‘ಎಲ್ಲರ ಕನ್ನಡ’: ಸಾಧ್ಯತೆ, ಸವಾಲು’ ಎಂಬ ಲೇಖನದಲ್ಲಿ (ಪ್ರ.ವಾ., ಜ. 5) ಟಿ.ಎನ್.ವಾಸುದೇವಮೂರ್ತಿ ಅವರು ಹೇಳುವಂತೆ, ಭಾಷೆಗೆ ಸೈದ್ಧಾಂತಿಕ ಸರಿತನದ ಗೊಡವೆ ಇರುತ್ತದೆ- ಇರುವುದಿಲ್ಲ ಎನ್ನುವುದು ಚರ್ಚೆಯ ವಿಚಾರವೇ ಅಲ್ಲ. ಬದಲಾಗಿ, ‘ಸಮಾಜ ಮತ್ತು ಭಾಷೆಯ ನಂಟಿನಲ್ಲಿ’ ಹುಟ್ಟುಪಡೆಯುವ ಯಾವುದೇ ಒಂದು ಸಿದ್ಧಾಂತ ಆಯಾ ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸು
ವುದಾಗಿರುತ್ತದೆ.
ಇಂಗ್ಲಿಷಿನ ಸಮಾಜಗಳಲ್ಲಿ ಹುಟ್ಟಿದ ಸಿದ್ಧಾಂತಗಳನ್ನು ಬಳಸುತ್ತಿರುವುದರಿಂದ ಜನದೂರ ನಿಂತಿರುವ ‘ಜ್ಞಾನ’ದ ಗೋಜಲುಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇದನ್ನು ಅರಿಯದ ಅವರು ‘ಮೇಲ್ವರ್ಗದ ಸಂಸ್ಕೃತಿ, ಭಾಷೆ, ಆಚಾರ ವಿಚಾರ’ಗಳನ್ನು ಅನುಕರಿಸುವುದು, ಅಳವಡಿಸಿಕೊಳ್ಳುವುದರ ಸಾಧ್ಯತೆಯನ್ನು ಒತ್ತಾಯಿಸಿದ್ದಾರೆ. ಕನ್ನಡದ ನೆಪದಲ್ಲಿ ‘ಸಂಸ್ಕೃತ ವ್ಯಾಕರಣತತ್ವ’ವನ್ನು ಕಲಿಯಲೇಬೇಕಾದ ಮತ್ತು ಕಲಿಸುತ್ತಿರುವ ಮೇಲ್ವರ್ಗದ ಆಚಾರವಿಚಾರಗಳನ್ನು ಬೆಂಬಲಿಸಿದ್ದಾರೆ. ಯಾಕೆಂದರೆ ಇವತ್ತಿಗೂ ಕನ್ನಡ ಕಲಿಯುವ ಮಕ್ಕಳು ‘ಅಲ್ಪಪ್ರಾಣ, ಮಹಾಪ್ರಾಣ’ಗಳ ಮೂಲಕಾರಣ
ದಿಂದಾಗಿಯೇ ‘ಕನ್ನಡ ಸಂಧಿಗಳು, ಸಂಸ್ಕೃತ ಸಂಧಿಗಳು’ ಎಂದು ‘ಕನ್ನಡ ವ್ಯಾಕರಣ’ದ ಜೊತೆಯಲ್ಲಿ ‘ಸಂಸ್ಕೃತ ವ್ಯಾಕರಣ’ವನ್ನೂ ಕಲಿಯಬೇಕಾದ ಇಕ್ಕಟ್ಟಿದೆ. ಇದನ್ನು ಗ್ರಹಿಸಿದರೆ ‘ಎಲ್ಲರ ಕನ್ನಡ’ ಎದುರಿಸುತ್ತಿರುವ ಸವಾಲು ಏನೆಂಬುದು ತಿಳಿಯುತ್ತದೆ.
