ADVERTISEMENT

T20 World Cup 2022: ಅ.23ರಂದು ಭಾರತ –ಪಾಕಿಸ್ತಾನದ ನಡುವೆ ಹೈವೋಲ್ಟೆಜ್ ಕದನ

Published 21 ಜನವರಿ 2022, 5:33 IST
Last Updated 21 ಜನವರಿ 2022, 5:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್‌: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪುರುಷರ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 16ರಿಂದ ಟೂರ್ನಿಯ ಪಂದ್ಯಗಳು ಅರಂಭವಾಗಲಿದ್ದು, ನವೆಂಬರ್‌ 10ರಂದು ಫೈನಲ್‌ ನಡೆಯಲಿದೆ.

ಅ.23ರಂದು ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ (ಎಂಸಿಜಿ) ನಡೆಯಲಿರುವ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

ADVERTISEMENT

ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದ್ದು, ಆಸ್ಟ್ರೇಲಿಯಾದ ಪ್ರಮುಖ ನಗರಗಳಾದ ಮೆಲ್ಬರ್ನ್‌, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್, ಜಿಲಾಂಗ್, ಹೋಬರ್ಟ್ ಮತ್ತು ಪರ್ತ್‌ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.

‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಅಘ್ಗಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಇತ್ತ ‘ಬಿ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ ತಂಡಗಳು ವಿಶ್ವಕಪ್‌ ಟೂರ್ನಿ ಸೂಪರ್‌ 12 ಹಂತಕ್ಕೆ ನೇರ ಅರ್ಹತೆ ಪಡೆದಿವೆ.

ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೆಣಸಲಿರುವ ನಾಲ್ಕು ತಂಡಗಳು:
ಅರ್ಹತೆಗಾಗಿ ನಾಲ್ಕು ತಂಡಗಳು ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಲಿದ್ದು, ಈ ಪಂದ್ಯಗಳು ಅಕ್ಟೋಬರ್‌ 16ರಿಂದ ಅ.21ವರೆಗೂ ನಡೆಯಲಿವೆ. ನಾಲ್ಕು ತಂಡಗಳ ಪೈಕಿ ಎರಡು ತಂಡಗಳು 'ಸೂಪರ್‌ 12' ಸುತ್ತಿಗೆ ಅರ್ಹತೆ ಪಡೆಯುತ್ತವೆ, ಆ ತಂಡಗಳು ಈಗಾಗಲೇ ಅರ್ಹತೆ ಗಳಿಸಿರುವ 8 ತಂಡಗಳೊಂದಿಗೆ ಸೇರಲಿವೆ.

ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಮೊದಲ ಸುತ್ತಿಗೆ ಅರ್ಹತೆ ಪಡೆದಿವೆ.

ಅ.16ರಂದು ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಹೋರಾಟ ನಡೆಸಲಿವೆ. ನಂತರದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಸೆಣಸಾಡಲಿವೆ.

ಸಾರಾಂಶ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಪುರುಷರ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.