×
ADVERTISEMENT
ಈ ಕ್ಷಣ :
ADVERTISEMENT

ಕನ್ನಹಳ್ಳಿ, ಕಸ ಸಂಸ್ಕರಣಾ ಘಟಕಗಳ ಪುನರಾರಂಭ

ನವಬೆಂಗಳೂರು ಯೋಜನೆಯಡಿ ಮಂಜೂರಾಗಿದ್ದ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ
ಫಾಲೋ ಮಾಡಿ
Comments

ಬೆಂಗಳೂರು: ದೇವನಹಳ್ಳಿ, ನೆಲಮಂಗಲ, ಮಾಗಡಿ ಹಾಗೂ ರಾಮನಗರ ತಾಲ್ಲೂಕುಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ಪ್ರದೇಶಗಳ ಅಭಿವೃದ್ಧಿ ಸಲುವಾಗಿ ಮಂಜೂರಾಗಿದ್ದ ₹ 50 ಕೋಟಿ ಅನುದಾನವನ್ನು ಕನ್ನಹಳ್ಳಿ ಮತ್ತು ಸೀಗೇಹಳ್ಳಿ ಕಸ ಸಂಸ್ಕರಣಾ ಘಟಕಗಳ ಪುನರಾರಂಭಕ್ಕೆ ಬಳಸಲು ಸರ್ಕಾರ ನಿರ್ಧರಿಸಿದೆ.

ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ನಾಲ್ಕು ತಾಲ್ಲೂಕುಗಳಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಈ ಘಟಕಗಳಿಂದಾಗಿ ಬಾಧಿತವಾಗುವ ನಾಲ್ಕು ತಾಲ್ಲೂಕುಗಳ ಅಭಿವೃದ್ಧಿ ಸಲುವಾಗಿ ಮುಖ್ಯಮಂತ್ರಿಯವರ ನವ ಬೆಂಗಳೂರು ಯೋಜನೆ ಅಡಿ ₹ 120 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ‘ಮುಖ್ಯಮಂತ್ರಿಯವರ ನವ ಬೆಂಗಳೂರು’ ಯೋಜನೆಯು ರದ್ದು‍ಪಡಿಸಿ ‘ಮುಖ್ಯಮಂತ್ರಿಯವರ ನವನಗರೋತ್ಥಾನ’ ಯೋಜನೆಯನ್ನು 2019ರ ಸೆ. 20ರಂದು ಜಾರಿಗೊಳಿಸಲಾಗಿತ್ತು. ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕಿತ್ತುಕೊಂಡಿದ್ದನ್ನು ಪ್ರಶ್ನಿಸಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವನಹಳ್ಳಿ, ನೆಲಮಂಗಲ, ಮಾಗಡಿ ಹಾಗೂ ರಾಮನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳನ್ನು ₹ 50 ಕೋಟಿ ಮಿತಿಯಲ್ಲಿ ಕೈಗೊಳ್ಳಲು ಸರ್ಕಾರ 2020ರ ಅ.05ರಂದು ಅನುಮತಿ ನೀಡಿತ್ತು. ಇದರ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸರ್ಕಾರ ಸೂಚಿಸಿತ್ತು. ಮಾಗಡಿ ಕ್ಷೇತ್ರದ ಬಿಡದಿಯಲ್ಲಿ ಕೆಪಿಸಿಎಲ್‌ ವತಿಯಿಂದ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸುವುದನ್ನು ಹೊರತುಪಡಿಸಿ ಬಿಬಿಎಂಪಿ ಹೊರಗಿನ ಬೇರೆ ಪ್ರದೇಶಗಳಲ್ಲಿ ಕಸ ವಿಲೇವಾರಿಗೆ ಸ್ಥಳ ನಿಗದಿಪಡಿಸಿಲ್ಲ. ಹಾಗಾಗಿ ₹ 50 ಕೋಟಿ ಬಳಕೆಗೆ ಕ್ರಿಯಾಯೋಜನೆ ತಯಾರಿಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಬಿಡದಿಯಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಆರಂಭಿಸುವ ಬಗ್ಗೆ ಕೆಪಿಸಿಎಲ್‌ ಖಾಸಗಿ ಸಂಸ್ಥೆಗೆ ಟೆಂಡರ್‌ ಆಧಾರದಲ್ಲಿ ಗುತ್ತಿಗೆ ನೀಡಿದೆ. 11 ಮೆಗಾ ವಾಟ್‌ ಸಾಮರ್ಥ್ಯದ ಈ ಘಟಕದ ನಿರ್ಮಾಣವ ವೆಚ್ಚವನ್ನು ಕೆಪಿಸಿಎಲ್‌ ಹಾಗೂ ಬಿಬಿಎಂಪಿ 50: 50 ಅನುಪಾತದಲ್ಲಿ ಹಂಚಿಕೊಳ್ಳಲಿವೆ. ಈ ಘಟಕ ನಿರ್ಮಾಣಕ್ಕಾಗಿ ಬಿಬಿಎಂಪಿ ಈಗಾಗಲೇ ₹ 10 ಕೋಟಿಯನ್ನು ಕೆಪಿಸಿಎಲ್‌ಗೆ ಪಾವತಿಸಿದೆ. ಈ ಘಟಕವು ಕಾರ್ಯಾರಂಭವಾಗಿ ಕಸದಿಂದ ವಿದ್ಯುತ್‌ ಉತ್ಪಾದಿಸಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಈ ಘಟಕಕ್ಕೆ ಪಾಲಿಕೆಯ ಕಸವನ್ನು ಸ್ವೀಕರಿಸುವ ಕಾರ್ಯವೂ ಇನ್ನೂ ಶುರುವಾಗಿಲ್ಲ. ಹಾಗಾಗಿ ಈ ನಾಲ್ಕು ಕ್ಷೇತ್ರಗಳಿಗೆ ಮಂಜೂರಾಗಿದ್ದ ₹ 50 ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. 

