ಎನ್.ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ; ಕಲೆ: ಪ್ರಭಾಕರ ಹೆಗಡೆ
‘ಗೌರ‍್ಮೆಂಟೋರು ಗೋಶಾಲೆ ಮಾಡಿದಾರಂತೆ. ಅಲ್ಲಿಗಾದರೂ ಈ ದನಗಳನ್ನು ಹೊಡ್ಕೊಂಡು ಹೋಗೋದು ಬಿಟ್ಟು ಎಲ್ಲಿಗೋದ್ನೋ ಈ ಹಾಳಾದೋನು, ಎಲ್ಲಾ ಕೆಲಸನೂ ಹೆಂಗಸರಿಗೆ ಗಂಟು ಹಾಕ್ತಾನೆ. ಊರೊಳಗಿಂದು ಉಸಾಬರಿ ಮಾತಾಡೋಕೋಂತ ಕೆಲಸ ಬಿಟ್ಟು ಹೋಟಲ್ನಾಗೆ ಕೂತ್ಕೊಂಡು ಹಲ್ಟೆ ಹೊಡೀತಾನೆ. ಏ... ಬಾರೋ... ನೀನಾದರೂ ದನಗಳನ್ನ ಹೊಡ್ಕೊಂಡು ಹೋಗು’.
ದ್ಯಾವಕ್ಕ ಒಲೆ ಮುಂದೆ ಕೂತ್ಕೊಂಡು ಊರೊಳಗೆ ಹೋದ ತನ್ನ ಗಂಡನ ಬಗ್ಗೆ ಒಂದೇ ಸಮನೆ ಬೈದುಕೊಳ್ಳುತ್ತಾ, ಮಗನಿಗೆ ದನಗಳನ್ನು ಗೋಶಾಲೆ ಕಡೆಗೆ ಕಳಿಸಲು ಎದ್ದಳು.
ಬಯಲುಸೀಮೆಯ ರಾಮಪುರ ಬಯಲು ಸೀಮೆಯೆಂದರೆ ಬಯಲೇ ಬಯಲು. ನಾಲ್ಕೈದು ವರ್ಷದಿಂದ ಮಳೆ ಕಾಣದೆ, ನೆಚ್ಚಿಕೊಂಡ ನೆಲದಲ್ಲಿ ಬೆಳೆ ಬೆಳೆಯಲಾಗದೆ ಜನ ತತ್ತರಿಸಿ ಹೋಗಿ, ಹಳ್ಳಿಯಲ್ಲಿ ಯುವಕರೆಲ್ಲಾ ಬೆಂಗಳೂರು ಸೇರಿದ್ದರು. ಮಳೆ ಬಂತು, ಬರಲಿಲ್ಲವೆಂದಲ್ಲ, ಅದು ಎಂತೆಂಥ ಸಮಯದಲ್ಲಿ ಬಂದು ಹೋಯಿತು ನೋಡಿ... ನೆಲ ಹದ ಮಾಡಲಿಕ್ಕೆ ಬರಬೇಕಾದ ಮಳೆ ಬಿತ್ತನೆ ಸಮಯದಲ್ಲಿ ಬಂತು. ಬಿತ್ತನೆ ಮಾಡಬೇಕಾ? ನೆಲ ಹದ ಮಾಡಬೇಕಾ? ಬೇಸಾಯಗಾರರು ಕಂಗಾಲಾದರು. ಇನ್ನು ಮುಂದೆ ಹೇಗೋ ಏನೋ... ಮಳೆ ಬಂದಿದೆ, ಮುಂದೆ ಉತ್ರಿ, ಮಘಿ ಮಳೆ ಬಂದರೆ ಒಂದಿಷ್ಟು ಬೆಳೆಯಾದರೂ ಆದೀತೆನಿಸಿ ನೆಲ ಹದವಾಗದಿದ್ದರೂ ಬಿತ್ತನೆ ಮಾಡಿದ್ದಾಯ್ತು. ಗಿಡ ಮೇಲೇಳಲಿಕ್ಕೆ ಜಪ್ಪಯ್ಯ ಅಂದರೂ ಮತ್ತೊಮ್ಮೆ ಮಳೆ ಬರಲಿಲ್ಲ. ಇದ್ದ ತೇವದಲ್ಲೇ ಮೊಳಕೆಯೊಡೆದು ಎರಡೆಲೆ ಹಾಕಿದ ಗಿಡಕ್ಕೆ ತೇವ ಕಾಣಲಿಲ್ಲ. ಕೊನೆಗೆ ಇನ್ನೇನು ಗಿಡ ಒಣಗಿ ಹೋದಾವೆನಿಸಿದಾಗ ನಿರೀಕ್ಷಿಸಿದ ಫಸಲಿನ ಮಳೆಯೆನಿಸಿಕೊಂಡ ಮಘಿ ಮಳೆ ಬರಲೇ ಇಲ್ಲ. ನಂತರದ ಮಳೆ ಬಂದು ಭೂಮಿ ಅಷ್ಟೋ ಇಷ್ಟೋ ತೇವವಾಯಿತು. ಪೈರು ಬೆಳೆದವು, ಪೈರಿನ ಜೊತೆಗೆ ಹೊಲದ ತುಂಬಾ ಕಳೆ ಬೆಳೆಯಿತು. ಕೊನೆಗೆ ಕಳೆ ತೆಗೆಸಲಿಕ್ಕೆ ಕೂಲಿಗಾಗಿ ಹಣ ಖರ್ಚಾಯಿತೇ ಹೊರತು, ಫಸಲು ಕೈಹತ್ತಲಿಲ್ಲ.
ಹೀಗೆ ಮಳೆ ರೈತನೊಂದಿಗೆ ಕಳೆದ ನಾಲ್ಕೈದು ವರ್ಷಗಳಿಂದ ಜೂಜಾಟ ಆಡಿದ್ದರಿಂದ ಈ ಬಾರಿ ನೆಲ ಹದ ಮಾಡಲಿಕ್ಕೂ ಬರಲಿಲ್ಲವಾದ್ದರಿಂದ ಕುಡಿಯುವ ನೀರಿಗೂ, ದನಕರುಗಳ ಮೇವಿಗೂ ತತ್ವಾರ ಶುರುವಾಯಿತು. ಇಂತಹ ಭೀಕರ ಬರಗಾಲಕ್ಕೆ ತುತ್ತಾದ ಹಳ್ಳಿಗಳಲ್ಲಿ ದ್ಯಾವಕ್ಕನ ಹಟ್ಟಿಯೂ ಒಂದು. ಊರಿನ ಹೊರಚ್ಚಿಗೆ ಮೂವತ್ತು ಮೂವತ್ತೈದು ಗರಿ ಹೊದಿಸಲಾದ ಗುಡಿಸಲುಗಳು ಅಸ್ತವ್ಯಸ್ತವಾಗಿ, ಅಡ್ಡಾದಿಡ್ಡಿಯಾಗಿ ಅಲ್ಲಿನ ಜನರ
ದನ–ಕರ, ಕುರಿ–ಮೇಕೆ, ಎಮ್ಮೆಗಳ ಸಾಕಾಣಿಕೆಯ ಅನುಕೂಲಕ್ಕೆ ತಕ್ಕಂತೆ ಬೆಳೆದು ಹರಡಿಕೊಂಡಿದ್ದವು. ದ್ಯಾವಕ್ಕ ಜೋರುಬಾಯಿಂದ ಮಾತನಾಡುತ್ತಿದ್ದರಿಂದ ಆ ಹಟ್ಟಿಯಲ್ಲಿ ದ್ಯಾವಕ್ಕಳೇ ತನ್ನ ಗಂಡನಿಗಿಂತ ಹೆಚ್ಚು ಪ್ರಸಿದ್ಧಳಾಗಿದ್ದಳು.
