×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಹೆಚ್ಚಿದ ಬೇಡಿಕೆ: ಸ್ಮಾರ್ಟ್‌ ಸಿಟಿಗಳಲ್ಲಿ ಇವಿ ಚಾರ್ಜಿಂಗ್ ಘಟಕ

ರಾಜ್ಯದ ವಿವಿಧೆಡೆ 600 ಘಟಕಗಳ ಸ್ಥಾಪನೆ: ಬೆಸ್ಕಾಂ ನೋಡಲ್‌ ಏಜೆನ್ಸಿ

ಬೆಂಗಳೂರು: ವಿದ್ಯುತ್‌ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ರಾಜ್ಯದ ವಿವಿಧೆಡೆ 600 ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಎಸ್ಕಾಂಗಳು ಮುಂದಾಗಿವೆ.

ಎರಡು ವರ್ಷಗಳ ಹಿಂದೆ ಬೆಸ್ಕಾಂ ಆರಂಭಿಸಿರುವ ಎಲೆಕ್ಟ್ರಿಕ್‌ ವಾಹನ (ಇವಿ) ಚಾರ್ಜಿಂಗ್‌ ಘಟಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ವಿದ್ಯುತ್‌ ವಾಹನಗಳಿಗೆ ಕ್ರಮೇಣ ಹೆಚ್ಚುತ್ತಿರುವ ಬೇಡಿಕೆಯನ್ನು ಬಿಂಬಿಸುತ್ತದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಬೆಸ್ಕಾಂ ಅನ್ನು ನೋಡಲ್‌ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಯಾವ ರೀತಿಯಲ್ಲಿ ಘಟಕಗಳನ್ನು ಸ್ಥಾಪಿಸಬೇಕು ಎನ್ನುವ ಬಗ್ಗೆ ಇತರ ಎಸ್ಕಾಂಗಳಿಗೆ ಮಾರ್ಗದರ್ಶನ ಮತ್ತು ನೆರವು ನೀಡುತ್ತಿದೆ.

600 ಚಾರ್ಜಿಂಗ್‌ ಘಟಕಗಳಲ್ಲಿ 455 ಘಟಕಗಳನ್ನು ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲೇ ಸ್ಥಾಪಿಸಲು ಉದ್ದೇಶಿಸಲಾಗಿದೆ. ಜತೆಗೆ, 75 ಚಾರ್ಜಿಂಗ್‌ ಘಟಕಗಳನ್ನು ‘ಸ್ಮಾರ್ಟ್‌ ಸಿಟಿ’ಗೆ ಆಯ್ಕೆಯಾದ ನಗರಗಳಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ನಂತರ, ಎರಡನೇ ಹಂತದಲ್ಲಿ ಉಳಿದ ಪ್ರಮುಖ ನಗರಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪವಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಸರ್ಕಾರ, ಖಾಸಗಿ ಸಹಭಾಗಿತ್ವದಲ್ಲಿ 1000 ಇವಿ ಚಾರ್ಜಿಂಗ್‌ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿತ್ತು.

ಬೆಂಗಳೂರು ನಗರದಲ್ಲಿ ಸದ್ಯ 136 ಎಲೆಕ್ಟ್ರಿಕ್‌ ಚಾರ್ಜಿಂಗ್‌ ಘಟಕಗಳಿವೆ. ಈ ಘಟಕಗಳಲ್ಲಿ ಪ್ರತಿ ತಿಂಗಳು ಸರಾಸರಿ 30 ಸಾವಿರದಿಂದ 35 ಸಾವಿರ ಯುನಿಟ್‌ಗಳ ಬಳಕೆಯಾಗುತ್ತಿದ್ದು, 5 ಸಾವಿರ ’ಸೆಷನ್ಸ್‌’ಗಳಷ್ಟು ಚಾರ್ಜಿಂಗ್‌ ನಡೆಯುತ್ತಿದೆ (ಒಂದು ವಾಹನದ ಚಾರ್ಜಿಂಗ್‌ ಅನ್ನು ಒಂದು ಸೆಷನ್‌ ಎಂದು ಪರಿಗಣಿಸಲಾಗುತ್ತದೆ). ಸಾಮಾನ್ಯವಾಗಿ ಒಂದು ಘಟಕದಲ್ಲಿ ಆರು ವಾಹನಗಳ ಚಾರ್ಜಿಂಗ್‌ ಮಾಡಬಹುದಾಗಿದೆ.

ಒಂದು ಬೈಕ್‌ಗೆ ಒಂದು ಬಾರಿ ಸರಾಸರಿ 1.5ರಿಂದ 2 ಯುನಿಟ್‌ಗಳು ಬೇಕಾಗುತ್ತದೆ. ಕಾರುಗಳಿಗೆ 15ರಿಂದ 40 ಯೂನಿಟ್‌ಗಳವರೆಗೆ ಬೇಕಾಗುತ್ತದೆ. ಇದು ಆಯಾ ಬ್ಯಾಟರಿ ಸಾಮರ್ಥ್ಯ ಮತ್ತು ಬಳಕೆ ಮೇಲೆ ಅವಲಂಬನೆಯಾಗಿರುತ್ತದೆ. ಮನೆಗಳಲ್ಲೂ ಬ್ಯಾಟರಿಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು. ಒಂದು ಬಾರಿ ಚಾರ್ಜ್ ಮಾಡಿ ಅದನ್ನು ಬಳಸಿದ ಬಳಿಕ ಅಡುಗೆ ಸಿಲಿಂಡರ್‌ಗಳನ್ನು ಬದಲಿಸಿದ ರೀತಿಯಲ್ಲೂ ಬ್ಯಾಟರಿಗಳನ್ನು ಬಳಸಬಹುದಾಗಿದೆ. ಹೀಗಾಗಿ, ಕೆಲವು ಖಾಸಗಿ ಕಂಪನಿಗಳು ಬ್ಯಾಟರಿ ಬದಲಿಸುವ ಕೇಂದ್ರಗಳನ್ನು ಸಹ ಆರಂಭಿಸಿವೆ.

‘ಸರ್ಕಾರಿ ಕಚೇರಿಗಳ ಆವರಣದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುತ್ತಿದೆ. ಈಗ ಹೆಚ್ಚಿನ ಜನರು ಎಲೆಕ್ಟ್ರಿಕಲ್‌ ವಾಹನಗಳನ್ನು ಬಳಸಲು ಆರಂಭಿಸುತ್ತಿದ್ದಾರೆ. ಎಲೆಕ್ಟ್ರಿಕಲ್‌ ವಾಹನಗಳ ನಿರ್ವಹಣೆ ವೆಚ್ಚ ಕಡಿಮೆ. ಜತೆಗೆ, ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್‌ ವಾಹನಗಳ ತಯಾರಕರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ, ಗ್ರಾಹಕರಿಗೂ ಆಯ್ಕೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್‌ ಚಾರ್ಜಿಂಗ್‌ ಘಟಕಗಳನ್ನು ಲಾಭದ ದೃಷ್ಟಿಯಿಂದ ಸ್ಥಾಪಿಸುತ್ತಿಲ್ಲ. ಹೆಚ್ಚಿನ ಅನುಕೂಲಗಳ ಬಗ್ಗೆ ಗಮನಹರಿಸಲಾಗುತ್ತಿದೆ’ ಎಂದು ಬೆಸ್ಕಾಂನ ಸ್ಮಾರ್ಟ್‌ಗ್ರಿಡ್‌ ಮತ್ತು ಎಲೆಕ್ಟ್ರಿಕ್‌ ವಾಹನ ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಸಿ.ಕೆ. ಶ್ರೀನಾಥ್‌ ತಿಳಿಸಿದರು.

 ‘ಖಾಸಗಿಯವರಿಗೂ ಅವಕಾಶ’: ‘ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಖಾಸಗಿಯವರಿಗೂ ಅವಕಾಶ ಇದೆ. ಇದಕ್ಕೆ ಲೈಸನ್ಸ್‌ ಬೇಕಾಗಿಲ್ಲ. ಇದರಿಂದ, ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತವೆ. ಆದರೆ, ವಾಣಿಜ್ಯ ಚಟುವಟಿಕೆ ರೂಪದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಿದರೆ ಒಂದು ಯೂನಿಟ್‌ಗೆ ₹5 ಪಡೆಯಲಾಗುವುದು’ ಎಂದು ಶ್ರೀನಾಥ್‌ ಅವರು ತಿಳಿಸಿದ್ದಾರೆ.

ಎಲೆಕ್ಟ್ರಿಕ್‌ ವಾಹನಗಳಿಗೆ ದೊರೆಯದ ಸಬ್ಸಿಡಿ: ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ನೀಡಬೇಕು ಎನ್ನುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ. ಆದರೆ, ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ನೀಡಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದೆಹಲಿ ಸರ್ಕಾರ ಸ್ವಿಗ್ಗಿ ಸೇರಿದಂತೆ ವಿವಿಧ ಕಂಪನಿಗಳ ಡೆಲಿವರಿ ಬಾಯ್ಸ್ ಬಳಸುವ ಎಲೆಕ್ಟ್ರಿಕ್‌ ವಾಹನಗಳಿಗೆ ಸಬ್ಸಿಡಿ ನೀಡುತ್ತಿದೆ. ಇದರಿಂದ, ಅವರಿಗೆ ತಿಂಗಳಿಗೆ ಕನಿಷ್ಠ ₹5 ಸಾವಿರ ಉಳಿತಾಯವಾಗುತ್ತಿದೆ. ಇದೇ ರೀತಿಯ ಮಾದರಿಗಳನ್ನು ರಾಜ್ಯದಲ್ಲಿ ಅನುಸರಿಸಬಹುದು’ ಎಂದು ಬೌನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ–ಸಂಸ್ಥಾಪಕ ವಿವೇಕಾನಂದ ಹಳ್ಳೆಕೆರೆ ಅಭಿಪ್ರಾಯಪಟ್ಟಿದ್ದಾರೆ.

‘ಹಳೆಯ ವಾಹನಗಳನ್ನೇ ಎಲೆಕ್ಟ್ರಿಕ್‌ ವಾಹನಗಳನ್ನಾಗಿ ಪರಿವರ್ತಿಸುವುದಕ್ಕೂ ಉತ್ತೇಜನ ನೀಡಬೇಕಾಗಿದೆ. ಇದರಿಂದ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದು ತಪ್ಪುತ್ತದೆ’ ಎಂದು ವಿವರಿಸಿದ್ದಾರೆ.

ವಿದ್ಯುತ್‌ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ರಾಜ್ಯದ ವಿವಿಧೆಡೆ 600 ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಎಸ್ಕಾಂಗಳು ಮುಂದಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT