ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಭಾನುವಾರ ರಾತ್ರಿ ಅಂತಿಮ ರೂಪ ನೀಡಿತು. ಮೊದಲ ಪಟ್ಟಿ ಸೋಮವಾರ ಮಧ್ಯಾಹ್ನ ದೊಳಗೆ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ನಡೆದ ಸಭೆ ಯಲ್ಲಿ ಎಲ್ಲ 224 ಕ್ಷೇತ್ರಗಳ ಕುರಿತು ಚರ್ಚಿ ಸಲಾಯಿತು. ಮೊದಲ ಪಟ್ಟಿಯಲ್ಲಿ 170 ರಿಂದ 180 ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಅಭ್ಯರ್ಥಿಗಳ ಹೆಸರು ಅಖೈರು ಗೊಳಿಸುವ ಸಂಬಂಧ ನಡ್ಡಾ ಅವರು ರಾಜ್ಯ ನಾಯಕರ ಜತೆಗೆ ಶನಿವಾರ ಸುಮಾರು 13 ಗಂಟೆ ಸಮಾಲೋಚನೆ ನಡೆಸಿದ್ದರು. ಶನಿವಾರ ಎಲ್ಲ ಕ್ಷೇತ್ರಗಳ ಚರ್ಚೆ ಪೂರ್ಣ ಆಗಿರಲಿಲ್ಲ. ನಡ್ಡಾ ಅವರು ರಾಜ್ಯ ನಾಯಕರ ಜತೆಗೆ ಭಾನುವಾರ ನಾಲ್ಕು ಗಂಟೆಗೂ ಅಧಿಕ ಚರ್ಚಿಸಿದರು. ಪ್ರತಿ ಕ್ಷೇತ್ರಕ್ಕೆ ರಾಜ್ಯ ಪ್ರಮುಖರ ಸಮಿತಿಯು ತಲಾ 2–3 ಹೆಸರನ್ನು ಶಿಫಾರಸು ಮಾಡಿತ್ತು. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಹೆಚ್ಚಿನ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಹೆಸರನ್ನು ತಲಾ ಒಂದಕ್ಕೆ ಇಳಿಸಲಾಯಿತು.
ಗುಜರಾತ್ ಹಾಗೂ ಕರ್ನಾಟಕದ ಸನ್ನಿವೇಶ ಭಿನ್ನ. ಗುಜರಾತ್ ಮಾದರಿ ಯಲ್ಲಿ ಬಹು ದೊಡ್ಡ ಮಟ್ಟದ ಪ್ರಯೋಗವೂ ಇರುವುದಿಲ್ಲ. ಕೆಲವು ಅಚ್ಚರಿಯ ಬದಲಾವಣೆಗಳು ಇರುವು ದಂತೂ ಖಚಿತ. ಹಲವು ಹೊಸ ಮುಖಗಳಿಗೆ ಅವಕಾಶ ಲಭಿಸಲಿದೆ. ಕರ್ನಾಟಕದಲ್ಲಿ ಅಧಿಕಾರ ಉಳಿಸಿ ಕೊಳ್ಳಲು ಬೇಕಾದ ಎಲ್ಲ ತಂತ್ರಗಳನ್ನು ಪಕ್ಷ ಮಾಡಲಿದೆ. ಈ ಕುರಿತು ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ?: ಕೋಲಾರ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್. ಈಶ್ಚರಪ್ಪ ಹಾಗೂ ವರುಣ ಕ್ಷೇತ್ರದಿಂದ ವಿ.ಸೋಮಣ್ಣ ಅವರನ್ನು ಕಣಕ್ಕೆ ಇಳಿಸುವ ಕುರಿತು ಪಕ್ಷದಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಮುಖ್ಯಮಂತ್ರಿ ಸೇರಿ ಬಿಜೆಪಿಯ ಮುಖಂಡರು ಈಗಾಗಲೇ ಹೇಳಿದ್ದಾರೆ.
