ರಾಷ್ಟ್ರೀಯ ಜಲನೀತಿ ರೂಪಿಸಲು ಪ್ರಧಾನಿಗೆ ಒತ್ತಾಯ
ಬೆಂಗಳೂರು, ಜ. 17– ಪ್ರಮುಖ ವಿರೋಧ ಪಕ್ಷಗಳ ಸಭಾತ್ಯಾಗದ ಮಧ್ಯೆ ಇಂದು ಇಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ವಿವಾದ ಕುರಿತ ಸರ್ವಪಕ್ಷ ಸಭೆ ಜಲ ವಿವಾದಗಳ ಇತ್ಯರ್ಥಕ್ಕೆ ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದಕ್ಕಾಗಿ ಅಂತರ್‌ರಾಜ್ಯ ಮಂಡಳಿ ಸಭೆ ಕರೆಯುವಂತೆ ಪ್ರಧಾನಿಯನ್ನು ಒತ್ತಾಯಿಸಲು ನಿರ್ಧರಿಸಿತು.
ಇಂಥ ಒಂದು ಮಾರ್ಗದರ್ಶಿ ಸೂತ್ರ ಅಸ್ತಿತ್ವಕ್ಕೆ ಬರುವವರೆಗೆ ಕಾವೇರಿ ನ್ಯಾಯಮಂಡಳಿ ಕಲಾಪ ಸ್ಥಗಿತಗೊಳಿಸಿ ಆದೇಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಕ್ಕೂ ತೀರ್ಮಾನಿಸಿತು.
ಎರಡು ತಾಸಿನ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿವರ ನೀಡಿದ ಜೆ.ಎಚ್.ಪಟೇಲ್ ಅವರು ‘ನ್ಯಾಯಮಂಡಳಿ ಕಲಾಪವನ್ನು ಮಾತ್ರ ರಾಜ್ಯ ಸರ್ಕಾರ ಬಹಿಷ್ಕರಿಸುವುದಿಲ್ಲ; ಬದಲಿಗೆ ಮಂಡಳಿಯ ಮುಂದೆ ಹಾಜರಾಗಿ ತನ್ನ ನಿಲುವನ್ನು ವಿವರಿಸುತ್ತದೆ’ ಎಂದು ಸ್ಪಷ್ಟಪಡಿಸಿದರು.
ಮಂಡ್ಯ: ರೈಲ್ವೆ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ತಡೆ
ಬೆಂಗಳೂರು, ಜ. 17– ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಬೇಕಿದ್ದ ಬೆಂಗಳೂರು– ಸತ್ಯಮಂಗಲ ರೈಲ್ವೆ ಮಾರ್ಗದ ಸಮೀಕ್ಷೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ತಡೆಯೊಡ್ಡಿದೆ.
ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಹಾಗೂ ಸಂಸತ್ ಸದಸ್ಯರಾದ ಎಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಬೇಕಿದ್ದ ಈ ಬಹು ಕಾಳದ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಫೆಬ್ರುವರಿ 6 ರಂದು ನಡೆಯಲಿರುವ ವಿಧಾಣಸಭೆಯ ಉಪ ಚುನಾವಣೆಯ ಹಿನ್ನೆಲೆಯಲ್ಲಿ ತಡೆಹಿಡಿಯಲಾಯಿತು ಎಂದು ರಾಜ್ಯ ಚುನಾವಣಾಧಿಕಾರಿ ಎನ್.ಕ್ಷೇತ್ರಪಾಲ್ ಅವರು ತಿಳಿಸಿದರು.
ರಾಷ್ಟ್ರೀಯ ಜಲನೀತಿ ರೂಪಿಸಲು ಪ್ರಧಾನಿಗೆ ಒತ್ತಾಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.