×
ADVERTISEMENT
ಈ ಕ್ಷಣ :
ADVERTISEMENT

ಸಮುದಾಯ ಭವನಗಳಿಗೆ ಆದ್ಯತೆ: ಅಥಣಿ ಶಾಸಕ ಮಹೇಶ ಕುಮಠಳ್ಳಿ

ಅಥಣಿ ಶಾಸಕ ಮಹೇಶ ಕುಮಠಳ್ಳಿ
ಫಾಲೋ ಮಾಡಿ
Comments

ಅಥಣಿ: ಶಾಸಕ ಮಹೇಶ ಕುಮಠಳ್ಳಿ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ದೊರೆಯುವ ಅನುದಾನದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.

ಮತಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಹಿಂದೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಕುಮಠಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 2018ರಿಂದ 2021ರವರೆಗೆ ₹ 4.60 ಕೋಟಿ ಅನುದಾನ ಬಂದಿದೆ. ಅದರಲ್ಲಿ ₹ 3.60 ಕೋಟಿ ಬಳಕೆಯಾಗಿದ್ದು, ₹ 1 ಕೋಟಿ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ಬಾಕಿ ಇದೆ.

ಶಾಸಕರು ವಿವಿಧ ಸಮಾಜದವರ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರೀತಿ ತೋರಿದ್ದಾರೆ. ಹಲವು ರಸ್ತೆ ಕಾಮಗಾರಿಗಳನ್ನು ಕೂಡ ಈ ಅನುದಾನದಲ್ಲಿ ತೆಗೆದುಕೊಂಡಿದ್ದಾರೆ. ಖಾಸಗಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಲು, ಬಸ್ ನಿಲ್ದಾಣ ನಿರ್ಮಾಣ ಹಾಗೂ ಪೊಲೀಸ್‌ ಇಲಾಖೆಗೆ ವಾಹನವೊಂದನ್ನು ಖರೀದಿಸಿಸುವುದಕ್ಕೂ ಅನುದಾನ ಬಳಕೆ ಮಾಡಿಕೊಂಡಿದ್ದಾರೆ.

2018-2019ರಲ್ಲಿ ₹ 1 ಕೋಟಿ ಅನುದಾನ ಬಂದಿದ್ದು, 21ಕಾಮಗಾರಿಗಳನ್ನು ನಡೆಸಲಾಗಿದೆ. ಅದರಲ್ಲಿ 17 ರಸ್ತೆ ಕಾಮಗಾರಿಗಳಾಗಿವೆ. 2 ಸಮುದಾಯ ಭವನ ನಿರ್ಮಾಣಕ್ಕೆ, ಪೊಲೀಸರಿಗೆ ವಾಹನಕ್ಕೆ ಹಾಗೂ ಶಾಲಾ ಕೊಠಡಿ ನಿರ್ಮಾಣಕ್ಕೆ ಕೊಟ್ಟಿದ್ದಾರೆ.

2019-2020ರಲ್ಲಿ ₹ 60 ಲಕ್ಷ ಮಾತ್ರ ಅನುದಾನ ಸಿಕ್ಕಿದೆ. ಅದರಲ್ಲಿ ವಿವಿಧ 12 ಕಾಮಗಾರಿ ತೆಗೆದುಕೊಂಡಿದ್ದು, ಅದರಲ್ಲಿ 7 ಪ್ರಗತಿಯಲ್ಲಿವೆ; 5 ಪೂರ್ಣಗೊಂಡಿವೆ. ₹ 5 ಲಕ್ಷ ವೆಚ್ಚದಲ್ಲಿ ಸಪ್ತಸಾಗರ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಟ್ಟಿದ್ದಾರೆ. ₹ 2 ಲಕ್ಷ ಅನುದಾನದಲ್ಲಿ ವಿಶ್ವೇಶ್ವರಯ್ಯ ಮಹಿಳಾ ಸಿದ್ಧಉಡುಪುಗಳ ಸಹಕಾರಿ ಸಂಘದ ಶಾಲೆಗೆ ಒಂದು ಕೊಠಡಿ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ಆಜಾದ್ ಶಿಕ್ಷಣ ಸಂಸ್ಥೆಗೆ ₹ 3 ಲಕ್ಷ ಅನುದಾನದಲ್ಲಿ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಮಸರಗುಪ್ಪಿಯ ಮಲ್ಲಿಕಾರ್ಜುನ ದೇವಸ್ಥಾನ, ನಾಗನೂರ ಗ್ರಾಮದ ಬಬಲಾದಿ ಮಠಕ್ಕೆ, ಮುರುಗುಂಡಿಯ ಯಲ್ಲಮ್ಮ ದೇವಸ್ಥಾನ, ಕೊಟ್ಟಲಗಿಯ ವಿಠ್ಠಲ ರುಕ್ಮಿಣಿ ದೇವಸ್ಥಾನ, ಹಾಲಳ್ಳಿ ಗ್ರಾಮದ ಗಿರಿಮಲ್ಲೇಶ್ವರ ದೇವಸ್ಥಾನ, ಚಿಕ್ಕಟ್ಟಿಯ ಹನುಮಾನ ದೇವಸ್ಥಾನದ ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ ₹ 5 ನೀಡಿದ್ದಾರೆ.

2020-2021ರಲ್ಲಿ ₹ 2 ಕೋಟಿ ಅನುದಾನ ಬಂದಿದೆ. ಅದರಲ್ಲಿ 32 ಕಾಮಗಾರಿಗಳನ್ನು ತಗೆದುಕೊಂಡಿದ್ದಾರೆ. ಈ ಪೈಕಿ 24 ಕಾಮಗಾರಿಗಳು ಪ್ರಗತಿಯಲ್ಲಿವೆ; 8 ಮುಗಿದಿವೆ. ₹ 3 ಲಕ್ಷ ಅನುದಾನದಲ್ಲಿ ಝುಂಜರವಾಡ ಗ್ರಾಮದಲ್ಲಿ ಸಿ.ಡಿ. (ಚರಂಡಿ) ಕೆಲಸ ಮಾಡಿಸಿದ್ದಾರೆ. ₹ 5 ಲಕ್ಷ ಅನುದಾನದಲ್ಲಿ ಝುಂಜರವಾಡ -ತುಂಗಳ ರಸ್ತೆ ಮತ್ತು ಸತ್ತಿ ಗ್ರಾಮದ ಪಟ್ಟೆಕರ ವಸತಿಯ ರಸ್ತೆ ನಿರ್ಮಾಣ ಕಾಮಗಾರಿಗಳು ಮುಗಿದಿವೆ.

ತಲಾ ₹ 7 ಲಕ್ಷ ಅನುದಾನದಲ್ಲಿ, ಮೀರಜ್‌ ರಸ್ತೆಯ ಬಸವೇಶ್ವರ ವೃತ್ತ ಹಾಗೂ ಶಿವಾಜಿ ಮಹಾರಾಜ ವೃತ್ತದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ₹4 ಲಕ್ಷವನ್ನು ಸಿದ್ದರಾಯ ಮುತ್ಯಾ ಸಮುದಾಯ ಭವನ, ₹ 5 ಲಕ್ಷವನ್ನು ತೆಲಸಂಗ ಗ್ರಾಮದ ಪಂಚ ಪರಮೇಷ್ಠಿ ಸಮುದಾಯ ಭವನ ನಿರ್ಮಾಣಕ್ಕೆ ವಿನಿಯೋಗಿಸಿದ್ದಾರೆ. ₹ 5 ಲಕ್ಷವನ್ನು ಲಕ್ಷ್ಮಿ ದೇವಸ್ಥಾನ ಅಬಿವೃದ್ಧಿ ಕಾಮಗಾರಿಗೆ ನೀಡಿದ್ದಾರೆ.

‘2005ರಲ್ಲಿ ಪ್ರವಾಹ ಬಂದಾಗಿನಿಂದಲೂ ಹಲವರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ರಸ್ತೆ ಕಾಮಗಾರಿ ನಡೆದಿರಲಿಲ್ಲ. ಶಾಸಕ ಮಹೇಶ ಕುಮಠಳ್ಳಿ ತಮ್ಮ ನಿಧಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ನಮ್ಮ ತೋಟದ 35 ಕುಟುಂಬಗಳಿಗೆ ಅನುಕೂಲವಾಗಿದೆ’ ಎಂದು ಪಟ್ಟೆಕರ ವಸತಿಯ ಯಲ್ಲಪ್ಪ ಪಟ್ಟೇಕರ ಪ್ರತಿಕ್ರಿಯಿಸಿದರು.

ಶಾಸಕ ಮಹೇಶ ಕುಮಠಳ್ಳಿ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ದೊರೆಯುವ ಅನುದಾನದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT