ADVERTISEMENT

IND vs AUS: ಆಸ್ಟ್ರೇಲಿಯಾ ಸ್ಪಿನ್ ಮೋಡಿ; ಸಂಕಷ್ಟದಲ್ಲಿ ಭಾರತ 84/7

ಕುನೇಮನ್-ಲಯನ್‌ಗೆ ತಲಾ ಮೂರು ವಿಕೆಟ್

Nagaraja B
Published 1 ಮಾರ್ಚ್ 2023, 6:35 IST
Last Updated 1 ಮಾರ್ಚ್ 2023, 6:35 IST
ಕುನೇಮನ್ ಸಂಭ್ರಮ
ಕುನೇಮನ್ ಸಂಭ್ರಮ   

ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. 

ಆಸ್ಟ್ರೇಲಿಯಾದ ಸ್ಪಿನ್ ಮೋಡಿಗೆ ತತ್ತರಿಸಿರುವ ಭಾರತ, ಮೊದಲ ದಿನದ ಊಟದ ವಿರಾಮದ ಹೊತ್ತಿಗೆ 26 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. 

ಆಸ್ಟ್ರೇಲಿಯಾ ಪರ ಮ್ಯಾಥ್ಯೂ ಕುನೇಮನ್ (14ಕ್ಕೆ 3) ಹಾಗೂ ನೇಥನ್ ಲಯನ್ (23ಕ್ಕೆ 3) ತಲಾ ಮೂರು ವಿಕೆಟ್ ಕಬಳಿಸಿದರು. ಮಗದೊಂದು ವಿಕೆಟ್ ಟಾಡ್ ಮರ್ಫಿ ಗಳಿಸಿದರು. 

ADVERTISEMENT

ಟಾಸ್ ಗೆದ್ದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ (12) ಸ್ಟಂಪ್ ಔಟ್ ಆದರು. ಕೆ.ಎಲ್. ರಾಹುಲ್ ಸ್ಥಾನಕ್ಕೆ ಆಯ್ಕೆಯಾಗಿದ್ದ ಶುಭಮನ್ ಗಿಲ್ (21) ಸಹ ನಿರಾಸೆ ಮೂಡಿಸಿದರು. 

ಚೇತೇಶ್ವರ ಪೂಜಾರ (1), ರವೀಂದ್ರ ಜಡೇಜ (4) ಹಾಗೂ ಶ್ರೇಯಸ್ ಅಯ್ಯರ್ (0) ಎರಡಂಕಿಯನ್ನು ದಾಟಲಿಲ್ಲ. ಪರಿಣಾಮ 45 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು. 

ಈ ವೇಳೆ ನಿರೀಕ್ಷೆ ಮೂಡಿಸಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ (22) ಸಹ ಔಟ್ ಆಗುವುದರೊಂದಿಗೆ ಭಾರತಕ್ಕೆ ಬಲವಾದ ಹೊಡೆತ ಬಿತ್ತು. 

ಊಟದ ವಿರಾಮಕ್ಕೂ ಸ್ವಲ್ಪ ಮೊದಲು ಶ್ರೀಕರ್ ಭರತ್ (17) ಸಹ ಪೆವಿಲಿಯನ್ ಸೇರಿದರು. 

ರಾಹುಲ್ ಹೊರಕ್ಕೆ, ಶಮಿಗೆ ವಿಶ್ರಾಂತಿ...
ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ ತರಲಾಗಿತ್ತು. ಕೆ.ಎಲ್. ರಾಹುಲ್ ಅವರನ್ನು ಕೈಬಿಟ್ಟಿದ್ದರೆ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ಸೂಚಿಸಲಾಗಿತ್ತು. 

ಅವರಿಬ್ಬರ ಸ್ಥಾನಗಳಿಗೆ ಅನುಕ್ರಮವಾಗಿ ಶುಭಮನ್ ಗಿಲ್ ಹಾಗೂ ಉಮೇಶ್ ಯಾದವ್ ಆಯ್ಕೆಯಾಗಿದ್ದರು. 

ಅತ್ತ ಪ್ಯಾಟ್ ಕಮಿನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸುತ್ತಿದ್ದಾರೆ. ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.