ದ್ಯಾವಕ್ಕನಿಗೆ ಆರನೇ ಕ್ಲಾಸು ಓದುತ್ತಿರುವ ಒಬ್ಬ ಗಂಡು ಮಗ ನಂತರ ವರ್ಷಾವರ್ತಿ ಹುಟ್ಟಿದ ಇಬ್ಬರು ಹೆಣ್ಣು ಕೂಸುಗಳು. ಒಬ್ಬಳು ಈ ವರ್ಷ ಶಾಲೆಗೆ ಸೇರಿದ್ದರೆ, ಇನ್ನೊಬ್ಬಳು ಅಂಗನವಾಡಿಯಲ್ಲಿ ದ್ಯಾವಕ್ಕ ಕೂಲಿಯಿಂದ ಹಿಂದಿರುಗುವವರೆಗೂ ಆಟವಾಡಿ ಬರುತ್ತಿದ್ದಳು. ದ್ಯಾವಕ್ಕನ ತಾವು ಚಿಕ್ಕದೊಂದು ಗುಡಿಸಲು. ದ್ಯಾವಕ್ಕ ತಾನು ಕೂಲಿ ಹೋಗುತ್ತಿದ್ದ ರಾಮಣ್ಣನ ಕಪಿಲೆಯಲ್ಲಿ ಆತ ಕಟ್ಟಿಕೊಂಡಿದ್ದ ಸಣ್ಣ ಅಳತೆಯ ಸಿಮೆಂಟ್ ಶೀಟಿನ ಮನೆಯನ್ನು ಆಗಾಗ್ಗೆ ಕಣ್ಣು ತಂಬಿಕೊಳ್ಳುತ್ತಿದ್ದಳು. ತಾನೂ ಈ ತರ ಇಟ್ಟಿಗೆ, ಸಿಮೆಂಟ್ ಶೀಟಿನ ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಅವಳ ತಲೆಯಲ್ಲಿ ಕೂತು ಯಾವಾಗಲೂ ಸಣ್ಣಗೆ ನವೆಯಂತೆ ಕೆರೆಯುತ್ತಲೇ ಇತ್ತು. ಶೀಟಿನ ಮನೆಯನ್ನ ಕಟ್ಟಿಕೊಳ್ಳುವ ಆಸೆ ತನ್ನ ಗಂಡ ಚಿತ್ತಪ್ಪನ ಹತ್ತಿರ ಹೇಳಿದಾಗೆಲ್ಲಾ, ಅವನು ಆಕೆಯ ಮಾತು ಕಿವಿಗೆ ಕೇಳಿಸಿಲ್ಲ ಎಂಬಂತೆ ವರ್ತಿಸುತ್ತಿದ್ದ. ಸಿಮೆಂಟ್ ಶೀಟಿನ ಮನೆ ಕಟ್ಟಿಕೊಳ್ಳುವ ತನ್ನ ಆಸೆ ಈಡೇರಿಕೆಗಾಗಿ ಚಿತ್ತಪ್ಪ ತನ್ನಂತೆ ದುಡಿಮೆ ಮಾಡಲು ಕೂಲಿನಾಲಿಗೆ ಹೋಗದೇ, ಸದಾ ಕಾಲವೂ ರಾಮಪುರ ಹೋಟಲ್‌ನಲ್ಲಿ ಹರಟೆ ಹೊಡೆಯುವಲ್ಲಿ ವೃಥಾ ಕಾಲಹರಣ ಮಾಡುತ್ತಾ, ತನ್ನ ಮಾತಿಗೆ ಅಸಡ್ಡೆ ತೋರುತ್ತಿದ್ದದನ್ನು ಕಂಡು ತನ್ನ ಗಂಡನನ್ನು ಬೈಯುವುದನ್ನೇ ದ್ಯಾವಕ್ಕ ತನ್ನ ಮೊದಲ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಳು ಎಂಬುದು ಹಟ್ಟಿಗೆಲ್ಲಾ ಗೊತ್ತಿತ್ತು.
ದ್ಯಾವಕ್ಕ ಕೂಲಿಗೆ ಹೋದ ಸ್ಥಳದಲ್ಲಿ ಅವರಿವರ ಬಾಯಿಯಿಂದ ಕೇಳಿ ತಿಳಿದುಕೊಂಡಂತೆ, ಗೌರ‍್ಮೆಂಟೋರು ಮನೆ ಕಟ್ಟಲಿಕ್ಕೆ ಕಬ್ಬಿಣದ ಕಿಟಕಿ, ಬಾಗಿಲು ಕೊಟ್ಟು ಮೇಲಿಂದಿಷ್ಟು ಹಣವನ್ನೂ ಕೊಡ್ತಾರಂತೆ ಎಂಬ ಸುದ್ದಿಯೇನೋ ತಿಳಿದಿತ್ತು, ಆದರೆ ನಮ್ಮಂಥವರಿಗೆ ಕೋಡೋರ‍್ಯಾರು? ಅದರಂತೆ ಯಾವಾಗಾದರೊಮ್ಮೆ ರಾಮಪುರಕ್ಕೆ ಹೋದಾಗ ತನ್ನೊಡನೆ ಕೂಲಿ ಮಾಡಲು ಬರುವ ಸರೀಕರ ಮನೆಯ ಓಣಿಯಲ್ಲಿ ಗೌರ‍್ಮೆಂಟ್ ಮನೆ ಕಟ್ಟಿಕೊಂಡವರನ್ನ ಆಸೆಗಣ್ಣಿನಿಂದ ನೋಡಿ ಬರುತ್ತಿದ್ದಳು. ಗೌರ‍್ಮೆಂಟೋರು ವರ್ಷಕ್ಕೆ ಇಂತಿಷ್ಟು ಮನೆ ಕೊಡುವಾಗ್ಗೆ ತನ್ನ ಹಟ್ಟಿಗೂ ಒಂದೆರೆಡು ಮನೆ ಕೊಡುವುದಾಗಿ ತನ್ನ ಹಟ್ಟಿಯಲ್ಲಿ ಬಿಳಿಲುಂಗಿ ತೊಟ್ಟು, ದಿನಾಲೂ ಹಟ್ಟಿಗೂ ರಾಮಪುರಕ್ಕೂ ಎಡತಾಕುತ್ತಾ ಇರುತ್ತಿದ್ದ ಚಿಕ್ಕಣ್ಣ ಎಂಬ ಮರಿ ಪುಢಾರಿ ಹೇಳುತ್ತಿದ್ದ ಮಾತನ್ನು ಕೇಳಿ ಕೇಳಿ ಸಾಕಾಗಿತ್ತು. ಒಂದಿನ ‘ಈಟು ವರ್ಷದಿಂದ ನಿನ್ನ ಮಾತು ಕೇಳ್ತಿದೀನಿ, ಒಂದೇ ಒಂದು ಶೀಟಿನ ಮನೇನೂ ನಮ್ಮ ಹಟ್ಟಿ ಜನಕ್ಕೆ ಕಟ್ಟಿಕೊಟ್ಟಿದ್ದನ್ನ ಕಾಣೆ! ಅದೇನು ಕಿಸಿತೀರೋ ನೀವು ಪಂಚಾತಿನಲ್ಲಿ’ ಎಂದು ಜಾಡಿಸಿದ್ದಳು. ಹೇಗಾದರೂ ಸರಿ ಈ ಸಲವಾದರೂ ಗೌರ‍್ಮೆಂಟ್ ಮನೆ ತಗೋಬೇಕು ಎಂದು ದ್ಯಾವಕ್ಕ ಪಣ ತೊಟ್ಟವಳಂತೆ ಪಂಚಾಯಿತಿ ಕಚೇರಿಗೆ ಅಲೆದಳು. ‘ಇನ್ನೂನು ಮನೆ ಬಂದಿಲ್ಲ. ಮನೆಗಳು ಬಂದಾಗ ನಾವೇ ಡಂಗೂರ ಒಡೆದು ಗ್ರಾಮಸಭೆ ಮಾಡ್ತೀವಿ. ಆವಾಗ ಬಂದು ಕೇಳು’ ಎಂದು ಅಲ್ಲಿನ ಅಧಿಕಾರಿಗಳು ಅವಳ ಹೋದಾಗಲೆಲ್ಲ ಹೀಗೆಯೇ ಹೇಳಿ ಕಳುಹಿಸುತ್ತಿದ್ದರು.
ದ್ಯಾವಕ್ಕನಿಗೆ ಸಮಾಧಾನವಾಗಲಿಲ್ಲ, ಊರಿನಲ್ಲಿ ತಿಳಿದೊರ‍್ನೆಲ್ಲಾ ಕೇಳಲಿಕ್ಕೆ ಶುರುಮಾಡಿದಳು. ಕೆಲವರು ‘ದ್ಯಾವಕ್ಕ, ಗೌರ‍್ಮೆಂಟ್ ಮನೆ ಅಷ್ಟೂ ಸುಲಭವಾಗಿ ಬರಲ್ಲ. ಮನೆ ಆಸೆ ಬಿಟ್ಟು ಬಿಡು. ಈಗ ಇರೋ ಗುಡಿಸಲನ್ನೇ ಭದ್ರಮಾಡಿಕೋ ಹೋಗು’ ಎಂದು ಹೇಳಿ ಅವಳ ಆಸೆಗೆ ತಣ್ಣೀರು ಎರಚುತ್ತಿದ್ದರು. ಮತ್ತೂ ಕೆಲವರು, ‘ಸರ್ಕಾರಿ ಮನೆಗಳನ್ನು ಕೆಟಗರಿವಾರು ಕೊಡ್ತಾರೆ. ನಿಮ್ಮ ಕೆಟಗರಿಗೆ ಈ ಸಾರಿ ಬರಬೇಕಲ್ಲ! ಬಂದ್ರೂ ಪಂಚಾಯ್ತಿ ಸದಸ್ಯರು ಅವರವರ ಬಂಧುಗಳಿಗೆ, ಲಂಚ ಕೊಟ್ಟವರಿಗೆ ಕೊಡ್ತಾರೆ. ನಿನಗೆಲ್ಲಿ ಕೊಡ್ತಾರೆ ಹೋಗವ್ವೊ...’ ಎಂದು ಹಳ್ಳಿಗಳ ವಾಸ್ತವವವನ್ನು ತಿಳಿಸಿ ಹೇಳುತ್ತಿದ್ದರು.
ದಿನವೂ ಇದನೆಲ್ಲ ಕೇಳುತ್ತಿದ್ದ ದ್ಯಾವಕ್ಕ, ಗೌರ‍್ಮೆಂಟ್ ಮನೆ ಪಡೆಯುವ ಆಸೆಯನ್ನು ಅನಾಮತ್ತಾಗಿ ತೊರೆಯಲಾರದೆ ಆಸೆಗಣ್ಣಿನಿಂದ ಇದ್ದಳು. ಅವಳ ಮನಸ್ಸಿನ ಒಂದು ಮೂಲೆಯಲ್ಲಿ ‘ಹೇಗಾದ್ರು ಸರಿ ಗೌರ‍್ಮೆಂಟ್ ಮನೆ ಬಂದ್ರೆ ನಾನು ಕೂಲಿ ಪಾಲಿ ಮಾಡಿ ಕೂಡಿಟ್ಟ ಹಣ ಮತ್ತು ಒಂದಿಷ್ಟು ಸಾಲಸೋಲ ಮಾಡಿ ಇಟ್ಟಿಗೆಯಿಂದ ಗೋಡೆಕಟ್ಟಿ, ಸಿಮೆಂಟ್ ಶೀಟಿನ ಮನೆ ಕಟ್ಟಿಕೊಳ್ಳಲೇಬೇಕು. ಈ ಹಾಳಾದ ಹುಲ್ಲು ಗುಡಿಸಲಲ್ಲಿ ದೂಳು ರವುದೆ ಬೀಳ್ತದೆ. ಸ್ವಲ್ಪ ಮಳೆ ಬಂದ್ರೂ ಸೋರುತ್ತದೆ. ಗೌರ‍್ಮೆಂಟ್‌ನೋರು ಒಂದಿಷ್ಟು ದುಡ್ಡು ಕೊಟ್ಟರೆ ಅನೂಕೂಲವಾಗ್ತದೆ’ ಎಂಬ ತನ್ನೊಳಗಿನ ಬೆಟ್ಟದಷ್ಟು ಆಸೆಯನ್ನು ನೆನೆಯುತ್ತಾ ಕೂಲಿಗೆ ಹೋಗುತ್ತಿದ್ದಳು.
ಗೋಶಾಲೆಯಲ್ಲಿ ನೀಡಿದ ಒಂದೇ ತರಹದ ಮೆಕ್ಕೆಜೋಳದ ದಂಟು ತಿಂದು ದನಗಳಿಗೆ ಗಂಟಲುಬೇನೆ ಬಂದು ನರಳಲಿಕ್ಕೆ ಶುರುಮಾಡಿದವು. ದ್ಯಾವಕ್ಕನ ಎಮ್ಮೆ ಈ ರೀತಿಯ ರೋಗಕ್ಕೆ ತುತ್ತಾಗಿ ನರಳಿತು. ಚಿಕಿತ್ಸೆಗಾಗಿ ದನದ ಆಸ್ಪತ್ರೆಗೆ ಎಡತಾಕಿ ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಳ್ಳದೇ ಒಂದು ದಿನ ದೇವರ ಪಾದ ಸೇರಿತು. ಇದರ ನೋವನ್ನು ಆಕೆ ಊರ ಮುಂದೆ ದೊಡ್ಡ ಬಾಯಿ ಮಾಡಿ ಬಡಬಡಿಸುತ್ತಾ ಕಣ್ಣೀರಾಗಿದ್ದಳು. ಇದು ದ್ಯಾವಕ್ಕನ ಎಮ್ಮೆಗೆ ಮಾತ್ರ ಒದಗಿದ ಸ್ಥಿತಿಯಾಗಿರದೇ, ಆ ಭಾಗದ ಹಲವಾರು ದನಕರಗಳಿಗೂ ಇದೇ ಸ್ಥಿತಿ ಒದಗಿತ್ತು. ಆ ಕಾಯಿಲೆಗೆ ಚಿಕಿತ್ಸೆ ಮಾಡಿಸಲಿಕ್ಕಾಗದೆ ಜನ ರೋಸಿಹೋಗಿದ್ದರು. ತಮಗಿದ್ದ ಒಂದೊಂದೆ ದನ–ಕರಗಳನ್ನು ಕಳೆದುಕೊಂಡಿದ್ದ ಜನ ಒಂದು ದಿನ ರೊಚ್ಚಿಗೆದ್ದು ತಾಲ್ಲೂಕು ಆಫೀಸ್‌ನ ಮುಂದೆ ಧರಣಿಯನ್ನೂ ಮಾಡಿದರು. ಆದರೂ ಅವರಿಗೆ ಸರ್ಕಾರದಿಂದ ಯಾವುದೇ ಪರಿಹಾರವೂ ದೊರೆಯಲಿಲ್ಲ.
ಕೂಲಿಯಿಂದ ಸಂಜೆ ಹಿಂದಿರುಗಿದ ದ್ಯಾವಕ್ಕನ ತಲೆಯೊಳಗೆ ನಾಳೆ ಶನಿವಾರ ಎಂಬುದು ನೆನಪಿಗೆ ಬಂತು. ವಾರದ ದಿನ ನೆಲವನ್ನು ಸಗಣಿಯಿಂದ ಸಾರಿಸಬೇಕು. ಸಗಣಿ ತಂದು ನೆಲ ಸಾರಿಸುವಾಗ ತಲೆಯೊಳಗೆ ‘ಹೊಸ ಮನೆ ಕಟ್ಟಿದರೆ ನೆಲಕ್ಕೆ ಕಡಪಾ ಬಂಡೆ ಹಾಕಿಸಬೇಕು, ಆಗ ಈ ರೀತಿ ಸಗಣಿಯಿಂದ ಸಾರುಸುವುದು ತಪ್ಪುತ್ತದೆ. ಮನೆ ನೀಟಾಗಿರುತ್ತದೆ’ ಎಂದು ಯೋಚಿಸುತ್ತಾ, ಸಗಣಿ ನೆಲ ಅಲ್ಲಲ್ಲಿ ಎದ್ದಿರುವುದನ್ನು ಮಣ್ಣಿನಿಂದ ಮುಚ್ಚುತ್ತಾ, ಕಾಳಿನ ಚೀಲಗಳನ್ನಿಟ್ಟ ಮೂಲೆಯಲ್ಲಿ ಇಲಿ, ಹೆಗ್ಗಣಗಳೂ ತೋಡಿದ ಬಿಲದ ಮಣ್ಣಿನ ರಾಶಿ ಕಂಡು ಅವಕ್ಕೆ ಶಪಿಸುತ್ತಾ, ತೋಡಿರುವ ಬಿಲಕ್ಕೆ ಗಾಜಿನ ಚೂರುಗಳು, ಬಳೆ ಚೂರುಗಳು, ಸಣ್ಣ ಸಣ್ಣ ಕಲ್ಲುಗಳಿಂದ ತುಂಬಿ ಮಣ್ಣು ನೀರು ಕಲಿಸಿ ಬುರುಜೆ ಮಾಡಿ ತಟ್ಟಿದಳು. ತನ್ನ ಮನೆಯ ಈ ಅವಸ್ಥೆಗೆ ಎಲ್ಲರನ್ನೂ ಮುಖ್ಯವಾಗಿ ತನ್ನ ಗಂಡ ಹಾಗೂ ಸರ್ಕಾರವನ್ನು ಬೈದುಕೊಳ್ಳುತ್ತಾ ನೆಲ ಸಾರಿಸುತ್ತಿದ್ದಳು.
ಅದೊಂದು ದಿನ ಸಂಜೆ ದ್ಯಾವಕ್ಕ ಪಡಿತರಚೀಟಿಯಿಂದ ತಂದ ಅಕ್ಕಿಯನ್ನು ಹಸನು ಮಾಡುತ್ತಾ ಕುಳಿತಿದ್ದಳು. ಊರಲ್ಲಿ ತಮಟೆ ಬಡಿಯುವ ಸದ್ದು ಕೇಳಿಸಿತು. ದ್ಯಾವಕ್ಕನ ಕಿವಿ ಚುರುಕಾದವು. ತಕ್ಷಣ ತಮಟೆ ಶಬ್ದ ಬಂದ ದಿಕ್ಕಿನತ್ತ ಕಿವಿ ಕೊಟ್ಟಳು. ತಮಟೆ ಬಡಿಯುವ ಮಾರಣ್ಣ ಹೇಳೋದು ಸರಿಯಾಗಿ ಕೇಳಿಸುತ್ತಿರಲಿಲ್ಲ. ಅಕ್ಕಿ ಹಸನು ಮಾಡುವುದನ್ನು ಅಷ್ಟಕ್ಕೇ ಬಿಟ್ಟು ದಡಬಡಾಯಿಸಿ ಎದ್ದು ಬಂದು ಓಣಿಯಲ್ಲಿ ನಿಂತಳು. ಅವಳ ಜೊತೆ ಅಕ್ಕಪಕ್ಕದವರು ಹೊರಬಂದು ನಿಂತು ನೋಡಲಾರಂಭಿಸಿದರು. ಹಟ್ಟಿಯ ಹುಡುಗರು ತಮಟೆ ಸದ್ದಿಗೆ ಜೋರಾಗಿ ಗಲಾಟೆ ಎಬ್ಬಿಸಿದ್ದರಿಂದ ಮಾರಣ್ಣ ಏನು ಹೇಳುತ್ತಿದ್ದಾನೆ ಎನ್ನುವುದು ದ್ಯಾವಕ್ಕನಿಗೆ ಕೇಳಿಸಲಿಲ್ಲ. ಅಲ್ಲಿದ್ದ ಹುಡುಗರನ್ನು ಗದರಿಸಿ ‘ಏ... ಹುಡುಗರಾ, ಡಂಗೂರ ಏನಕ್ಕೆ ಹೊಡಿತಾರೆ ತಿಳ್ಕೋಂಡು ಬರ್ರಿ ಹೋಗ್ರಲೇ’ ಎಂದು ಕಳುಹಿಸಿದಳು. ಹುಡುಗರು ಕೇಕೆ ಹಾಕುತ್ತಾ ಇನ್ನಷ್ಟು ಗಲಾಟೆ ಮಾಡಿ ಅವನು ಹೇಳ್ತಾಯಿರೋದು ಯಾರಿಗೂ ಕೇಳಿಸದಂತೆ ಕೂಗಾಡಲು ಶುರುಮಾಡಿದರು. ಮಾರಣ್ಣ ವಾಡಿಕೆಯಂತೆ ಆ ಓಣಿಯ ತುದಿಯಲ್ಲಿ ನಿಂತು ಕೂಗಿ ಹೇಳಲಾರಂಬಿಸಿದ. ಅವನು ಹೇಳುವುದು ದ್ಯಾವಕ್ಕನ ಕಿವಿಗೇನು, ಅಲ್ಲಿದ್ದವರಾರಿಗೂ ಕೇಳಿಸುತ್ತಿರಲಿಲ್ಲ. ದ್ಯಾವಕ್ಕ ಅವನು ಏನು ಹೇಳ್ತಾನೋ ಎಂದು ಅವನೆಡೆಗೆ ದೌಡಾಯಿಸಿ ಬಂದು ‘ಏನು ಮಾರಣ್ಣ ಏನು ಅದು ವಿಷಯ, ಸರಿಯಾಗಿ ಹೇಳಬಾರದೇನು?’ ಎಂದಳು. ಮಾರಣ್ಣ ಹೇಳಿದ ವಿಷಯ ದ್ಯಾವಕ್ಕ ನಿರೀಕ್ಷಿಸಿದ್ದ ಗೌರ‍್ಮೆಂಟ್ ಮನೆ ಕೊಡಲಿಕ್ಕೆ ಗ್ರಾಮಸಭೆ ಮಾಡುವುದಾಗಿರದೇ, ಊರಿನಲ್ಲಿ ಬರಗಾಲ ಇದ್ದುದರಿಂದ ಬಸಣ್ಣ ಗುಡಿಯ ಐನೋರು ಹೇಳಿದಂತೆ, ಸೋಮವಾರ ಸಂಜೆ ಊರಿನ ಬುಡ್ಡೇಕಲ್ಲಿಗೆ ನೂರಾ ಒಂದು ಕೊಡ ನೀರು ಸುರಿದು, ಬಸಣ್ಣ ದೇವರಿಗೆ ಎಲೆ ಪೂಜೆ ಮಾಡಿಸಬೇಕು. ಹೀಗೆ ಮಾಡಿಸಿದ ವಾರದಲ್ಲಿ ಮಳೆ ಬರುತ್ತದೆ ಎಂದು ರಾಮಪುರದ ಯಜಮಾನರು ತೀರ್ಮಾನಿಸಿದ್ದರಿಂದ ಈ ಸುದ್ದಿ ಊರಿನ ಓಣಿಗಳೆಲ್ಲಾ ತೂರಾಡಿ ಬಂದು ಈಗ ದ್ಯಾವಕ್ಕನ ಕಿವಿವರೆಗೂ ಬಂದಿತು. ದ್ಯಾವಕ್ಕ ‘ಅಯ್ಯೋ ಇಸ್ಟೇನಾ! ನಾನೆಲ್ಲೋ ಗೌರ‍್ಮೆಂಟ್‌ನೋರು ಮನೆ ಕೊಡ್ತಾರೆ ಅಂಬಕಂಡಿದ್ದೆ’ ಎಂದು ನಿರಾಸೆಯಿಂದ ಅಲ್ಲಿ ಕುಣಿಯುತ್ತಿದ್ದ ಹಡುಗರ ಗುಂಪನ್ನ ಗದರಿಸಿ, ಮೊರದಲ್ಲಿದ್ದ ಅಕ್ಕಿ ಹಸನು ಮಾಡಲು ಕುಳಿತಳು.
ಮರುದಿನ ಕೂಲಿ ಕೆಲಸಕ್ಕೆ ತೆರಳುವಾಗ ಎದುರಾದ ಚಿಕ್ಕಣ್ಣನನ್ನು ‘ದಿನಾಲೂ ರಾಮಪುರದ ಪಂಚಾಯಿತಿಗೆ ಓಡಾಡ್ತೀಯಾ. ಗೌರ‍್ಮೆಂಟ್ ಮನೆ ಸರ್ಕಾರದಿಂದ ಯಾವಾಗ ಬಂದಾವು ಕೇಳಣ್ಣೊ’ ಎಂದಳು. ‘ಈ ಸಾರಿ ಬರಗಾಲ ಬಂದದೆ. ಸರ್ಕಾರದಲ್ಲಿ ದುಡ್ಡಿಲ್ಲ ಅಂತಾರೆ. ಬರೋದು ಡೌಟು ಐತೆ ಕಣವ್ವೋ’ ಎಂದ. ಇದನ್ನು ಕೇಳಿ ವಿಚಲಿತಳಾದ ದ್ಯಾವಕ್ಕ ‘ಏನಣ್ಣ ಇಂಗಂತೀಯಾ, ಮನ್ನೆ ಬರಗಾಲ ನೋಡ್ಲಿಕ್ಕೆ ಮುಖ್ಮಂತ್ರಿ ಇಮಾನದಾಗೆ ಬಂದು ಹೋಗಿದಾರೆ, ಸ್ಯಾನೆ ದುಡ್ಡು ಬತ್ತದೇ ಅಂತ ಹೇಳ್ತಾವರೆ. ನಿನಗೆ ಸರಿಯಾಗಿ ತಿಳಿದಿಲ್ಲ ಬಿಡು’ ಎಂದು ತನ್ನ ತಲೆ ಮೇಲಿನ ಬುತ್ತಿಗಂಟನ್ನೇ ಎತ್ತಿ ಕುಕ್ಕಿ ಇಟ್ಟುಕೊಳ್ಳುತ್ತಾ ಅವನ ಮೇಲಿನ ಸಿಟ್ಟನ್ನ ತೋರ್ಪಡಿಸಿದಳು.
ಹೀಗೆ ತಿಂಗಳುಗಳು ಕಳೆದು ಚುನಾವಣೆ ಹತ್ತಿರ ಬರ್ತಿದಾವೆ ಎಂಬ ನೆಪ ಮಾಡಿಕೊಂಡು, ಸರ್ಕಾರವು ಪಂಚಾಯಿತಿಗೆ ಇಷ್ಟು ಮನೆ ಮಂಜೂರು ಮಾಡಬೇಕೆಂದು ತೀರ್ಮಾನಿಸಿತು. ದ್ಯಾವಕ್ಕಳ ಆಸೆ ನೆರವೇರುವ ಕಾಲ ಹತ್ತಿರ ಬಂತು. ಹಟ್ಟಿಯ ದೇವರಾದ ಚಿತ್ರದೇವರ ಜಾತ್ರೆ ಹತ್ತಿರ ಬಂದುದರಿಂದ ಆ ದೇವರ ಹುಲ್ಲು ಹಾಸಿನ ಗುಡಿಗೆ ಹೊಸ ಹುಲ್ಲು ತಂದು ಹೊದಿಸಿ ಭದ್ರಪಡಿಸಲು, ಅದರ ಸುತ್ತಲಿನ ಪೌಳಿಯನ್ನು ಸ್ವಚ್ಛಗೊಳಿಸಲು ಮನೆಗೊಂದಾಳು ಬಂದು ದೇವರ ಕೆಲಸ ಮಾಡಬೇಕೆಂದು ಹಟ್ಟಿ ಯಜಮಾನರು ತೀರ್ಮಾನಿಸಿದರು. ಹಟ್ಟಿಯ ಜನ ಆ ದಿನ ಮನೆಗೊಬ್ಬರಂತೆ ಸೇರಿಕೊಳ್ಳುವಂತೆ ದ್ಯಾವಕ್ಕನೂ ಆಕೆಯ ಮಗನೂ ದೇವರ ಗುಡಿಯ ಕಾರ್ಯದಲ್ಲಿ ಕೈಜೋಡಿಸಿದರು. ಅಂತಹ ಸಂದರ್ಭದಲ್ಲಿಯೇ ಮಾರಣ್ಣನ ತಮಟೆಯ ಶಬ್ದ ಹಟ್ಟಿಯ ಮುಂದಿನಿಂದ ಹಾದು ಬರುತ್ತಿತ್ತು. ಆ ಶಬ್ದ ದೇವರ ಪೌಳಿಯವರೆಗೂ ಸಾಗಿ ಬರುವವರೆಗೂ ಕಾಯದೇ ಕೆಲಸ ಮಾಡುವದನ್ನೇ ಬಿಟ್ಟು ದ್ಯಾವಕ್ಕ ಅದಕ್ಕೆ ಎದುರಾಗಿ ಓಡಿದಳು. ಮಾರಣ್ಣನು ನಿಂತು ‘ಗೌರ‍್ಮೆಂಟ್‌ನಿಂದ ಮನೆ ಬಂದಿದಾವೆ ಅಂತೆ... ನಾಳೆ ಹೊತ್ತಾರೆ ಹನ್ನೊಂದು ಗಂಟೆಗೆ ಚಾವಡಿ ಹತ್ತಿರ ಗ್ರಾಮಸಭೆ ಐತೆ. ಎಲ್ರೂ ಬರ್ರಪ್ಪೋ ಬರ್ರಿ...’ ಎಂದು ಹೇಳಿದ. ಈ ವಿಷಯ ಕೇಳಿದ ದ್ಯಾವಕ್ಕನಿಗೆ ಮೈಯಲ್ಲಿ ಹೊಸರಕ್ತ ಸಂಚಾರವಾದಂತಾಯ್ತು.
‘ಗೌರ‍್ಮೆಂಟ್‌ನಿಂದ ಮನೆ ಬಂದಿದಾವ ಮಾರಣ್ಣ, ನಮ್ಮ ಗುಡಿಸಲು ಹಾಳಾಗದೆ, ಅದಕ್ಕೆ ನಾನೊಂದು ಮನೆ ಬರೆಸಿಕೋತಿನಿ’ ಎಂದು ಮಾರಣ್ಣನ ಹತ್ತಿರ ಹೇಳತೊಡಗಿದಳು.
‘ನಂದೇನಿದ್ದರು ಡಂಗೂರ ಹೊಡೆಯುವುದು ಕಣಕ್ಕ. ಮನೆ ಕೊಡೋದು ಪಂಚಾಯಿತೋರು, ಡಂಗೂರ ಹೊಡಿಯೋ ಕಾಸು ಇಸ್ಕೋಳ್ಳೋಕೆ ಎಂಟು ದಿನ ಆಗ್ತದೆ, ಇನ್ನು ನಿನಗೆ ಮನೆ ನಾನೆಲ್ಲಿ ತಂದುಕೊಡಲಿ’ ಎಂದು ಮಾರಣ್ಣನು ತನ್ನ ಕೂಲಿ ಬಗ್ಗೆ ವದರಿಕೊಳ್ಳುತ್ತಾ ಮುಂದಕ್ಕೆ ಸಾಗಿದ.
ಅಲ್ಲಿ ಗುಡಿ ಮುಂದೆ ನೆರೆದವರಿಗೆಲ್ಲಾ ಗ್ರಾಮಸಭೆಯಲ್ಲಿ ಗೌರ‍್ಮೆಂಟ್ ಮನೆ ಪಡೆಯುವುದರ ಬಗ್ಗೆ ಹೇಳತೊಡಗಿದಳು. ಅಲ್ಲಿದ್ದ ಕೆಲವರು ‘ಅಯ್ಯೋ... ನೀನು ಮನೆ ಕೇಳಿದೇಟಿಗೆ ಸುಮ್ನೆ ಕೊಟ್ಟುಬಿಡ್ತಾರಾ? ಅದಕ್ಕೆಲ್ಲಾ ರೆಕ್ಮಂಡೇಸನ್ ಬೇಕು, ಎಮ್ಮೆಲ್ಲೆ, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹೇಳಿದವರಿಗೆ ಮನೆಕೊಡ್ತಾರೆ. ನೀನು ಕೇಳಿದೇಟಿಗೆ ಕೋಡ್ತಾರಾ? ಟೈಮಾಗುತ್ತೆ ಬೇಗ ಬೇಗ ಗುಡಿ ಕೆಲಸ ಮಾಡು, ಇನ್ನುಕೆಲಸ ಬಾಳ ಐತೆ’ ಎಂದರು. ‘ನಿನ್ನ ಗುಡಿಸಲಿಗೆ ನಿನ್ನ ಗಂಡನ ಕೈಲಿ ಒಂದಿಷ್ಟು ಹುಲ್ಲು, ಗರಿ ತರಿಸಿ ಹೊದಿಸಿಕೋ. ಗೌರ‍್ಮೆಂಟಿನೋರು ಮನೆ ಕೊಟ್ಟಾರು... ನೀನು ಕಟ್ಟಿಕೊಂಡಂಗೆ..! ಅಷ್ಟಕ್ಕೂ ಮನೆ ಕಟ್ಟೋಕೆ ಮಿಕ್ಕಿದ ದುಡ್ಡು ಎಲ್ಲಿಂದ ತರ‍್ತೀಯಾ?’ ಹಟ್ಟಿ ಯಜಮಾನ ಈರಣ್ಣ ಎಂದನು. ಅಲ್ಲೇ ಇದ್ದ ಬಿಳಿಲುಂಗಿ ಚಿಕ್ಕಣ್ಣ ‘ನಿನ್ನ ಗುಡಿಸಲು ಚೆನ್ನಾಗೆ ಐತೆ. ಮುಂದಿನ ಸಲ ಬರಸ್ಕ್ಯಾ. ಈ ಸಲ ಆಗಲೇ ಮುಗಿದು ಹೊಗ್ಯವಾ’ ಎಂದ.
