×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ಯುಗಾದಿ ವರ್ಷ ಭವಿಷ್ಯ 2023
Published 23 ಮಾರ್ಚ್ 2023, 11:03 IST
AVINASH B
author
ಮೇಷ
(ಅಶ್ವಿನಿ ಭರಣಿ ಕೃತ್ತಿಕಾ ಒಂದನೇ ಪಾದ): ಆದಾಯ ಮತ್ತು ವ್ಯಯಗಳು ಸಮನಾಗಿದ್ದು ಮಿಶ್ರಫಲವಿರುತ್ತದೆ. ಆರೋಗ್ಯ ಮತ್ತು ಅನಾರೋಗ್ಯಗಳು ಸಮನಾಗಿರುತ್ತವೆ. ಸಮಾಜದಿಂದ ಹೆಚ್ಚು ಗೌರವಗಳು ದೊರೆಯುತ್ತವೆ. ಗುರುವು ಮೀನರಾಶಿಯಲ್ಲಿರುವಾಗ ಶುಭಕಾರ್ಯ ಅಥವಾ ದೈವ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಗುರುವು ಮೇಷರಾಶಿಗೆ ಬಂದಾಗ ಕೆಲಸ ಕಾರ್ಯಗಳಿಗೆ ಸ್ವಲ್ಪ ವಿಘ್ನ ಉಂಟಾಗುತ್ತದೆ. ಶನಿಯು ಲಾಭಸ್ಥಾನದಲ್ಲಿ ಇರುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಕೆಲವರಿಗೆ ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ವಿದೇಶಕ್ಕೆ ಓದಲು ಹೋಗುವವರಿಗೆ ಅನುಕೂಲ ಆಗುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ರಾಸಾಯನಿಕ ವಸ್ತುಗಳನ್ನು ರಫ್ತು ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಆರಂಭದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಿರುತ್ತದೆ. ಆರ್ಥಿಕ ಪರಿಸ್ಥಿತಿ ಪರವಾಗಿಲ್ಲ. ಹೂಡಿಕೆ ಮಾಡುವಾಗ ಅದರ ಮೂಲವನ್ನು ತಿಳಿದು ಹೂಡಿಕೆ ಮಾಡಿರಿ. ಹೆಚ್ಚಿನ ಒಳಿತಿಗಾಗಿ ಗುರುವಿನ ಆರಾಧನೆ, ಮೃತ್ಯುಂಜಯ ಜಪ, ಶಿವಾರಾಧನೆಯನ್ನು ಮಾಡುವುದು.
ವೃಷಭ
(ಕೃತ್ತಿಕಾ 1, 2, 3, ರೋಹಿಣಿ, ಮೃಗಶಿರಾ 1, 2): ಆದಾಯಕ್ಕಿಂತ ಖರ್ಚು ಕಡಿಮೆ ಇರುತ್ತದೆ. ಹೆಚ್ಚು ಆರೋಗ್ಯವಂತರಾಗಿರುತ್ತೀರಿ. ಮೇಷಕ್ಕೆ ಗುರು ಬಂದಾಗ ಗುರುಬಲ ಇರುವುದಿಲ್ಲ. ದೈವಕಾರ್ಯಗಳಿಗಾಗಿ ಹಣ ಖರ್ಚು ಮಾಡುವಿರಿ. ಲೇವಾದೇವಿ ವ್ಯವಹಾರಗಳಿಂದ ಧನ ಹಾನಿ. ರಾಹು, ಮೀನ ರಾಶಿಗೆ ಬಂದಾಗ ಸ್ವಲ್ಪ ಅಲೆದಾಟವಿರುತ್ತದೆ. ಮನಸ್ಸಿನಲ್ಲಿ ಚಿಂತೆ ಕಾಡಬಹುದು. ಕೃಷಿಕರಿಗೆ ಹೆಚ್ಚು ಲಾಭವಿರುತ್ತದೆ; ಆಯಾಚಿತ ಧನ ಲಾಭವಿರುತ್ತದೆ. ವಿದೇಶದಲ್ಲಿರುವವರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಹೆಚ್ಚಿನ ಅನುಕೂಲ ದೊರೆಯುತ್ತದೆ. ಪ್ರೀತಿ–ಪ್ರೇಮಗಳು ಹೆಚ್ಚು ಸಾಫಲ್ಯವನ್ನು ಕಾಣುತ್ತವೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಆಸ್ತಿ ಮಾಡುವ ಯೋಗವಿದೆ. ದುರ್ಗಾ ಮತ್ತು ಸುಬ್ರಹ್ಮಣ್ಯ ಆರಾಧನೆಯಿಂದ ಹೆಚ್ಚಿನ ಒಳಿತನ್ನು ಕಾಣಬಹುದು.
