×
ADVERTISEMENT
ಈ ಕ್ಷಣ :
ADVERTISEMENT

ಮೂಡಲಪಾಯ ಯಕ್ಷಗಾನ - ಇತ್ತೀಚಿನ ಬೆಳವಣಿಗೆಗಳ ಕುರಿತು ಗೋಷ್ಠಿ

ಬೆಂಗಳೂರಿನಲ್ಲಿ ನಡೆದಿದೆ ಗೋಷ್ಠಿ
Published 31 ಮಾರ್ಚ್ 2023, 9:13 IST
Last Updated 31 ಮಾರ್ಚ್ 2023, 11:21 IST
Comments
ಅಕ್ಷರ ಗಾತ್ರ

ಬೆಂಗಳೂರು: `ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ವೇಷಭೂಷಣ ಎಲ್ಲವನ್ನೂ ಒಳಗೊಂಡಿರುವ ವಿಶಿಷ್ಟವಾದ ಕಲೆ ಯಕ್ಷಗಾನ. ಇದು ಪ್ರಾದೇಶಿಕ ವೈವಿಧ್ಯವನ್ನು ಒಳಗೊಂಡಿದ್ದರೂ ದ್ರಾವಿಡ ಸಂಸ್ಕತಿಯನ್ನು ಪ್ರತಿನಿಧಿಸುವ ಕಲೆ. ಹೀಗಾಗಿ ಇದನ್ನು ಕರ್ನಾಟಕದ ಕಲೆ ಎಂದು ಸರ್ಕಾರ ಘೋಷಿಸಬೇಕು’ ಎಂದು ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಜನಶಕ್ತಿ ಕೇಂದ್ರ ಮತ್ತು ಅಭಿನವದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ಮೂಡಲಪಾಯ ಯಕ್ಷಗಾನ ಇತ್ತೀಚೆಗಿನ ಬೆಳವಣಿಗೆಗಳು’ ಕುರಿತ ವಿಚಾರಸಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ ಅದನ್ನು ಕಾಪಾಡಬೇಕಾದ್ದು ಕನ್ನಡಿಗರೆಲ್ಲರ ಕರ್ತವ್ಯ. ಇದು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇತ್ತು. ಇನ್ನೂ ವಿಸ್ತರಿಸಿ ಹೇಳುವುದಾದರೆ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿತ್ತು ಎನ್ನುವುದಕ್ಕೆ ಯಕ್ಷಗಾನದ ಆದಿಕವಿ ಕೆಂಪಣ್ಣಗೌಡ ಕೂಡ ತನ್ನ ಕಾವ್ಯದಲ್ಲಿ ಶನಿದೇವರು ದ್ರಾವಿಡ ಕುಲಕ್ಕೆ ಸೇರಿದವನು ಎಂಬ ಮಾತನ್ನು ಬಳಸುತ್ತಾನೆ. 22 ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಕಲೆಯನ್ನು ಮತ್ತೆ ಪುನರುಜ್ಜೀವನಗೊಳಿಸಬೇಕಾದ ಅವಶ್ಯಕತೆ ಇದೆ. ಮಂಡ್ಯ ಜಿಲ್ಲೆಯಲ್ಲಿ ಮೂಡಲಪಾಯ ಯಕ್ಷಗಾನವನ್ನು ಹಾಗೆ ಪುನರ್ ಚಾಲನೆಗೊಳಿಸುವ ಕೆಲಸವನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಜಯಪ್ರಕಾಶಗೌಡ ಅವರು ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಯಕ್ಷಗಾನ ಪ್ರಸಂಗವಾಗಿ ಹೆಚ್ಚು ಚರ್ಚೆಯಾಗಿದೆಯೇ ವಿನಃ ಅದರ ಸಾಹಿತ್ಯಕ ಅಂಶಗಳ ಬಗೆಗೆ ಆಗಿಲ್ಲ. ಯಕ್ಷನಟರಿಗೆ, ಭಾಗವತರಿಗೆ ಸಿಕ್ಕಿರುವ ಸ್ಟಾರ್ ವ್ಯಾಲ್ಯೂ ಯಕ್ಷಕವಿಗಳಿಗೆ ಸಿಕ್ಕಿಲ್ಲ. ಇನ್ನು ಸಾಹಿತ್ಯಚರಿತ್ರೆಯಲ್ಲಿ ಈ ಸಾಹಿತ್ಯದ ಪ್ರಸ್ತಾಪವೇ ಇಲ್ಲ. ಹೀಗಾಗಿ ಯಕ್ಷಗಾನ ಸಾಹಿತ್ಯವನ್ನು ಕುರಿತು ಮುಖ್ಯವಾಹಿನಿಯ ಸಾಹಿತ್ಯದೊಡನಿಟ್ಟು ಚರ್ಚಿಸಬೇಕಾಗಿದೆ. ಹದಿನೈದನೆಯ ಶತಮಾನದಲ್ಲಿ ಹಾಡುಗಬ್ಬ –ಓದುಗಬ್ಬವಾಗಿದ್ದ ಸಾಹಿತ್ಯ ಕೇಳುಗಬ್ಬವಾಗಿ ಪರಿವರ್ತನೆಯಾದದ್ದು ಅಪೂರ್ವ ಘಟನೆ. ಕುಮಾರವ್ಯಾಸ ಕೂಡ ‘ಒಂದಕ್ಷರವ ಕೇಳ್ದರಿಗೆ’ ಎನ್ನುತ್ತಾನೆ. ಈ ಹಿನ್ನೆಲೆಯಲ್ಲಿ ಯಕ್ಷಸಾಹಿತ್ಯವನ್ನು ನೋಡಬೇಕು’ ಎಂದರು.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ಹುಲಿಗಳ ಸಂರಕ್ಷಣೆಗಾಗಿ ಮಾಡಿದ ಟೈಗರ್ ಪ್ರಾಜೆಕ್ಟ್ ಎಂಬ ಯೋಜನೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿಸಿದ ಸರ್ಕಾರ ಅಳಿದುಹೋಗುತ್ತಿರುವ ಕಲೆಗಳನ್ನು ಸಂರಕ್ಷಿಸಲು ಇದೇ ಮಾದರಿಯಲ್ಲಿ ಯೋಜನೆಯೊಂದನ್ನು ಹಮ್ಮಿಕೊಳ್ಳಬೇಕು. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುಧಾನ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ ಗೌಡ ಅವರು ಮಾತನಾಡಿ ‘ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮ್ಮ ಇತ್ತೀಚೆಗಿನ ಕೃತಿ ಯಕ್ಷಕವಿ ಕೆಂಪಣ್ಣಗೌಡ ಕೃತಿಯಲ್ಲಿ ಪ್ರಸ್ತಾಪಿಸಿರುವ ಕೇಳುಗಬ್ಬವು ಕನ್ನಡದಲ್ಲಿ ವಿಶಿಷ್ಟವಾದ ಪ್ರಕಾರ. ಕರಾವಳಿ ಭಾಗದಲ್ಲಿ ಹೇಗೆ ತಾಳಮದ್ದಲೆ ಇದೆಯೋ ಹಾಗೆ ನಮ್ಮ ಕಡೆ `ಶನಿಕತೆ’ ಇದೆ. ಕತೆ ಓದುವುದು ಯಕ್ಷಗಾನ ಪ್ರಕಾರಕ್ಕೆ ಪೂರ್ವಪೀಠಿಕೆಯ ವೇದಿಕೆಯಾಗಿದೆ. ಸರ್ಕಾರ ಮೂಡಲಪಾಯ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯೊಂದನ್ನು ಸ್ಥಾಪಿಸಬೇಕು ಎಂದರು.

