‘ಪಕ್ಕದ ಮನೆ ರಾಜು ಬಂದಿದ್ದರು. ಅವರ ಮನೆ ರಿಪೇರಿ ಆಗಬೇಕಂತೆ’ ಎಂದು ಹೆಂಡತಿ ಹೇಳಿದಾಗ ನಾನು ‘ಹೌದೇನು?’ ಎಂದೆ.
‘ಗೊಂದಲದಲ್ಲಿದ್ದಾರೆ. ರಿನೊವೇಟ್ ಮಾಡೋದೊ ಅಥವಾ ಕೆಡವಿ ಹೊಸದು ಕಟ್ಟಿಸುವುದೊ ಅಂತ’.
‘ರಿನೊವೇಟ್ ಸುಲಭ ಅಲ್ಲವೆ?’
‘ರಿನೊವೇಟ್ ಮಾಡೋದಿಕ್ಕೆ ಹೋಗಿ ಮೈಮೇಲೆ ಕೆಡವಿಕೊಂಡಂತೆ ಆದರೆ ಅನ್ನೋ ಹೆದರಿಕೆ ಅವರಿಗೆ’.
‘ಹೊಸದೇ ಕಟ್ಟಿಸಲಿ’ ಎಂದೆ. ‘ಅಲ್ಲೂ ಗೊಂದಲ. ಕಿಟಕಿ, ಬಾಗಿಲು ಎಲ್ಲಾ ಚೆನ್ನಾಗಿವೆ. ಹಿಂದೆ ಹಾಕಿಸಿರೊ ಗ್ರಿಲ್ ಒಳ್ಳೇ ಕಬ್ಬಿಣದ್ದು. ಒಡೆದುಹಾಕಿದರೆ ಅವೆಲ್ಲಾ ವೇಸ್ಟ್ ಆಗುತ್ತವೆ ಎಂಬ ಚಿಂತೆ’.
‘ಹೀಗೂ ಸಮಸ್ಯೆ ಹಾಗೂ ಸಮಸ್ಯೆ ಪಾಪ ಅವರಿಗೆ’ ಎಂದು ನನ್ನ ಮಾಮೂಲಿ ಲಿಪ್ ಸಿಂಪಥಿ ತೋರಿಸಿದೆ.
‘ರಾಹುಲ್ ಗಾಂಧಿಗೂ ಇದೇ ಸಮಸ್ಯೆ ಅಲ್ಲವೇ?’ ಎಂದು ಅವಳು ಕೇಳಿದಾಗ ನನಗೆ ಡಿಕೆಶಿ- ಸಿದ್ದು ನಗುನಗುತಾ ಕೈ ಹಿಡಿದುಕೊಂಡು ಆಲ್ ಈಸ್ ವೆಲ್ ತರಹ ಬರ್ತಾ ಇರೋದನ್ನ ನೋಡಿದಷ್ಟೇ ಆಶ್ಚರ್ಯವಾಯಿತು.
‘ಅರೆ! ರಾಹುಲ್ ಗಾಂಧಿಗೂ ರಾಜುಗೂ ಏನು ಸಂಬಂಧ?’ ಆಗವಳು ಮಧ್ಯೆ ಬಾಯಿ ಹಾಕಿ ‘ಅಲ್ರೀ ರಾಹುಲ್ ಸಹ ಈಗ ಕಾಂಗ್ರೆಸ್ ಪುನರ್‌ನಿರ್ಮಾಣ ಮಾಡೋದಿಕ್ಕೆ ಹೊರಟಿದಾರೆ. ಅವರಿಗೂ ಈಗ ರಾಜು ಸಮಸ್ಯೇನೆ’.
‘ಅಂದರೆ?’
‘ಕಾಂಗ್ರೆಸ್ ಎಂಬ ಮನೇನ ರಿಪೇರಿ ಮಾಡೋದ ಅಥವಾ ಪೂರ್ತಿ ಒಡೆದು ಬೇರೆ ಕಟ್ಟೋದಾ?’
‘ನೀನು ಬಹಳ ಶ್ಯಾಣೆ ಇದ್ದೀಯ’ ಎಂದು ಧಾರವಾಡ ಶೈಲಿಯಲ್ಲಿ ಹೊಗಳಿದೆ.
‘ಈಗ ರಿಪೇರಿ ಮಾಡೋದಕ್ಕೆ ಹೊರಟರೆ ತ್ಯಾಪೆ ಹಚ್ಚಿದಾಗೆ ಕಾಣುತ್ತೆ. ನ್ಯೂ ಲುಕ್ ಇದ್ದರೂ ಹಳೇ ವಾಸನೆ ಇದ್ದೇ ಇರುತ್ತೆ. ಇದು ರಾಹುಲ್‍ಗೆ ಬಹುಶಃ ಬೇಡ. ಆದರೆ ಕೆಡವಿದರೆ ಅಲ್ಲಿರೋ ಹಳೆ ವಸ್ತುಗಳು ವೇಸ್ಟ್ ಆಗುತ್ವೆ’.
‘ಅದಕ್ಕೆ ಅವರು ಏನು ಮಾಡೋದಿಕ್ಕೂ ಹಿಂದೇಟು ಹಾಕ್ತಿದಾರೆ ಅಂತೀಯ?’
‘ನನಗೇನೋ ಹಾಗೆ ಅನ್ನಿಸುತ್ತಿದೇರಿ’ ಎಂದಳು.
ಇರಬಹುದೇ?
‘ರಿನೊವೇಟ್ ಸುಲಭ ಅಲ್ಲವೆ?’
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.