ಕೊಲಂಬೊ: ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಕಚ್ಚಾ ತೈಲ ಖರೀದಿಗಾಗಿ ಭಾರತದಿಂದ 500 ಮಿಲಿಯನ್ ಡಾಲರ್ (₹3,751 ಕೋಟಿ) ಸಾಲ ಕೋರಿದೆ.
ಶ್ರೀಲಂಕಾದಲ್ಲಿನ ಇಂಧನದ ಲಭ್ಯತೆಯನ್ನು ಮುಂದಿನ ಜನವರಿವರೆಗೆ ಮಾತ್ರ ಖಾತರಿಪಡಿಸಲು ಸಾಧ್ಯ ಎಂದು ಇಂಧನ ಸಚಿವ ಉದಯ ಗಮ್ಮನಪಿಲ ಅವರು ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲಿ ಶ್ರೀಲಂಕಾ ಭಾರತವನ್ನು ಸಾಲ ಕೇಳಿದೆ.
ಸರ್ಕಾರಿ ಸ್ವಾಮ್ಯದ, ‘ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ)’ ದೇಶದ ಎರಡು ಪ್ರಮುಖ ರಾಷ್ಟ್ರೀಯ ಬ್ಯಾಂಕ್‌ಗಳಾದ ‘ಬ್ಯಾಂಕ್ ಆಫ್ ಸಿಲೋನ್’ ಮತ್ತು ’ಪೀಪಲ್ಸ್ ಬ್ಯಾಂಕ್’ ಬಳಿ ಸುಮಾರು 3.3 ಬಿಲಿಯನ್ ಡಾಲರ್ (₹24,761 ಕೋಟಿ) ಬಾಕಿ ಉಳಿಸಿಕೊಂಡಿದೆ. ದೇಶದ ತೈಲ ವಿತರಕರು ಮಧ್ಯಪ್ರಾಚ್ಯದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಸಿಂಗಾಪುರ ಸೇರಿದಂತೆ ಇತರ ಪ್ರದೇಶಗಳಿಂದ ಸಂಸ್ಕರಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
’ಭಾರತ-ಶ್ರೀಲಂಕಾ ಆರ್ಥಿಕ ಪಾಲುದಾರಿಕೆ ವ್ಯವಸ್ಥೆ’ ಅಡಿಯಲ್ಲಿ ₹3,751 ಕೋಟಿ ನೆರವು ಪಡೆಯಲು ಸಾಧ್ಯವೇ ಎಂಬುದರ ನಿಟ್ಟಿನಲ್ಲಿ ಭಾರತದ ಹೈಕಮಿಷನರ್ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ,’ ಎಂದು ಸಿಪಿಸಿ ಅಧ್ಯಕ್ಷ ಸುಮಿತ್ ವಿಜಯ ಸಿಂಘೆ ಹೇಳಿರುವುದಾಗಿ ಸ್ಥಳೀಯ ಸುದ್ದಿ ಮಾಧ್ಯಮ ’ನ್ಯೂಸ್‌ಫರ್ಸ್ಟ್’ ವರದಿ ಮಾಡಿದೆ.
ಭಾರತದಿಂದ ನೆರವು ಲಭ್ಯವಾದರೆ ಅದನ್ನು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಲಂಕಾದ ಇಂಧನ ಕಾರ್ಯದರ್ಶಿಗಳು ಶೀಘ್ರದಲ್ಲೇ ಸಾಲ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಹಣಕಾಸು ಕಾರ್ಯದರ್ಶಿ ಎಸ್ ಆರ್ ಅತ್ತಿಗಳೆ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಲಂಕಾ ಈ ವರ್ಷ ತೈಲ ಆಮದಿಗೆ ಸಾಕಷ್ಟು ಹಣ ಖರ್ಚು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ಏಳು ತಿಂಗಳಲ್ಲಿ ದೇಶದ ತೈಲ ವೆಚ್ಚ ಶೇಕಡಾ 41.5 ರಷ್ಟು ಏರಿಕೆಯಾಗಿದ್ದು, 2 ಬಿಲಿಯನ್ ಡಾಲರ್ (₹15,007 ಕೋಟಿ)ಗೆ ತಲುಪಿದೆ.
ದೇಶದ ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳ ಮೇಲೆ ಕೋವಿಡ್ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ರಾಷ್ಟ್ರದ ಗಳಿಕೆಗೆ ಹೊಡೆತ ಬಿದ್ದಿದೆ. ಹೀಗಾಗಿ ದ್ವೀಪ ರಾಷ್ಟ್ರವು ವಿದೇಶಿ ವಿನಿಮಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹಣಕಾಸು ಸಚಿವ ಬೆಸಿಲ್ ರಾಜಪಕ್ಸೆ ಕಳೆದ ತಿಂಗಳು ಹೇಳಿದ್ದರು.
ದೇಶದ ಜಿಡಿಪಿ 2020ರಲ್ಲಿ ದಾಖಲೆಯ ಶೇ 3.6 ಕುಸಿದಿತ್ತು. ಅಲ್ಲದೆ, ಕಳೆದ ಒಂದು ವರ್ಷದಲ್ಲಿ ಶ್ರೀಲಂಕಾ ರೂಪಾಯಿ ಡಾಲರ್ ಎದುರು ಶೇ. 9 ರಷ್ಟು ಕುಸಿದಿದೆ. ಇದು ಆಮದನ್ನು ದುಬಾರಿಗೊಳಿಸಿದೆ.
ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಕಚ್ಚಾ ತೈಲ ಖರೀದಿಗಾಗಿ ಭಾರತದಿಂದ 500 ಮಿಲಿಯನ್ ಡಾಲರ್ (₹3,751 ಕೋಟಿ) ಸಾಲ ಕೋರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.