ADVERTISEMENT

ಪ್ರಜಾವಾಣಿ ಸಂವಾದ: ‘ಬೆಲೆ ಏರಿಕೆಗೆ ಲೂಟಿ, ನೀತಿಯೇ ಕಾರಣ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST
ಎಂ.ರಮೇಶ್, ಕೆ.ನೀಲಾ, ರಮೇಶ್ ಬಾಬು, ವಿಶ್ವನಾಥ ಭಟ್
ಎಂ.ರಮೇಶ್, ಕೆ.ನೀಲಾ, ರಮೇಶ್ ಬಾಬು, ವಿಶ್ವನಾಥ ಭಟ್   

ಬೆಂಗಳೂರು: ‘ಮಧ್ಯವರ್ತಿಗಳು, ಕಾರ್ಪೊರೇಟ್‌ ಕಂಪನಿಗಳು ಲೂಟಿ ಮಾಡುತ್ತಿರುವುದೇ ಬೆಲೆ ಏರಿಕೆಗೆ ಕಾರಣ’ ಎಂದು ಕಾಂಗ್ರೆಸ್, ಜನವಾದಿ ಸಂಘಟನೆಗಳ ಪ್ರತಿನಿಧಿಗಳು ಪ್ರತಿಪಾದಿಸಿದರೆ, ‘ಬೆಲೆ ಏರಿಕೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರವೇ ಕಾರಣ. 2024ರ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಬಿಜೆಪಿ ಪ್ರತಿನಿಧಿ ಆಶಾಭಾವನೆ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಶನಿವಾರ ಹಮ್ಮಿಕೊಂಡಿದ್ದ ‘ಬೆಲೆ ಏರಿಕೆ ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ?’ ಎಂಬ ವಿಷಯ ಕುರಿತ ಸಂವಾದದಲ್ಲಿ  ಈ ರೀತಿಯ ಅಭಿ‍ಪ್ರಾಯಗಳು ವ್ಯಕ್ತವಾದವು.

ಪೂರ್ಣ ಸಂವಾದ ವೀಕ್ಷಿಸಲು: facebook.com/prajavani.net

ADVERTISEMENT

‘ಬಂಡವಾಳಶಾಹಿಪರ ನೀತಿ ಕಾರಣ’

ಆರ್ಥಿಕ ನೀತಿ, ಬಂಡವಾಳಶಾಹಿ ಪರ ನೀತಿಯಿಂದ ಬೆಲೆ ಏರಿಕೆ ನಿಯಂತ್ರಣ ಆಗುತ್ತಿಲ್ಲ. ಸರ್ಕಾರ ಉದ್ದೇಶಪೂರ್ವವಾಗಿ ಮಧ್ಯವರ್ತಿಗಳು, ಏಜೆನ್ಸಿಗಳು, ಕಾರ್ಪೊರೇಟ್‌ಗಳಿಗೆ ಲಾಭ ಮಾಡಲು ಹೊರಟಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿಯಲು ಇದೇ ಕಾರಣ. ಆಹಾರ ಉತ್ಪಾದನೆಯನ್ನು ನೇರವಾಗಿ ತಲುಪಿಸುವ ವ್ಯವಸ್ಥೆ ಇಲ್ಲ. ಬಂಡವಾಳಶಾಹಿಗಳ ಮುಖ್ಯ ಉದ್ದೇಶವೇ ಲಾಭ ಗಳಿಕೆ. ಬೆಲೆ ಏರಿಸದಿದ್ದರೆ ಲಾಭ ಹೇಗೆ ಸಾಧ್ಯ? 1990ರವರೆಗೆ ತೈಲ ನೀತಿ ಇತ್ತು. ಈಗ ಮಾತೆತ್ತಿದರೆ ಕೋವಿಡ್‌, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಕಾರಣ ಎಂದು ಸರ್ಕಾರ ಕಾರಣ ನೀಡುತ್ತಿದೆ. ಬೆಲೆ ಏರಿಕೆ ನಿಯಂತ್ರಣ ಆಗಬೇಕಾದರೆ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಬೇಕು. ಉದ್ಯೋಗ ಸೃಷ್ಟಿ ಮಾಡಬೇಕು. ಕೊಳ್ಳುವ ಶಕ್ತಿ ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೆ ವಿಸ್ತರಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು.

- ಕೆ.ನೀಲಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

***

‘ಸರ್ಕಾರ ನೈತಿಕ ಹೊಣೆ ಹೊರಬೇಕು’

ಹಸಿವಿನ ಸೂಚ್ಯಂಕದಲ್ಲಿ ಭಾರತ ಇನ್ನಷ್ಟು ಕುಸಿದಿದೆ. ಇದರ ಹೊಣೆಯನ್ನು ಸರ್ಕಾರ ಹೊತ್ತುಕೊಳ್ಳಬೇಕು. ಕೇಂದ್ರ ಸರ್ಕಾರದ ನೀತಿ, ನಿಯಮ, ಆಡಳಿತ ವೈಫಲ್ಯಗಳಿಂದ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿದೆ. ಆದಾಯದ ಮೂಲ ಕಡಿಮೆಯಾಗಿ, ಕೊಳ್ಳುವ ಶಕ್ತಿಯೂ ಕಡಿಮೆಯಾದಾಗ ಜೀವನ ದುರ್ಬರ ಆಗುತ್ತದೆ. ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾದಿ ತಪ್ಪಿದೆ. ಉದ್ದೇಶಿತ ರೈತ ಕಾಯ್ದೆಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ನೆರವು, ಖಾಸಗೀಕರಣದ ಪಿತೂರಿಯಿಂದ ಸಣ್ಣ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರಕ್ಕೆ ನೈತಿಕ ಹೊಣೆ ಇರುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಕಡಿಮೆಯಾದರೂ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ.‌ ಸರ್ಕಾರದ ತಪ್ಪುಗಳಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಆದರೆ, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕೋವಿಡ್‌ ಕಾರಣ ಹೇಳುತ್ತಾರೆ.