ಮಿಥುನ
(ಮೃಗಶಿರಾ 3, 4, ಆರಿದ್ರಾ, ಪುನರ್ವಸು 1, 2, 3): ಗುರುವು ಮೀನರಾಶಿಯಲ್ಲಿರುವಾಗ ವೃತ್ತಿಯಲ್ಲಿ ಅನುಕೂಲಗಳಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಗುರುವು ಮೇಷರಾಶಿಗೆ ಬಂದಾಗ ಲಾಭಸ್ಥಾನದ ಗುರು ಹೆಚ್ಚು ಲಾಭವನ್ನು ಕೊಡುತ್ತಾನೆ. ಗುರುವಿನಿಂದ ಯಶಸ್ಸು, ಕೀರ್ತಿ ಪ್ರಾಪ್ತಿಯಾಗುತ್ತದೆ. ಗುರುವಿನ ಜೊತೆ ರಾಹು ಇರುವುದರಿಂದ ವಿದೇಶ ಪ್ರಯಾಣವನ್ನು ಮಾಡುವವರಿಗೆ ಅನುಕೂಲ. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ಪ್ರಾಪ್ತಿ. ಶತ್ರುಗಳು ನಾಶವಾಗುತ್ತಾರೆ. ಭಾಗ್ಯದ ಶನಿಯು ಕೃಷಿಕರಿಗೆ ಹೆಚ್ಚಿನ ಲಾಭವನ್ನು ಕೊಡುತ್ತಾನೆ; ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿಯನ್ನು ದಯಪಾಲಿಸುತ್ತಾನೆ; ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭವನ್ನು ಕೊಡುತ್ತಾನೆ. ವೃತ್ತಿಯಲ್ಲಿ ಬಡ್ತಿಯ ಸಾಧ್ಯತೆ ಇದೆ. ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಕಚೇರಿ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಆಟೋ ಮೆಕ್ಯಾನಿಕ್‌ಗಳಿಗೆ ಹೆಚ್ಚಿನ ಲಾಭ; ರಾಜಕಾರಣಿಗಳಿಗೆ ಜನಬೆಂಬಲ ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಮ ಫಲ ಇರುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಆರಾಧನೆ ಅಥವಾ ಕಾಳಿ ಆರಾಧನೆಯನ್ನು ಮಾಡುವುದು.
