪ್ರತಿ ತಿಂಗಳು ಅಪಾಯ ಭತ್ಯೆ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ, ಒಂದೂವರೆ ವರ್ಷದಿಂದ ಭತ್ಯೆ ಕೊಟ್ಟಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಇಲಾಖೆ ಸ್ಪಂದಿಸಿಲ್ಲ. ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಶುಶ್ರೂಷಕರಿಗೆ ಭತ್ಯೆ ಪಾವತಿ ಮಾಡಲಾಗಿದೆ. ನಮಗೆ ಇನ್ನೂ ಕೊಟ್ಟಿಲ್ಲ‘ ಎಂದು ಶುಶ್ರೂಷಕಾಧಿಕಾರಿಗಳು ದೂರಿದ್ದಾರೆ.  

’ಸರ್ಕಾರ ಹಾಗೂ ಇಲಾಖೆಯ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘ ಹಾಗೂ ರಾಜ್ಯದಾದ್ಯಂತ ಇರುವ ಎಲ್ಲಾ ವೈದ್ಯಕೀಯ ಕಾಲೇಜುಗಳ ಸಂಘಟನೆಗಳ ಅಡಿಯಲ್ಲಿ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಏಳು ದಿನಗಳ ಕಾಲ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಸೋಮವಾರ ನಮ್ಮ ಪ್ರತಿಭಟನೆಯನ್ನು ಆರಂಭಿಸಿದ್ದೇವೆ. ಕೋವಿಡ್‌ ಅಪಾಯ ಭತ್ಯೆಯನ್ನು ಪಾವತಿ ಮಾಡದಿದ್ದರೆ ತೀವ್ರವಾದ ಹೋರಾಟ ನಡೆಸಲಾಗುವುದು‘ ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಜವರನಾಯಕ, ಸದಸ್ಯರಾದ ಮಾದೇಶ್, ಶ್ರೀನಿವಾಸ್, ಸತೀಶ್ ಕುಮಾರ್, ಕೀರ್ತನ್, ರೇಷ್ಮಾ, ಶಿಲ್ಪಾ, ಸಾಕಮ್ಮ, ನಂದಿನಿ, ದೇವಿಕಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸರ್ಕಾರ ಮಾಡಿರುವ ಘೋಷಣೆಯಂತೆ ಕೋವಿಡ್‌ ಅಪಾಯ ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಶುಶ್ರೂಷಕಾಧಿಕಾರಿಗಳು (ನರ್ಸ್‌ಗಳು) ಸೋಮವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT