ADVERTISEMENT

ಚೀನಾ ಜನಸಂಖ್ಯೆ ವರ್ಷದಲ್ಲಿ ಕೇವಲ 4.80 ಲಕ್ಷ ಹೆಚ್ಚಳ!

ಜನಸಂಖ್ಯೆ ಕೊರತೆ: ಆರ್ಥಿಕತೆಗೆ ಭಾರಿ ಹೊಡೆತ ಬೀಳುವ ನಿರೀಕ್ಷೆ

ನವದೆಹಲಿ (ಪಿಟಿಐ):
Published 17 ಜನವರಿ 2022, 11:01 IST
Last Updated 17 ಜನವರಿ 2022, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದಲ್ಲಿ ಜನಸಂಖ್ಯೆ 2021ರಲ್ಲಿ ಕೇವಲ 4.80 ಲಕ್ಷದಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ ಜನಸಂಖ್ಯೆಯ ಪ್ರಮಾಣ 141.26 ಕೋಟಿಯಷ್ಟಿದೆ. ಸತತ ಐದನೇ ವರ್ಷ ಜನನ ಪ್ರಮಾಣ ಭಾರಿ ಕುಸಿತ ಕಂಡಿದ್ದು, ಇದರ ಪರಿಣಾಮವಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಆತಂಕ ಎದುರಾಗಿದೆ.

2020ರ ಕೊನೆಯಲ್ಲಿ ಚೀನಾದ ಜನಸಂಖ್ಯೆ 141.20 ಕೋಟಿಯಷ್ಟಿತ್ತು. 2021ರ ಡಿಸೆಂಬರ್‌ ಅಂತ್ಯಕ್ಕೆ ಆ ಸಂಖ್ಯೆ 141.26 ಕೋಟಿ ಆಗಿದೆ. ವರ್ಷದಲ್ಲಿ ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಕೇವಲ 4.80 ಲಕ್ಷ ಎಂದು ರಾಷ್ಟ್ರೀಯ ಅಂಕಿಅಂಶ ಬ್ಯೂರೊ (ಎನ್‌ಬಿಎಸ್) ತಿಳಿಸಿದೆ.

2021ರಲ್ಲಿ ಆಗಿರುವ ಜನನ ಪ್ರಮಾಣ 1.06 ಕೋಟಿ. 2020ರಲ್ಲಿ ಅದು 1.20 ಕೋಟಿಯಾಗಿತ್ತು ಎಂದು ಹಾಂಕಾಂಗ್‌ ಮೂಲದ ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ವರದಿ ಮಾಡಿದೆ.

ADVERTISEMENT

ಆರ್ಥಿಕತೆಗೆ ಹೊರೆ: ಜನನ ಪ್ರಮಾಣ ಕಡಿಮೆಯಾದಂತೆ ಆರ್ಥಿಕತೆಗೆ ಹೊರೆ ಬೀಳುತ್ತದೆ. ದುಡಿಯುವ ವರ್ಗ ಮತ್ತು ಅವಲಂಬಿತರ ವ್ಯಕ್ತಿಗಳ ನಡುವಿನ ಅನುಮಾತದಲ್ಲಿ ಹೆಚ್ಚಳವಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಉಂಟಾಗುತ್ತದೆ. ದೇಶದಲ್ಲಿ ಸದ್ಯ 60 ವರ್ಷ ಮೇಲ್ಪಟ್ಟವರ ಸಂಖ್ಯೆ 26.4 ಕೋಟಿಗೆ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 18.7ರಷ್ಟು ಅಧಿಕವಾಗಿದೆ.

ಚೀನಾದಲ್ಲಿ 2016ರಿಂದೀಚೆಗೆ ಎರಡು ಮಕ್ಕಳನ್ನು ಹೆರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕಿಂತ ಮೊದಲು ದಶಕಗಳ ಕಾಲ ಇದ್ದ ಒಂದು ಮಗು ನೀತಿಯಿಂದಾಗಿಯೇ ದೇಶದಲ್ಲಿ ಜನಸಂಖ್ಯೆ ಸಮಸ್ಯೆ ತಲೆದೋರಿದೆ. ಇದೀಗ ಬೀಜಿಂಗ್‌, ಸಿಚುವಾನ್‌, ಜಿಯಾಂಗ್‌ಕ್ಸಿ ಮೊದಲಾದ ಪ್ರಾಂತ್ಯಗಳು ಮೂರು ಮಕ್ಕಳನ್ನು ಹೆರುವ ನಿಟ್ಟಿನಲ್ಲಿ ದಂಪತಿಗೆ ಉತ್ತೇಜನ ನೀಡುತ್ತಿದ್ದು, ಮಕ್ಕಳ ಪಾಲನೆಗಾಗಿ ಪೋಷಕರಿಗೆ ರಜೆ, ಮದುವೆ ರಜೆ, ಬಾಣಂತನ ರಜೆಯಂತಹ ಕೊಡುಗೆ ನೀಡುತ್ತಿವೆ.

ಸಾರಾಂಶ

ಚೀನಾದಲ್ಲಿ ಜನಸಂಖ್ಯೆ 2021ರಲ್ಲಿ ಕೇವಲ 4.80 ಲಕ್ಷದಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ ಜನಸಂಖ್ಯೆಯ ಪ್ರಮಾಣ 141.26 ಕೋಟಿಯಷ್ಟಿದೆ. ಸತತ ಐದನೇ ವರ್ಷ ಜನನ ಪ್ರಮಾಣ ಭಾರಿ ಕುಸಿತ ಕಂಡಿದ್ದು, ಇದರ ಪರಿಣಾಮವಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಆತಂಕ ಎದುರಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.