ADVERTISEMENT

ಕಲಬುರಗಿ ಸುತ್ತ ಪದೇಪದೇ ಭೂಕಂಪನ- ಭಯಗ್ರಸ್ತರಿಗೆ ಬೇಕಿದೆ ಮಾಹಿತಿ, ಸಾಂತ್ವನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 19:31 IST
Last Updated 12 ಅಕ್ಟೋಬರ್ 2021, 19:31 IST
ಸಂಪಾದಕೀಯ
ಸಂಪಾದಕೀಯ   

ಏಳೆಂಟು ದಿನಗಳಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕುಗಳ ಹಲವೆಡೆ ನೆಲ ನಡುಗುತ್ತಿದೆ. ಗ್ರಾಮವಾಸಿಗಳು ಆತಂಕಿತರಾಗಿದ್ದಾರೆ. ಒಂದೇ ವಾರದಲ್ಲಿ ಮೂರು ಬಾರಿ ಲಘು ಭೂಕಂಪನಗಳಾಗಿದ್ದು ಹೌದೆಂದು ಭೂವಿಜ್ಞಾನಿಗಳೂ ಹೇಳಿದ್ದಾರೆ. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಜನಾಕ್ರೋಶ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಚಿಂಚೋಳಿ ಭಾಗದ ಜನರು ಹೆದ್ದಾರಿಯಲ್ಲಿ ಕೂತು ಪ್ರತಿಭಟಿಸಿದ್ದಾರೆ. ತಮಗೆ ತಾತ್ಕಾಲಿಕ ಆಸರೆ ವ್ಯವಸ್ಥೆ ಆಗಬೇಕೆಂದೂ ಭೂಕಂಪನ ಮಾಪನಯಂತ್ರಗಳನ್ನು ಅಲ್ಲಲ್ಲಿ ಸ್ಥಾಪಿಸಬೇಕೆಂದೂ ಬೇಡಿಕೆ ಇಟ್ಟಿದ್ದಾರೆ. ವರ್ಷದ ಯಾವುದೇ ಕಾಲದಲ್ಲಿ ನೆಲ ನಡುಗಿದರೂ ಎದೆ ನಡುಗುತ್ತದಾದರೂ ಮಳೆಗಾಲದ ಈ ದಿನಗಳಲ್ಲಿ ಸಣ್ಣ ಕಂಪನಕ್ಕೂ ಭೀತಿಯಿಂದ ಮನೆಬಿಟ್ಟು ಹೊರಗಡೆ ಧಾವಿಸುವವರ ಸಂಕಷ್ಟಗಳನ್ನು ಯಾರೂ ಊಹಿಸಬಹುದು. ಅಂಥ ಆತಂಕಗಳನ್ನು ನಿವಾರಿಸುವಲ್ಲಿ ಜಿಲ್ಲಾ ಆಡಳಿತ ಯಾವುದೇ ಕ್ರಮ ಕೈಗೊಂಡಂತಿಲ್ಲ. ಭೂಕಂಪನದ ವಾಸ್ತವಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವಲ್ಲಿ ವಾರ್ತಾ ಇಲಾಖೆಯಾಗಲೀ ಸರ್ಕಾರಿ ಸ್ವಾಮ್ಯದ ಇತರ ಮಾಧ್ಯಮಗಳಾಗಲೀ ಏನೂ ಕೆಲಸ ಮಾಡಿದಂತಿಲ್ಲ. ಹಾಗೆಂದು ನಮ್ಮಲ್ಲಿ ಮಾಹಿತಿಯ ಅಭಾವವೇನೂ ಇಲ್ಲ. ಯಾವುದೇ ಬಗೆಯ ನೈಸರ್ಗಿಕ ಆತಂಕಗಳ ಮೇಲೆ ಕಣ್ಣಿಡಲು ಕರ್ನಾಟಕದಲ್ಲಿ ‘ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ ಇದೆ. ದೇಶದಲ್ಲೇ ಮೊದಲ ಬಾರಿಗೆ ಆರಂಭವಾದ ಈ ಕೇಂದ್ರ ಗಾಳಿ ಮಳೆ ಕುರಿತಂತೆ ಕ್ಷಣಕ್ಷಣಕ್ಕೂ ಮಾಹಿತಿ ನೀಡುವ ವಿಷಯದಲ್ಲಿ ಚುರುಕಾಗಿದ್ದು ಇತರ ಅನೇಕ ರಾಜ್ಯಗಳು ಕರ್ನಾಟಕದ ಮಾದರಿಯನ್ನೇ ಅನುಸರಿಸಲು ಮುಂದಾಗಿವೆ. ಆದರೆ ವಿಜ್ಞಾನ-ತಂತ್ರಜ್ಞಾನದ ಮಟ್ಟಿಗೆ ನಮ್ಮ ಸಾಧನೆಗಳು ಅದೆಷ್ಟೇ ಶ್ಲಾಘನೀಯವಾಗಿದ್ದರೂ ನೆಲಮಟ್ಟದಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ನೆರವು ನೀಡುವಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಆ ವೈಫಲ್ಯಕ್ಕೆ ಜನಪ್ರತಿನಿಧಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ.

ಕಲಬುರಗಿಯ ಬಹುಪಾಲು ನೆಲವೆಲ್ಲ ಪಾಟಿಕಲ್ಲು ಮತ್ತು ಸುಣ್ಣದ ಶಿಲಾಹಾಸುಗಳಿಂದ ಆವೃತವಾಗಿದ್ದು, ಅಲ್ಲಲ್ಲಿನ ಭೂಗತ ಬಿರುಕುಗಳಲ್ಲಿ ಮಳೆನೀರು ಜಿನುಗಿದಾಗ ಸುಣ್ಣದ ಅಂಶಗಳೂ ನೀರಾಗಿ ತಳಕ್ಕಿಳಿದು ನೆಲದಾಳದಲ್ಲಿ ಟೊಳ್ಳುಗಳಾಗುತ್ತವೆ. ಅಂಥ ಟೊಳ್ಳುಗಳಿದ್ದಲ್ಲಿ ಶಿಲಾಸ್ತರಗಳು ಹೊಂದಾಣಿಕೆಗೆಂದು ಅತ್ತಿತ್ತ ಸರಿಯುವುದು ಸಹಜ. ಅಲ್ಲಿನ ಜನರ ಆತಂಕವನ್ನು ಇಮ್ಮಡಿಗೊಳಿಸುವ ಸಂಗತಿ ಏನೆಂದರೆ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಬಡಜನರು ಪಾಟಿಕಲ್ಲುಗಳನ್ನೇ ಪೇರಿಸಿ ಸೂರಿಗೆ ಸಡಿಲವಾಗಿ ಹಾಸಿಕೊಂಡಿರುತ್ತಾರೆ. ಹೀಗೆ ನೆಲದ ಕಂಪನಕ್ಕೆ ತಲೆಯ ಮೇಲಿನ ಅಭದ್ರತೆಯೂ ಕೈಜೋಡಿಸಿದರೆ ಏನಾದೀತೆಂದು 1993ರ ಲಾತೂರಿನ ಭೂಕಂಪನದ ಸಂದರ್ಭದಲ್ಲಿ ನಮಗೆ ಗೊತ್ತಿದೆ. ಆದರೂ ಭೂಕಂಪನದ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ಕೊಡುವುದಾದರೆ ತೀರ ಹುಷಾರಾಗಿ ಹೆಜ್ಜೆ ಇಡಬೇಕಾಗು ತ್ತದೆ. ಏಕೆಂದರೆ ಸುಂಟರಗಾಳಿ ಮತ್ತು ಜಡಿಮಳೆಯ ಮುನ್ಸೂಚನೆ ನೀಡುವಷ್ಟು ಕರಾರುವಾಕ್ಕಾಗಿ ಭೂಕಂಪನ ಅಥವಾ ಭೂಕುಸಿತದ ಮುನ್ಸೂಚನೆ ಸಾಧ್ಯವಿಲ್ಲ. ಭೂಕಂಪನ ಎಲ್ಲಿ ಸಂಭವಿಸುತ್ತದೆ, ಯಾವಾಗ ಸಂಭವಿಸುತ್ತದೆ ಎಂದು ಕೂಡ ಗೊತ್ತಾಗುವುದಿಲ್ಲ. ನಮ್ಮಲ್ಲಷ್ಟೇ ಅಲ್ಲ, ಯಾವ ದೇಶದಲ್ಲೂ ತಂತ್ರಜ್ಞಾನ ಅಷ್ಟು ನಿಖರವಾಗಿಲ್ಲ. ಆದರೂ ಅಂಥ ಅಪಕ್ವ ತಂತ್ರಗಳನ್ನು ಆಧರಿಸಿ ತಪ್ಪು ಮುನ್ನೆಚ್ಚರಿಕೆ ಕೊಟ್ಟು ಊರಿಗೆ ಊರನ್ನೇ ವೃಥಾ ಖಾಲಿ ಮಾಡಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಅಂಥದ್ದು ಇಲ್ಲಿ ಆಗಬಾರದು.

ಇಂದು (ಅಕ್ಟೋಬರ್‌ 13) ‘ದುರಂತಗಳ ತೀವ್ರತೆಯನ್ನು ಕಡಿಮೆ ಮಾಡುವ ಅಂತರರಾಷ್ಟ್ರೀಯ ದಿನ’. ಜಗತ್ತಿನ ಎಲ್ಲೆಡೆ ಈಚಿನ ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳ ತೀವ್ರತೆ ಹೆಚ್ಚುತ್ತಿದೆ. ಹಿಂದೆಲ್ಲ ಅಪರೂಪಕ್ಕೆ ಸಂಭವಿಸುತ್ತಿದ್ದ ಮಹಾಮಳೆ, ಬರಪೀಡೆ, ಭೂಕುಸಿತ, ಹಿಮಕುಸಿತ, ಚಂಡಮಾರುತದಂಥ ಘಟನೆಗಳು ಈಗೀಗ ಪದೇ ಪದೇ ಹೆಚ್ಚುತ್ತಿವೆ. ಹಿಂದುಳಿದ ಪ್ರದೇಶಗಳ ಜನರೇ ಅವಕ್ಕೆ ಹೆಚ್ಚುಹೆಚ್ಚಾಗಿ ಬಲಿಯಾಗುತ್ತಿದ್ದು ಅವುಗಳಿಂದ ರಕ್ಷಣೆ ಮಾಡಿಕೊಳ್ಳುವ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ದಿನ ಇದು. ಯಾವ ಬಗೆಯ ಸಂಕಟಗಳು ಹೇಗೆ ಎದುರಾಗುತ್ತವೆ ಎಂಬುದನ್ನು ಜನರಿಗೆ ಸ್ಪಷ್ಟವಾಗಿ, ಸರಳವಾಗಿ ತಿಳಿಸಿ ಹೇಳಿದರೆ ಅವರು ತಂತಮ್ಮ ಮುಂಜಾಗ್ರತಾ ಕ್ರಮಗಳನ್ನು ತಾವೇ ಕೈಗೊಳ್ಳುತ್ತಾರೆ. ಅಷ್ಟರಮಟ್ಟಿಗೆ ಸಂಕಟ ನಿವಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರಿ ಹೊಣೆಗಾರಿಕೆಯೂ ಕಡಿಮೆಯಾಗುತ್ತದೆ. ಉದಾಹರಣೆಗೆ, ರಿಕ್ಟರ್‌ ಮಾಪಕದಲ್ಲಿ ಎಂಟರಷ್ಟು ತೀವ್ರ ಭೂಕಂಪನವಾದರೂ ನಿರಾತಂಕ ವಾಸಿಸಬಹುದಾದ ಮನೆಗಳನ್ನು ಕಟ್ಟುವಂಥ ಜಪಾನೀ ತಂತ್ರಜ್ಞಾನ ಈಗ ನಮ್ಮಲ್ಲೂ ಲಭ್ಯವಿದೆ. ಉತ್ತರ ಕರ್ನಾಟಕದಲ್ಲಿ ಹೇರಳ ಸಿಗುವ ಹತ್ತಿಕಟ್ಟಿಗೆ, ಜೋಳದಕಡ್ಡಿ, ತೊಗರಿ ಕಡ್ಡಿಗಳಂಥ ಕೃಷಿತ್ಯಾಜ್ಯಗಳಿಂದಲೇ ಗಟ್ಟಿಮುಟ್ಟಾದ ಹಲಗೆಗಳನ್ನು ತಯಾರಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿ, ಅಲ್ಪವೆಚ್ಚದ ಗೋಡೆ ಸೂರುಗಳನ್ನು ತಯಾರಿಸಬಹುದಾದ ಮಾದರಿಗಳನ್ನು ನಮ್ಮಲ್ಲೂ ಸಾಕ್ಷಾತ್ಕರಿಸಬಹುದು. ಭೂಕಂಪನದ ಸಂಭವನೀಯತೆ ವರ್ಷವರ್ಷಕ್ಕೆ ಹೆಚ್ಚುತ್ತಿರುವಾಗ ಅಂಥ ಸಂಕಟ ಪರಿಹಾರಕ್ಕೆ ಭೂವಿಜ್ಞಾನಿಗಳಲ್ಲ, ಎಂಜಿನಿಯರ್‌ಗಳ ಮತ್ತು ವಾಸ್ತುಶಿಲ್ಪಿ ಗಳ ಅಗತ್ಯವಿದೆ. ಎಲ್ಲಕ್ಕೂ ಮುಖ್ಯವಾಗಿ ಜನಸಾಮಾನ್ಯರ ಆತಂಕಗಳನ್ನು ನಿವಾರಿಸಬೇಕೆಂಬ ತುಡಿತ ಜನಪ್ರತಿನಿಧಿಗಳಲ್ಲಿ ಮೂಡಬೇಕಾಗಿದೆ. ಇದುವರೆಗೆ ಸಂಭವಿಸಿದ್ದೆಲ್ಲ ಲಘು ಭೂಕಂಪನವೆಂದ ಮಾತ್ರಕ್ಕೆ ಯಾರೂ ಲಘುವಾಗಿ ಪರಿಗಣಿಸುವ ವಿಷಯ ಇದಲ್ಲ.

ADVERTISEMENT
ಸಾರಾಂಶ

ಇದುವರೆಗೆ ಸಂಭವಿಸಿದ್ದೆಲ್ಲ ಲಘು ಭೂಕಂಪನವೆಂದ ಮಾತ್ರಕ್ಕೆ ಯಾರೂ ಲಘುವಾಗಿ ಪರಿಗಣಿಸುವ ವಿಷಯ ಇದಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.