ಪ್ರಜಾವಾಣಿ ವೆಬ್ ಡೆಸ್ಕ್
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಬೆಂಗಳೂರು ಡಿಸಿಪಿ ಆಗಿದ್ದಾಗ ಲಂಚದ ರೂಪದಲ್ಲಿ ₹4.50 ಲಕ್ಷದ ರಪಾಲೆ ವಾಚ್ ಪಡೆದಿದ್ದರು ಎಂಬ ಡಿಎಂಕೆ ಆರೋಪಕ್ಕೆ ಮಾಜಿ ಐಪಿಎಸ್ ಅಧಿಕಾರಿ ತಿರುಗೇಟು ನೀಡಿದ್ದಾರೆ.
ದುಬಾರಿ ವಾಚ್ ಬಿಲ್ ಬಗ್ಗೆ ಅಣ್ಣಾಮಲೈ ಅವರು ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಲ್ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
'ಆ ಪ್ರಕಾರ ಬೆಲ್ ಆ್ಯಂಡ್ ರೋಸ್ ಕಂಪನಿಯ ರಪಾಲೆ ವಾಚ್ ಅನ್ನು ನಾನು ಕೊಯಂಬತ್ತೂರಿನ ನನ್ನ ಗೆಳೆಯ ಚೇರಲತನ್ ರಾಮಕೃಷ್ಣನ್ ಅವರಿಂದ ಸೆಕೆಂಡ್ ಹ್ಯಾಂಡ್ ಆಗಿ ₹3 ಲಕ್ಷಕ್ಕೆ ಪಡೆದಿದ್ದು, ಆ ರಪಾಲೆ ವಾಚ್ ಅನ್ನು ಚೇರಲತನ್ ಅವರು ₹4.50 ಲಕ್ಷಕ್ಕೆ ಖರೀದಿಸಿದ್ದರು' ಎಂದು ತಿಳಿಸಿದ್ದಾರೆ.
‘ಬೆಲ್ ಆ್ಯಂಡ್ ರೋಸ್ ಕಂಪನಿಯು ಜಗತ್ತಿನಲ್ಲಿ 500 ರಪಾಲೆ ವಾಚ್ ಗಳನ್ನು ಮಾತ್ರ ತಯಾರಿಸಿದೆ. ಭಾರತದಲ್ಲಿ ಎರಡು ಮಾತ್ರ ಮಾರಾಟವಾಗಿವೆ. ಒಂದನ್ನು ಮುಂಬೈನ ಎಂಎನ್‌ಸಿ ಉದ್ಯೋಗಿ ಖರೀದಿಸಿದ್ದಾರೆ. ಇನ್ನೊಂದನ್ನು ಚೇರಲತನ್ ಖರೀದಿಸಿದ್ದಾರೆ. ಅವರು ಖರೀದಿಸಿದ್ದಕ್ಕೆ, ಅವರಿಂದ ನಾನು ಖರೀದಿಸಿದ್ದಕ್ಕೆ ಎಲ್ಲದಕ್ಕೂ ದಾಖಲೆ ಇಲ್ಲಿವೆ’ ಎಂದು ತೋರಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಡಿಎಂಕೆ ಪಕ್ಷದ ಉನ್ನತ ನಾಯಕರು ಹಾಗೂ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಸುಮಾರು ₹1.32 ಲಕ್ಷ ಕೋಟಿ ಸಂಪತ್ತನ್ನು ಹೊಂದಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ ಡಿಎಂಕೆ ನಾಯಕರು ಅಣ್ಣಾಮಲೈ ವಿರುದ್ಧ ವಾಚ್ ಆರೋಪ ಮಾಡಿದ್ದಾರೆ.
‘ಡಿಎಂಕೆ ಫೈಲ್ಸ್ ಭಾಗ–1ಕ್ಕೆ ಕೊನೆಗೊಳ್ಳುವುದಿಲ್ಲ. 2024ರ ಚುನಾವಣೆಗೆ ಮುಂಚಿತವಾಗಿ ತಮಿಳುನಾಡು ಆಳಿದ ಎಲ್ಲ ಪಕ್ಷಗಳ ಭ್ರಷ್ಟಾಚಾರವನ್ನು ಐದು ಭಾಗಗಳಲ್ಲಿ ನಾವು ಬಹಿರಂಗಪಡಿಸುತ್ತೇವೆ. ಭ್ರಷ್ಟಾಚಾರದ ವಿಷಯದಲ್ಲಿ ಒಂದು ಪಕ್ಷ ಗುರಿಯಾಗಿಸಲು ಮತ್ತು ಇನ್ನೊಂದನ್ನು ಬಿಡಲು ಸಾಧ್ಯವಿಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಒಂದೇ ಕುಂಚದಲ್ಲಿ ಮೂಡಿದ ಎರಡು ಚಿತ್ರಗಳು ಅಷ್ಟೇ ’ ಎಂದು ಪ್ರಶ್ನೆಯೊಂದಕ್ಕೆ
ಪ್ರತಿಕ್ರಿಯಿಸಿದ್ದರು.
‘ಎಂ.ಕೆ. ಸ್ಟಾಲಿನ್ ಮತ್ತು ಅವರ ಕುಟುಂಬ ಸದಸ್ಯರಾದ ಕನಿಮೋಳಿ, ದಯಾನಿಧಿ ಮಾರನ್, ಟಿ.ಆರ್. ಬಾಲು, ಡಿ. ಮುರುಗನ್, ಕೆ. ಪೊನ್ಮುಡಿ ಮತ್ತು ಇ.ವಿ. ವೇಲು ಹಾಗೂ ಅವರ ಸಂಬಂಧಿಕರು ಸೇರಿ ಡಿಎಂಕೆಯ 11 ಮಂದಿ ಉನ್ನತ ನಾಯಕರು ₹1.32 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ’ ಎಂದರು.
ಕೆ.ಅಣ್ಣಾಮಲೈ ಅವರು ಮಾಡಿರುವ ಆರೋಪಗಳು ‘ಜೋಕ್’ಗಳು. ಅವರು ಮಾಡಿರುವ ಆರೋಪಗಳನ್ನು ಹದಿನೈದು ದಿನಗಳಲ್ಲಿ ಪುರಾವೆಗಳೊಂದಿಗೆ ಸಾಬೀತುಪಡಿಸಲಿ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸವಾಲು ಹಾಕಿದ್ದಾರೆ.
Highlights - ಡಿಎಂಕೆ ಫೈಲ್ಸ್ ಭಾಗ–1 ಎಂಬ ಅಣ್ಣಾಮಲೈ ಆರೋಪಕ್ಕೆ ಡಿಎಂಕೆ ನಾಯಕರು ಅಣ್ಣಾಮಲೈ ಬಗ್ಗೆ ಕಿಕ್‌ಬ್ಯಾಕ್ ಆರೋಪ ಮಾಡಿದ್ದರು. ಇದೀಗ ಸ್ವತಃ ಅಣ್ಣಾಮಲೈ ಅವರು ವಾಚ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ
Quote - ‘ಎಂ.ಕೆ. ಸ್ಟಾಲಿನ್ ಮತ್ತು ಅವರ ಕುಟುಂಬ ಸದಸ್ಯರಾದ ಕನಿಮೋಳಿ ದಯಾನಿಧಿ ಮಾರನ್ ಟಿ.ಆರ್. ಬಾಲು ಡಿ. ಮುರುಗನ್ ಕೆ. ಪೊನ್ಮುಡಿ ಮತ್ತು ಇ.ವಿ. ವೇಲು ಹಾಗೂ ಅವರ ಸಂಬಂಧಿಕರು ಸೇರಿ ಡಿಎಂಕೆಯ 11 ಮಂದಿ ಉನ್ನತ ನಾಯಕರು ₹1.32 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ’ –ಅಣ್ಣಾಮಲೈ
Cut-off box - –ಪತ್ರಿಕಾಗೋಷ್ಟಿಯಲ್ಲಿ ಅಣ್ಣಾಮಲೈ ತಿರುಗೇಟು –ವಾಚ್ ಬಿಲ್ ಬಿಡುಗಡೆ –ಡಿಎಂಕೆಗೆ ತಿರುಗೇಟು
Graphic text / Statistics - No
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.