ಎ.ಪಿ
ಗಾಜಾ ಪಟ್ಟಿ (ಎ.ಪಿ): ಹಮಾಸ್ ನೆಲೆಯಾಗಿದೆ ಎಂದು ಇಸ್ರೇಲ್ ಬಲವಾಗಿ ಪ್ರತಿಪಾದಿಸಿರುವ ಅಲ್ ಶಿಫಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ತೆರವಿಗೆ ಸೇನೆ ಮುಂದಾಗಿದೆ. ಆಸ್ಪತ್ರೆ ಆಸುಪಾಸಿನಲ್ಲಿ ಕದನ ಇನ್ನಷ್ಟು ಬಿರುಸುಗೊಂಡಿದೆ.
ಆಸ್ಪತ್ರೆಯ ಸುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಜನರು ಆಶ್ರಯ ಪಡೆದಿದ್ದಾರೆ. ಗಾಜಾಪಟ್ಟಿಯಲ್ಲಿನ ಇಂಡೊನೇಷ್ಯಾ ಆಸ್ಪತ್ರೆಯೊಂದರ 2ನೇ ಮಹಡಿಯ ಮೇಲೆ ಶೆಲ್ ದಾಳಿ ನಡೆದಿದ್ದು, ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ.
12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸುಮಾರು 700 ಜನರು ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಖುದ್ರಾ ತಿಳಿಸಿದ್ದಾರೆ. ಇಸ್ರೇಲ್ ಸೇನೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಮಾಸ್ ಬಂಡುಕೋರರು ಜನರನ್ನೇ ರಕ್ಷಣಾ ಕವಚವಾಗಿ ಬಳಸುತ್ತಿದ್ದಾರೆ ಎಂದು ಸೇನೆ ದೂರಿದ್ದು, ಗಾಜಾದಲ್ಲಿ ಆಸ್ಪತ್ರೆಗಳನ್ನೇ ಗುರಿಯಾಗಿಸಿ ಕಾರ್ಯಾಚರಣೆ ಮುಂದುವರಿಸಿದೆ. ಇನ್ನೊಂದೆಡೆ, ಇಸ್ರೇಲ್ ಸೇನೆಯು ಗಾಜಾಪಟ್ಟಿಯಲ್ಲಿನ ಸುಮಾರು 23 ಲಕ್ಷ ಪ್ಯಾಲೆಸ್ಟೀನಿಯರನ್ನೇ ಗುರಿಯಾಗಿಸಿ ವೈಮಾನಿಕ ದಾಳಿ ನಡೆಸುತ್ತಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬರುತ್ತಿದೆ.
ಶಿಶುಗಳ ಸ್ಥಳಾಂತರ: ಅಲ್ ಶಿಫಾ ಆಸ್ಪತ್ರೆಯಿಂದ 31 ಶಿಶುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಳಾಂತರಿಸಿದ್ದು, ಈ ಪೈಕಿ 29 ಶಿಶುಗಳನ್ನು ಈಜಿಪ್ಟ್‌ಗೆ ಸ್ಥಳಾಂತರಿಸಿದೆ ಎಂದು ಆಸ್ಪತ್ರೆ ನಿರ್ದೇಶಕ ಮಹಮ್ಮದ್ ಜಖೌತ್ ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ಮುನ್ನ ನಾಲ್ಕು ಶಿಶುಗಳು ಮೃತಪಟ್ಟಿವೆ. ಗಂಭೀರ ಸ್ಥಿತಿಯಲ್ಲಿರುವ 250 ರೋಗಿಗಳು ಶಿಫಾದಲ್ಲಿದ್ದಾರೆ. ನೀರು, ವೈದ್ಯಕೀಯ ಸೌಲಭ್ಯಗಳು, ಇಂಧನ ಪೂರೈಕೆ ಸ್ಥಗಿತವಾಗಿದೆ. ಅವರಿಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿ ಆಸ್ಪತ್ರೆ ಇಲ್ಲ.