ಇವರಿಬ್ಬರ ಮಾತಿನಿಂದ ದ್ಯಾವಕ್ಕನ ಮನಸ್ಸು ಭುಗಿಲೆದ್ದಿತು. ‘ಈಗ ಇನ್ನೂ ನಾಳೆ ಗ್ರಾಮಸಭೆ ಐತೆ ಅಂತ ಹೇಳ್ದ, ಆಗಲೇ ಮುಗಿದ್ವಾ? ನನ್ನ ಗುಡಿಸಲು ಅರಮನೆ ಅಂಗೈತಾ? ಮಣ್ಣು ಮೆತ್ತಿದ್ದು ಉದುರಿ ಬೀಳಾಕತ್ತೈತೆ. ಗಳ ಉಳ ಹಿಡಿದು ರವುದೇ ಪುಡಿ ಮನೆ ತುಂಬಾ ಬೀಳ್ತಾಯಿದೆ. ಗೌರ‍್ಮೆಂಟ್‌ದು ಸ್ವಲ್ಪ ದುಡ್ಡು ಬಂದ್ರೆ ಅದಕ್ಕೆ ಸಾಲ ಮಾಡಿ ಇನ್ನೊಂದಿಷ್ಟು ಸೇರಿಸಿ ಸಿಮೆಂಟ್ ಶೀಟಿನ ಮನೆ ಕಟ್ಟಿಕೊಳ್ಳಬೇಕು ಅಂತ ಇದೀನಿ, ನಾಳೆ ನಾನೂ ಕೇಳ್ತಿನಿ, ಅದೇಂಗ ಮುಗಿದು ಹೋಗಿದಾವೆ. ಈ ಸಾರಿ ನಾನು ಬಿಡೋದಿಲ್ಲ. ನನಗೆ ಮನೆ ಬೇಕೇ ಬೇಕು’ ಎಂದು ಓಣಿಯೆಲ್ಲ ಕೇಳೋ ಹಂಗೆ ಬಾಯಿ ಮಾಡುತ್ತಾ ಮನೆಗೆ ಬಂದಳು.
ಅಲ್ಲಿಗೆ ಕೂಲಿ ಕರೆಯಲಿಕ್ಕೆ ಬಂದಿದ್ದ ಊರ ಮುಂದಿನ ರಾಮಣ್ಣ ಈಕೆಯ ಬಾಯಿ ನೋಡಿ, ‘ಏನು ದ್ಯಾವಕ್ಕ ನಿನ್ನ ಮಾತು, ನಾಳೆ ನೀರುಳ್ಳಿ ಕಳೆ ತೆಗಿಲಿಕ್ಕೆ ಕೂಲಿಗೆ ಬಾ’ ಎಂದ. ‘ಇಲ್ಲ ರಾಮಣ್ಣೋ, ನಾಳೆ ಗ್ರಾಮಸಭೆ ಐತೆ. ನಾನು ಗೌರ‍್ಮೆಂಟ್ ಮನೆ ಬರಿಸ್ಕೋಬೇಕು, ನಾಳೆ ನಾನು ಕೂಲಿ ಬರಲ್ಲ’ ಎಂದು ಬಿರುಸಿನಿಂದಲೇ ನುಡಿದಳು ದ್ಯಾವಕ್ಕ.
‘ಆಯ್ತು ಬಿಡವ್ವ, ನಿನ್ನಾಸೆನೂ ನಾಳೆ ತೀರಲಿ’ ಎಂದು ರಾಮಣ್ಣ ಅವಳ ಕಡೆ ತಿರುಗಿಯೂ ನೋಡದೆ ಹೆಜ್ಜೆ ಹಾಕಿದ.
ರಾಮಣ್ಣನಿಗೆ ಅಂದದ್ದು ತುಸು ಬಿರುಸಾಯಿತೇನೋ, ಅವನು ಏನೆಂದುಕೊಂಡನೋ ಏನೋ... ಮತ್ತೆ ಕೂಲಿಗೆ ಅವರ ಕಪಿಲೆಗೇ ಹೋಗಬೇಕಲ್ಲ ಎಂದು ದ್ಯಾವಕ್ಕ ಮನದಲ್ಲೇ ನೊಂದುಕೊಂಡಳು. ರಾತ್ರಿ ಮನೆಗೆ ಬಂದ ಗಂಡನಿಗೆ ನಾಳೆ ಎಲ್ಲಿಗೂ ಹೋಗದಿರುವಂತೆಯೂ, ಗ್ರಾಮಸಭೆಗೆ ಬಂದು ಗೌರ‍್ಮೆಂಟ್ ಮನೆ ಕೇಳುವಂತೆಯೂ ತಾಕೀತು ಮಾಡುವ ಧಾಟಿಯಲ್ಲಿ ಒಂದೇ ಸಮನೆ ವದರಾಡಿದಳು. ಇದಕ್ಕೆ ಗಂಡನು ಮನೆ ಬೇಕು ಎಂದಾಗಲಿ, ಬೇಡ ಎಂದಾಗಲಿ ಯಾವುದನ್ನೂ ಹೇಳದೇ ಬರೀ ಮುಗುಂ ಆಗಿ ಊಂ... ಊಂ... ಎಂದು ಊಗುಡುತ್ತಾ ಹಾಗೆಯೇ ಚಾಪೆ ಮೇಲೆ ನಿದ್ದೆಗೆ ಜಾರಿದನು. ದ್ಯಾವಕ್ಕನ ಮನಸ್ಸಿನಲ್ಲಿ ಅವಳ ಕನಸಿನ ‘ಸಿಮೆಂಟ್ ಶೀಟಿನ ಮನೆ’ ಅವಳನ್ನೂ ಮೀರಿ ಬೆಳೆದು ನಿಂತಿತ್ತು.
ಮರುದಿನ ಗ್ರಾಮಸಭೆ ಶುರುವಾಗುವ ಹೊತ್ತಿಗೆ ದ್ಯಾವಕ್ಕನೂ ತನ್ನ ಮನದೊಳಗೆ ಕಟ್ಟಿಕೊಂಡ ಆಸೆಯ ಮೂಟೆಗೆ ರೆಕ್ಕೆಪುಕ್ಕ ಬಲಿಯುವ ಹೊತ್ತನ್ನ ಸಾಕ್ಷೀಭೂತಳಾಗಿ ಕಣ್ತುಂಬಿಕೊಳ್ಳುವ ಇರಾದೆಯೊಂದಿಗೆ ಹೊತ್ತಿಗೂ ಮುಂಚೆ ಊರ ಚಾವಡಿಯ ಹೊರಚ್ಚಿನಲ್ಲಿ ಬಂದು ಕಾಯುತ್ತಾ ಕುಳಿತಿದ್ದಳು. ಅಲ್ಲಿ ಜನ ಗುಂಪು ಸೇರಿ ಸಭೆ ಪ್ರಾರಂಭವಾದ ನಂತರದಲ್ಲಿ ಜನ ತರಾವರಿಯಾಗಿ ಮತನಾಡುತ್ತಿದ್ದುದರಿಂದಾಗಿ ಬಂದಿದ್ದ ಅಧಿಕಾರಿಗಳು ಏನು ಹೇಳುತ್ತಿದ್ದರು ಎಂಬುದೇ ಅರ್ಥವಾಗದೇ ಗೋಜು ಗೋಜಲಾಗಿತ್ತು. ಆ ಗುಂಪಿನಲ್ಲಿ ನಾಲ್ಕಾರು ಹೆಂಗಸರಿದ್ದು ಅವರ ಜೊತೆ ದ್ಯಾವಕ್ಕನೂ ಸೇರಿಕೊಂಡಿದ್ದಳು. ಜನರ ಸದ್ದಿನ ನಡುವೆಯೇ ದ್ಯಾವಕ್ಕ ‘ಈ ಸಾರಿ ನನಗೆ ಗೌರ‍್ಮೆಂಟ್ ಮನೆ ಬೇಕು ಸಾ, ನನ್ನ ಹೆಸರು ದ್ಯಾವಮ್ಮ ಅಂತ ಬರ್ಕೊಳ್ಳಿ ಸಾ’ ಎಂದು ಪದೇ ಪದೇ ಹೇಳುತ್ತಿದ್ದಳು. ಆಕೆಯ ದನಿಯನ್ನು ಯಾರೂ ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.
