ADVERTISEMENT

ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ

ಜನರ ಆಕ್ಷೇಪ: ಪರಿಶೀಲಿಸಿ ಕ್ರಮ ಪೊಲೀಸ್ ಆಯುಕ್ತರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 20:27 IST
Last Updated 15 ಅಕ್ಟೋಬರ್ 2021, 20:27 IST
ಆಯುಧ ಪೂಜೆಯ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಗುರುವಾರ ತ್ರಿಶೂಲ ದೀಕ್ಷೆ ನೀಡಲಾಯಿತು.
ಆಯುಧ ಪೂಜೆಯ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಗುರುವಾರ ತ್ರಿಶೂಲ ದೀಕ್ಷೆ ನೀಡಲಾಯಿತು.   

ಮಂಗಳೂರು: ಆಯುಧಪೂಜೆಯ ಅಂಗವಾಗಿ ಗುರುವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡ ಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಆಯುಧ ಪ್ರದರ್ಶಿಸಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿ ಬಂದಿದೆ.

ನಗರದ ವಿಶ್ವ ಹಿಂದೂ ಪರಿಷತ್ ಕಚೇರಿ ‘ವಿಶ್ವ ಶ್ರೀ’ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಲಾಗಿದೆ. ಈ ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್‌ನ ವಿಭಾಗೀಯ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ‘ನಾವು ಬಾಂಬ್‌, ಗ್ರೆನೇಡ್‌ ದೀಕ್ಷೆ ಕೊಟ್ಟಿಲ್ಲ. ತ್ರಿಶೂಲ ದೀಕ್ಷೆ ಕೊಟ್ಟಿದ್ದೇವೆ. ಪ್ರತಿವರ್ಷ ಬಜರಂಗ ದಳದ ಹೊಸ ಕಾರ್ಯಕರ್ತರಿಗೆ ಈ ದೀಕ್ಷೆ ನೀಡಲಾಗುತ್ತಿದೆ. ಎರಡು ವರ್ಷ ಕೋವಿಡ್–19 ನಿಂದಾಗಿ ಕಾರ್ಯಕ್ರಮ ನಡೆದಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಸಾಂಕೇತಿಕವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿಲ್ಲ’ ಎಂದು ಹೇಳಿದ್ದಾರೆ.

ಪರಿಶೀಲಿಸಿ ಕ್ರಮ: ‘ಮಂಗಳೂರು ನಗರ ಸೇರಿದಂತೆ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಯಲ್ಲಿ ಹಲವು ಕಡೆ ತ್ರಿಶೂಲ ದೀಕ್ಷೆಯ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ಪರಿಶೀಲಿಸಲಾಗಿದ್ದು, ಪ್ರತಿ ವರ್ಷ ಆಯುಧಪೂಜೆಯ ಸಂದರ್ಭದಲ್ಲಿ ಸಾಂಕೇತಿಕವಾಗಿ ತ್ರಿಶೂಲ ದೀಕ್ಷೆ ಮಾಡುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾನೂನಿಗೆ ವಿರುದ್ಧವಾಗಿದ್ದರೆ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ಸಾರಾಂಶ

ಆಯುಧಪೂಜೆಯ ಅಂಗವಾಗಿ ಗುರುವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡ ಲಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಆಯುಧ ಪ್ರದರ್ಶಿಸಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.