ADVERTISEMENT

ಸವಿ ನೆನಪಿನೊಂದಿಗೆ ಮುಂದಿನ ಗುರಿ ಬೆನ್ನಟ್ಟಿ...

ಕೆ.ಓಂಕಾರ ಮೂರ್ತಿ
Published 22 ಅಕ್ಟೋಬರ್ 2010, 18:30 IST
Last Updated 22 ಅಕ್ಟೋಬರ್ 2010, 18:30 IST


ಆ ನೆನಪುಗಳು ಇನ್ನೂ ತಾಜಾವಾಗಿವೆ!ರೋಮಾಂಚನ ಸೃಷ್ಟಿಸಿದ ಆ ಪಂದ್ಯದ ನೆನಪುಗಳು ಸಮುದ್ರದ ಅಲೆಗಳಂತೆ ಮತ್ತೆ ಮತ್ತೆ ಮನಸ್ಸಿನ ದಡ ತಟ್ಟುತ್ತಿವೆ. ಅದು 2009ರ ದೇಶಿ ಕ್ರಿಕೆಟ್ ಋತುವಿನ ರಣಜಿ ಟ್ರೋಫಿ ಫೈನಲ್. ಕರ್ನಾಟಕ ತಂಡ ಕೇವಲ ಆರು ರನ್‌ಗಳಿಂದ ಸೋಲು ಕಂಡ ರೋಚಕ ಪಂದ್ಯವದು. ಆ ಪಂದ್ಯ ವೀಕ್ಷಿಸಲು ಮೈಸೂರು ಗ್ಲೇಡ್ಸ್ ಅಂಗಳದಲ್ಲಿ ಅವತ್ತು ಜನ ಸಾಗರವೇ ನೆರೆದಿತ್ತು.

ಆದರೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಬಿಟ್ಟರೆ ಕರುನಾಡಿನ ಹುಡುಗರು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದರು. ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದರು. ಸದಾ ಸ್ಫೂರ್ತಿಯ ಚಿಲುಮೆ ರಾಹುಲ್ ದ್ರಾವಿಡ್ ಯುವ ಆಟಗಾರರಲ್ಲಿ ತುಂಬಿದ ಉತ್ಸಾಹ, ಸ್ಫೂರ್ತಿ ಅಷ್ಟಿಷ್ಟಲ್ಲ. ಅದು ತಂಡವನ್ನು 11 ವಸಂತಗಳ ಬಳಿಕ ಫೈನಲ್‌ವರೆಗೆ ತಂದು ನಿಲ್ಲಿಸಲು ಕಾರಣವಾಗಿತ್ತು. ಆದರೆ ಕೊನೆಯ ಮೆಟ್ಟಿಲಲ್ಲಿ ಎಡವಿದ ನಿರಾಸೆ ಹಾಗೇ ಉಳಿದುಕೊಂಡಿದೆ.

ಅಷ್ಟರಲ್ಲಿಯೇ ಈಗ ಮತ್ತೊಂದು ರಣಜಿ ಋತು ಸಮೀಪಿಸುತ್ತಿದೆ. ಕಳೆದ ವರ್ಷದ ಸಾಧನೆಯ ಘಮದೊಂದಿಗೆ ಮುಂದಿನ ಪಯಣ ಶುರು ಮಾಡಲು ದ್ರಾವಿಡ್ ಸಾರಥ್ಯದ ತಂಡ ಸಿದ್ಧವಾಗುತ್ತಿದೆ. ಈಗಾಗಲೇ 33 ಆಟಗಾರರ ಸಂಭಾವ್ಯ ತಂಡ ಪ್ರಕಟಿಸಲಾಗಿದೆ. ಕೋಚ್ ಸನತ್ ಕುಮಾರ್ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಶಿಬಿರ ಕೂಡ ನಡೆಯುತ್ತಿದೆ.

ಕರ್ನಾಟಕ ತಂಡ ಎಲೈಟ್ ಡಿವಿಷನ್‌ನ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಪಂಜಾಬ್, ಉತ್ತರ ಪ್ರದೇಶ, ಬರೋಡ, ಒರಿಸ್ಸಾ, ಹರಿಯಾಣ ಹಾಗೂ ಹಿಮಾಚಲ ಪ್ರದೇಶ ತಂಡಗಳಿವೆ. ಕರ್ನಾಟಕ ನವೆಂಬರ್ 10ಕ್ಕೆ ಪಂಜಾಬ್ ಎದುರು ತನ್ನ ಮೊದಲ ಪಂದ್ಯ ಆಡಲಿದೆ. ಕರ್ನಾಟಕ ತಂಡದವರು ಈ ಬಾರಿ ಹೊರ ರಾಜ್ಯದಲ್ಲಿ ನಾಲ್ಕು ಹಾಗೂ ಬೆಂಗಳೂರಿನಲ್ಲಿ ಎರಡು ಲೀಗ್ ಪಂದ್ಯಗಳನ್ನು ಆಡಲಿದ್ದಾರೆ.

ಕಳೆದ ವರ್ಷ ರಾಜ್ಯ ತಂಡವು ಫೈನಲ್ ಪ್ರವೇಶಿಸಿದ್ದು ಹಲವು ಅವಕಾಶಗಳಿಗೆ ಬಾಗಿಲು ತೆರೆದುಕೊಂಡಿತ್ತು. ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್ ರಾಷ್ಟ್ರ ತಂಡದಲ್ಲಿ ಸ್ಥಾನ ಪಡೆದರು. ಮನೀಷ್ ಪಾಂಡೆ, ಗಣೇಶ್ ಸತೀಶ್ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. ಹಾಗೇ, ಅಮಿತ್ ವರ್ಮ, ಸಿ.ಎಂ.ಗೌತಮ್, ಎಸ್.ಅರವಿಂದ್ ಅವರ ಪ್ರತಿಭೆ ಪರಿಚಯವಾಯಿತು.

ತ್ರಿವಳಿ ವೇಗಿಗಳಾದ ‘ದಾವಣಗೆರೆ ಎಕ್ಸ್‌ಪ್ರೆಸ್’ ವಿನಯ್, ‘ಪೀಣ್ಯಾ ಎಕ್ಸ್‌ಪ್ರೆಸ್’ ಮಿಥುನ್ ಹಾಗೂ ಅರವಿಂದ್ ಅವರು ತಮ್ಮ ಜಾದೂ ಪುನರಾವರ್ತಿಸಲು ಸಿದ್ಧರಾಗುತ್ತಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯಲಿರುವ ಕಾರಣ ಆರಂಭದ ಕೆಲ ಪಂದ್ಯಗಳಿಗೆ ದ್ರಾವಿಡ್ ಲಭ್ಯರಿರುವುದಿಲ್ಲ.

ಆದರೆ ಕಳೆದ ಋತುವಿನಲ್ಲಿ ಈಡೇರದ ಆಸೆಯನ್ನು ಈ ಬಾರಿ ಪೂರೈಸಲು ಕನ್ನಡ ನಾಡಿನ ಆಟಗಾರರು ಸಜ್ಜಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಸಾಧನೆಗೆ ಸಾಕ್ಷಿ ಆಗಬಹುದು ಎಂಬ ವಿಶ್ವಾಸವನ್ನು ಮೂಡಿಸಿದ್ದಾರೆ. ರಾಜ್ಯದ ಆಟಗಾರರಲ್ಲಿ ಪ್ರತಿಭೆ ಇದೆ, ಚಾಣಾಕ್ಷತನವಿದೆ. ಅದಕ್ಕಿಂತ ಮುಖ್ಯವಾಗಿ ಸವಾಲಿಗೆ ಎದೆ ಕೊಡುವ ತಾಕತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.