ADVERTISEMENT

ಮತೀಯ ಗೂಂಡಾಗಿರಿ: ಬೊಮ್ಮಾಯಿ ಹೇಳಿಕೆಗೆ ತೀವ್ರ ಆಕ್ರೋಶ, ಬೊಮ್ಮಾಯಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:49 IST
Last Updated 13 ಅಕ್ಟೋಬರ್ 2021, 19:49 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಬೆಂಗಳೂರು: ಮತೀಯ ಗೂಂಡಾಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಬೊಮ್ಮಾಯಿ ಅವರು ಉಡುಪಿಯಲ್ಲಿ ಬುಧವಾರ ನೀಡಿರುವ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ #BommaiStopMoralPolicing ಎಂಬ ಶೀರ್ಷಿಕೆಯಡಿ ದೊಡ್ಡ ಅಭಿಯಾನವೇ ಆರಂಭವಾಗಿದೆ.

‘ಮತೀಯ ಗೂಂಡಾಗಿರಿ ನಡೆಸುತ್ತಿರುವ ಜನರನ್ನು ಬೆಂಬಲಿಸಿ ಮುಖ್ಯಮಂತ್ರಿಯವರೇ ಹೇಳಿಕೆ ನೀಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಮುಖ್ಯಮಂತ್ರಿಯವರ ಬೆಂಬಲವಿದೆ ಎಂದು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಅಂತಹ ಕೃತ್ಯಗಳು ನಡೆಯುವ ಅಪಾಯವಿದೆ’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರೆ ಲಾವಣ್ಯಾ ಬಲ್ಲಾಳ್‌, ‘ರಾಜ್ಯದ ಮುಖ್ಯಮಂತ್ರಿಯೇ ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿದ್ದಾರೆ. ಉಳಿದವರಿಂದ ಇನ್ನು ಏನನ್ನು ನಿರೀಕ್ಷಿಸಬಹುದು? ರಾಜ್ಯದ ಜನರೇ ದಯವಿಟ್ಟು ಸುರಕ್ಷಿತವಾಗಿರಿ. ಸರ್ಕಾರ ನಿಮ್ಮನ್ನು ರಕ್ಷಿಸುತ್ತದೆ ಎಂದು ಬಯಸಬೇಡಿ’ ಎಂದು ಹೇಳಿದ್ದಾರೆ.

‘ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಕೆಲಸ. ಈ ಮಾತಿನಿಂದ ಮತೀಯವಾದಿಗಳು ಪ್ರಚೋದಿತರಾಗಿ ಬೀದಿಗಿಳಿಯವುದು ಖಚಿತ. ಈ ಮಾತಿಗಾಗಿ ಬೊಮ್ಮಾಯಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.

‘ಇದೊಂದು ದುರದೃಷ್ಟಕರ ಬೆಳವಣಿಗೆ. ಇಂತಹ ಕೃತ್ಯಗಳನ್ನು ಮುಖ್ಯಮಂತ್ರಿಯೇ ಬೆಂಬಲಿಸಿದ್ದಾರೆ. ‘ಅನೈತಿಕ ಪೊಲೀಸ್‌ಗಿರಿ’ ಹೆಸರಿನಲ್ಲಿ ನಡೆಯುವ ಗುಂಪು ಹಲ್ಲೆಯನ್ನು ಸಾಮಾನ್ಯ ಎಂಬಂತೆ ಬಿಂಬಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಪ್ರತಾಪ್‌ ಕಣಗಲ್‌ ಪ್ರತಿಕ್ರಿಯಿಸಿದ್ದಾರೆ.

ಗ್ಲೆನ್ ಡಿಸೋಜ ಎಂಬುವವರು, ‘ಬೊಮ್ಮಾಯಿ ಕರ್ನಾಟಕವನ್ನು ಉತ್ತರ ಪ್ರದೇಶ ಮಾಡಲು ಹೊರಟಿದ್ದಾರೆ. ಕರ್ನಾಟಕ ಬಸವಣ್ಣನ ನಾಡು. ಶಾಂತಿಯ ತೋಟ ಎಂದೇ ಹೆಸರಾಗಿದೆ. ಆದರೆ, ಈಗ ಬೊಮ್ಮಾಯಿ ಅವರ ಆಡಳಿತದಲ್ಲಿ ಕರ್ನಾಟಕ ಉತ್ತರ ಪ್ರದೇಶವಾಗುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಹೋರಾಟಗಾರ ವಿನಯ್‌ ಶ್ರೀನಿವಾಸ, ‘ಮತೀಯ ಗೂಂಡಾಗಿರಿ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ನಾಶಮಾಡುತ್ತದೆ. ಇದು ಮತೀಯವಾದಿಗಳು ಹಾಗೂ ಫ್ಯಾಸಿಸ್ಟ್‌ ಮನಸ್ಥಿತಿಯವರು ಎಸಗುವ ಕೃತ್ಯ. ಇದರಿಂದ ಸಮಾಜ ಒಡೆದುಹೋಗುತ್ತದೆ. ನಮ್ಮ ಹಳೆಯ ಕರ್ನಾಟಕವನ್ನು ವಾಪಸು ಕೊಡಿ’ ಎಂದು ಆಗ್ರಹಿಸಿದ್ದಾರೆ.

‘ಇಂತಹ ಎಚ್ಚರಿಕೆ ಇಲ್ಲದ ಹೇಳಿಕೆಗಳು ಜನರ ರಕ್ಷಣೆಯ ಕುರಿತು ಆತಂಕ ಹುಟ್ಟಿಸುತ್ತಿವೆ. ಜನರನ್ನು ರಕ್ಷಿಸುವುದು ಸರ್ಕಾರದ ಹೊಣೆ. ಆದರೆ, ಈ ಬೇಜವಬ್ದಾರಿ ಸರ್ಕಾರ ಜನರ ನಡುವೆ ಬೆಂಕಿ ಹಚ್ಚಲು ಯತ್ನಿಸುತ್ತಿದೆ’ ಎಂದು ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಹ್ಯಾರೀಸ್‌ ನಲಪಾಡ್‌ ಪ್ರತಿಕ್ರಿಯಿಸಿದ್ದಾರೆ.

‘ಹಿಂಸೆಗೆ ಪ್ರಚೋದನೆ’

‘ನೈತಿಕತೆಯ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ’ ಎಂದು ಚಿಂತಕರು, ಹೋರಾಟಗಾರರ ಮತ್ತು ಜನಪರ ಸಂಘಟನೆಗಳ ಪ್ರಮುಖರು ಜಂಟಿ ಹೇಳಿಕೆಯಲ್ಲಿ ದೂರಿದ್ದಾರೆ.

‘ಅನೈತಿಕ ಪೊಲೀಸ್‌ ಗಿರಿ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಮುಖ್ಯಮಂತ್ರಿ ಗಟ್ಟಿ ಧ್ವನಿಯಲ್ಲಿ ಖಂಡಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ನಡೆದಿದ್ದ ಪ್ರಕರಣದಲ್ಲಿ ಕೈಗೊಂಡಂತೆ ಬಿಗಿ ನಿಲುವಿನ ನಿರೀಕ್ಷೆಯೂ ಇತ್ತು. ಆದರೆ, ಮುಖ್ಯಮಂತ್ರಿಯೇ ಈಗ ದುಷ್ಕೃತ್ಯವನ್ನು ಬೆಂಬಲಿಸಿದ್ದಾರೆ. ಅವರೊಳಗಿನ ಆಷಾಢಭೂತಿತನ ಬಯಲಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇವುಗಳೆಲ್ಲವನ್ನು ಒಳಗೊಂಡಿರುವ ಸಾಂವಿಧಾನಿಕ ನೈತಿಕತೆಯನ್ನು ಎತ್ತಿ ಹಿಡಿಯುವುದು ಮುಖ್ಯಮಂತ್ರಿಯವರ ಜವಾಬ್ದಾರಿ. ಬಸವಣ್ಣನ ನಾಡನ್ನು ದ್ವೇಷದ ನೆಲವಾಗಿ ಪರಿವರ್ತಿಸಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌, ಸಾಹಿತಿಗಳಾದ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಡಾ.ಕೆ. ಮರುಳಸಿದ್ದಪ್ಪ, ಡಾ. ವಿಜಯಾ, ಡಾ. ಸಬೀಹಾ ಭೂಮಿಗೌಡ, ವಕೀಲೆ ಭಾನು ಮುಷ್ತಾಕ್‌, ಹೋರಾಟಗಾರ್ತಿ ದು. ಸರಸ್ವತಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌. ವಿಮಲಾ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌ ಸೇರಿದಂತೆ ಹಲವರು ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.

