ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಗಳವೂ ಇಲ್ಲ. ಗುಂಪುಗಳೂ ಇಲ್ಲ. ಉಗ್ರಪ್ಪ ಮತ್ತು ಸಲೀಂ ನಡುವಿನ ಮಾತುಕತೆಗೆ ಸಂಬಂಧಿಸಿದಂತೆ ಕೆ. ರೆಹಮಾನ್ ಖಾನ್ ಅವರ ನೇತೃತ್ವದ ಶಿಸ್ತು ಸಮಿತಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವ
ವರು, ಜೈಕಾರ ಹಾಕುವವರು, ಕಲ್ಲು ಎಸೆಯುವ
ವರು, ಮೊಟ್ಟೆ ಎಸೆಯುವವರು, ಧಿಕ್ಕಾರ ಕೂಗುವ
ವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ’ ಎಂದರು.
‘ಅವರು ಮಾತನಾಡಿಲ್ಲ (ಉಗ್ರಪ್ಪ ಮತ್ತು ಸಲೀಂ) ಎಂದು ನಾನು ಹೇಳಲು ಹೋಗುವುದಿಲ್ಲ. ನೀವು (ಮಾಧ್ಯಮ) ತೋರಿಸಿರುವುದು ನಿಜ. ಆದರೆ, ಅದು ಇಬ್ಬರ ನಡುವಣ ಆಂತರಿಕ ಮಾತುಕತೆ. ಅಧಿಕೃತ ಹೇಳಿಕೆ ಅಲ್ಲ. ಈ ಬಗ್ಗೆ ಉಗ್ರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ’ ಎಂದರು.
‘ನಾನು ಮಾಧ್ಯಮಗಳ ತಪ್ಪು ಎಂದು ಯಾಕೆ ಹೇಳಲಿ? ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ, ಯಡಿಯೂರಪ್ಪ ಹಾಗೂ ಅನಂತಕುಮಾರ್ ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅದೇ ರೀತಿ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿರುವುದನ್ನೂ ತೋರಿಸಿದ್ದೀರಿ. ಅದೇ ರೀತಿ ಈಗ ತೋರಿಸಿದ್ದೀರಿ. ಆದರೆ, ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು.
‘ಪರ್ಸೆಂಟೇಜ್ ವಿಚಾರದಲ್ಲಿ ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಕೇಸ್ ದಾಖಲಿಸಿದರೂ ಒಳ್ಳೆಯದೇ. ಪರ್ಸೆಂಟೇಜ್ ಬಗ್ಗೆ ನಮ್ಮ ಪಕ್ಷದಲ್ಲಿ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಬಿಜೆಪಿ ನಾಯಕರ ಶೇ 30 ಕಮಿಷನ್ ಬಗ್ಗೆ ಎಚ್. ವಿಶ್ವನಾಥ್ ಮಾತನಾಡಿದ್ದಾರೆ. ಮಾಜಿ ಸಚಿವರೊಬ್ಬರು ಬೆಡ್ ರೂಮಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗ ಅವರ ಬಳಿ ಹೋಗಿ ಯಾಕೆ ಪ್ರಶ್ನೆ ಮಾಡಲಿಲ್ಲ’ ಎಂದೂ ಶಿವಕುಮಾರ್ ಪ್ರಶ್ನಿಸಿದರು.
ನಮ್ಮದು ಶಿಸ್ತಿನ ಪಕ್ಷ, ಮಾಧ್ಯಮದಲ್ಲಿ ಬರುತ್ತಿರುವ ವಿಡಿಯೊಗೆ ನನಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆಂತರಿಕವಾಗಿ ಮಾತನಾಡಿದವರ ವಿರುದ್ಧ ಪಕ್ಷದ ಶಿಸ್ತು ಪಾಲನಾ ಸಮಿತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ನಾನು ಯಾವುದೇ ಕಮೀಶನ್ ವಿಚಾರದಲ್ಲಿ ಭಾಗಿಯಾಗಿಲ್ಲ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.