ADVERTISEMENT

ಸಂಪಾದಕೀಯ: ಕೋವಿಡ್ ನಿಯಮ ಉಲ್ಲಂಘನೆ– ಆಡಳಿತಪಕ್ಷದ ಮುಖಂಡರು ಕಾನೂನಿಗೆ ಅತೀತರೇ?

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:30 IST
Last Updated 19 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋವಿಡ್‌ ನಿಯಮಗಳನ್ನು ಪಾಲಿಸುವ ಹೊಣೆಗಾರಿಕೆ ಎಲ್ಲರ ಮೇಲೆಯೂ ಸಮಾನವಾಗಿ ಇದೆ. ಈ ವಿಷಯದಲ್ಲಿ ಜನಪ್ರತಿನಿಧಿಗಳ ಜವಾಬ್ದಾರಿ ಇನ್ನೂ ಹೆಚ್ಚು. ಆದರೆ, ಆ ಹೊಣೆಯನ್ನು ಸಂಪೂರ್ಣವಾಗಿ ಮರೆತಂತಿರುವ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು ಪೈಪೋಟಿಗೆ ಬಿದ್ದವರಂತೆ ಕೋವಿಡ್‌ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ವರದಿಯಾಗಿದೆ. ಕೋವಿಡ್‌ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಉತ್ಸಾಹ ತೋರಿದ್ದ ಅಧಿಕಾರಿಗಳು, ಕಾನೂನು ಉಲ್ಲಂಘಿಸಿದ ಆಡಳಿತ ಪಕ್ಷದ ಶಾಸಕರ ವಿರುದ್ಧ ಮಾತ್ರ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಕರ್ತವ್ಯ ನಿರ್ವಹಣೆಯ ವೈಫಲ್ಯ ಎಂದೇ ಅರ್ಥೈಸಬೇಕಾಗುತ್ತದೆ. ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎನ್ನುವ ಧೋರಣೆಯು ಯಾವ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪೇ. ತಪ್ಪು ಮಾಡಿದವರು ಯಾವ ಪಕ್ಷಕ್ಕೆ ಸೇರಿದ್ದರೂ ಎಂತಹ ಪ್ರಭಾವಿ ವ್ಯಕ್ತಿಗಳಾದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾದುದು ಅಧಿಕಾರಿಗಳ ನೈತಿಕ ಹೊಣೆ. ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ಸಂಕಷ್ಟದ ಸನ್ನಿವೇಶದಲ್ಲಿ ತಮ್ಮ ಜವಾಬ್ದಾರಿ ಅರಿತು ಇತರರಿಗೆ ಮಾದರಿಯಾಗುವಂತೆ ವರ್ತಿಸಬೇಕಿದ್ದ ಜನಪ್ರತಿನಿಧಿಗಳು, ವೈಯಕ್ತಿಕ ಪ್ರತಿಷ್ಠೆಗಾಗಿ ಸಾರ್ವಜನಿಕರ ಆರೋಗ್ಯವನ್ನೇ ಪಣಕ್ಕೆ ಒಡ್ಡಿರುವುದು ಅಕ್ಷಮ್ಯ. ಆಡಳಿತ ಪಕ್ಷದ ಕೆಲವು ಶಾಸಕರು ಯಾವುದೇ ಅನುಮತಿ ಪಡೆಯದೆ ಮನಸೋಇಚ್ಛೆ ಕಾರ್ಯಕ್ರಮ ಆಯೋಜಿಸಿದರೂ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮೌನ ವಹಿಸಿದ್ದು ಆಶ್ಚರ್ಯ ಉಂಟು ಮಾಡುತ್ತದೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ವಿಧಾನಪರಿಷತ್‌ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲೇ ಕೋವಿಡ್‌ ನಿಯಮಗಳ ಉಲ್ಲಂಘನೆಯಾದ ಕುರಿತು ವರದಿಯಾಗಿತ್ತು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗೃಹ ಇಲಾಖೆಯ ಹೊಣೆ ಹೊತ್ತಿರುವ ಆರಗ ಜ್ಞಾನೇಂದ್ರ ಅವರು ತಮ್ಮ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಎಳ್ಳು ಅಮಾವಾಸ್ಯೆ ಜಾತ್ರೆಯನ್ನು ಉದ್ಘಾಟಿಸಿದ್ದರು. ಜನ ಗುಂಪುಗೂಡುವುದಕ್ಕೆ ನಿರ್ಬಂಧ ಹೇರಿದ ಸಂದರ್ಭ ಇದು. ಇಂತಹ ಸನ್ನಿವೇಶದಲ್ಲಿ ಆಯೋಜಕರೊಂದಿಗೆ ಜಾತ್ರೆಯಲ್ಲಿ ಸ್ವತಃ ಪಾಲ್ಗೊಂಡ ಅವರ ನಡೆ ಸರಿಯಲ್ಲ. ಆಳಂದ ಶಾಸಕ ಸುಭಾಷ್‌ ಗುತ್ತೇದಾರ್‌ ಅವರು ಸಂಘಟಿಸಿದ್ದ ಪ್ರತಿಭಟನೆಯಲ್ಲೂ ನೂರಾರು ಜನ ಪಾಲ್ಗೊಂಡಿದ್ದರು. ‘ಜನ ಗುಂಪುಗೂಡಬಾರದು’ ಎಂಬ ನಿಯಮವನ್ನು ಅಲ್ಲಿಯೂ ಗಾಳಿಗೆ ತೂರಲಾಗಿತ್ತು. ಮುಖ್ಯಮಂತ್ರಿ