ಕರ್ಕಾಟಕ
(ಪುನರ್ವಸು 4, ಪುಷ್ಯಾ, ಆಶ್ಲೇಷಾ): ಬೇವು–ಬೆಲ್ಲದ ಮಿಶ್ರಣ ಕಾಣಬಹುದು. ಆದಾಯ ಮತ್ತು ಖರ್ಚು ಸಮನಾಗಿರುತ್ತದೆ. ಆರೋಗ್ಯದ ಕಡೆಗೆ ಗಮನವಿರಲಿ. ಸಮೂಹದಲ್ಲಿ ಮಾತನಾಡುವಾಗ ಎಚ್ಚರವಿರಲಿ. ಗುರುವಿನಿಂದ ವೃತ್ತಿಯಲ್ಲಿ ಅಭಿವೃದ್ಧಿ; ಶಿಕ್ಷಣಸಂಸ್ಥೆಗಳನ್ನು ನಡೆಸುವವರಿಗೆ ಅನುಕೂಲವಿರುತ್ತದೆ. ಶತ್ರುಗಳು ಸಹ ಮಿತ್ರರಾಗುತ್ತಾರೆ. ಆಧ್ಯಾತ್ಮದ ಕಡೆ ಒಲವು ಮೂಡುತ್ತದೆ. ರಾಹುವಿನ ಬದಲಾವಣೆಯ ನಂತರ ಕೆಲಸದ ಒತ್ತಡ ಕಡಿಮೆಯಾಗಬಹುದು; ಸಂಬಳ ಜಾಸ್ತಿ ಆಗಬಹುದು. ಆರ್ಥಿಕ ಸ್ಥಿತಿಯಲ್ಲಿ ಏರಿಳಿತವಿರುತ್ತದೆ. ಸಾಲ ಮಾಡದಿರುವುದು ಬಹಳ ಒಳ್ಳೆಯದು. ಸಂಸಾರದಲ್ಲಿ ಕಾವೇರಿದ ಮಾತುಗಳಾಗಬಹುದು. ಕೋರ್ಟ್ ಕೇಸ್‌ಗಳಲ್ಲಿ ನಿಧಾನ ಆಗುತ್ತದೆ. ವ್ಯಾಪಾರದಲ್ಲಿ ನಷ್ಟವನ್ನು ಕಾಣಬಹುದು, ಹೊಸ ವ್ಯಾಪಾರದ ಬಗ್ಗೆ ಹೆಚ್ಚು ಆಸಕ್ತಿ ಬೇಡ. ಉದ್ದಿಮೆದಾರರಿಗೆ ಕಾರ್ಮಿಕರಿಂದ ಅಥವಾ ಸೇವಕರಿಂದ ತೊಂದರೆ ಉಂಟಾಗಬಹುದು. ಹೆಚ್ಚಿನ ಒಳಿತಿಗಾಗಿ ಶನೈಶ್ಚರ ಮತ್ತು ಸುಬ್ರಹ್ಮಣ್ಯ ಆರಾಧನೆಯನ್ನು ಮಾಡಿರಿ.
ಸಿಂಹ
(ಮಖಾ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1): ಖರ್ಚಿಗಿಂತ ಆದಾಯ ಜಾಸ್ತಿ ಇರುತ್ತದೆ. ಹಣ ಉಳಿತಾಯ ಮಾಡಬಹುದು. ಗುರುವು ಮೀನದಲ್ಲಿರುವಾಗ ಅಂತಹ ಶುಭಫಲಗಳು ಇರುವುದಿಲ್ಲ. ಗುರುವು ಮೇಷಕ್ಕೆ ಬಂದ ನಂತರ ಉತ್ತಮ. ಗುರು ಬಲವು ಬರುತ್ತದೆ. ಗುರುವಿನ 9ನೇ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಯಶಸ್ಸು. ಧನ ಸಂಪಾದನೆಯಾಗುತ್ತದೆ. ವಾಹನ ಕೊಳ್ಳುವ ಯೋಗವಿದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗುತ್ತವೆ. ಶನಿ ಸಪ್ತಮದಲ್ಲಿ ಇರುವುದರಿಂದ ಕೌಟುಂಬಿಕ ಕಲಹಗಳು ಮತ್ತು ಪಾಲುದಾರರ ನಡುವೆ ಸಮಸ್ಯೆಗಳು ಬರಬಹುದು. ಅನಾರೋಗ್ಯದ ಸಮಸ್ಯೆ ಎದುರಾಗಬಹುದು. ಉದ್ದಿಮೆದಾರರಿಗೆ ಕಾರ್ಮಿಕರಿಂದ ಸಂಕಷ್ಟಗಳು ಎದುರಾಗಬಹುದು. ಕೃಷಿಕರಿಗೆ ಲಾಭವಿರುತ್ತದೆ; ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ. ಅಮೂಲ್ಯ ದಾಖಲೆಗಳು ಅಥವಾ ವಸ್ತುಗಳು ಕಳವಾಗುವ ಸಾಧ್ಯತೆಯಿದೆ. ವೃತ್ತಿರಂಗದಲ್ಲಿ ಏರಿಳಿತ ಕಂಡರೂ ಅಭಿವೃದ್ಧಿ ಇದ್ದೇ ಇದೆ. ಆರ್ಥಿಕ ಸಂಪಾದನೆ ಹೆಚ್ಚಾಗಿ ನೆಮ್ಮದಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನದ ಸಾಧ್ಯತೆ ಇದೆ. ಹೆಚ್ಚಿನ ಒಳಿತಿಗಾಗಿ ಈಶ್ವರ, ದುರ್ಗಾ, ಸುಬ್ರಹ್ಮಣ್ಯ, ಶನೈಶ್ಚರರ ಆರಾಧನೆಯನ್ನು ಮಾಡಿರಿ.
ಕನ್ಯಾ
(ಉತ್ತರ ಫಲ್ಗುಣಿ 2, 3, 4, ಹಸ್ತಾ, ಚಿತ್ತಾ 1, 2): ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಾರೋಗ್ಯದ ಬಗ್ಗೆ ಹೆಚ್ಚು ಗಮನ ಇರಲಿ. ಗುರುವು ಮೀನದಲ್ಲಿರುವಾಗ ಖರ್ಚು ಹೆಚ್ಚಾಗಬಹುದು. ಗುರುವು ಮೇಷಕ್ಕೆ ಬಂದಾಗ ಯಾವುದೋ ಮೂಲದಿಂದ ಧನ ಒದಗಿಬರುತ್ತದೆ. ಶನಿಯು 6ನೇ ಮನೆಯಲ್ಲಿ ಇರುವುದರಿಂದ ಅಂದುಕೊಂಡ ಕೆಲಸಗಳು ಆಗುತ್ತವೆ; ಶತ್ರುಗಳ ಮೇಲೆ ಜಯ ಉಂಟಾಗುತ್ತದೆ. ಕೃಷಿಕಾರ್ಯಗಳಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಮಾತಿನಲ್ಲಿ ದರ್ಪ ಕಂಡುಬರಬಹುದು; ಇದನ್ನು ನಿವಾರಿಸಿಕೊಳ್ಳಿರಿ. ಹೊಸ ಹೊಸ ಹೂಡಿಕೆಗಳು ಈಗ ಬೇಡ. ಕುಟುಂಬದಲ್ಲಿ ತಿಕ್ಕಾಟಗಳು ಬರಬಹುದು. ತೀರ್ಥಯಾತ್ರೆ ಮಾಡುವ ಯೋಗವಿದೆ. ಪರಸ್ಥಳದ ವಾಸವಾಗಬಹುದು. ದೃಷ್ಟಿದೋಷ ಇದ್ದವರಿಗೆ ಜಾಸ್ತಿ ಆಗುವ ಸಾಧ್ಯತೆ. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ದೊರೆಯುವುದು ಕಷ್ಟ. ಶನಿಯಿಂದ ಹಣದ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ; ಸಾಲ ತೀರಿಸಲು ಹೆಚ್ಚಿನ ಕಾಲಾವಕಾಶ ದೊರೆಯಬಹುದು. ಹೆಚ್ಚಿನ ಒಳಿತಿಗಾಗಿ ಗಣಪತಿ ಮತ್ತು ದುರ್ಗಾರಾಧನೆಯನ್ನು ಮಾಡಿರಿ.