ಇನ್ನು, ಲಿಪಿ ಬದಲಾವಣೆಯನ್ನು ಬಲವಂತವಾಗಿ ಮಾಡಿದರೆ ಹಳೆಯಕಾಲದ ಸಾಹಿತ್ಯವನ್ನು ಮುಂದಿನ ಪೀಳಿಗೆ ಓದಲಾಗುವುದಿಲ್ಲ ಎನ್ನುವುದು ಪ್ರತಿಭಾ ನಂದಕುಮಾರ್ ಅವರ ‘ಎಲ್ಲರ ಕನ್ನಡ’ದ ಬಗೆಗಿನ ತಕರಾರು (ಚರ್ಚೆ, ಜ. 7). ಇದಕ್ಕೆ ಅವರು ಕೊಡುವ ಉದಾಹರಣೆ, ಜಗತ್ತಿನಲ್ಲಿ ಹರಡಿಕೊಂಡು ಬೆಳೆದಿರುವ ಇಂಗ್ಲಿಷಿನ ಸನ್ನಿವೇಶ. ಅವರ ಮುಖ್ಯ ಕೇಳ್ವಿಯಿರುವುದು ‘ಅಲ್ಪಪ್ರಾಣ ಮಹಾಪ್ರಾಣದ ಬಳಕೆಯನ್ನೇ ಸಂಸ್ಕೃತಿಯ ವ್ಯಾಖ್ಯಾನ ಎಂದು ವಾದ’ ಹೂಡುವವರ ವಿರುದ್ಧ. ಅದನ್ನು ಅವರು ನೆಗಡಿ ಬಂದರೆ ಮೂಗನ್ನೇ ಕತ್ತರಿಸುವ ಭಂಡತನ ಎಂದಿದ್ದಾರೆ. ಇರಲಿ, ನನ್ನನ್ನೂ ಒಳಗೊಂಡಂತೆ ಇದು ಜನಬದುಕುಗಳನ್ನು ಅವರಾಡುವ ಭಾಷೆಯೊಂದಿಗೆ ಸಮಗ್ರವಾಗಿ ಗ್ರಹಿಸದ ಯಾರಲ್ಲಿಯೂ ಇರಬಹುದಾದ ತೊಡಕು.
ಮುಂದಿನ ತಲೆಮಾರು ಪ್ರಾಚೀನ ಕನ್ನಡವನ್ನು ಓದಲು ಬೇಕಾಗಿರುವಂತಹ ಹೊಸಗನ್ನಡದ ಕಾಲದಲ್ಲಿ ರೂಪುಗೊಂಡಿರುವ ತಿಳಿಗನ್ನಡದ ದಾರಿಗಳು ನೂರಾರಿವೆ. ಅದರಲ್ಲಿಯೂ ಲಿಪಿ ಬಳಕೆಯ ಬದಲಾವಣೆಯ ಈ ಸವಾಲಿನಲ್ಲಿ ಪ್ರತಿಭಾ ಅವರ ಗಮನವಿರುವುದು ಸಾಹಿತ್ಯ ಮತ್ತು ಸಿನಿಮಾ ಸಾಹಿತ್ಯದ ಕಡೆಗೆ ಮಾತ್ರ. ಕನ್ನಡವನ್ನು ಬದಲಾಯಿಸುವ ಶಕ್ತಿಯಿರುವುದು ಸಾಹಿತಿಯೂ ಆಗಿರುವ ಅವರಿಗೆ, ಸಾಹಿತ್ಯಕ್ಕೆ ಮಾತ್ರ ಎಂಬಂತಿದೆ ಅವರ ವಾದ.
ವಾಣಿಜ್ಯ, ಗಣಿತ, ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ಯಂತ್ರಜ್ಞಾನ, ವ್ಯವಸಾಯ, ವ್ಯವಹಾರ ಮೊದಲಾಗಿ ಎಷ್ಟೆಲ್ಲಾ ‘ಜ್ಞಾನ’ದ ವಲಯಗಳಿವೆ. ಅವಕ್ಕೂ ಜನಬದುಕಿನಲ್ಲಿರುವ ಕನ್ನಡಕ್ಕೂ ಇರುವ ನಂಟನ್ನು ‘ತಿಳಿವಿನ’ ನೆಲೆಯಲ್ಲಿ, ಕಲಿಕೆ ಮತ್ತು ಬಳಕೆಯ ನೆಲೆಯಲ್ಲಿ ರೂಢಿಸಿಕೊಳ್ಳಲಾಗಿದೆಯೇ? ‘ಎಲ್ಲರ ಕನ್ನಡ’ದ ತಾತ್ವಿಕ ಪ್ರಶ್ನೆಯಿರುವುದು ಇಲ್ಲಿ.
‘ಅಲ್ಪಪ್ರಾಣ, ಮಹಾಪ್ರಾಣ’ಗಳ ಮಾತುಕತೆಯ ಹಿಂದೆ ‘ಸಂಸ್ಕೃತಾಂತರ’ದ ಸಾಂಸ್ಕೃತಿಕ ರಾಜಕಾರಣವಿದೆ. ಆಧುನಿಕ ಕಾಲದಲ್ಲಿ ರೂಪುಗೊಂಡಿರುವ ಕನ್ನಡ ಪದನೆರಿಕೆಗಳನ್ನು (ನಿಘಂಟು) ನೋಡಿದರೆ, ಕನ್ನಡದ ನೆಪದಲ್ಲಿ ಸಂಸ್ಕೃತ ಪದಗಳು ಕನ್ನಡ ಕಲಿಕೆಯ ರಾಜ್ಯವನ್ನು ಆಳುತ್ತಿವೆ. ಗಣಿತ, ವಿಜ್ಞಾನ ಮೊದಲಾಗಿ ಅನೇಕ ಕಲಿಕೆಯ ಪುಸ್ತಕಗಳ ಸಂಸ್ಕೃತ ಪದಗಳ ತಿರುಳನ್ನು ತಿಳಿಯುವ ಸಲುವಾಗಿ ಇಂಗ್ಲಿಷಿನ ನಿಘಂಟುಗಳಿಗೆ ಮೊರೆ ಹೋಗಲಾಗುತ್ತದೆ. ಇಂಗ್ಲಿಷ್ ಮೀಡಿಯಮ್ಮನ್ನೇ ಆಯ್ಕೆ ಮಾಡಿಕೊಂಡುಬಿಟ್ಟರೆ ಈ ತೊಂದರೆಯಿಂದ ದೂರ ಸರಿದಂತಾಗುತ್ತದೆಯಲ್ಲಾ ಎನ್ನುವಂತಹ ಭಾವನೆಯೇ ಬೆಳೆದುಬಿಟ್ಟಿದೆ. ಅತಿಮಾನ್ಯತೆಯನ್ನು ಕೊಟ್ಟು ಪ್ರಾದೇಶಿಕ ಭಾಷೆಗಳೊಳಕ್ಕೆ ಸಂಸ್ಕೃತವನ್ನು ಹರಡುತ್ತಿರುವುದರ ಹಿಂದೆ, ಇಂಗ್ಲಿಷ್ ಕಲಿಕೆ ಮತ್ತು ಬಳಕೆಯ ಒತ್ತಾಯಗಳ ಹಿಂದೆ ಸಾಂಸ್ಕೃತಿಕ ಒತ್ತಾಯದ ಮತಾಂತರವೇ ಇದೆ ಎನ್ನುವುದನ್ನು ನಾವು ಅರಿಯಬಲ್ಲೆವೇ?
ಪಂಪನಾದಿಯಾಗಿ, ವಚನಕಾರರು, ಆಂಡಯ್ಯ, ತತ್ವಪದಕಾರರು, ಸರ್ವಜ್ಞ ಮೊದಲಾದವರಿಂದ ಹಿಡಿದು ಇವತ್ತು ಸ್ಥಳೀಯ ಕನ್ನಡಗಳಲ್ಲಿ ಬರೆಯುತ್ತಿರುವವರವರೆಗೆ ಗಮನಿಸಿದರೆ, ಅನೇಕರು ಜನಬದುಕುಗಳ ಭಾಷೆಯತ್ತ ಇಡೀ ಸಮಾಜವನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಸಾವಿರಾರು ವರ್ಷಗಳಿಂದ ಕಾಲಕಾಲಕ್ಕೆ ಮಾಡುತ್ತಲೇ ಬರುತ್ತಿದ್ದಾರೆ. ಇವುಗಳ ಗುರಿಯು ಸಮಾಜದ ತಿಳಿವಳಿಕೆ ಆ ಸಮಾಜದ ಎಲ್ಲರಿಗೆ ತಲುಪಬೇಕು ಎನ್ನುವುದು. ಇವತ್ತಿನ ‘ಎಲ್ಲರ ಕನ್ನಡ’ದ ಪ್ರಯತ್ನವೂ ಇದರಿಂದ ಹೊರಗಿನದು ಎಂದು ಹುಯಿಲೆಬ್ಬಿಸುತ್ತಿರುವುದು ಯಾಕೆ? ನಾವು ತಿಳಿಯಬೇಕಾಗಿರುವುದು ಬದಲಾವಣೆ ಕೆಳಗಿನಿಂದ ಶುರುವಾಗಬೇಕು ಎನ್ನುವುದನ್ನು. ಮೇಲಿನದನ್ನು ಅನುಕರಿಸುವುದರಿಂದ ಆಗುವಂತಹುದು ಬದಲಾವಣೆ ಅಲ್ಲ.
‘ಎಲ್ಲರ ಕನ್ನಡ’ವೆಂದರೆ ಯಾರದು? ಎಲ್ಲಿನದು ಎಂದು ಸಿಟ್ಟಿಗೆ ಎದ್ದು ಜಗಳಕ್ಕೆ ನಿಲ್ಲುವ ಅಗತ್ಯವಿಲ್ಲ. ಕಲಿಕೆಯ ಮೂಲಕ ಹೇರಲ್ಪಟ್ಟಿರುವ ‘ಸಂಸ್ಕೃತದ ವ್ಯಾಕರಣತತ್ವ’ದಿಂದ ಬಿಡುಗಡೆಯನ್ನು ಪಡೆಯುವ ಎಲ್ಲ ಕನ್ನಡಗಳ ‘ಕನ್ನಡ ವ್ಯಾಕರಣತತ್ವ’ ಅದು.
ಲೇಖಕ: ಸಂಶೋಧಕ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಮೈಸೂರು
‘ಎಲ್ಲರ ಕನ್ನಡ’: ಸಾಧ್ಯತೆ, ಸವಾಲು’ ಎಂಬ ಲೇಖನದಲ್ಲಿ (ಪ್ರ.ವಾ., ಜ. 5) ಟಿ.ಎನ್.ವಾಸುದೇವಮೂರ್ತಿ ಅವರು ಹೇಳುವಂತೆ, ಭಾಷೆಗೆ ಸೈದ್ಧಾಂತಿಕ ಸರಿತನದ ಗೊಡವೆ ಇರುತ್ತದೆ- ಇರುವುದಿಲ್ಲ ಎನ್ನುವುದು ಚರ್ಚೆಯ ವಿಚಾರವೇ ಅಲ್ಲ. ಬದಲಾಗಿ, ‘ಸಮಾಜ ಮತ್ತು ಭಾಷೆಯ ನಂಟಿನಲ್ಲಿ’ ಹುಟ್ಟುಪಡೆಯುವ ಯಾವುದೇ ಒಂದು ಸಿದ್ಧಾಂತ ಆಯಾ ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸು ವುದಾಗಿರುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.