ಅವರು, ಈ ವರ್ಷ ಆ ವಾರ್ಡಿಗೆ ಇಷ್ಟು, ಈ ವಾರ್ಡಿಗೆ ಕಳೆದ ಬಾರಿ ಒಂದು ಹೆಚ್ಚಿಗೆ ಕೊಡಲಾಗಿತ್ತು. ಈ ಸಾರಿ ಕಡಿಮೆ ಕೊಡಬೇಕು. ಜಾತಿವಾರು ಯಾರಿಗೆ ಎಷ್ಟು? ಈ ಸಲ ಗ್ರಾಮಪಂಚಾಯಿತಿ ಅಧ್ಯಕ್ಷರ ಮರ್ಜಿಗೆ ಇಂತಿಷ್ಟು ಮನೆಗಳನ್ನು ಕೊಡಬೇಕು ಎಂದು ಲೆಕ್ಕ ಹಾಕುವುದರಲ್ಲಿಯೇ ಮಗ್ನರಾಗಿದ್ದರು. ಅಷ್ಟರಲ್ಲಿ ಗುಂಪಿನ ನಡುವೆ ಯಾರೋ ಏನೋ ಮಾತು ಅಂದು ಅದು ದೊಡ್ಡ ಜಗಳಕ್ಕೆ ಕಾರಣವಾಯಿತು. ಜಗಳವು ಹೊಡೆದಾಟದ ಮಟ್ಟಕ್ಕೆ ಬೆಳೆದು ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಕೊನೆಯಲ್ಲಿ ಅಲ್ಲಿ ಸೇರಿದ್ದ ಊರಿನ ಪ್ರಮುಖರು, ಈಗ ಯಾರ ಯಾರಿಗೆ ಮನೆ ಬೇಕೋ ಎಲ್ಲರ ಹೆಸರುಗಳನ್ನು ಬರೆದುಕೊಳ್ಳುವಂತೆಯೂ, ಆ ನಂತರ ಪರಿಶೀಲಿಸಿ ಅರ್ಹರನ್ನು ಪಟ್ಟಿ ಮಾಡಿ ಅಂತಿಮಗೊಳಿಸಿ ಎಂದು ಅಧಿಕಾರಿಗಳಿಗೆ ಹೇಳಿ, ಅಧಿಕಾರಿಗಳನ್ನು ಕೇವಲ ಮೂಕಪ್ರೇಕ್ಷಕರಾಗಿ ಇರುವಂತೆ ಮಾಡಿದರು. ಫಲಾನುಭವಿಗಳ ಹೆಸರುಗಳನ್ನು ಅಂತಿಮಗೊಳಿಸದೇ ಮುಗುಮ್ಮಾಗಿ ಗ್ರಾಮಸಭೆಯನ್ನು ಮುಗಿಸಿದರು. ಸಭೆಯಲ್ಲಿ ಕೊನೆಯದಾಗಿ ಹೆಸರನ್ನು ಬರೆದುಕೊಂಡಿರುವ ಪಟ್ಟಿಯಲ್ಲಿ ದ್ಯಾವಕ್ಕನ ಹೆಸರನ್ನು ಓದಿ ಹೇಳಿದ್ದರಿಂದಾಗಿ ದ್ಯಾವಕ್ಕ ಮನದೊಳಗೇ ಖುಷಿಪಡುತ್ತಾ ಮನೆ ಕಡೆ ನಡೆದಳು. ಆಗಲೇ ಅವಳ ಕಣ್ಣುಗಳ ಮುಂದೆ ಗೌರ‍್ಮೆಂಟ್‌ನೋರು ಕಟ್ಟಿಸಿಕೊಟ್ಟಿದ್ದ ಮನೆ ಆಕಾಶದೆತ್ತರಕ್ಕೆ ಬೆಳೆದು ನಿಂತಿತ್ತು.
ತಿಂಗಳುಗಳು ಕಳೆದಂತೆ ಗೌರ‍್ಮೆಂಟ್ ಮನೆ ಮಂಜೂರಾತಿ ಆದೇಶ ಬರುವುದನ್ನೇ ಎದುರು ನೋಡುತ್ತಾ ಅವರಿವರನ್ನು ಕೇಳುತ್ತಲೇ ದ್ಯಾವಕ್ಕ ದಿನ ದೂಡುತ್ತಿದ್ದಳು. ಕೊನೆಗೊಂದು ದಿನ ಜೀವ ತಡೆಯಲಾರದೇ ಪಂಚಾಯಿತಿ ಆಫೀಸಿಗೆ ಹೋಗಿ ವಿಚಾರಿಸಬೇಕೆಂದು ಹೋದಾಗ ಅಲ್ಲಿ ಹಟ್ಟಿಯ ಬಿಳಿಲುಂಗಿ ಚಿಕ್ಕಣ್ಣ ಇದ್ದನು. ದ್ಯಾವಕ್ಕ ಬಾಯ್ದೆರೆಯುವ ಮುಂಚಿತವಾಗಿಯೇ ‘ದ್ಯಾವಕ್ಕ, ಈ ಸಾರಿ ನಿನಗೆ ಮನೆ ಮಂಜೂರಾತಿ ಆಗಿಲ್ಲ ಕಣವ್ವ, ಅದು ಟೆಕ್ನಿಕಲ್ ಸಮಸ್ಯೆಯಾಗಿದೆ. ನಿನ್ನ ಆಧಾರ್ ಕಾರ್ಡ್ ಸಂಖ್ಯೆ ಹೊಂದಾಣಿಕೆಯಾಗಿಲ್ಲಂತೆ. ಮುಂದಿನ ವರ್ಷ ನೋಡೋಣ’ ಎಂದು ನಿರುದ್ವಿಗ್ನವಾಗಿ, ಇದೇನು ಅಷ್ಟು ಮಹತ್ವದ ವಿಷಯವಲ್ಲ ಎಂಬಂತೆ ಹೇಳಿದ. ಇದರಿಂದ ಕೋಪಗೊಂಡ ದ್ಯಾವಕ್ಕ ‘ಅದ್ಯಾವ ಟೆಕ್ನಿಕ್ ಪಿಕ್ನಿಕ್ಕೋ ನಿಮ್ದು! ಆವತ್ತು ನನ್ನ ಹೆಸರು ಗ್ರಾಮಸಭೆಯಲ್ಲಿ ಓದಿ ಹೇಳಿದವನೇ ನೀನು. ಏನೇನೋ ಹೇಳಬೇಡ ಸುಮ್ಕಿರು. ನಾನು ಅಧಿಕಾರಿಗಳನ್ನೇ ಕೇಳ್ತೀನಿ’ ಎಂದು ಕುರ್ಚಿಯಲ್ಲಿ ನಿರಾಯಾಸವಾಗಿ ಕುಳಿತು ಹರಟೆ ಹೊಡೆಯುತ್ತಿದ್ದ ಅಧಿಕಾರಿಯನ್ನು ಜೋರು ಬಾಯಿಯಲ್ಲಿಯೇ ಕೇಳಿದಳು. ಅವರೂ ಸಹ ಚಿಕ್ಕಣ್ಣ ಹೇಳಿದಂತೆಯೇ ಹೇಳಿದರು. ‘ಇಲ್ಲ ಸಾರು, ಇದರಲ್ಲಿ ಏನೋ ಮೋಸ ಮಾಡೀವ್ರೀ, ನನ್ನ ಹೆಸರು ಓದಿ ಹೇಳಿದ್ದಿರಿ ಅವತ್ತು. ಯಾರೋ ಹೇಳಿದ ಮಾತು ಕಟ್ಕೊಂಡು ನನಗೆ ಈಗ ಮೋಸ ಮಾಡಿದ್ದೀರಿ’ ಎಂದು ಒಂದೇ ಸಮನೆ ವದರಾಡುತ್ತಿದ್ದ ದ್ಯಾವಕ್ಕನನ್ನು ಅಲ್ಲಿದ್ದ ಸಿಬ್ಬಂದಿ, ಅಧಿಕಾರಿಗಳು ಗದರಿಸಿ ಕಳುಹಿಸಿದರು.
