×
ADVERTISEMENT
ಈ ಕ್ಷಣ :
ADVERTISEMENT

ಕೊರಿಯಾ ಓಪನ್‌: ಸಿಂಧು ನಿರ್ಗಮನ; ಪ್ರಿಯಾಂಶು ಮುನ್ನಡೆ

Published : 19 ಜುಲೈ 2023, 10:12 IST
Last Updated : 19 ಜುಲೈ 2023, 10:12 IST
ಫಾಲೋ ಮಾಡಿ
Comments

ಯೋಸು (ಕೊರಿಯಾ), (ಪಿಟಿಐ): ಭಾರತದ ಪಿ.ವಿ.ಸಿಂಧು ಅವರ ಅಸ್ಥಿರ ಪ್ರದರ್ಶನ ಮುಂದುವರಿದಿದೆ. ಬುಧವಾರ ನಡೆದ ಕೊರಿಯಾ ಓಪನ್‌ ಸೂಪರ್‌ 500 ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಹೋರಾಟ ತೋರಿದ ನಂತರ ಸಿಂಧು  ಚೀನಾ ತೈಪೆಯ ಪೈ ಯು–ಪೊ ಎದುರು ಸೋಲನುಭವಿಸಿದರು.

58 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 32 ವರ್ಷದ ಪೊ 21–18, 10–21, 21–13ರಲ್ಲಿ ಎರಡು ಸಲದ ಒಲಿಂಪಿಕ್‌ ಪದಕ ವಿಜೇತೆ ಮೇಲೆ ಜಯಗಳಿಸಿದರು.  ಸಿಂಧು ಮಂಗಳವಾರ ಪ್ರಕಟವಾದ ಕ್ರಮಾಂಕಪಟ್ಟಿಯಲ್ಲಿ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪೊ, ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿದ್ದಾರೆ.

ಭಾರತದ ಪ್ರಿಯಾಂಶು ರಾಜಾವತ್‌, ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರ ಚೊಯ್ ಜಿ ಹೂನ್‌ ಅವರನ್ನು 21–15, 21–19 ರಿಂದ ನೇರ ಆಟಗಳಲ್ಲಿ ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 32ನೇ ಸ್ಥಾನದಲ್ಲಿರುವ ರಾಜಾವತ್‌ ಗೆಲ್ಲಲು 42 ನಿಮಿಷ ಬಳಸಿಕೊಂಡರು. ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಕೊಡೈ ನರವೋಕಾ (ಜಪಾನ್‌) ಅವರನ್ನು ಎದುರಿಸಲಿದ್ದಾರೆ.

ಮಿಕ್ಸೆಡ್‌ ಡಬಲ್ಸ್ ವಿಭಾಗದಲ್ಲಿ ಭಾರತದ ಎನ್‌.ಸಿಕ್ಕಿ ರೆಡ್ಡಿ– ರೋಹನ್‌ ಕಪೂರ್ ಜೋಡಿ 21–17, 21–17 ರಲ್ಲಿ ಫಿಲಿಪ್ಪೀನ್ಸ್‌ನ ಅಲ್ವಿನ್‌ ಮೊರಾಡ– ಅಲಿಸ್ಸಾ ಸೆಬೆಲ್‌ ಲಿಯೊನಾರ್ಡೊ ಜೋಡಿಯನ್ನು ಸೋಲಿಸಿತು. ಇವರಿಬ್ಬರು ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಫೆಂಗ್ ಯಾನ್‌ ಝೆ– ಹುವಾಂಗ್‌ ಡಾಂಗ್‌ ಪಿಂಗ್‌ (ಚೀನಾ) ಅವರನ್ನು ಎದುರಿಸುತ್ತಾರೆ.

ಉದಯೋನ್ಮುಖರಿಗೆ ಹಿನ್ನಡೆ:

ಭಾರತದ ಕಿರಣ್‌ ಜಾರ್ಜ್ 17–21, 9–21 ರಲ್ಲಿ ಚೀನಾ ತೈಪೆಯ ಆಟಗಾರ, ವಿಶ್ವ ಕ್ರಮಾಂಕದಲ್ಲಿ 29ನೇ ಸ್ಥಾನದಲ್ಲಿರುವ ವಾಂಗ್‌ ತ್ಸು ವಿ ಅವರಿಗೆ ಮಣಿದರು.

ಭಾರತದ ಆಕರ್ಷಿ ಕಶ್ಯಪ್‌, ತಸ್ನಿಮ್‌ ಮಿರ್‌, ಮಿಥುನ್‌ ಮಂಜುನಾಥ್, ಅಸ್ಮಿತಾ ಚಲಿಹಾ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಇದು ದೇಶದ ಮೊದಲ ಹಂತದ ಮತ್ತು ಎರಡನೇ ಹಂತದ ಆಟಗಾರರ ಗುಣಮಟ್ಟದಲ್ಲಿರುವ ಅಂತರವನ್ನು ಸೂಚಿಸುವಂತಿದೆ.

ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಬಿ.ಸುಮೀತ್‌ ರೆಡ್ಡಿ– ಅಶ್ವಿನಿ ಪೊನ್ನಪ್ಪ 21–23, 21–13, 12–21 ರಲ್ಲಿ ಕೊರಿಯಾದ ಸೊಂಗ್‌ ಹ್ಯುನ್‌ ಚೊ– ಲೀ ಜಂಗ್‌ ಹ್ಯುನ್‌ ಎದುರು ಸೋಲನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT