ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಗಣರಾಜ್ಯೋತ್ಸವದ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಕಳಿಸಿದ್ದು ನಿಜ. ಆ ಟಿಪ್ಪು ಸ್ತಬ್ಧ ಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು ಕೂಡಾ ನಿಜ. ಸುನೀಲ್ ಕುಮಾರ್ ಅವರಂತಹ ಟಿಪ್ಪು ವಿರೋಧಿಗಳು ಯಾಕೆ ಆಗ ಅದನ್ನು ವಿರೋಧಿಸಲಿಲ್ಲ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥವನ್ನೇ ರಚಿಸಿದ್ದು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಪ್ರಕಟಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇರೆಯವರ ಮೇಲೆ ಆರೋಪಿಸಲು ದೊಡ್ಡಬಾಯಿ ಬಿಡುವ ಸುನೀಲ್ ಕುಮಾರ್ ಆಗ ಬಾಯಿ ಮುಚ್ಚಿಟ್ಟುಕೊಂಡಿದ್ದು ಯಾಕೆ? ಎಂದಿದ್ದಾರೆ
ಬಿಜೆಪಿ ಸರ್ಕಾರವೇ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್ ಕುರಿತ ಗ್ರಂಥ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರಂಥಾಲಯದಲ್ಲಿದೆ. ಈ ಗ್ರಂಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ಸಚಿವರಾಗಿರುವ ಸುನೀಲ್ ಕುಮಾರ್ ಗಮನಕ್ಕೆ ಇನ್ನೂ ಬಂದಿಲ್ಲವೇ? ಯಾಕೆ ಈ ಆತ್ಮವಂಚನೆ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
2017ರಲ್ಲಿ ಕರ್ನಾಟಕ ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯಯೋಧ ಎಂದು ಹಾಡಿ ಹೊಗಳಿದ್ದಾಗ ಸುನೀಲ್ ಕುಮಾರ್ ಮತ್ತು ಬಿಜೆಪಿ ನಾಯಕರು ಎಲ್ಲಿ ಅಡಗಿಕೊಂಡಿದ್ದರು? ಎಂದು ಪ್ರಶ್ನಿಸಿದ್ದಾರೆ.
ನಾರಾಯಣ ಗುರು ಸ್ತಬ್ಧಚಿತ್ರದ ವಿವಾದ ಹುಟ್ಟಿಕೊಂಡ ದಿನದಿಂದ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳ ಮೂಟೆ ಉರುಳಿಸುತ್ತಿರುವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪ್ರಹ್ಲಾದ ಜೋಷಿಯಂತಹವರು ನಾರಾಯಣ ಗುರುಗಳನ್ನು ತಾವು ಒಪ್ಪುವುದಿಲ್ಲ ಎಂಬ ಒಂದು ಸತ್ಯವನ್ನು ಯಾಕೆ ಹೇಳಬಾರದು ಎಂದಿದ್ದಾರೆ.
ನಾರಾಯಣ ಗುರುಗಳು ನನ್ನ ಸೈದ್ಧಾಂತಿಕ ಗುರುಗಳು. ಆ ಗೌರವದ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೆ. ಇದರಿಂದಾಗಿ ಗುರುಗಳ ಸಂದೇಶ ಮನೆಮನೆಗಳನ್ನು ಮುಟ್ಟುವಂತಾಗಿದೆ.
ಟಿಪ್ಪು ಸುಲ್ತಾನ್ ಮಾತ್ರವಲ್ಲ ಸಮಸಮಾಜಕ್ಕಾಗಿ ಹೋರಾಟ ನಡೆಸಿದ್ದ ಮನುಷ್ಯಪ್ರೇಮಿಗಳೆಲ್ಲರೂ ನನಗೆ ಆದರ್ಶಪ್ರಾಯರು. ಮುಖ್ಯಮಂತ್ರಿಯಾಗಿ ನಾನು ಈ ಮಹಾಪುರುಷರ ಚಿಂತನೆಗೆ ಸರ್ಕಾರದ ಯೋಜನೆಗಳ ರೂಪಕೊಟ್ಟು ಅನುಷ್ಠಾನಗೊಳಿಸಿದ್ದೆ. ನಾನು ಬಿಜೆಪಿ ನಾಯಕರಂತೆ ಆತ್ಮವಂಚಕನಲ್ಲ ಎಂದು ಟೀಕಿಸಿದ್ದಾರೆ.
ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥವನ್ನೇ ರಚಿಸಿದ್ದು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಪ್ರಕಟಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇರೆಯವರ ಮೇಲೆ ಆರೋಪಿಸಲು ದೊಡ್ಡಬಾಯಿ ಬಿಡುವ ಸುನೀಲ್ ಕುಮಾರ್ ಆಗ ಬಾಯಿ ಮುಚ್ಚಿಟ್ಟುಕೊಂಡಿದ್ದು ಯಾಕೆ? ಎಂದಿದ್ದಾರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.