ತುಲಾ
(ಚಿತ್ತಾ 3, 4, ಸ್ವಾತಿ, ವಿಶಾಖಾ 1, 2, 3): ಆದಾಯಕ್ಕೆ ತೊಂದರೆ ಇರುವುದಿಲ್ಲ. ಖರ್ಚುಗಳು ಕಡಿಮೆ ಇರುತ್ತವೆ. ಆರೋಗ್ಯ ಸಹ ಉತ್ತಮವಾಗಿರುತ್ತದೆ. ಗುರುವು ಮೇಷಕ್ಕೆ ಬಂದಾಗ ರಾಜಕೀಯದವರಿಗೆ ತಿರುಗಾಟದ ಜೊತೆ ಅಭಿವೃದ್ಧಿ ಇರುತ್ತದೆ; ಅಧಿಕಾರ ದೊರೆಯುವ ಸಾಧ್ಯತೆಗಳಿವೆ. ರಾಜಕೀಯದವರು ಅವರ ಪ್ರಭಾವ ಬಳಸಿ ಕೆಲಸ–ಕಾರ್ಯಗಳನ್ನು ಮಾಡಿಕೊಳ್ಳಬಹುದು. ವಾತರೋಗದ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಂದಗತಿಯ ಯಶಸ್ಸು ಇರುತ್ತದೆ. ಅನವಶ್ಯಕ ಮಾತುಗಳಿಂದ ತೊಂದರೆಗೆ ಸಿಲುಕಬಹುದು. ರಾಹು, ಮೀನರಾಶಿಗೆ ಪ್ರವೇಶ ಮಾಡಿದಾಗ ಶತ್ರುತ್ವ ಕಡಿಮೆಯಾಗುತ್ತದೆ. ಬಂಧುಗಳಲ್ಲಿನ ಸಮಸ್ಯೆಗಳಿಗೆ ಮಾತುಕತೆಯೇ ಉತ್ತರ. ಸರ್ಕಾರಿ ಕೆಲಸ–ಕಾರ್ಯಗಳು ಪ್ರಗತಿಯನ್ನು ಕಾಣಬಹುದು. ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಮನೆಯಲ್ಲಿ ಶುಭಕಾರ್ಯಗಳು ಆಗುವ ಸಾಧ್ಯತೆ. ನಿಮ್ಮ ಹಳೆಯ ಸಾಲಗಳನ್ನು ತೀರಿಸಿಕೊಳ್ಳಬಹುದು. ಹೆಚ್ಚಿನ ಒಳಿತಿಗಾಗಿ ಕುಲದೇವರು, ಶನೈಶ್ಚರ ಮತ್ತು ದುರ್ಗಾರಾಧನೆ ಯನ್ನು ಮಾಡಿರಿ.
ವೃಶ್ಚಿಕ
(ವಿಶಾಖಾ 4, ಅನುರಾಧಾ, ಜೇಷ್ಠಾ): ಆದಾಯ ಮತ್ತು ವ್ಯಯಗಳು ಸಮನಾಗಿರುತ್ತವೆ. ಅತಿಯಾದ ಅನಾರೋಗ್ಯ ಇರುವುದಿಲ್ಲ. ಸಮಾಜದಿಂದ ಹೆಚ್ಚು ಗೌರವ ದೊರೆಯುತ್ತದೆ. ಅಂದುಕೊಂಡ ಕೆಲಸಗಳು ನಿಧಾನವಾದರೂ ಆಗುತ್ತದೆ. ಆದಿಯಲ್ಲಿ ಗುರು ಶುಭದಾಯಕನಾಗಿರುತ್ತಾನೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ. ಗುರುವು ಮೇಷರಾಶಿಗೆ ಬಂದ ನಂತರ ಹಾಗೂ ಶನಿಯ ಹತ್ತನೇ ಮನೆಯನ್ನು ನೋಡುವುದರಿಂದ ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗ ಬಹುದು. ಸೇವಕ ವರ್ಗದವರಿಂದ ತೊಂದರೆ. ಪರಸ್ಥಳದಲ್ಲಿ ವಾಸ ಇರಬೇಕಾಗಬಹುದು. ರಾಹುವು ಮೀನರಾಶಿಗೆ ಮತ್ತು ಕೇತುವು ಕನ್ಯಾರಾಶಿಗೆ ಬಂದ ನಂತರ ವಿದ್ಯಾರ್ಥಿಗಳಿಗೆ ಮುನ್ನಡೆ ಇರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಉನ್ನತ ವಿದ್ಯೆಯನ್ನು ಕಲಿಯುವವರಿಗೆ ಹೆಚ್ಚಿನ ಅನುಕೂಲ ಒದಗುತ್ತದೆ. ರಾಜಕೀಯ ನೇತಾರರಿಗೆ ಅನುಕೂಲವಿದೆ. ಕೃಷಿಕರಿಗೆ ಅಲ್ಪಮಟ್ಟದ ಅನುಕೂಲ. ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವುದು ಉತ್ತಮ. ಹೆಚ್ಚಿನ ಒಳಿತಿಗಾಗಿ ನಾಗಾರಾಧನೆ ಮತ್ತು ಗುರು ಆರಾಧನೆಯನ್ನು ಮಾಡಿರಿ.
ಧನು
(ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ 1): ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಹಣದ ನಿರ್ವಹಣೆ ಅಗತ್ಯ. ಗುರುವು ಮೇಷರಾಶಿಗೆ ಬಂದ ನಂತರ ಅನುಕೂಲಗಳ ಹೆಚ್ಚಾಗುತ್ತವೆ. ಅಧಿಕಾರ ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂತಾನ ಅಪೇಕ್ಷಿತರಿಗೆ ಶುಭವಾರ್ತೆಗಳು ಕೇಳಿ ಬರುತ್ತವೆ. ಆರೋಗ್ಯದಲ್ಲಿ ಚೇತರಿಕೆ ಆಗುತ್ತದೆ. ದೊಡ್ಡವರ ಸಹವಾಸ ದೊರೆತು ಕೀರ್ತಿ ಹೆಚ್ಚಾಗುತ್ತದೆ. ವಿವಾಹಭಾಗ್ಯ ಒದಗುತ್ತದೆ. ಹೋಟೆಲ್ ಉದ್ಯಮದವರಿಗೆ ಹೆಚ್ಚು ಅನುಕೂಲ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲ. ಶನಿಯು ಮೂರನೇ ಮನೆಯಲ್ಲಿರುವುದರಿಂದ ಶತ್ರುಗಳನ್ನು ಮಟ್ಟ ಹಾಕುವಿರಿ. ಕೇತುವಿನ 11ನೇ ಮನೆಯ ಸ್ಥಿತಿಯಿಂದ ಧನಾಗಮನ. ಕೇತುವು ಕನ್ಯಾರಾಶಿ ಪ್ರವೇಶಿಸಿದಾಗ ವೃತ್ತಿಯಲ್ಲಿ ಏಳಿಗೆ. ಗಣಿಗಾರಿಕೆ ಮತ್ತು ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಅನುಕೂಲ. ಹೆಚ್ಚಿನ ಒಳಿತಿಗಾಗಿ ಗಣಪತಿ, ಲಕ್ಷ್ಮೀ ನರಸಿಂಹಸ್ವಾಮಿಯ ಆರಾಧನೆಯನ್ನು ಮಾಡಿರಿ.
