×
ADVERTISEMENT
ಈ ಕ್ಷಣ :
ADVERTISEMENT

‘ಐಎಎಸ್’ ನಕಲಿ ಅಧಿಕಾರಿ ಬಂಧನ

* ಕೆಲಸ ಕೊಡಿಸುವ ಆಮಿಷವೊಡ್ಡಿ ವಂಚನೆ * ನಕಲಿ ಗುರುತಿನ ಚೀಟಿ ಪತ್ತೆ
Published : 15 ಅಕ್ಟೋಬರ್ 2021, 16:17 IST
ಫಾಲೋ ಮಾಡಿ
Comments

ಬೆಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಸಂದೀಪ್ ಎಂಬಾತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ಸಂದೀಪ್, ‘ನಾನು ಐಎಎಸ್‌ ಅಧಿಕಾರಿ’ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಆತನ ವಂಚನೆ ವಿರುದ್ಧ ಪುಲಿಕೇಶಿನಗರ ಹಾಗೂ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಎರಡೂ ಪ್ರಕರಣಗಳ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತನ್ನ ಹೆಸರು ‘ಸಂದೀಪ್ ಎನ್‌. ಪ್ರಸಾದ್’ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿ, ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದನೆಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ತಿಳಿಸಿದರು.

ತಿರುಪತಿಯಲ್ಲಿ ಪರಿಚಯವಾಗಿ ಆಮಿಷ: ‘ಸಂದೀಪ್ ವಿರುದ್ಧ ಕೆ. ವೀಣಾ ಎಂಬುವರು ದೂರು ನೀಡಿದ್ದಾರೆ. ವಂಚನೆ ಆರೋಪದಡಿ ಪುಲಿಕೇಶಿನಗರದಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ನಗರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೀಣಾ, ಕೆಲ ತಿಂಗಳ ಹಿಂದೆ ತಿರುಪತಿಗೆ ಹೋಗಿದ್ದರು. ಅಲ್ಲಿ ಅವರಿಗೆ ಆರೋಪಿಯ ಪರಿಚಯವಾಗಿತ್ತು. ಐಎಎಸ್ ಅಧಿಕಾರಿ ಎಂಬುದಾಗಿ ಹೇಳಿಕೊಂಡಿದ್ದ ಆರೋಪಿ, ಕರ್ನಾಟಕ ಸರ್ಕಾರದಲ್ಲಿ ತಿಂಗಳಿಗೆ ₹ 75 ಸಾವಿರ ವೇತನ ಸಿಗುವ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಅದಕ್ಕೆ ಹಣ ಖರ್ಚಾಗುತ್ತದೆಯೆಂದು ಹೇಳಿ ಹಂತ ಹಂತವಾಗಿ ₹ 6 ಲಕ್ಷ ಪಡೆದಿದ್ದ.’

‘ನೇಮಕಾತಿಯ ನಕಲಿ ಆದೇಶವನ್ನು ವೀಣಾ ಅವರಿಗೆ ಇ–ಮೇಲ್ ಮೂಲಕ ಕಳುಹಿಸಿದ್ದ ಆರೋಪಿ, ಅವರ ಸ್ನೇಹಿತರಿಗೂ ಕೆಲಸದ ಆಮಿಷವೊಡ್ಡಿ ಹಣ ಪಡೆದಿದ್ದ. ನಂತರ ಅಭ್ಯರ್ಥಿಗಳು, ಯಾವಾಗ ಕೆಲಸಕ್ಕೆ ಹಾಜರಾಗಬೇಕೆಂದು ಕೇಳಿದ್ದರು. ಅದಕ್ಕೆ ಆರೋಪಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನೊಂದ ಅಭ್ಯರ್ಥಿ ಠಾಣೆಗೆ ದೂರು ನೀಡಿದ್ದಾರೆ’ ಎಂದೂ ಅಧಿಕಾರಿ ತಿಳಿಸಿದರು.

‘ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಹೈಕೋರ್ಟ್‌... ಹೀಗೆ ಹಲವೆಡೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಆರೋಪಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈತನ ವಿರುದ್ಧ ಸದ್ಯ ಎರಡು ಪ್ರಕರಣಗಳು ದಾಖಲಾಗಿದ್ದು, ಬೇರೆ ಯಾರಾದರೂ ವಂಚನೆಗೀಡಾಗಿದ್ದರೆ ದೂರು ನೀಡಬಹುದು’ ಎಂದೂ ಕೋರಿದ್ದಾರೆ.

ವೀಣಾ ವಿರುದ್ಧವೂ ಪ್ರಕರಣ: ‘ಐಎಎಸ್ ಅಧಿಕಾರಿ ಸಂದೀಪ್ ತುಂಬಾ ಪರಿಚಿತರೆಂದು ಹೇಳಿಕೊಂಡಿದ್ದ ವೀಣಾ, ಸಹೋದ್ಯೋಗಿಯೊಬ್ಬರಿಗೆ ಕೆಲಸದ ಆಮಿಷವೊಡ್ಡಿ ₹ 6 ಲಕ್ಷ ಹಣ ಪಡೆದಿದ್ದರು. ಆ ಹಣವನ್ನು ಸಂದೀಪ್‌ಗೆ ಕೊಟ್ಟಿದ್ದರು ಎನ್ನಲಾಗಿದೆ. ಆತ ನೇಮಕಾತಿಯ ನಕಲಿ ಆದೇಶ ನೀಡಿದ್ದ. ಈ ಬಗ್ಗೆ ಸಹೋದ್ಯೋಗಿ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಸಂದೀಪ್ ಹಾಗೂ ಎರಡನೇ ಆರೋಪಿ ವೀಣಾ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಕೆಲಸ ಕೊಡಿಸುವ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಸಂದೀಪ್ ಎಂಬಾತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT