ಕಾಂಗ್ರೆಸ್ ಪಕ್ಷವು ಹಿಮ್ಮುಖವಾಗಿ ಚಲಿಸುತ್ತ ಇರುವ ಸುದ್ದಿಗಳು ಪ್ರತಿದಿನವೂ ದೇಶದ ಒಂದಲ್ಲ ಒಂದು ಕಡೆಯಿಂದ ವರದಿಯಾಗುತ್ತಿವೆ. ಪಕ್ಷವು ಅವನತಿಯ ಹಾದಿ ಹಿಡಿದಿದೆ ಎಂಬ ವಿವರಗಳು ಅಥವಾ ಯಾವುದಾದರೂ ಒಂದು ರಾಜ್ಯದಲ್ಲಿ ಕಾಂಗ್ರೆಸ್ಸಿನ ಪ್ರಾಬಲ್ಯ ಅಥವಾ ಪ್ರಭಾವ ಕುಂದುತ್ತಿದೆ ಎಂಬ ವಿವರಗಳು ಆ ವರದಿಯಲ್ಲಿ ಇರುತ್ತವೆ. ಒಂದು ಕಾಲಘಟ್ಟದಲ್ಲಿ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದ, ಜನರನ್ನು ಒಗ್ಗೂಡಿಸುವ ಹಾಗೂ ಆಡಳಿತದ ವಿಚಾರದಲ್ಲಿ ಬಹಳ ದೊಡ್ಡ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್, ತನ್ನನ್ನು ತಾನೇ ಒಂದು ಐತಿಹಾಸಿಕ ಸ್ಮಾರಕದ ಮಟ್ಟಕ್ಕೆ ಕುಗ್ಗಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಸದ್ಯದ ಅಗತ್ಯಗಳಿಗೆ ಸ್ಪಂದಿಸಲು ಈ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ; ಭವಿಷ್ಯದಲ್ಲಿ ತನ್ನ ಕಾರ್ಯತಂತ್ರ ಏನಿರಬೇಕು ಎಂಬ ವಿಚಾರವಾಗಿ ಪಕ್ಷಕ್ಕೆ ಖಚಿತ ನಿಲುವು ಇಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಇವೆ. ಆದರೆ ಯಾವ ರಾಜ್ಯದಲ್ಲಿಯೂ ಆಡಳಿತವು ಸುಗಮವಾಗಿ ನಡೆಯುತ್ತಿಲ್ಲ. ಪಂಜಾಬ್‌ನಲ್ಲಿ ಪಕ್ಷವು ತಾನಾಗಿಯೇ ಬಿಕ್ಕಟ್ಟೊಂದನ್ನು ಸೃಷ್ಟಿಸಿಕೊಂಡಿತು, ಅದರ ಪರಿಣಾಮವಾಗಿ ಸರ್ಕಾರವನ್ನು ಅಸ್ಥಿರಗೊಳಿಸಿತು. ಇಡೀ ವಿದ್ಯಮಾನವು ಪಕ್ಷದ ನಾಯಕತ್ವಕ್ಕೆ, ಪಕ್ಷವನ್ನು ನಿಭಾಯಿಸಲು ಬರುವುದಿಲ್ಲ, ಪಕ್ಷದಲ್ಲಿನ ಪರಿಸ್ಥಿತಿಯನ್ನು ಗ್ರಹಿಸುವ ಶಕ್ತಿಯೂ ಕಡಿಮೆ ಎಂಬು ದನ್ನು ತೋರಿಸಿಕೊಟ್ಟಿತು. ಪಕ್ಷವು ಆಡಳಿತದಲ್ಲಿ ಇರುವ ಇತರ ರಾಜ್ಯಗಳಲ್ಲಿಯೂ ಸಮಸ್ಯೆಗಳು ಇವೆ. ಅಲ್ಲಿನ ಸಮಸ್ಯೆಗಳು ಸ್ಫೋಟಗೊಂಡು, ಸರ್ಕಾರವನ್ನು ಮತ್ತು ಪಕ್ಷವನ್ನು ತೊಂದರೆಗೆ ಸಿಲುಕಿಸಲು ಬಹುಕಾಲ ಬೇಕಾಗುವುದಿಲ್ಲ.