‘ಈ ನಾಲ್ಕು ಕ್ಷೇತ್ರಗಳು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿವೆ. ಇಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ಹಾಗಾಗಿ ಈ ಕ್ಷೇತ್ರಗಳಿಗೆ ಕಸ ವಿಲೇವಾರಿ ಸಂಬಂಧ ಯಾವುದೇ ಅನುದಾನವನ್ನು ನವ ನಗರೋತ್ಥಾನ ಯೋಜನೆಯಡಿ ನಿಗದಿಪಡಿಸಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಗಡಿ ಶಾಸಕ ಎ.ಮಂಜುನಾಥ್‌ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ.

ಮುಖ್ಯಮಂತ್ರಿಯವರ ನವನಗರೋತ್ಥಾನ ಯೋಜನೆಯಡಿ ಕಸ ನಿರ್ವಹಣೆ ಸಂಬಂಧಿಸಿದ ಕಾಮಗಾರಿಗಳಿಗಾಗಿ ಕಾಯ್ದಿರಿಸಿದ್ದ ₹ 50 ಕೋಟಿಯನ್ನು ಕನ್ನಹಳ್ಳಿ ಮತ್ತು ಸೀಗೇಹಳ್ಳಿಗಳಲ್ಲಿ ಸ್ಥಗಿತಗೊಂಡಿರುವ ಕಸ ಸಂಸ್ಕರಣಾ ಘಟಕಗಳ ಪುನರಾರಂಭಕ್ಕೆ ಬಳಸುವ ಬಿಬಿಎಂಪಿಯ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಈ ಎರಡೂ ಘಟಕಗಳು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರತಿನಿಧಿಸುವ ಯಶವಂತಪುರದ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ದೇವನಹಳ್ಳಿ, ನೆಲಮಂಗಲ, ಮಾಗಡಿ ಹಾಗೂ ರಾಮನಗರ ತಾಲ್ಲೂಕುಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ಪ್ರದೇಶಗಳ ಅಭಿವೃದ್ಧಿ ಸಲುವಾಗಿ ಮಂಜೂರಾಗಿದ್ದ ₹ 50 ಕೋಟಿ ಅನುದಾನವನ್ನು ಕನ್ನಹಳ್ಳಿ ಮತ್ತು ಸೀಗೇಹಳ್ಳಿ ಕಸ ಸಂಸ್ಕರಣಾ ಘಟಕಗಳ ಪುನರಾರಂಭಕ್ಕೆ ಬಳಸಲು ಸರ್ಕಾರ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT