ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಅಲೋಪಥಿ ಔಷಧ ಬಳಕೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್,ಯೋಗಗುರು ರಾಮದೇವ್ ಅವರಿಗೆಬುಧವಾರ ಸೂಚಿಸಿದೆ.
ಕೋವಿಡ್–19ಗೆ ಅಲೋಪಥಿ ಔಷಧ ಬಳಕೆಯ ಬಗ್ಗೆ ರಾಮದೇವ್ ಅವರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಬಿಹಾರ ಮತ್ತು ಛತ್ತೀಸಗಡದ ವಿವಿಧ ಠಾಣೆಗಳಿಗೆ ದೂರು ನೀಡಿತ್ತು. ಈ ಎಫ್‌ಐಆರ್‌ಗಳನ್ನು ಕುರಿತ ತನಿಖೆಗೆ ತಡೆ ನೀಡಬೇಕೆಂದು ಕೋರಿ ರಾಮ್‌ದೇವ್ ಅವರು ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು, ‘ಅವರು ಮೂಲತಃ ಹೇಳಿದ್ದೇನು? ಆ ಕುರಿತ ಪೂರ್ಣ ಮಾಹಿತಿಯನ್ನು ನೀವು ಇನ್ನೂ ಸಲ್ಲಿಸಲಿಲ್ಲ’ ಎಂದು ರಾಮದೇವ್ ಪರ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿತು. ಹೇಳಿಕೆಯ ಮೂಲಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ರೋಹಟಗಿ ಅವರು ತಿಳಿಸಿದ ನಂತರ, ನ್ಯಾಯಾಲಯವು ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.
‘ರಾಮದೇವ್ ಒಬ್ಬ ಸಾರ್ವಜನಿಕ ವ್ಯಕ್ತಿ, ಯೋಗ ಮತ್ತು ಆಯುರ್ವೇದದ ಪ್ರತಿಪಾದಕ. ಕಾರ್ಯಕ್ರಮವೊಂದರಲ್ಲಿ ಅವರು ತಮಗೆ ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಸಂದೇಶವನ್ನು ಓದಿದ್ದರು. ವೈದ್ಯರ ವಿರುದ್ಧ ನನಗೆ ಯಾವುದೇ ವಿರೋಧಿ ಭಾವನೆ ಇಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಬೇರೆಬೇರೆ ಕಡೆಗಳಲ್ಲಿ ಅವರ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ದೂರುಗಳನ್ನು ದೆಹಲಿಗೆ ವರ್ಗಾಯಿಸಿ, ಒಂದು ದೂರು ಎಂದು ಪರಿಗಣಿಸಬೇಕು’ ಎಂದು ರೋಹಟಗಿ ಮನವಿ ಮಾಡಿದರು.
‘ಕಳೆದ ವರ್ಷ ಪತಂಜಲಿ ಸಂಸ್ಥೆಯು ‘ಕೊರೊನಿಲ್’ ಎಂಬ ಔಷಧ ಬಿಡುಗಡೆ ಮಾಡಿತ್ತು. ಆಗ ಅಲೋಪಥಿ ವೈದ್ಯರು ರಾಮದೇವ್ ವಿರುದ್ಧ ಹರಿಹಾಯ್ದಿದ್ದರು. ಆದರೂ ರಾಮದೇವ್ ವೈದ್ಯರನ್ನು ವಿರೋಧಿಸುತ್ತಿಲ್ಲ. ಅವರೇಕೆ ಬೇರೆಬೇರೆ ಕಡೆ ಓಡಾಡಬೇಕು. ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’ ಎಂದು ರೋಹಟಗಿ ವಾದಿಸಿದರು.
ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ಸಮಾರಂಭವೊಂದರಲ್ಲಿ ರಾಮದೇವ್ ಅವರು ನೀಡಿದ್ದ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ಅದಕ್ಕೆ ವಿರೋಧ ಬಂದ ಬಳಿಕ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.