ಯವರ ರಾಜಕೀಯ ಕಾರ್ಯದರ್ಶಿಯಂತಹ ಜವಾಬ್ದಾರಿಯುತ ಹುದ್ದೆ ಹೊಂದಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ‘ಹೋರಿ ಬೆದರಿಸುವ ಸ್ಪರ್ಧೆ’ಯಲ್ಲಿ ಪಾಲ್ಗೊಳ್ಳುವ ಮೂಲಕ ಕೋವಿಡ್‌ ನಿಯಮ ಉಲ್ಲಂಘಿಸಿದ ದೂರು ಎದುರಿಸಿದರು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಅವರು ಕೋವಿಡ್‌ ಕ್ಷಿಪ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ ‘ಎಮ್ಮೆ ಓಟದ ಸ್ಪರ್ಧೆ’ ನಡೆಸುವ ಉಮೇದು ಪ್ರದರ್ಶಿಸಿದರು. ಗಾಲಿ ಜನಾರ್ದನ ರೆಡ್ಡಿ, ಎಸ್‌.ವಿ. ರಾಮಚಂದ್ರ ಮೊದಲಾದವರಿಗೆ ಜನರ ಆರೋಗ್ಯಕ್ಕಿಂತ ಜನ್ಮದಿನ ಆಚರಿಸಿಕೊಳ್ಳುವುದೇ ಹೆಚ್ಚಿನ ಮಹತ್ವದ ಸಂಗತಿಯಾಗಿ ಗೋಚರಿಸಿತು. ಕೋವಿಡ್‌ ಸಂದರ್ಭದಲ್ಲೂ ಜನ್ಮದಿನದ ಸಮಾರಂಭಗಳಲ್ಲಿ ನೂರಾರು ಜನರನ್ನು ಸೇರಿಸುವ ಮೂಲಕ ಪ್ರತಿಷ್ಠೆಯನ್ನು ಪ್ರದರ್ಶಿಸಲಾಯಿತು. ಪ್ರಧಾನಿ ಆರೋಗ್ಯಕ್ಕಾಗಿ ಮೃತ್ಯುಂಜಯ ಹೋಮ ಆಯೋಜಿಸಿದ ಶಾಸಕ ಹರೀಶ್‌ ಪೂಂಜ ಅವರಿಗೆ ಜನರ ಆರೋಗ್ಯ ನಗಣ್ಯವಾಗಿ ಕಂಡಿತು. ಮೇಲಿನ ಎಲ್ಲರೂ ಬಿಜೆಪಿಗೆ ಸೇರಿದವರು. ಈ ಎಲ್ಲ ಸಂದರ್ಭಗಳಲ್ಲಿ ಸೇರಿದ್ದ ಹೆಚ್ಚಿನ ಜನ ಮಾಸ್ಕ್‌ ಧರಿಸಿರಲಿಲ್ಲ. ವೈಯಕ್ತಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಲ್ಲೋ ಒಂದು ಕಡೆ ಅಲ್ಲ, ರಾಜ್ಯದ ಹಲವು ಭಾಗಗಳಲ್ಲಿ ಹೀಗೆ ಆಡಳಿತ ಪಕ್ಷದ ಶಾಸಕರೇ ಕೋವಿಡ್‌ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಮೌನ ವಹಿಸಿದ ಅಧಿಕಾರಿಗಳು, ತಾವು ಸೇವೆಯಲ್ಲಿರುವುದು ಜನರ ಹಿತ ಕಾಯುವುದಕ್ಕಾಗಿಯೋ ಅಥವಾ ಪಕ್ಷಪಾತದಿಂದ ಕೆಲಸ ಮಾಡುವುದಕ್ಕಾಗಿಯೋ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಗರಿಷ್ಠ ಮಟ್ಟ ತಲುಪಿದಾಗ ದಿನಕ್ಕೆ 1.2 ಲಕ್ಷದವರೆಗೂ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಸರ್ಕಾರವೇ ಹೇಳಿದೆ. ಸಾರ್ವಜನಿಕ ಆರೋಗ್ಯದ ಕುರಿತು ಅದಕ್ಕೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಕೋವಿಡ್‌ ನಿಯಮಾವಳಿ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ತಪ್ಪು ಮಾಡಿದ ಎಲ್ಲರನ್ನೂ ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವಂತಹ ಕೆಲಸವನ್ನೂ ಮಾಡಬೇಕು. ಕೋವಿಡ್‌ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಸುಮ್ಮನೆ ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸಬೇಕು. ಜನಹಿತ ಮರೆತು ವರ್ತಿಸುವವರು ಜನಪ್ರತಿನಿಧಿಗಳಾಗಲು ಲಾಯಕ್ಕಲ್ಲ. ಜನರ ಆರೋಗ್ಯ ಮರೆತು ಬೇಜವಾಬ್ದಾರಿಯಿಂದ ನಡೆದುಕೊಂಡ ತಮ್ಮ ಪಕ್ಷದ ಶಾಸಕರ ಕಿವಿ ಹಿಂಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪಗಳಿಗೆ ಇನ್ನಷ್ಟು ಇಂಬು ದೊರೆತಂತಾಗುತ್ತದೆ ಅಷ್ಟೆ.

ADVERTISEMENT
ಸಾರಾಂಶ

ಸಾರ್ವಜನಿಕ ಆರೋಗ್ಯದ ಕುರಿತು ಸರ್ಕಾರಕ್ಕೆ ಕಿಂಚಿತ್ತಾದರೂ ಕಾಳಜಿಯಿದ್ದರೆ, ಕೋವಿಡ್‌ ನಿಯಮಾವಳಿ ಪಾಲಿಸದ ಎಲ್ಲರನ್ನೂ ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವಂತಹ ಕೆಲಸವನ್ನು ಮಾಡಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.