ADVERTISEMENT

‘ಪೊಲೀಸರು ಅಪರಾಧದಲ್ಲಿ ಭಾಗಿಯಾದರೆ ಕಠಿಣ ಕ್ರಮ’-ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 16:41 IST
Last Updated 19 ಜನವರಿ 2022, 16:41 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್‌ ಸಿಬ್ಬಂದಿ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿ, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಿಸಬೇಕಾದ ಹೊಣೆಗಾರಿಕೆ ಹೊಂದಿರುವ ಪೊಲೀಸರೇ ಅಪರಾಧ ಎಸಗುವುದನ್ನು ಸಹಿಸುವುದಿಲ್ಲ. ಪೊಲೀಸ್‌ ಇಲಾಖೆಯ ಸಿಬ್ಬಂದಿ ಅಪರಾಧದಲ್ಲಿ ಭಾಗಿಯಾಗಿರುವುದು ಪತ್ತೆಯಾದರೆ ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ’ ಎಂದರು.

ಮುಖ್ಯಮಂತ್ರಿಯವರ ನಿವಾಸದ ಸಮೀಪ ಭದ್ರತಾ ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್‌ ಸಿಬ್ಬಂದಿಯೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪತ್ತೆ ಮಾಡಿರುವ ಪೊಲೀಸ್‌ ಅಧಿಕಾರಿಗಳನ್ನು ಅಭಿನಂದಿಸಲಾಗುವುದು. ಅವರಿಗೆ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಇದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದರೂ ಇಲಾಖೆಯ ಕುರಿತು ಸಾರ್ವಜನಿಕರಲ್ಲಿ ಕೆಟ್ಟ ಭಾವನೆ ಬೆಳೆಯುತ್ತದೆ. ಅಂತಹ ಸಿಬ್ಬಂದಿಗಳನ್ನು ಅಮಾನತು ಮಾಡುವುದಷ್ಟೇ ಅಲ್ಲ, ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಸಾರಾಂಶ

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್‌ ಸಿಬ್ಬಂದಿ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.