ADVERTISEMENT

ಉಕ್ರೇನ್ ಆಕ್ರಮಿಸಿದರೆ ಪುಟಿನ್‌ ಭಾರಿ ಬೆಲೆ ತೆರಬೇಕಾಗುತ್ತದೆ: ಬೈಡನ್ ಎಚ್ಚರಿಕೆ

ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.

ಎಟಿಪಿ
Published 20 ಜನವರಿ 2022, 14:26 IST
Last Updated 20 ಜನವರಿ 2022, 14:26 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರುವುದಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಬಯಸುತ್ತಿಲ್ಲ. ಆದರೆ ಅವರು ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದೇ ಆದರೆ ‘ಭಾರಿ ಬೆಲೆ‘ ತೆರಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಸಿದ್ದಾರೆ.

ತಾವು ಅಧಿಕಾರಕ್ಕೆ ಏರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧ ಸಾರುವುದಕ್ಕೆ ರಷ್ಯಾ ಇನ್ನೂ ಅಂತಿಮ ನಿರ್ಧಾರ ಕೈಗೊಂಡಂತೆ ಇಲ್ಲ, ಆದರೆ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿರುವುದಂತೂ ನಿಶ್ಚಿತ. ರಷ್ಯಾ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ರಷ್ಯಾಕ್ಕೆ ಹಣ ದೊರಕದಂತೆ ಮಾಡುವುದು ನಿಶ್ಚಿತ ಎಂದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಅವರು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಬೈಡನ್‌ ಅವರಿಂದ ಈ ಎಚ್ಚರಿಕೆಯ ಸಂದೇಶ ಹೊರಬಿದ್ದಿದೆ. ಉಕ್ರೇನ್‌ನ ಗಡಿ ಭಾಗದಲ್ಲಿ ರಷ್ಯಾವು 1 ಲಕ್ಷ ಸೈನಿಕರನ್ನು ನಿಯೋಜಿಸಿದೆ, ಶೀಘ್ರ ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ವ್ಯವಸ್ಥೆಯನ್ನೂ ಅದು ಮಾಡಿಕೊಂಡಿದೆ ಎಂದು ಬ್ಲಿಂಕೆನ್‌ ಅವರು ಉಕ್ರೇನ್‌ನ ರಾಜಧಾನಿ ಕಿವ್‌ನಲ್ಲಿ ಆರೋಪಿಸಿದ್ದರು.

ADVERTISEMENT

2024ರಲ್ಲೂ ಕಮಲಾ ಹ್ಯಾರಿಸ್‌ ಅವರೇ ಉಪಾಧ್ಯಕ್ಷೆ ಅಭ್ಯರ್ಥಿ: 2024ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಿದ್ದೇ ಆದರೆ ಕಮಲಾ ಹ್ಯಾರಿಸ್‌ ಅವರೇ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುತ್ತಾರೆ ಎಂದು ಜೋ ಬೈಡನ್‌ ಘೋಷಿಸಿದರು.

ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದು, 79 ವರ್ಷದ ಬೈಡನ್ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿದ್ದರೆ ಕಮಲಾ ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ತಾವು ಮತ್ತೆ ಸ್ಪರ್ಧಿಸುವುದಾಗಿ ಬೈಡನ್‌ ಅವರು ಹೇಳುತ್ತಿದ್ದಾರೆ.

ಸಾರಾಂಶ

ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರುವುದಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಬಯಸುತ್ತಿಲ್ಲ. ಆದರೆ ಅವರು ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದೇ ಆದರೆ ‘ಭಾರಿ ಬೆಲೆ‘ ತೆರಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.