ವರುಣದಲ್ಲಿ ಸೋಮಣ್ಣ ಅವ ರನ್ನು ಕಣಕ್ಕೆ ಇಳಿಸಿದರೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಬಹುದು ಎಂಬುದು ಬಿಜೆಪಿ ನಾಯಕರ ಆಲೋಚನೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಈಶ್ಚರಪ್ಪ ಅವರನ್ನು ಹುರಿಯಾಳುವನ್ನಾಗಿ ಮಾಡಬೇಕು ಎಂಬುದಾಗಿ ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮಕ್ಕಳಿಗಾಗಿ ಮುಖಂಡರ ಲಾಬಿ
ಪುತ್ರ ಅರುಣ್ ಸೋಮಣ್ಣ ಅವರಿಗೆ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ವಸತಿ ಸಚಿವ ವಿ.ಸೋಮಣ್ಣ ಅವರು ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ಅವರಲ್ಲಿ ಲಾಬಿ ನಡೆಸಿದರು. ನವದೆಹಲಿಗೆ ಭಾನುವಾರ ಬೆಳಿಗ್ಗೆ ಬಂದ ಅವರು ಹಿರಿಯ ನಾಯಕರನ್ನು ಭೇಟಿ ಮಾಡಿ ಪುತ್ರನಿಗೆ ಈ ಸಲ ಅವಕಾಶ ನೀಡುವಂತೆ ಕೇಳಿಕೊಂಡರು.
‘ಒಂದು ಮನೆಯಲ್ಲಿ ಇಬ್ಬರಿಗೆ ಟಿಕೆಟ್ ನೀಡುವುದಾದರೆ ನಮ್ಮ ಕುಟುಂಬವನ್ನು ಸಹ ಪರಿಗಣಿಸಿ ಎಂದು ಕೇಳಿಕೊಂಡಿದ್ದೇನೆ. ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ಸೋಮಣ್ಣ ಸುದ್ದಿಗಾರರಿಗೆ ತಿಳಿಸಿದರು.
‘ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದಾದರೆ ನಮ್ಮ ಕುಟುಂಬವನ್ನು ಸಹ ಪರಿಗಣಿಸಿ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರಾಷ್ಡ್ರೀಯ ನಾಯಕರಲ್ಲಿ ಮನವಿ ಮಾಡಿದ್ದಾರೆ. ಕಾರಜೋಳ ಅವರು ಮುಧೋಳದ ಶಾಸಕರಾಗಿದ್ದಾರೆ. ಪುತ್ರ ಗೋಪಾಲ ಕಾರಜೋಳ ಅವರಿಗೆ ನಾಗಠಾಣ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬುದು ಅವರ ಬೇಡಿಕೆ.
ಛಬ್ಬಿ ಬಿಜೆಪಿಗೆ
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರು ಮುಖ್ಯಮಂತ್ರಿ ಸಮ್ಮುಖದಲ್ಲಿ ಬಿಜೆಪಿಗೆ ಭಾನುವಾರ ಸೇರಿದರು.
ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಛಬ್ಬಿ ಅವರು ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ದ್ದರು. ಲಾಡ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದರಿಂದ ಮುನಿಸಿ ಕೊಂಡಿದ್ದ ಛಬ್ಬಿ, ‘ಈ ಚುನಾವಣೆಯಲ್ಲಿ ಲಾಡ್ ವಿರುದ್ಧ ಕೆಲಸ ಮಾಡುವೆ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಡಿದ್ದ ಅವರು ಬಿಜೆಪಿ ನಾಯಕ ರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಿಜೆಪಿಯಿಂದ ಟಿಕೆಟ್ ಸಿಗುವ ಭರವಸೆ ಸಿಕ್ಕ ಬಳಿಕ ಆ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಪಕ್ಷ ಟಿಕೆಟ್ ನೀಡಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.