ಮುಖ್ಯಮಂತ್ರಿಯ ಈ ಹೇಳಿಕೆಗೆ ವ್ಯಾಪಕ ವಿರೋಧ ಕೇಳಿಬಂದಿದ್ದು, ಮುಖ್ಯಮಂತ್ರಿಯೇ ಈ ರೀತಿ ಹೇಳಿಕೆ ನೀಡಿದಲ್ಲಿ, ಕರಾವಳಿಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಆತಂಕವ್ಯಕ್ತವಾಗಿದೆ. ‘ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಗೇಡು. ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ವಿವಿಧ ಪಕ್ಷಗಳ ಮುಖಂಡರು ಮತ್ತು ಸಂಘಟನೆಯವರು ಒತ್ತಾಯಿಸಿದ್ದಾರೆ.

‘ಇದು ಬಹಳ ಸೂಕ್ಷ್ಮ ವಿಷಯ. ನಮಗೆಲ್ಲರಿಗೂ ಜವಾಬ್ದಾರಿ ಇದೆ. ಕಾನೂನು ಸುವ್ಯವಸ್ಥೆಯ ಜೊತೆಗೆ ಸಾಮಾಜಿಕವಾಗಿ ಸಾಮರಸ್ಯ ಕಾಪಾಡುವುದು ಸಹ ಪ್ರತಿಯೊಬ್ಬರ ಹಾಗೂ ಸರ್ಕಾರದ ಕರ್ತವ್ಯ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಹೇಳಿದ್ದೇನು?

ಮಂಗಳೂರು: ‘ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅನೈತಿಕ ಪೊಲೀಸ್‌ಗಿರಿ ಘಟನೆಗಳ ಕುರಿತು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಅವರು, ‘ಸಾಮಾಜಿಕ ಸಾಮರಸ್ಯ ಕಾಪಾಡಲು ನಾವೆಲ್ಲರೂ ಪ್ರಯತ್ನ ಪಡಬೇಕು. ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಇದೆ’ ಎಂದರು.

ಇತ್ತೀಚೆಗೆ ನಡೆದ ಎರಡು ಘಟನೆ

ಅನೈತಿಕ ಪೊಲೀಸ್‌ಗಿರಿಯ ಎರಡು ಘಟನೆಗಳು ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿವೆ. ಒಂದೇ ವಾಹನದಲ್ಲಿ ಹೋಗುತ್ತಿದ್ದ ಬೇರೆಬೇರೆ ಧರ್ಮೀಯ ವಿದ್ಯಾರ್ಥಿಗಳನ್ನು ತಡೆದು ಹಲ್ಲೆ ನಡೆಸಿದ ಘಟನೆ ಸುರತ್ಕಲ್‌ನಲ್ಲಿ ಈಚೆಗೆ ನಡೆದಿದೆ.

ಮೂಡುಬಿದಿರೆಯಲ್ಲಿ ಅನ್ಯಧರ್ಮದ ವ್ಯಕ್ತಿಯೊಬ್ಬರ ಕಾರಿನಲ್ಲಿ ಹಿಂದೂ ಧರ್ಮದ ಮಹಿಳೆಯರು ಪ್ರಯಾಣಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿದ್ದ ಘಟನೆ ಕಳೆದ ಭಾನುವಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಮೂಡುಬಿದಿರೆ ಘಟನೆಯ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತರಿಗೆ ಕೋರ್ಟ್‌ನಿಂದ ಜಾಮೀನು ದೊರೆತಿದ್ದು, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರೇ ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಜಿ ಸಚಿವ ಅಭಯಚಂದ್ರ ಜೈನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರ ಮೂಲಕ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ತಿಳಿಸಿದ್ದರು.

ಸಾರಾಂಶ

ಮತೀಯ ಗೂಂಡಾಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.