ಚಳಗೇರಿ: ಉಕ್ರೇನ್ ನಲ್ಲಿ ಯುದ್ಧ ಮುಂದುವರಿದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ನವೀನ ಅವರ ಪಾರ್ಥಿವ ಶರೀರವನ್ನು ತವರೂರಿಗೆ ತಂದಿದ್ದೇವೆ . ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.
ಚಳಗೇರಿ ಗ್ರಾಮದಲ್ಲಿ ಸೋಮವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನವೀನ್ ಮೃತದೇಹ ತಾಯ್ನಾಡಿಗೆ ತರುವುದು ಹೇಗೆ ಎನ್ನುವ ಆತಂಕವಿತ್ತು. ಸತತ 20 ದಿನ ಪ್ರಯತ್ನಪಡಲಾಗಿದೆ. ನಿತ್ಯ ಅವರ ತಂದೆ ತಾಯಿಗಳನ್ನು ಸಂತೈಸುವ ಕೆಲಸವನ್ನು ನಿರಂತರ ಮಾಡಿದ್ದೇವೆ. ಕೊನೆಗೂ ನವೀನ್ ಪಾರ್ಥಿವ ಶರೀರ ಬಂದಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಕೇಂದ್ರದ ಮೇಲೆ ಸತತ ಒತ್ತಡ ತಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಪ್ರಯತ್ನಿಸಿದರು.
ಆದರೆ, ನವೀನ ಅವರನ್ನು ಶವದ ರೂಪದಲ್ಲಿ ತಂದಿರುವುದಕ್ಕೆ ದುಃಖವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಗ್ರಾಮಸ್ಥರು ಸಾಲು - ಸಾಲಾಗಿ ಬಂದು ನವೀನ ಅವರ ಅಂತಿಮ ದರ್ಶನ ಪಡೆದರು. ನವೀನ ಅವರ ಸ್ನೇಹಿತರು, ಸಹಪಾಠಿಗಳು ಕಂಬನಿ ಮಿಡಿದರು.
ಗ್ರಾಮದಲ್ಲಿ ಅಂತಿಮ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಅಂತಿಮ ದರ್ಶನದ ನಂತರ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ನವೀನ ಅವರ ದೇಹವನ್ನು ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.