‘29 ಶಿಶುಗಳನ್ನು ರಫಾ ಗಡಿಯ ಮೂಲಕ ಈಜಿಪ್ಟ್‌ಗೆ ತರಲಾಗಿದೆ. ಈ ಎಲ್ಲ ಶಿಶುಗಳಿಗೆ ಚಿಕಿತ್ಸೆ ನೀಡುವಂಷ್ಟು ಇನ್‌ಕ್ಯುಬೇಟರ್ ಆಸ್ಪತ್ರೆಯಲ್ಲಿ ಇಲ್ಲ. ಕೆಲ ಶಿಶುಗಳನ್ನು ಇಸ್ಲಾಮಿಯಾ ಅಥವಾ ಕೈರೊಗೆ ಒಯ್ಯಲಾಗುವುದು’ ಎಂದು ಕೈರೊ ವರದಿ ತಿಳಿಸಿದೆ.
ಗಾಜಾದ ಉತ್ತರವನ್ನು ಗುರಿಯಾಗಿಸಿ ನಿರಂತರ ವೈಮಾನಿಕ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ, ದಕ್ಷಿಣದಲ್ಲಿ ಆಶ್ರಯ ಪಡೆಯಬೇಕು ಎಂದು ಪ್ಯಾಲೆಸ್ಟೀನಿಯರಿಗೆ ಸೂಚಿಸಿದೆ. ಈವರೆಗೆ ಅಂದಾಜು 17 ಲಕ್ಷ ನಿವಾಸಿಗಳು ಅತ್ತ ಗುಳೆ ಹೋಗಿದ್ದಾರೆ. ನಿರಾಶ್ರಿತರಾಗಿ ವಿಶ್ವಸಂಸ್ಥೆ ತೆರೆದಿರುವ ಶಿಬಿರಗಳಲ್ಲಿಯೇ ಸುಮಾರು 9 ಲಕ್ಷ ಜನರು ಉಳಿದಿದ್ದಾರೆ ಎಂದು ವರದಿ ತಿಳಿಸಿದೆ.
Cut-off box - ಭಾರತ ತಲುಪಬೇಕಿದ್ದ ಹಡಗು ಹೌತಿಯಿಂದ ಅಪಹರಣ: 25 ಸಿಬ್ಬಂದಿ ಒತ್ತೆ ಗಾಜಾಪಟ್ಟಿ (ಎ.ಪಿ): ಯೆಮೆನ್‌ನ ಹೌತಿ ಬಂಡುಕೋರರು ದಕ್ಷಿಣ ಕೆಂಪು ಸಮುದ್ರದಲ್ಲಿ ಇಸ್ರೇಲ್‌ನ ಸರಕುಸಾಗಣೆ ಹಡಗನ್ನು ಅಪಹರಿಸಿದ್ದು ಅದರಲ್ಲಿದ್ದ 25 ಸಿಬ್ಬಂದಿಯನ್ನು ಒತ್ತೆ ಇರಿಸಿಕೊಂಡಿದ್ದಾರೆ. ಈ ಹಡಗು ಭಾರತವನ್ನು ತಲುಪಬೇಕಿತ್ತು. ಈ ಮೂಲಕ ಇಸ್ರೇಲ್– ಹಮಾಸ್ ನಡುವಿನ ಕದನದ ಉದ್ವಿಗ್ನತೆ ಸಮುದ್ರ ಮಾರ್ಗ ವ್ಯಾಪಿಸಿದೆ. ಇಸ್ರೇಲ್ ಹಡಗುಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹೌತಿ ತಿಳಿಸಿದೆ. ಹಡಗು ರೇ ಕಾರ್ ಕ್ಯಾರಿಯರ್ಸ್ ಸಂಸ್ಥೆಗೆ ಸೇರಿದೆ. ಜಪಾನ್‌ನ ಕಂಪನಿ ನಿರ್ವಹಣೆಯಲ್ಲಿದ್ದ ಇದರಲ್ಲಿ ಇಸ್ರೇಲ್‌ನ ಒಬ್ಬ ಪ್ರಜೆ ಅಥವಾ ಸರಕು ಇರಲಿಲ್ಲ. ಸಿಬ್ಬಂದಿ ಫಿಲಿಪ್ಪೀನ್ಸ್ ಬಲ್ಗೇರಿಯಾ ರೊಮಾನಿಯಾ ಉಕ್ರೇನ್ ಮೆಕ್ಸಿಕೊದವರು ಎಂದು ತಿಳಿಸಿದೆ. ‘ಇದು ಆರಂಭವಷ್ಟೇ. ಇಸ್ರೇಲ್‌ನವರಿಗೆ ಶಕ್ತಿಯ ಭಾಷೆಯಷ್ಟೇ ಅರ್ಥವಾಗಲಿದೆ. ಇಸ್ರೇಲ್‌ನ ಹಡಗು ಹೈಜಾಕ್ ಮಾಡಿರುವುದು ಯಮೆನ್‌ನ ಶಸ್ತ್ರಾಸ್ತ್ರ ಪಡೆಯು ಸಮುದ್ರ ಮಾರ್ಗದ ಯುದ್ಧ ಆರಂಭಿಸಿರುವುದರ ಸೂಚನೆಯಷ್ಟೇ’ ಎಂದು ಹೌತಿಯ ಮುಖ್ಯ ಸಂಧಾನಕಾರ ಮೊಹಮ್ಮದ್ ಅಬ್ದುಲ್ ಸಲಾಂ ಹೇಳಿಕೆ ನೀಡಿದ್ದಾರೆ. ಹಡಗಿನ ಚಲನೆ ಕುರಿತ ಉಪಗ್ರಹ ಮಾಹಿತಿ ಆಧರಿಸಿ ಸುದ್ದಿಸಂಸ್ಥೆ ವರದಿ ಮಾಡಿರುವಂತೆ ಈ ಹಡಗು ಟರ್ಕಿ ಭೇಟಿ ಬಳಿಕ ನಿರ್ಗಮಿಸಿದ್ದ ಭಾರತದ ಗುಜರಾತ್‌ನಲ್ಲಿನ ಪಿಪಾವವ್‌ಗೆ ಬರಬೇಕಿತ್ತು.
Cut-off box - ನಾಲ್ವರು ಒತ್ತೆಯಾಳುಗಳ ಬಿಡುಗಡೆಒಬ್ಬರ ರಕ್ಷಣೆ: ಸಂಧಾನಕ್ಕೆ ಒತ್ತು ಗಾಜಾಪಟ್ಟಿ: ಹಮಾಸ್ ಬಂಡುಕೋರರು ಒತ್ತೆ ಇರಿಸಿಕೊಂಡಿದ್ದ ನಾಗರಿಕರ ಪೈಕಿ ನಾಲ್ವರನ್ನು ಬಿಡುಗಡೆ ಮಾಡಿದ್ದರೆ ಇಸ್ರೇಲ್ ಸೇನೆಯು ಒಬ್ಬರನ್ನು ರಕ್ಷಿಸಿದೆ. ಶಿಫಾ ಆಸ್ಪತ್ರೆಯ ಬಳಿ ಇಬ್ಬರು ಒತ್ತೆಯಾಳುಗಳ ಶವ ಪತ್ತೆಯಾಗಿದೆ. ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಜೊತೆಗೆ ಇಸ್ರೇಲ್ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುತ್ತಿವೆ. ಇಸ್ರೇಲ್ ಯುದ್ಧ ಸಂಪುಟದ ತ್ರಿಸದಸ್ಯರ ಸಮಿತಿಯು ಹಮಾಸ್ ಬಂಡುಕೋರರ ಜೊತೆಗೆ ಆದಷ್ಟು ಶೀಘ್ರ ಸಂಧಾನ ನಡೆಸಲಿದೆ. ಅ. 7ರಂದು ಮೊದಲಿಗೆ ದಾಳಿ ನಡೆಸಿದ್ದ ಹಮಾಸ್ ಬಂಡುಕೋರರು 240 ಜನರನ್ನು ಒತ್ತೆಯಾಳಾಗಿ ಕರೆದೊಯ್ದಿದ್ದರು. ಅಂದು ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸುಮಾರು 1200 ಜನರು ಸತ್ತಿದ್ದರು. ಇಸ್ರೇಲ್ ಸೇನೆ ಪ್ರಕಾರ 63 ಯೋಧರು ಈವರೆಗೆ ಸತ್ತಿದ್ದಾರೆ. ಅತ್ತ ಗಾಜಾಪಟ್ಟಿಯಲ್ಲಿ ಇಸ್ರೇಲ್ ದಾಳಿಯಿಂದಾಗಿ 13 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದು 2700 ಜನರು ನಾಪತ್ತೆಯಾಗಿದ್ದಾರೆ.