ಮಕರ
(ಉತ್ತರಾಷಾಢಾ 2, 3, 4, ಶ್ರವಣ, ಧನಿಷ್ಠಾ 1, 2): ನಿಮ್ಮ ಖರ್ಚಿಗಿಂತ ಎರಡರಷ್ಟು ಹೆಚ್ಚಿನ ಆದಾಯವಿರುತ್ತದೆ. ಆರೋಗ್ಯ ಕಡಿಮೆ ಇರಬಹುದು. ಜನರಿಂದ ಅಥವಾ ಸಮಾಜದಿಂದ ಗೌರವ–ಸನ್ಮಾನಗಳು ದೊರೆಯುತ್ತವೆ. ಗುರುವು ಮೇಷಕ್ಕೆ ಬಂದ ನಂತರ ರಾಜಕೀಯದವರಿಗೆ ಸ್ವಲ್ಪ ಹೊಡೆತ; ಗೌರವಕ್ಕೆ ಧಕ್ಕೆ ಬರಬಹುದು. ವೃತ್ತಿಯಲ್ಲಿ ಅಂತಹ ಒಳ್ಳೆಯ ವಾತಾವರಣ ಇರುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ವಿವಾಹಾಸಕ್ತರಿಗೆ ಶುಭಸುದ್ದಿ ದೊರೆಯಬಹುದು. ಎರಡನೇ ಮನೆಯ ಶನಿಯು ಸ್ವಲ್ಪ ಧನವನ್ನು ನಷ್ಟ ಮಾಡಬಹುದು; ಕಾರ್ಯನಷ್ಟದ ಸಾಧ್ಯತೆಯೂ ಇದೆ. ಸಂತಾನಕ್ಕೆ ತೊಂದರೆಯಾಗಬಹುದು. ಕೇತು, ಕನ್ಯಾರಾಶಿಯನ್ನು ಪ್ರವೇಶ ಮಾಡಿದಾಗ ಸ್ಥಿತಿಗಳು ಉತ್ತಮವಾಗುತ್ತವೆ. ಜೂಜುಗಾರಿಕೆಯನ್ನು ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ಕರ್ಮಸ್ಥಾನವನ್ನು ಗುರು ನೋಡುವುದರಿಂದ ವೃತ್ತಿಯಲ್ಲಿ ಅಭಿವೃದ್ಧಿ; ವಿದೇಶಗಳಲ್ಲಿ ಕಲಿಯಬೇಕೆನ್ನುವವರಿಗೆ ಅವಕಾಶ ದೊರೆಯುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ. ಹೆಚ್ಚಿನ ಒಳಿತಿಗಾಗಿ ದುರ್ಗಾರಾಧನೆ, ಶಿವಾರಾಧನೆ ಮತ್ತು ಗಣಪತಿಯ ಆರಾಧನೆಯನ್ನು ಮಾಡಿ.
ಕುಂಭ
(ಧನಿಷ್ಠಾ 3, 4, ಶತಭಿಷಾ, ಪೂರ್ವಾಭಾದ್ರಾ 1, 2, 3): ಶುಭಾಶುಭಫಲಗಳ ಮಿಶ್ರಣವಿರುತ್ತದೆ. ಆದಾಯ ನಿರೀಕ್ಷೆಯಷ್ಟಿದ್ದು, ಖರ್ಚು ಕಡಿಮೆ ಇರುತ್ತದೆ. ಗುರು ಮೇಷರಾಶಿಯನ್ನು ಪ್ರವೇಶ ಮಾಡಿದ ನಂತರ 7, 9, 11ನೇ ಮನೆಗಳನ್ನು ನೋಡುವುದರಿಂದ ನಿಮಗೆ ಒಳಿತಾಗುತ್ತದೆ. ಅಜೀರ್ಣ ಅಥವಾ ಕಣ್ಣಿನ ತೊಂದರೆಗಳು ಬರಬಹುದು. ದೊಡ್ಡ ವ್ಯಕ್ತಿಗಳಿಂದ ತೊಂದರೆ ಅಥವಾ ರಾಜಕೀಯ ಸಂಚಕಾರ ಆಗಬಹುದು. ವೃತ್ತಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಕಿರಿಕಿರಿ ಹಾಗೂ ಅಧಿಕ ತಿರುಗಾಟಗಳಾಗುತ್ತವೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವಿವಾಹ ಮಾತುಕತೆಗಳಲ್ಲಿ ಪಾರದರ್ಶಕತೆ ಇರಲಿ. ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ; ಎಚ್ಚರ ವಹಿಸಿ ಬದಲಾಯಿಸಿರಿ. ರಾಹುವು ಮೀನರಾಶಿಗೆ, ಕೇತುವು ಕನ್ಯಾರಾಶಿಗೆ ಪ್ರವೇಶಿಸಿದಾಗ ಆದಾಯ ಜಾಸ್ತಿ ಆಗುತ್ತದೆ. ವಿದೇಶ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯ. ರಫ್ತುದಾರರಿಗೆ ಹೆಚ್ಚಿನ ರಫ್ತು ಆದೇಶಗಳು ದೊರೆಯುತ್ತವೆ. ಆಮಿಷಗಳನ್ನು ಒಡ್ಡುವವರ ಮಾತು ಕೇಳಿ ಹಣ ಹೂಡಿಕೆ ಮಾಡಬೇಡಿರಿ. ಹೆಚ್ಚಿನ ಒಳಿತಿಗಾಗಿ ದುರ್ಗಾ, ಸುಬ್ರಹ್ಮಣ್ಯ, ಕುಲದೇವರ ಆರಾಧನೆ ಮಾಡಿರಿ.
ಮೀನ
(ಪೂರ್ವಭಾದ್ರಾ 4, ಉತ್ತರಭಾದ್ರಾ, ರೇವತಿ): ಗುರು ಮೇಷರಾಶಿಗೆ ಬಂದಾಗ ಹೆಚ್ಚಿನ ಆದಾಯವಿರುತ್ತದೆ. ಆ ಮನೆಗೆ ಶನಿದೃಷ್ಟಿ ಇರುವುದರಿಂದ ನಿಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ದೊರೆಯುತ್ತದೆ. ಇಚ್ಛಿಸಿದ ಕಾರ್ಯಗಳಲ್ಲಿ ಜಯವಿರುತ್ತದೆ. ಗುರು ನಿಮ್ಮ ಎಂಟನೇ ಮನೆಯನ್ನು ನೋಡುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಕೀಲು, ಗಂಟಲು, ಹೊಟ್ಟೆ ಬಗ್ಗೆ ಎಚ್ಚರವಿರಲಿ. ಶನಿ 12ರಲ್ಲೂ, ಕೇತು ಏಳರಲ್ಲೂ ಇರುವುದರಿಂದ ಮಂಗಳಕಾರ್ಯಗಳಲ್ಲಿ ಗೊಂದಲವಿರುತ್ತದೆ. ಅಧಿಕ ತಿರುಗಾಟ ಇದ್ದರೂ ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ವಿದೇಶಯಾನದ ಯೋಗವಿದೆ. ವಿದೇಶದಲ್ಲಿ ಧನಸಂಪಾದನೆಯ ಯೋಗವಿದೆ. ಅನವಶ್ಯಕ ಮಾತುಗಳಿಗೆ ತಲೆ ಹಾಕುವುದು ಬೇಡ. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ. ಅದಿರು ಉತ್ಪಾದಕರಿಗೆ ಮತ್ತು ರಫ್ತು ಮಾಡುವವರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹೊಸ ಪಾಲುದಾರಿಕೆ ವ್ಯವಹಾರಗಳಲ್ಲಿ ಭಾಗವಹಿಸುವ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಹೆಚ್ಚು ಅನುಕೂಲ. ಹೆಚ್ಚಿನ ಒಳಿತಿಗಾಗಿ ದುರ್ಗಾ ಮತ್ತು ಗಣಪತಿಯ ಆರಾಧನೆಯನ್ನು ಮಾಡಿರಿ.
ADVERTISEMENT
ADVERTISEMENT