ಬೆಂಗಳೂರು: ‘ಹೃದಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನದವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 50 ಹಾಸಿಗೆಗಳ ಹೃದಯ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಿಜಿಟಲ್ ಗ್ರಂಥಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸುವ ‘ಡಿಜಿಟಲ್ ಕಲಿಕಾ ನಿರ್ವಹಣಾ ವ್ಯವಸ್ಥೆ’ ಹಾಗೂ ಫಿಸಿಟಾಲ್ ಸೆಂಟರ್ ಆಫ್ ಅಕಾಡೆಮಿಕ್ಸ್‌ಗೆ ಚಾಲನೆ ನೀಡಿದರು.
‘ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಯುವಜನರಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ಒತ್ತಡ ಪ್ರಮುಖ ಕಾರಣ. ಹೃದ್ರೋಗ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಣ್ಣ ಚಿಕಿತ್ಸಾ ಘಟಕಗಳನ್ನು ರಾಜ್ಯದ ಎಲ್ಲೆಡೆ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಜಯದೇವ ಆಸ್ಪತ್ರೆಯು ಈ ಕಾರ್ಯಕ್ಕೆ ಸಹಕಾರ ನೀಡಲಿದೆ. ನಿರ್ಮಾಣಗೊಳ್ಳುವ ಘಟಕಗಳನ್ನು ವೈದ್ಯಕೀಯ ಕಾಲೇಜುಗಳೇ ನಿರ್ವಹಿಸಲಿವೆ. ಸಂಸ್ಥೆಯ ಶಾಖೆಯನ್ನು ಇನ್ನಷ್ಟು ಕಡೆ ವಿಸ್ತರಿಸಲಾಗುವುದು’ ಎಂದರು.
‘ಸಂಸ್ಥೆಯು ಕಾರ್ಪೋರೆಟ್ ಆಸ್ಪತ್ರೆಯಂತೆ ಕೆಲಸ ಮಾಡುತ್ತಿದೆ. ಎಲ್ಲ ವರ್ಗದವರಿಗೂ ವೈದ್ಯಕೀಯ ಚಿಕಿತ್ಸೆಗಳು ದೊರೆಯುತ್ತಿವೆ. ಟೆಲಿ ಮೆಡಿಸಿನ್ ವ್ಯವಸ್ಥೆಯಡಿ ವಿಳಂಬವಾಗದಂತೆ ರೋಗಿಗಳಿಗೆ ಸೇವೆಗಳನ್ನು ನೀಡಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ನೂತನ ವ್ಯವಸ್ಥೆಯು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹೆಚ್ಚಾಗಿ ತೀವ್ರನಿಗಾ ಘಟಕ, ಶಸ್ತ್ರಚಿಕಿತ್ಸಾ ಘಟಕಗಳಲ್ಲಿ ಇರುತ್ತಾರೆ. ಇದರಿಂದ ತರಗತಿಗಳಿಗೆ ಹಾಜರಾಗಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ನೂತನ ವ್ಯವಸ್ಥೆಯಡಿ ಬಿಡುವಿನ ಸಮಯದಲ್ಲಿಯೂ ನಿಗದಿತ ಪಾಠಗಳನ್ನು ಅಧ್ಯಯನ ಮಾಡಬಹುದು. ಯಾವುದೇ ಸಮಯದಲ್ಲಿ ತಮಗೆ ಬೇಕಾದ ವಿಷಯವನ್ನು ಹುಡುಕಿ, ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳ ಪ್ರಗತಿಗೆ ಇದು ಸಹಕಾರಿಯಾಗಲಿದೆ’ ಎಂದು ಹೇಳಿದರು.
1.5 ಕೋಟಿ ಮಕ್ಕಳಿಗೆ ಲಸಿಕೆ
‘ಮಕ್ಕಳ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದ ಮಕ್ಕಳಿಗೆ ನೀಡಲು ತಜ್ಞರ ಸಮಿತಿಯ (ಎಸ್‌ಇಸಿ) ಅನುಮೋದನೆ ದೊರೆತಿದೆ. ಲಸಿಕೆ ಪೂರೈಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿ 2ರಿಂದ 18 ವರ್ಷದ ಒಳಗಿನ 1.5 ಕೋಟಿ ಮಕ್ಕಳಿದ್ದಾರೆ. ಅವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆ ಅಗತ್ಯ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.
‘ಹೃದಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನದವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ 50 ಹಾಸಿಗೆಗಳ ಹೃದಯ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.