Cut-off box - ಆಸ್ಪತ್ರೆಯ ನೆಲದಲ್ಲಿ ಹಮಾಸ್ ನೆಲೆ: ಸೇನೆಯಿಂದ ವಿಡಿಯೊ ಬಿಡುಗಡೆ ಗಾಜಾಪಟ್ಟಿ (ಎ.ಪಿ): 20 ಎಕರೆ ವಿಸ್ತೀರ್ಣದಲ್ಲಿರುವ ಆಸ್ಪತ್ರೆಯ ಕಟ್ಟಡದ ಕೆಳಗೇ ಹಮಾಸ್‌ನ ಬಂಡುಕೋರರು ನೆಲೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಇಸ್ರೇಲ್ ಸೇನೆಯು ಪುನರುಚ್ಚರಿಸಿದೆ. ಅದರ ಪ್ರಕಾರ ನೆಲೆಯಲ್ಲಿ ಹಲವು ಕಟ್ಟಡಗಳು ಗ್ಯಾರೇಜ್ ಮತ್ತು ಪ್ಲಾಜಾ ಇದೆ. ಆಸ್ಪತ್ರೆಯಲ್ಲಿ ಪತ್ತೆ ಮಾಡಿರುವ ಸುರಂಗಮಾರ್ಗ ಎಂದು ಪ್ರತಿಪಾದಿಸಿರುವ ವಿಡಿಯೊ ಅನ್ನು ಇಸ್ರೇಲ್ ಸೋಮವಾರ ಬಿಡುಗಡೆ ಮಾಡಿದೆ. ಗುರುತಿಸಲಾದ ಸುರಂಗ 60 ಮೀಟರ್ ಉದ್ದ 10 ಮೀಟರ್ ಅಗಲದ್ದಾಗಿದೆ. ಇಲ್ಲಿ ಮೆಟ್ಟಿಲು ಗುಂಡಿಗೆ ದಾಳಿಗೆ ನೆರವಾಗುವ ರಂಧ್ರ ಇದೆ. ಸ್ಫೋಟಕ ನಿರೋಧಕ ಭಾಗಿಲು ಇದ್ದು ಸೇನೆ ಇನ್ನು ಅದನ್ನು ತೆರೆಯಬೇಕಾಗಿದೆ ಎಂದು ತಿಳಿಸಿದೆ. ಇಸ್ರೇಲ್ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹಮಾಸ್ ಒತ್ತೆ ಇರಿಸಿಕೊಂಡಿರುವ ನೇಪಾಳ ಮತ್ತು ಥಾಯ್ಲೆಂಡ್‌ನ ತಲಾ ಒಬ್ಬ ಪ್ರಜೆಯಿರುವ ದೃಶ್ಯಗಳಿವೆ. ನಿರಾಕರಣೆ: ಆದರೆ ಆಸ್ಪತ್ರೆ ಕೆಳಗೆ ನೆಲೆ ಇದೆ ಎಂಬುದನ್ನು ಸಿಬ್ಬಂದಿ ಅಲ್ಲಗಳೆದಿದ್ದಾರೆ. ‘ಅಲ್ಲಿ ಕಂಟ್ರೊಲ್ ಕಮಾಂಡ್ ಸೆಂಟರ್ ಇದೆ ಎಂದು ಸೇನೆ ಹೇಳಿದೆ. ಅಂದರೆ ಸುರಂಗಕ್ಕಿಂತಲೂ ದೊಡ್ಡದೇ ಇರಬೇಕು’ ಎನ್ನುತ್ತಾರೆ ಅಧಿಕಾರಿ ಒಸಾಮಾ ಹಮ್ದನ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.