‘ಇವತ್ತು ಯಾವ ಯಾವ ನಾಯಕರು ಯಾರ‍್ಯಾರನ್ನು ಏನೇನು ಬೈದರು, ಎಷ್ಟೆಷ್ಟು ಬೈದರು ಎಂಬುದನ್ನು ಟಿ.ವಿ., ನ್ಯೂಸ್ ಪೇಪರ್ ವರದಿ ನೋಡಿ ಲೆಕ್ಕ ಹಾಕ್ತಿದ್ದೀನ್ರೀ...’ ಎಂದಳು ಸುಮಿ.
‘ನೀನು ಗಣಿತದಲ್ಲಿ ವೀಕು, ಎಚ್ಚರಿಕೆಯಿಂದ ಪಕ್ಷಾತೀತವಾಗಿ ಲೆಕ್ಕಹಾಕು. ಅದರಲ್ಲಿ ವೈಯಕ್ತಿಕ, ಸಾಮಾಜಿಕ, ಸಾಂಸ್ಕೃತಿಕ ಬೈಗುಳಗಳೆಷ್ಟು, ಬಳಸಿದ ಕೆಟ್ಟ ಪದ, ಅತಿ ಕೆಟ್ಟ ಪದ, ಸಾಧಾರಣ ಕೆಟ್ಟ ಪದಗಳನ್ನು ಗುರುತಿಸಿ ಪ್ರತ್ಯೇಕವಾಗಿ ಪಟ್ಟಿ ಮಾಡು’ ಎಂದು ಶಂಕ್ರಿ ಸಲಹೆ ನೀಡಿದ.
‘ಮಾಡ್ತಿದ್ದೀನ್ರೀ, ಬೈಸಿಕೊಂಡ ನಾಯಕರು ತಿರುಗಿಸಿ ಬೈದ ಬೈಗುಳ, ಬಳಸಿದ ಪದ, ಪ್ರಮಾಣವನ್ನೂ ಲಿಸ್ಟ್ ಮಾಡುತ್ತೇನೆ’.
‘ಬೈಯ್ಯುವ, ಬೈಸಿಕೊಳ್ಳುವ ರಾಜಕೀಯ ನಾಯಕರ ಸ್ಥಾನ, ಅವರಿಗಿರುವ ಮಾನವನ್ನೂ ಲೆಕ್ಕಹಾಕು’.
‘ಹಾಕ್ತೀನಿ. ನಾಯಕರ ಬೈದಾಟದಿಂದ ಪ್ರಜೆಗಳಿಗೆ ಆಗಬಹುದಾದ ಹಾನಿ, ಅನುಕೂಲ, ಬೇಸರ, ಮುಜುಗರ, ಆಕ್ರೋಶದ ಜೊತೆಗೆ, ಬೈಗುಳದಿಂದ ಪ್ರಜೆಗಳ ಪರಿಸ್ಥಿತಿ, ಮನಃಸ್ಥಿತಿ ಯಾವ ರೀತಿ ಬದಲಾಗಬಹುದು ಎಂದು ಅಂದಾಜು ಮಾಡ್ತೀನಿ’.
‘ಒಂದು ದಿನಕ್ಕೆ ನಾಯಕರು ಇಷ್ಟು ಬೈದಾಡಿದರೆ, ತಿಂಗಳಿಗೆ, ವರ್ಷಕ್ಕೆ ಅವರ ಒಟ್ಟು ಬೈಗುಳಗಳೆಷ್ಟು, ಐದು ವರ್ಷಕ್ಕೆ ಎಷ್ಟಾಗಬಹುದು ಎಂದು ಕೂಡಿ, ಕಳೆದು, ಗುಣಿಸಿ, ಭಾಗಿಸಿ ನಾಯಕರ ಗಾತ್ರ, ಘನತೆಯನ್ನು ನಿಖರವಾಗಿ ಲೆಕ್ಕ ಹಾಕು. ಈಗ ನಾಯಕರ ಬೈಗುಳಕ್ಕೆ ಬೇಡಿಕೆ ಹೆಚ್ಚಾಗಿದೆ. ಟಿ.ವಿ. ಸೀರಿಯಲ್‍ಗಳಿಗಿಂತ ಬೈಗುಳವೇ ಹೆಚ್ಚು ಮನರಂಜಿಸಿ ಟಿಆರ್‌ಪಿ ಏರಬಹುದು’.
‘ಏನೇ ಆಗ್ಲಿರೀ, ಜನನಾಯಕರ ಬೈಯ್ಯುವ, ಬೈಸಿಕೊಳ್ಳುವ ವಿಷಯ ಪ್ರಜೆಗಳಿಗೆ ಮನರಂಜನೆ ಆಗಿಬಿಟ್ಟರೆ, ರಾಜಕೀಯ ವ್ಯವಸ್ಥೆ ನಗೆಪಾಟಲಿ
ಗೀಡಾಗುವುದಿಲ್ಲವೇ?’ ಸುಮಿಗೆ ಬೇಸರ.
‘ಆಗುವುದಾದರೆ ಆಗಲಿಬಿಡು, ಗೌರವಾಧ್ಯಕ್ಷ ನಿಗೆ ಗೌರವವಿಲ್ಲ, ಕಾರ್ಯಾಧ್ಯಕ್ಷನಿಗೆ ಕಾರ್ಯ ಇಲ್ಲ ಎನ್ನುವಂತಹ ವ್ಯವಸ್ಥೆಯಲ್ಲಿ ಜನನಾಯಕರ ಬೈಗುಳವೂ ಸಿನಿಮಾ, ಡ್ರಾಮಾದಂತೆ ಜನ ರಂಜನೆಯಾದರೆ ಆಗಲಿಬಿಡು, ಬೈಗುಳದ ಅಭಿರುಚಿ ಇರುವವರು ಆಸ್ವಾದಿಸಿ ಆನಂದಿಸುತ್ತಾರೆ...’ ಎಂದ ಶಂಕ್ರಿ.
‘ಬೈಯ್ಯುವ, ಬೈಸಿಕೊಳ್ಳುವ ರಾಜಕೀಯ ನಾಯಕರ ಸ್ಥಾನ, ಅವರಿಗಿರುವ ಮಾನವನ್ನೂ ಲೆಕ್ಕಹಾಕು’.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.