ADVERTISEMENT

ಪ್ರಜಾವಾಣಿ ಫೋನ್‌ ಇನ್‌: ಹೊಸ ಉದ್ಯಮಗಳ ಸ್ಥಾಪನೆಗೆ ಆದ್ಯತೆ-ಮುರುಗೇಶ ಆರ್‌ ನಿರಾಣಿ

ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಸಚಿವ ಭರವಸೆ

ಕ್ಯಾಂಪಸ್‌ ಕಲರವ
Published 10 ಅಕ್ಟೋಬರ್ 2021, 19:31 IST
Last Updated 10 ಅಕ್ಟೋಬರ್ 2021, 19:31 IST
ಮುರುಗೇಶ ಆರ್‌. ನಿರಾಣಿ
ಮುರುಗೇಶ ಆರ್‌. ನಿರಾಣಿ   

ಬೆಂಗಳೂರು: ಹೊಸ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡುವ ಜತೆಗೆ ಈಗಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸಲು ಪ್ರಯತ್ನಿಸಲಾಗುವುದು. ಈ ಮೂಲಕ ಉದ್ಯಮ ವಲಯಕ್ಕೆ ಹೊಸ ಸ್ಪರ್ಶ ನೀಡುವ ಭರವಸೆಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಭಾನುವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. ಆಯ್ದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ.

*ದಾವಣಗೆರೆ ಬಳಿಯ ಜವಳಿ ಪಾರ್ಕ್‌ನಲ್ಲಿ ಹಲವು ಸಮಸ್ಯೆಗಳಿವೆ. ಇಲ್ಲಿ ಇತರ ಉದ್ಯಮಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಬೇಕು– ಮಂಜುನಾಥ, ದಾವಣಗೆರೆ

ADVERTISEMENT

ಜವಳಿ ಪಾರ್ಕ್‌ ಸಮಸ್ಯೆಯನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು. ಜತೆಗೆ, ದಾವಣಗೆರೆಯ ಬಾತಿ ಹತ್ತಿರ ಹೆಚ್ಚುವರಿಯಾಗಿ 400 ಎಕರೆ ಪ್ರದೇಶ ಖರೀದಿಸಲಾಗುತ್ತಿದೆ. ಕರೂರಿನಲ್ಲೂ ಕೈಗಾರಿಕೆಗಳ ಸ್ಥಾಪನೆಗೆ 300 ಎಕರೆ ನೀಡಲು ರೈತರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಸಗೊಬ್ಬರ ಕಾರ್ಖಾನೆಯನ್ನು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

*ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ಸಿಮೆಂಟ್‌ ಕಾರ್ಖಾನೆ ಸ್ಥಾಪಿಸುವ ಉದ್ದೇಶವಿದೆಯೇ? ಪ್ರಭಾಕರ್‌, ಜೇವರ್ಗಿ.

ಕಲಬುರಗಿ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಹೇರಳವಾಗಿ ಲಭ್ಯವಿದೆ. ಸುಮಾರು 5.80 ಕೋಟಿ ಟನ್‌ನಷ್ಟು ಸುಣ್ಣದ ಕಲ್ಲು ದೊರೆಯಲಿದೆ. 2022ರ ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುತ್ತಿದ್ದೇವೆ. ಆ ಸಂದರ್ಭದಲ್ಲಿ ಸಿಮೆಂಟ್‌ ಕಾರ್ಖಾನೆಗಳನ್ನು ಸ್ಥಾಪಿಸುವಂತೆ ಹೂಡಿಕೆದಾರರಿಗೆ ಮನವರಿಕೆ ಮಾಡಲಾಗುವುದು.

*ನಾನು ಅಂಗವಿಕಲ. ಧಾರವಾಡದ ಮುಮ್ಮಿಗಟ್ಟಿಯಲ್ಲಿ ಕಾಟನ್‌ ಜಿನ್ನಿಂಗ್‌ ಕಾರ್ಖಾನೆ ಸ್ಥಾಪಿಸಲು ಅರ್ಜಿ ಹಾಕಿದ್ದೇನೆ. ಸಾಮಾನ್ಯ ವರ್ಗದ ಅಂಗವಿಕಲರಿಗೆ ಹೆಚ್ಚಿನ ಸಹಾಯ ಧನ ಕಲ್ಪಿಸಬೇಕು. – ರಾಮನಾಥ್‌, ಧಾರವಾಡ

ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ನಿಮ್ಮ ಉತ್ತಮ ಸಲಹೆಯನ್ನು ಪರಿಗಣಿಸಲಾಗುವುದು.

 *ಅನುಮತಿ ಪಡೆದು ಗ್ರಾನೈಟ್‌ ಉದ್ಯಮದಲ್ಲಿ ತೊಡಗಿದ್ದೇನೆ. ಈಗ ಭೂ ಪರಿವರ್ತನೆ ಮಾಡಿಕೊಳ್ಳುವುದು ಕಡ್ಡಾಯವೇ?– ಪ್ರಕಾಶ್‌, ದೇವನಹಳ್ಳಿ.