ಕರ್ನಾಟಕದಲ್ಲಿ ಯಕ್ಷಗಾನಕಲೆಯ ಹಿನ್ನೆಲೆ ಕುರಿತು ಡಾ. ಎಚ್ ಆರ್ ಚೇತನ, ಯಕ್ಷಗಾನದ ಪ್ರಾದೇಶಿಕ ವೈವಿಧ್ಯತೆ ಕುರಿತು ರಂಗಚಿಂತಕ ದೇವೇಂದ್ರ ಬೆಳೆಯೂರು, ಕೆಂಪಣಗೌಡನ ಶನಿಮಹಾತ್ಮೆ ಕುರಿತು ಡಾ. ಪಿ ಚಂದ್ರಿಕಾ, ಕರಿರಾಯ ಚರಿತೆ ಕುರಿತು ಡಾ. ಸಂಧ್ಯಾರೆಡ್ಡಿ, ನಳಚರಿತ್ರೆ ಕುರಿತು ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಪ್ರಬಂಧಗಳನ್ನು ಮಂಡಿಸಿದರು.

ಮಧ್ಯಾಹ್ನ ನಡೆದ ಸಂವಾದಗೋಷ್ಠಿಯಲ್ಲಿ ಟಿ. ಗೋವಿಂದರಾಜು, ವಿದ್ಯಾರಶ್ಮಿ ಪೆಲತ್ತಡ್ಕ, ರವಿ ಮಡೋಡಿ, ಕೆಂಪಮ್ಮ ಕಾರ್ಕಹಳ್ಳಿ, ನರಸೇಗೌಡ ಮಧುಗಿರಿ, ಪುಟ್ಟಸ್ವಾಮಿ ಅರಳಗುಪ್ಪೆ, ಪೋಲೀಸ ಪಾಟೀಲ ಬನಹಟ್ಟಿ, ತಮ್ಮಣ್ಣಗೌಡ, ಕೃಷ್ಣಮೂರ್ತಿ ಮಡಕಶಿರ, ಶಿವಣ್ಣ ತುರುಮೇಕೆರೆ, ಮಲ್ಲಿಕಾರ್ಜುನ ಕಡಕೋಳ ಮುಂತಾದವರು ಕರ್ನಾಟಕದ ಕಲೆಯಾಗಿ ಯಕ್ಷಗಾನ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ಜಾನಪದ ವಿದ್ಯಾಂಸರಾದ ಚಿಕಣ್ಣ ಯೆಣ್ಣೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಹಿ. ಚಿ. ಬೋರಲಿಂಗಯ್ಯ ಅವರು ಸಮಾರೋಪ ನುಡಿಗಳನ್ನಾಡಿದರು. ಶ್ರೀಕ್ಷೇತ್ರ ಆದಿಚುಂಚನಗಿರಿಯ ಬೆಂಗಳೂರು ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಕನ್ನಡ ಜನಶಕ್ತಿಕೆಂದ್ರದ ಸಿ. ಕೆ. ರಾಮೇಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಶಶಿಧರ ಭಾರೀಘಾಟ್ ವಂದಿಸಿದರು. ಅಭಿನವ ರವಿಕುಮಾರ್‌ ನಿರೂಪಿಸಿದರು. ಕಾದಂಬರಿಕಾರರಾದ ಗಜಾನನಶರ್ಮ, ಜಗದೀಶ ಸಂಪ, ಕಲಾವಿದ ಎಂ. ಎಸ್. ಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ. ಬಿ. ಕಿರಣ್ ಸಿಂಗ್, ಕನ್ನಡ ಹೋರಾಟಗಾರ ತಿಮ್ಮೇಶ್, ಹಿರಿಯ ಲೇಖಕ ಕೆ. ಪುಟ್ಟಸ್ವಾಮಿ ಮತ್ತು ಹಲವು ಊರುಗಳಿಂದ ಬಂದಿದ್ದ ಕಲಾವಿದರು, ಭಾಗವತರು ಉಪಸ್ಥಿತರಿದ್ದರು. ಮಂಡ್ಯದ ಮೂಡಲಪಾಯ ಯಕ್ಷಗಾನ ರೆಪರ್ಟರಿ ತಂಡದವರು ‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT