ಭಾರತ ಕ್ರಿಕೆಟ್ ಕಂಡ ಅತ್ಯಂತ ಆಕ್ರಮಣಶೀಲ ಸ್ವಭಾವದ ನಾಯಕ ಮತ್ತು ಆಟಗಾರ ವಿರಾಟ್ ಕೊಹ್ಲಿ. ಟೆಸ್ಟ್ ತಂಡದ ನಾಯಕತ್ವಕ್ಕೆ ಅವರು ರಾಜೀನಾಮೆ ನೀಡಿರುವ ಸುದ್ದಿಯು ಅಚ್ಚರಿ ಮೂಡಿಸಿದೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ 1-2ರಿಂದ ಸೋತ ಮರುದಿನವೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಮೂರು– ನಾಲ್ಕು ತಿಂಗಳುಗಳಿಂದ ನಡೆದ ಬೆಳವಣಿಗೆಗಳನ್ನು ಅವಲೋಕಿಸಿದರೆ ಬಿಸಿಸಿಐ ಮತ್ತು ವಿರಾಟ್ ನಡುವಣ ಸಂಬಂಧ ಸೌಹಾರ್ದದಿಂದ ಇರಲಿಲ್ಲ ಎಂಬುದು ಮನವರಿಕೆಯಾಗುತ್ತದೆ. ಆ ವಿರಸದ ಮುಂದುವರಿದ ಭಾಗವೇ ಈ ತೀರ್ಮಾನ. ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಹೊಣೆಯನ್ನೂ ತ್ಯಜಿಸಿದ್ದರು. ಆದರೆ ಹೋದ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಕೆಲವೇ ದಿನಗಳ ಮುನ್ನ ಕೊಹ್ಲಿಯನ್ನು ಏಕದಿನ ಮಾದರಿಯ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದ ಬಿಸಿಸಿಐ, ರೋಹಿತ್ ಶರ್ಮಾಗೆ ಪಟ್ಟ ಕಟ್ಟಿತ್ತು. ಬಿಳಿಚೆಂಡಿನ ಕ್ರಿಕೆಟ್ ಮಾದರಿಗೆ ಒಬ್ಬರೇ ನಾಯಕರಿರಬೇಕೆಂಬ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ, ವಿರಾಟ್‌ಗೂ ಮೊದಲೇ ತಿಳಿಸಲಾಗಿತ್ತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಆದರೆ, ಏಕದಿನ ಕ್ರಿಕೆಟ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿ 90 ನಿಮಿಷಗಳ ಮೊದಲಷ್ಟೇ ತಮಗೆ ಮಾಹಿತಿ ನೀಡಿದ್ದರು ಎಂದು ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುನ್ನಾದಿನ ಹೇಳಿದ್ದರು. ಇದು ಬಿಸಿಸಿಐ ಮತ್ತು ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಗೆ ಮುಜುಗರ ಮೂಡಿಸಿದ್ದು ಸುಳ್ಳಲ್ಲ. ಅಲ್ಲದೇ ಕೇಪ್‌ಟೌನ್ ಟೆಸ್ಟ್‌ನಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ನಿರ್ಣಯಕ್ಕೆ ಸಂಬಂಧಿಸಿದಂತೆ ಸ್ಟಂಪ್ ಮೈಕ್ ಮುಂದೆ ತೋರಿದ್ದ ನಡವಳಿಕೆಯೂ ಕ್ರಿಕೆಟ್ ವಲಯದಲ್ಲಿ ಟೀಕೆಗಳಿಗೆ ಒಳಗಾಗಿತ್ತು. ಎರಡು ವರ್ಷಗಳಿಂದ ವೈಯಕ್ತಿಕವಾಗಿ ಅವರ ಬ್ಯಾಟಿಂಗ್ ಫಾರಂ ಕುಸಿದಿತ್ತು. ಅದಕ್ಕೂ ಹಿಂದಿನವರೆಗೂ ಅತ್ಯಂತ ಬಲಿಷ್ಠ ನಾಯಕ ಎಂಬ ವರ್ಚಸ್ಸು ಹೊಂದಿದ್ದ ವಿರಾಟ್, ಈ ಅವಧಿಯಲ್ಲಿ ಒಂದೂ ಶತಕವನ್ನು ದಾಖಲಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಕುರಿತು ಮಂಡಳಿಯಲ್ಲಿ ನಡೆಯುತ್ತಿದ್ದ ಪಿಸುಮಾತುಗಳು ಕೊಹ್ಲಿ ಕಿವಿಗೆ ಬಿದ್ದಿರಬೇಕು. ಆದ್ದರಿಂದ ತಾವೇ ನಾಯಕ ಪಟ್ಟದಿಂದ ಇಳಿಯುವ ನಿರ್ಧಾರಕ್ಕೆ ಬಂದಿರಬಹುದು.
ಅಪಾರ ದುಡ್ಡು, ಕೀರ್ತಿ ಮತ್ತು ವರ್ಚಸ್ಸನ್ನು ತಂದುಕೊಡುವ ಭಾರತ ಕ್ರಿಕೆಟ್ ತಂಡದ ನಾಯಕತ್ವ ಮೊದಲಿನಿಂದಲೂ ಮುಳ್ಳಿನ ಸಿಂಹಾಸನ. ಜೊತೆಗೆ ಮಂಡಳಿಯ ಒಳರಾಜಕೀಯ, ಗುಂಪುಗಾರಿಕೆ ಹೊಸದೇನಲ್ಲ. ಅನೇಕರು ಈ ಬಿಸಿ ಅನುಭವಿಸಿದ್ದಾರೆ. ಆದರೆ, ಈ ಹಿಂದಿನ ಬಹುತೇಕ ನಾಯಕರು ತಮ್ಮ ಸ್ಥಾನ ತೊರೆದಾಗ, ಮುಂದಿನ ಸಾರಥಿ ಯಾರೆಂಬುದು ಸ್ಪಷ್ಟವಾಗಿ ಗೊತ್ತಿತ್ತು. ಇದೀಗ ಆ ಪರಿಸ್ಥಿತಿ ಇಲ್ಲ. ಏಕದಿನ, ಟಿ20 ತಂಡಗಳ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಫಿಟ್‌ನೆಸ್ ಮತ್ತು ಗಾಯದ ಸಮಸ್ಯೆಯಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ. ಅದರಿಂದಾಗಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಬೇಕಿದೆ. ಟೆಸ್ಟ್ ತಂಡಕ್ಕೆ ಪ್ರತ್ಯೇಕ ನಾಯಕತ್ವ ನೀಡಲು ಮಂಡಳಿ ಯೋಚಿಸಿದರೆ ರಾಹುಲ್, ರಿಷಭ್ ಪಂತ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರತ್ತ ನೋಡಬೇಕಾಗುತ್ತದೆ. ಏಕೆಂದರೆ ಅನುಭವಿಗಳಾದ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಸತತ ವೈಫಲ್ಯಗಳಿಂದಾಗಿ ಸ್ಥಾನ ಉಳಿಸಿಕೊಳ್ಳುವುದೇ ಅನುಮಾನ ಎನ್ನುವ ಪರಿಸ್ಥಿತಿಯಿದೆ. ಸಶಕ್ತ ನಾಯಕನನ್ನು ನೇಮಿಸಲು ಕೆಲವು ಪ್ರಯೋಗಗಳಿಗೆ ಮುಂದಾಗಲೇಬೇಕಾದ ಅನಿವಾರ್ಯವು ಮಂಡಳಿಗೆ ಇದೆ.
ವಿರಾಟ್ ನಾಯಕತ್ವದಲ್ಲಿ ತಂಡವು ಮಾಡಿರುವ ಸಾಧನೆಯನ್ನು ಮುಂದುವರಿಸುವ ಸಮರ್ಥರ ಅಗತ್ಯವಿದೆ. ಏನೇ ಟೀಕೆಗಳಿದ್ದರೂ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲೊಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. 2014ರಲ್ಲಿ ತಂಡವು ಆಸ್ಟ್ರೇಲಿಯಾದಲ್ಲಿ ಆಡುತ್ತಿದ್ದ ಸರಣಿಯ ಮಧ್ಯದಲ್ಲಿಯೇ ಮಹೇಂದ್ರಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆ ಸಂದರ್ಭದಲ್ಲಿ ಕೊಹ್ಲಿ ನಾಯಕತ್ವ ವಹಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ 68 ಪಂದ್ಯಗಳಲ್ಲಿ ತಂಡವು 40ರಲ್ಲಿ ಗೆಲುವು ದಾಖಲಿಸಿದೆ, 11ರಲ್ಲಿ ಡ್ರಾ ಮಾಡಿಕೊಂಡಿದೆ. 17ರಲ್ಲಿ ಸೋತಿದೆ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿದ್ದು, ಇಂಗ್ಲೆಂಡ್‌ನಲ್ಲಿ 2–1ರ ಮುನ್ನಡೆ ಸಾಧಿಸಿದ್ದು ಮತ್ತು ಈಚೆಗೆ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಮೊದಲ ಸಲ ಭಾರತಕ್ಕೆ ಜಯ ಒಲಿದಿದ್ದು ಇವರ ನಾಯಕತ್ವದಲ್ಲಿ. ಕಳೆದ ಐದು ವರ್ಷಗಳಿಂದ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಗೌರವಯುತ ಸ್ಥಾನ ಕಾಪಾಡಿಕೊಂಡಿದೆ. ಹೋದ ಬಾರಿ ಚೊಚ್ಚಲ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿತ್ತು. ಇಂತಹ ಸಾಧನೆಗೆ ಕಾರಣರಾದ ವಿರಾಟ್ ಈಗ ಆಟಗಾರನಾಗಿ ಮುಂದುವರಿಯಲಿದ್ದಾರೆ. ಅವರ ಅನುಭವ ಮತ್ತು ಪ್ರತಿಭೆಯನ್ನು ತಂಡದ ಒಳಿತಿಗೆ ಬಳಸಿಕೊಳ್ಳುವ ಸಮರ್ಥ ನಾಯಕತ್ವ ತಂಡಕ್ಕೆ ಸಿಗಬೇಕಿದೆ. ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಈ ಸವಾಲನ್ನು ಸಮರ್ಪಕವಾಗಿ ನಿಭಾಯಿಸಬೇಕು. ದೇಶದ ಕ್ರಿಕೆಟ್‌ನ ಬೆಳವಣಿಗೆ ಮತ್ತು ಗೌರವಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳಬೇಕು. ಇನ್ನಷ್ಟು ವರ್ಷಗಳ ಕಾಲ ಆಡುವ ಸಾಮರ್ಥ್ಯವಿರುವ 33 ವರ್ಷ ವಯಸ್ಸಿನ ಕೊಹ್ಲಿ ಮುಂಬರುವ ನಾಯಕ ಮತ್ತು ಸಹ ಆಟಗಾರರೊಂದಿಗೆ ಸಾಮರಸ್ಯದಿಂದ ಬೆರೆತು ತಂಡದ ಗೆಲುವಿಗೆ ನೆರವಾಗಬೇಕು. ಸಚಿನ್ ತೆಂಡೂಲ್ಕರ್ ಅವರು ಧೋನಿಯೊಂದಿಗೆ ಕೈಜೋಡಿಸಿದಂತೆ ಕೊಹ್ಲಿ ಕೂಡ ಸಹಕಾರಹಸ್ತ ಚಾಚಬೇಕು. ಅದರಿಂದ ಅವರಿಗೂ ದೇಶದ ಕ್ರಿಕೆಟ್‌ಗೂ ಒಳಿತಾಗುವುದರಲ್ಲಿ ಅನುಮಾನವಿಲ್ಲ.
ವಿರಾಟ್ ಕೊಹ್ಲಿ ಅವರ ಅನುಭವ ಮತ್ತು ಪ್ರತಿಭೆಯನ್ನು ತಂಡದ ಒಳಿತಿಗೆ ಬಳಸಿಕೊಳ್ಳುವ ಸಮರ್ಥ ನಾಯಕತ್ವ ತಂಡಕ್ಕೆ ಸಿಗಬೇಕಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.