ಕೆಲವು ರಾಜ್ಯಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ಸಿಗೆ ಈಗ ಅಸ್ತಿತ್ವವೇ ಇಲ್ಲವಾಗಿದೆ. ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯದ ವಿಧಾನಸಭೆಯಲ್ಲಿ ಕಾಂಗ್ರೆಸ್ಸಿಗೆ ಪ್ರಾತಿನಿಧ್ಯ ಇಲ್ಲ. ಉತ್ತರಪ್ರದೇಶ, ಬಿಹಾರ ರಾಜ್ಯಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಪಕ್ಷದ ನಾಯಕರು, ಸದಸ್ಯರು ಮತ್ತು ಬೆಂಬಲಿಗರು ಪಕ್ಷ ತೊರೆದು, ಬೇರೆ ರಾಜಕೀಯ ಪಕ್ಷಗಳನ್ನು ಸೇರುತ್ತಿದ್ದಾರೆ. ಬಿಜೆಪಿ, ತೃಣಮೂಲ ಕಾಂಗ್ರೆಸ್ ಕಡೆ ಕಾಂಗ್ರೆಸ್ಸಿನ ನಾಯಕರು ಈಚಿನ ದಿನಗಳಲ್ಲಿ ಮುಖ ಮಾಡಿ ದ್ದಾರೆ. ಕಾಂಗ್ರೆಸ್ ರೂಪಿಸಿದ ತಂತ್ರಗಾರಿಕೆ, ಮಾಡಿ ಕೊಂಡ ಹೊಂದಾಣಿಕೆಗಳು ಈಚಿನ ಚುನಾವಣೆಗಳಲ್ಲಿ ಫಲ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷವು ಹೊರೆ ಎಂಬಂತೆ ಮೈತ್ರಿಪಕ್ಷಗಳು ವರ್ತಿಸುತ್ತಿವೆ. ಪಕ್ಷದಲ್ಲಿ ಮನೆಮಾಡಿರುವ ಸೈದ್ಧಾಂತಿಕ ಗೊಂದಲದ ಪರಿಣಾಮವಾಗಿ ಸಂಘಟನೆಯಲ್ಲಿನ ದೌರ್ಬಲ್ಯವು ಜಾಸ್ತಿ ಆಗಿದೆ. ಆತ್ಮಾವಲೋಕನ ಹಾಗೂ ಸ್ವಯಂ ಮೌಲ್ಯಮಾಪನಕ್ಕೆ ಪಕ್ಷವು ಹಿಂದೇಟು ಹಾಕುತ್ತಿರುವುದು ಕೂಡ ಈ ಸ್ಥಿತಿಗೆ ಕಾರಣವಾಗಿದೆ. ತನ್ನ ಸಿದ್ಧಾಂತವನ್ನು ಗಟ್ಟಿಯಾಗಿ ಹೇಳಲು ಕಾಂಗ್ರೆಸ್ ಹಿಂದೇಟು ಹಾಕುತ್ತಿರುವಂತೆ ಕಾಣಿಸುತ್ತಿದೆ. ಇದು ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತಿದೆ. ಕಾಂಗ್ರೆಸ್ ಅಂದರೆ ಏನು ಎಂಬುದನ್ನು ಹೇಳುವ ಸಮರ್ಥ ಕಾರ್ಯಕರ್ತರ ಪಡೆಯೊಂದನ್ನು ಪಕ್ಷವು ಸಜ್ಜುಗೊಳಿಸಬೇಕಿತ್ತು. ಜನರ ನಡುವೆ ನಿಂತು, ಪಕ್ಷದ ಸೈದ್ಧಾಂತಿಕ ಕಾಲಾಳುಗಳಾಗಿ ಕೆಲಸ ಮಾಡುವ ತಾಕತ್ತು ಅವರಲ್ಲಿ ಇರಬೇಕಿತ್ತು. ಬಿಜೆಪಿಯಲ್ಲಿ ಅಂತಹದೊಂದು ಪಡೆ ಇದೆ. ಈಗಲೂ ಬಿಜೆಪಿಗೆ ದೇಶದಾದ್ಯಂತ ಪ್ರಬಲ ಪ್ರತಿರೋಧ ಒಡ್ಡುವ ಶಕ್ತಿ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಹೀಗಿದ್ದರೂ, ಕಾಂಗ್ರೆಸ್ಸಿನಲ್ಲಿ ಇಂಥದ್ದೊಂದು ಚುರುಕಿನ ನಡೆಗಳು ಕಾಣಿಸುತ್ತಿಲ್ಲ. ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನಾಭಿಪ್ರಾಯ ರೂಪಿಸಲಿಕ್ಕೆ ಕಾಂಗ್ರೆಸ್ಸಿಗೆ ಆಗುತ್ತಿಲ್ಲ. ತನ್ನ ಒಳಗಿನಿಂದಲೇ ವ್ಯಕ್ತವಾಗುತ್ತಿರುವ ಟೀಕೆಗಳಿಗೆ, ಅಗತ್ಯ ಬದಲಾವಣೆ ಕುರಿತ ಸಲಹೆಗಳಿಗೆ ಪಕ್ಷವು ಸ್ಪಂದಿಸುತ್ತಿಲ್ಲ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 23 ಮಂದಿ ನಾಯಕರು ಬರೆದ ಪತ್ರಕ್ಕೆ ದೊರೆತ ಸ್ಪಂದನೆ ಈ ಮಾತಿಗೆ ಸಾಕ್ಷಿ.
ಸೋನಿಯಾ ಗಾಂಧಿ ಅವರ ನಾಯಕತ್ವವು ಈ ಹಿಂದೆ ಪಕ್ಷಕ್ಕೆ ಎಷ್ಟೇ ಅನುಕೂಲ ಮಾಡಿಕೊಟ್ಟಿರ ಬಹುದು. ಆದರೆ, ಈಗಿನ ಸಂದರ್ಭದಲ್ಲಿ ಪಕ್ಷವನ್ನು ಹಿಂಜರಿತದಿಂದ ಹೊರಕ್ಕೆ ತರಲು ಅಥವಾ ಪಕ್ಷವನ್ನು ಬಲಪಡಿಸಲು ಅವರ ನಾಯಕತ್ವಕ್ಕೆ ಸಾಧ್ಯವಾಗಿಲ್ಲ. ಪಕ್ಷವನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಕೂಡ ಈ ನಾಯಕತ್ವಕ್ಕೆ ಕಷ್ಟವಾಗುತ್ತಿದೆ. ಪಕ್ಷದ ಯಾವುದೇ ಹಂತದಲ್ಲಿ ಇರುವ ಯಾವುದೇ ನಾಯಕರಿಗೆ ಪ್ರಜಾತಾಂತ್ರಿಕ ಮಾನ್ಯತೆ ಅಥವಾ ವಿಶ್ವಾಸಾರ್ಹತೆ ಇಲ್ಲ. ಪಂಜಾಬ್ ವಿದ್ಯಮಾನ ಗಮನಿಸಿ ಹೇಳುವುದಾದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅವರು ಪಕ್ಷದಲ್ಲಿ ಚುನಾಯಿತ ಸ್ಥಾನ ಹೊಂದಿಲ್ಲ. ಚುನಾಯಿತ ಅಧಿಕಾರ ಇಲ್ಲದಿದ್ದರೂ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವ, ಪಕ್ಷವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಳ್ಳುವ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಎಲ್ಲ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಮಾತು ಹಂಗಾಮಿ ಅಧ್ಯಕ್ಷರಿಂದ ಹಿಡಿದು ಅತ್ಯಂತ ಕೆಳ ಹಂತದ ನಾಯಕರವರೆಗೆ ಅನ್ವಯವಾಗುತ್ತದೆ. ಆಂತರಿಕ ಚುನಾವಣೆ ಮೂಲಕ ಪಕ್ಷದಲ್ಲಿ ಹೊಸ ನಾಯಕರಿಗೆ ಜವಾಬ್ದಾರಿ ವಹಿಸುವ ಕೆಲಸ ಮಾಡಬೇಕು. ತನ್ನೊಳಗೆ ಪ್ರಜಾತಂತ್ರದ ತೊರೆಯೊಂದು ಹರಿಯುವಂತೆ ನೋಡಿಕೊಳ್ಳಬೇಕಿರುವುದು ಕಾಂಗ್ರೆಸ್ ಮಾಡಬೇಕಿರುವ ಮೊದಲ ಕೆಲಸ. ಆಗ ಪಕ್ಷದಲ್ಲಿನ ಕೊಳೆ ತೊಳೆಯುತ್ತದೆ, ಪಕ್ಷಕ್ಕೆ ಹೊಸದಾಗಿ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ. ಇದು ಕಹಿ ಮಾತ್ರೆ ಎಂಬುದು ನಿಜ. ಆದರೆ ಕಹಿ ಔಷಧ ಸೇವಿಸಲು ಮನಸ್ಸು ಮಾಡದಿದ್ದರೆ ಪಕ್ಷದ ಆರೋಗ್ಯವು ಇನ್ನಷ್ಟು ಹದಗೆಡಬಹುದು.
ತನ್ನೊಳಗೆ ಪ್ರಜಾತಂತ್ರದ ತೊರೆಯೊಂದು ಹರಿಯುವಂತೆ ನೋಡಿಕೊಳ್ಳಬೇಕಿರುವುದು ಕಾಂಗ್ರೆಸ್ ಮಾಡಬೇಕಿರುವ ಮೊದಲ ಕೆಲಸ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.