ಅಕ್ರಾ (ಘಾನಾ): ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆಯ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದ್ದು, ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಮತ್ತು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪ್ರೆಸ್ಟಿಯಾ-ಹುನಿ ಕಣಿವೆ ಜಿಲ್ಲೆಯ ಗಣಿಗಾರಿಕೆ ಪಟ್ಟಣವಾದ ಬೊಗೊಸೊ ಬಳಿಯ ಅಪಿಯೇಟ್‌ನಲ್ಲಿ ಗುರುವಾರ ಅಪಘಾತ ಸಂಭವಿಸಿದೆ. ಈ ವಾಹನ ಪಶ್ಚಿಮ ವಲಯದ ಚಿರಾನೊ ಚಿನ್ನದ ಗಣಿಗೆ ಸ್ಫೋಟಕಗಳನ್ನು ಸಾಗಿಸುತ್ತಿತ್ತು ಎಂದು ಜಿಲ್ಲೆಯ ಪುರಸಭೆ ಮುಖ್ಯ ಕಾರ್ಯನಿರ್ವಾಹಕ ಐಸಾಕ್ ಸಮಾನಿ ತಿಳಿಸಿದ್ದಾರೆ.
'ನಾವು 57 ಜನರನ್ನು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿದ್ದೇವೆ. ಅಪಘಾತವನ್ನು ವೀಕ್ಷಿಸಲು ಬಂದಿದ್ದ ಅನೇಕ ಜನರು ಸ್ಫೋಟಕ್ಕೆ ಸಿಲುಕಿದ್ದಾರೆ ಮತ್ತು ಹಲವರು ಮೃತಪಟ್ಟಿದ್ದಾರೆ' ಎಂದು ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಯ ಪ್ರಾದೇಶಿಕ ಮುಖ್ಯಸ್ಥ ಪ್ರಾಸ್ಪರ್ ಬಾಹ್ ಹೇಳಿದರು.
ಸ್ಫೋಟದಿಂದಾಗಿ ಸುಮಾರು 500 ಜನಸಂಖ್ಯೆಯನ್ನು ಹೊಂದಿರುವ ಅಪಿಯೇಟ್ ಗ್ರಾಮಕ್ಕೆ ಭಾರಿ ಹಾನಿಯಾಗಿದೆ. 'ಇದು ತುಂಬಾ ದುಃಖದ ಪರಿಸ್ಥಿತಿ' ಅವರು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಫೋಟದ ವಿಡಿಯೊಗಳಲ್ಲಿ ಮನೆಗಳು ಮರದ ತುಂಡುಗಳಂತೆ ಕುಸಿಯುತ್ತಿರುವುದು ಮತ್ತು ಸ್ಫೋಟ ಸಂಭವಿಸಿದ ಜಾಗದಲ್ಲಿ ಬೃಹತ್ ಕುಳಿ ಕಂಡುಬಂದಿದೆ.
'ಇದು ನಿಜವಾಗಿಯೂ ದುಃಖಕರ, ದುರದೃಷ್ಟಕರ ಮತ್ತು ದುರಂತ ಘಟನೆಯಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇನೆ' ಎಂದು ಘಾನಿಯನ್ ಅಧ್ಯಕ್ಷ ನಾನಾ ಅಡ್ಡೋ ಡಂಕ್ವಾ ಅಕುಫೊ-ಅಡ್ಡೊ ಟ್ವೀಟ್‌ನಲ್ಲಿ ತಿಳಿಸಿದ್ದಾರೆ
ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆಯ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವಾಹನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟಗೊಂಡಿದ್ದು, ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಮತ್ತು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.