ಭೂ ಪರಿವರ್ತನೆ ಮಾಡಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ.

*ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳೆಯರಿಗೆ ಆದ್ಯತೆ ದೊರೆಯಲಿದೆಯೆ?  ವಿಜಯಲಕ್ಷ್ಮಿ, ಕಲಬುರಗಿ

ಕಲಬುರಗಿಯಲ್ಲಿ ಜವಳಿ ಪಾರ್ಕ್‌ ಮಾಡುವ ಉದ್ದೇಶ ಇದೆ. ವಿಮಾನ ನಿಲ್ದಾಣದ ಸಮೀಪ ಒಂದು ಸಾವಿರ ಎಕರೆ ಸ್ವಾಧೀನ ಮಾಡಿಕೊಳ್ಳುತ್ತಿದ್ದೇವೆ. ಮಹಿಳೆಯರಿಗೂ ಒಂದು ಕೈಗಾರಿಕಾ ಪಾರ್ಕ್‌ ಮಾಡಿದ್ದೇವೆ. ‘ಕಲಬುರಗಿ ಮುನ್ನೋಟ–2050’ ಎನ್ನುವ ಯೋಜನೆ ರೂಪಿಸಲಾಗುತ್ತಿದೆ. ನಮ್ಮ ಕನಸಿನ ಕಲಬುರಗಿ ಭವಿಷ್ಯದಲ್ಲಿ ಹೇಗೆ ಇರಬೇಕು ಎನ್ನುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದೆ.

*ನೇಕಾರಿಕೆ ಮಾಡುತ್ತಿದ್ದೇನೆ. ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. – ಜಗದೀಶ್‌, ಇಳಕಲ್‌ ಬಾಗಲಕೋಟೆ,

ಜವಳಿ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವು ಇದೆ. ನೇಕಾರ ಸಂಘಟನೆಗಳ ಮುಖಂಡರ ಜತೆ ಇಳಕಲ್‌ನಲ್ಲಿ ಶೀಘ್ರ ಚರ್ಚಿಸುತ್ತೇನೆ. ಅಲ್ಲಿ ಜವಳಿ ಪಾರ್ಕ್‌ ಮಾಡುವ ಚಿಂತನೆಯೂ ಇದೆ.

*lಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಉದ್ದೇಶ ಇದೆಯೇ? –ಮಹೇಶ್‌ ಚಿಂಚೋಳಿ, ಕಲಬುರಗಿ

ಒಂದು ವರ್ಷದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸುವ ಉದ್ದೇಶ ಇದೆ. ಹೂಡಿಕೆ ಮಾಡುವವರನ್ನು ಹುಡುಕುತ್ತಿದ್ದೇವೆ. ಈಗಾಗಲೇ ಒಬ್ಬರು ಅರ್ಜಿ ಹಾಕಿದ್ದಾರೆ.

*ಕಬ್ಬು ಸಕಾಲಕ್ಕೆ ಕಾರ್ಖಾನೆಗೆ ಹೋಗುತ್ತಿಲ್ಲ. ಪರಿಹಾರ ರೂಪಿಸಿ. ಪ್ರಭು, ಪಾಂಡವಪುರ

ಪಾಂಡವಪುರ ಸಕ್ಕರೆ ಕಾರ್ಖಾನೆ ಸಾಮರ್ಥ್ಯ 2,500 ಟನ್‌ವಿತ್ತು. ಈಗ ಅದನ್ನು 5,000 ಟನ್‌ ಸಾಮರ್ಥ್ಯಕ್ಕೆ ಹೆಚ್ಚಿಸುತ್ತಿದ್ದೇವೆ. ಕಾರ್ಖಾನೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿ ರೈತರದ್ದು ಸಹ ಆಗಿದೆ. ಪ್ರತಿ 10 ದಿನಕ್ಕೆ ಹಣ ಪಾವತಿಸುತಿದ್ದೇವೆ. ಆದರೆ, ರೈತ ಸಂಘದವರು ಮತ್ತು ಕೆಲವರು ಅನುಕೂಲವಾಗಿಲ್ಲ ಎಂದು ಹೇಳುತ್ತಿದ್ದಾರೆ. ನೀವು ಹೋರಾಟಗಾರರ ಸಲಹೆ ಪಡೆಯಿರಿ. ಅವರ ಸಲಹೆಯಂತೆ ಮುಂದುವರಿಯೋಣ.

*ಜಿಂದಾಲ್‌ ಕಾರ್ಖಾನೆಯಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಭೂಮಿ ಕಳೆದುಕೊಂಡ ಸಂತ್ರಸ್ತ ರೈತರ ಮಕ್ಕಳಿಗೆ ಉದ್ಯೋಗ ನೀಡುತ್ತಿಲ್ಲ. ಹಲವು ಬಾರಿ ಈ ಬಗ್ಗೆ ದೂರು ನೀಡಲಾಗಿದೆ. – ಕರಿಬಸಪ್ಪ, ತೋರಣಗಲ್‌, ಬಳ್ಳಾರಿ

ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ಶೇಕಡ 85ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಈ ಬಗ್ಗೆ ಸಮಸ್ಯೆ ಅಥವಾ ದೂರುಗಳಿದ್ದರೆ ನನಗೆ ಸಂಪೂರ್ಣ ವಿವರಗಳನ್ನು ಕಳುಹಿಸಿ.

ಸೆಮಿಕಂಡಕ್ಟರ್‌ ವಲಯದಲ್ಲಿ ₹10 ಸಾವಿರ ಕೋಟಿ ಹೂಡಿಕೆ

ರಾಜ್ಯದಲ್ಲಿ ಸೆಮಿಕಂಡಕ್ಟರ್‌ ಉದ್ಯಮಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ₹10 ಸಾವಿರ ಕೋಟಿ ಹೂಡಿಕೆಯಾಗಲಿದ್ದು, ಒಂದು ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ಈ ಉದ್ಯಮಗಳನ್ನು ಹುಬ್ಬಳ್ಳಿ–ಧಾರವಾಡ, ಮೈಸೂರು, ಕಲಬುರಗಿ ಮುಂತಾದ ನಗರಗಳಲ್ಲಿ ಸ್ಥಾಪಿಸಲಾಗುವುದು. ಸರ್ಕಾರದಿಂದ ಈ ಉದ್ಯಮಕ್ಕೆ ಹಲವು ರಿಯಾಯಿತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ವಿಎಸ್‌ಐಎಲ್‌ ಪುನರಾರಂಭಕ್ಕೆ ಕ್ರಮ

‘ಕೇಂದ್ರ ಸರ್ಕಾರದ ವಿಎಸ್‌ಐಎಲ್‌ ಕಾರ್ಖಾನೆ ಮರು ಆರಂಭಿಸುವ ಬಗ್ಗೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಧರ್ಮೇಂದ್ರ ಪ್ರಧಾನ್‌ ಅವರ ಜತೆ ಚರ್ಚಿಸಲಾಗಿದೆ’ ಎಂದು ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ಶಿವಮೊಗ್ಗದ ಹಾರನಹಳ್ಳಿಯ ಶಿವಾನಂದಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಭದ್ರಾವತಿಯ ವಿಎಸ್‍ಐಎಲ್‍ ಆರಂಭಿಸಲು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸಹ ಅಪಾರ ಆಸಕ್ತಿ ವಹಿಸಿದ್ದಾರೆ. ರಾಜ್ಯ ಸರ್ಕಾರದಿಂದಲೂ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಶೀಘ್ರ ಕಾಯಕಲ್ಪ ನೀಡಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

***

ಖಾಸಗಿ ಶಾಲೆ ಶಿಕ್ಷಕರ ಬದುಕು ಸಂಕಷ್ಟದಲ್ಲಿದೆ. ನಮಗೆ ಬೇರೆ ಉದ್ಯೋಗವೂ ಗೊತ್ತಿಲ್ಲ. ಅವರ ಪರಿಸ್ಥಿತಿ ಅಯೋಮಯವಾಗಿದೆ. ಮಹಿಳೆಯರು ಉದ್ಯಮ ವಲಯದಲ್ಲೂ ಹಿಂದುಳಿದಿದ್ದಾರೆ.

–ರತ್ನಮ್ಮ, ಕಾರಟಗಿ, ಕೊಪ್ಪಳ.

ಮಹಿಳೆಯರು ಯಾವ ರೀತಿಯಲ್ಲಿ ಉದ್ಯಮಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಕೈಗಾರಿಕೆ ಇಲಾಖೆ ವತಿಯಿಂದ ಮಾರ್ಗದರ್ಶನ ಮತ್ತು ನೆರವು ನೀಡಲಾಗುವುದು. ಟೈಲರಿಂಗ್‌, ಹೈನುಗಾರಿಕೆ, ಮನೆಯಲ್ಲೇ ವಿವಿಧ ಉತ್ಪನ್ನಗಳನ್ನು ತಯಾರಿಸುವುದು ಸೇರಿದಂತೆ ಸಣ್ಣ ಮತ್ತು ಬೃಹತ್‌ ಉದ್ಯಮಗಳನ್ನು ಸ್ಥಾಪಿಸಬಹುದು.

ಸಾರಾಂಶ

ಹೊಸ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡುವ ಜತೆಗೆ ಈಗಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸಲು ಪ್ರಯತ್ನಿಸಲಾಗುವುದು. ಈ ಮೂಲಕ ಉದ್ಯಮ ವಲಯಕ್ಕೆ ಹೊಸ ಸ್ಪರ್ಶ ನೀಡುವ ಭರವಸೆಯನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.