ದ್ಯಾವಕ್ಕ ಪಂಚಾಯಿತಿ ಆಫೀಸಿನ ಹೊರಗೆ ನಿಂತು ಊರಿನ ಮುಖಂಡರನ್ನು, ಅಧಿಕಾರಿಗಳನ್ನು, ಹಟ್ಟಿಯ ಯಜಮಾನರನ್ನ ಮನಸೋ ಇಚ್ಛೆ ಬೈಯುತ್ತಾ, ಹಟ್ಟಿ ತಲುಪಿದಳು. ಅಲ್ಲಿ ಹಟ್ಟಿ ದೇವರಾದ ಚಿತ್ರೇದೇವರ ಗುಡಿ ಮುಂದೆ ನಿಂತು ‘ಹೇ ಚಿತ್ತಪ್ಪ ದೇವರೇ... ನಾನು ಪ್ರತಿ ಶನಿವಾರ ಉಪವಾಸವಿದ್ದು, ನೇಮ ನಿಷ್ಠೆಯಿಂದ ಬಾಯಿಗೆ ನೀರೂ ಸಹ ಹಾಕಿಕೊಳ್ಳದಂತೆ ವಾರ ಪೂಜೆಯನ್ನ ಮಾಡಿಕೊಂಡು ಬಂದಿದ್ದಕ್ಕೆ ಇದೇನಾ ಬೋಮಾನ ನೀನು ಕೊಟ್ಟಿದ್ದು. ನಿನ್ನ ಕೈಯಲ್ಲಿ ನನಗೊಂದು ಗೌರ‍್ಮೆಂಟ್ ಮನೆ ಕೊಡಿಸಲಿಕ್ಕೆ ಆಗಲಿಲ್ವವಲ್ಲಾ! ನೀನೇನು ಮಾಡಿಸಿ ಕೊಡ್ತೀಯೋ, ನೀನು ನನ್ನಂಗೇ ಗುಡಿಸಲಲ್ಲಿ ಇದೀಯಾ? ಪಾಪ ನಿನಗೇ ಒಂದು ಸಿಮೆಂಟ್ ಶೀಟಿನ ಗುಡಿಯಿಲ್ಲ! ಇನ್ನು ನನಗೇನು ಕಟ್ಟಿಸಿ ಕೊಟ್ಟೀಯಾ. ನಿನ್ನ ಕಣ್ಣೆದುರಿಗೇ ನಡೀತಲ್ಲ ಮೋಸ... ನೋಡ್ಕೊಂಡು ಸುಮ್ನೆ ಕುಂತಿದೀಯಾ. ಇನ್ನು ಬಿಡು... ನಾನು ಎಮ್ಮೆಲ್ಲೇ ಆಗ್ತೀನಿ, ಪಂಚಾಯಿತಿ ಮೆಂಬರ್ ಆಗ್ತೀನಿ. ಅವಾಗ ನಿನಗೊಂದು ಒಳ್ಳೆ ಸಿಮೆಂಟ್ ಶೀಟಿನ ಗುಡಿ ಕಟ್ಟಿಸಿಕೊಡ್ತೀನಿ...’ ಎಂದು ಮಾತನಾಡುತ್ತಲೇ ಇದ್ದಳು. ಇದನ್ನ ಕಂಡು ಹಟ್ಟಿಯ ಜನ ದ್ಯಾವಕ್ಕನನ್ನು ಸುತ್ತುವರೆದರು. ಕೆಲವರು ಅವಳನ್ನು ಸಮಾಧಾನಿಸಿ ಮನೆಯ ಕಡೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು.
ಮನದೊಳಗೆ ಕಟ್ಟಿಕೊಂಡಿದ್ದ ಆಸೆಯ ಗೋಪುರ ಜರ್ರನೇ ಸರಿದು ಕುಸಿದ ಆಘಾತಕ್ಕೆ, ನಿರಾಸೆ ಮತ್ತು ಸಿಟ್ಟು ತುಂಬಿದ ಆಕೆಯ ಮುಖ ಬಿರುಸುಗೊಂಡು ಕಣ್ಣುಗಳು ಕೆಂಪಾಗಿದ್ದವು. ಆಕೆಯ ತೂಗಾಟಕ್ಕೆ ಕಟ್ಟಿದ್ದ ಮುಡಿ ಬಿಚ್ಚಿಕೊಂಡಿತು. ಹಣೆಯಲ್ಲಿದ್ದ ಕಾಸಿನಗಲದ ಕುಂಕುಮ ಬೆವರಿಗೆ ಕದಡಿ ಹಣೆಯಮೇಲೆ ಸುರಿದಿದ್ದರಿಂದ ಊರ ಮಾರಮ್ಮನಂತೆ ಕಾಣುತ್ತಿದ್ದಳು. ತನ್ನ ಎರಡೂ ಕೈಗಳನ್ನು ಮೇಲೆತ್ತಿ ತಿರು ತಿರುಗಿ ಮಾರಿಗೊಂದು ಹೆಜ್ಜೆ ಹಾಕುತ್ತಾ ತನ್ನ ಗುಡಿಸಲಿನ ಕಡೆಗೆ ಓಡಿದಳು. ಮನೆಯೊಳಗೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ತಬ್ಬಿಕೊಂಡು ಗುಂಗಾರಿ ಹುಳದ ಕೊರತದಿಂದಾಗಿ ಗುಡಿಸಲಿನ ಕಟ್ಟಿಗೆ ಗಳಗಳಿಂದ ಬೀಳುತ್ತಿದ್ದ ಸಣ್ಣ ರವೆ ರವೆಯಂತಹ ದೂಳಿನ ಕಣಗಳನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ಆವೇಗದ ಉಸಿರಾಟದಿಂದಾಗಿ ಆಕೆಯ ದೇಹ ಮೇಲಕ್ಕೂ ಕೇಳಕ್ಕೂ ಆಡುತ್ತಿತ್ತು.
ಅಲ್ಲಿ ಸೇರಿದ್ದ ಜನರ ನಡುವಿನಿಂದ ಅವಳನ್ನೇ ನೋಡುತ್ತಿದ್ದ ಸೀರುಂಡೆಯ ಈರಜ್ಜಿ ‘ದ್ಯಾವಕ್ಕನಿಗೆ ದೆವ್ವ ಮೆಟ್ಟಿಗೊಂಡಂಗೈತಿ. ಚಿತ್ರದೇವರ ಪೂಜಾರಪ್ಪನನ್ನು ಕರೆಸಿ ದೇವರ ದೀಪ ಮುಡಿಸಿ, ಧೂಪವನ್ನ ಮೈಗೆ ಹಚ್ಚಿರಿ, ಆಮೇಲೆ ಸಂಜೆ ಮುಂದೆ ಚಿತ್ತಪ್ಪನ ಗಣೆ ಪದ ಕೇಳಿ ಏನೇನು ನೀವಾಳಿಸಿ ಹಾಕಬೇಕಂತ ಕೇಳಿರಿ’ ಎಂದು ಹೇಳತೊಡಗಿದಳು.
Cut-off box - ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಎನ್.ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಕಥೆ–ಕವಿತೆಗಳ ಮೂಲಕ ಜೀವನಕಲೆಯನ್ನು ಅಭ್ಯಸಿಸುತ್ತಿರುವ ಹೊಸ ತಲೆಮಾರಿನ ಸಾಹಿತ್ಯ ವಿದ್ಯಾರ್ಥಿಗಳ ಸಾಲಿಗೆ ಸೇರಿದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿ. ಪತ್ರಿಕೆಗಳಲ್ಲಿ ಅವರ ಕಥೆ–ಕವಿತೆಗಳು ಪ್ರಕಟಗೊಂಡಿವೆ.
Cut-off box - ಎನ್.ಆರ್.ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಅವನಿ ಬಾಪೂಜಿ ಆರ್ಯುವೇದಿಕ್ ಮೆಡಿಕಲ್ ಕಾಲೇಜು ಹಿಂಭಾಗ ತ್ಯಾಗರಾಜನಗರ ಚಳ್ಳಕೆರೆ-577522 ಚಿತ್ರದುರ್ಗ ಜಿಲ್ಲೆ. ಮೊ: 9886362320 nrt1979@gmail.com
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.