- ರಮೇಶ್‌ ಬಾಬು, ರಾಜ್ಯ ಕಾಂಗ್ರೆಸ್‌ ವಕ್ತಾರ

***

‘ಇ– ಕಾಮರ್ಸ್‌ನಿಂದ ಸಂಕಷ್ಟ’

ಉತ್ಪನ್ನಗಳ ಉತ್ಪಾದನೆ ಕಡಿಮೆ ಆಗಿದೆ. ವಿದ್ಯುತ್‌ ದರ, ತೈಲ ಬೆಲೆ ಹೆಚ್ಚಳವಾಗಿದೆ. ಬೆಲೆ ಏರಿಕೆಗೆ ಇದೂ ಕಾರಣವಾಗಿದೆ. 2019–20ಕ್ಕೆ ಹೋಲಿಸಿದರೆ, ಅಗತ್ಯ ವಸ್ತುಗಳ ಬೆಲೆ ಕಡಿಮೆಯೇ ಇದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬೆಳೆ ಇಲ್ಲ. ಉತ್ಪಾದನೆ ಹೆಚ್ಚಳವಾದರೆ ಬೆಲೆ ಕಡಿಮೆ ಆಗುತ್ತದೆ. ಎಪಿಎಂಸಿಯಲ್ಲಿ ಯಾರ್ಡ್‌ ಒಳಗೆ ವ್ಯಾಪಾರ ಮಾಡುವವರು ಸೆಸ್‌ ನೀಡಬೇಕಾಗಿದೆ. ಆದರೆ, ಯಾರ್ಡ್‌ ಹೊರಗೆ ಮಾರಾಟ ಮಾಡುವವರಿಂದ ಸೆಸ್‌ ಸಂಗ್ರಹಿಸಲಾಗುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಇ– ಕಾಮರ್ಸ್‌ ಭರಾಟೆ ಚಿಲ್ಲರೆ ವರ್ತಕರ ಮೇಲೆ ಭಾರಿ ಪರಿಣಾಮ ಬೀರಿದೆ. ಬಹುರಾಷ್ಟ್ರೀಯ ಕಂಪನಿಗಳು ಹೊಲಗಳಿಗೇ ಹೋಗಿ ಉತ್ಪನ್ನಗಳನ್ನು ಖರೀದಿಸುತ್ತಿವೆ. ಕಾರ್ಪೊರೇಟ್‌, ಎಂಎನ್‌ಸಿ ಕಂಪನಿಗಳು, ಇ– ಕಾಮರ್ಸ್‌ಗಳಿಗೆ ರಾಜ್ಯ– ಕೇಂದ್ರ ಸರ್ಕಾರಗಳು ರತ್ನ ಕಂಬಳಿ ಹಾಸಿದೆ. ದೊಡ್ಡಮಟ್ಟದಲ್ಲಿ ವ್ಯವಹಾರ ಮಾಡುವ ಇಂಥ ಕಂಪನಿಗಳನ್ನು ನಿಯಂತ್ರಿಸಬೇಕಿದೆ. ಅವು ಅವೈಜ್ಞಾನಿಕವಾಗಿ ಬೆಲೆ ಪೈಪೋಟಿಗಿಳಿಯುತ್ತಿವೆ. ಇದರಿಂದ ಗುಲಾಮಗಿರಿಗೆ ಒಳಗಾಗುವ ಸ್ಥಿತಿ ನಿರ್ಮಾಣ ಆಗಿದೆ.‌

- ಎಂ. ರಮೇಶ್‌, ಜಂಟಿ ಕಾರ್ಯದರ್ಶಿ, ಧಾನ್ಯ ವರ್ತಕರ ಸಂಘ

***

‘ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ’

ಬೆಲೆ ಏರಿಕೆ ಭಾರತಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಆಗಿದೆ. ನಮ್ಮಲ್ಲಿಯೇ ಉತ್ಪನ್ನಗಳನ್ನು ಬೆಳೆದರೆ ಬೆಲೆಯಲ್ಲಿ ಸಂಪೂರ್ಣ ಹತೋಟಿ ಸಾಧ್ಯ. ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳು 2014ರಲ್ಲಿಯೂ ನಮಗಿಂತ ಮೇಲೆ ಇದ್ದವು. ಆಹಾರ ಭದ್ರತಾ ಕಾಯ್ದೆ 2014ರಲ್ಲಿ ಕೇವಲ 11 ರಾಜ್ಯಗಳಲ್ಲಿ ಮಾತ್ರ ಇತ್ತು. ಬಿಜೆಪಿ ಸರ್ಕಾರ ಅದನ್ನು 29 ರಾಜ್ಯಗಳು 8 ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. ಯುಪಿಎ ಸರ್ಕಾರ ಅವಧಿಯಲ್ಲಿಯೂ ಬೆಲೆ ಏರಿಕೆ ಆಗಿದೆ. ಬೆಲೆ ಏರಿಕೆಗೆ ಮೋದಿ ಸರ್ಕಾರ ಕಾರಣ ಎಂದು ಗೂಬೆ ಕೂರಿಸುವುದು ಸರಿಯಲ್ಲ. ಅಗತ್ಯ ವಸ್ತುಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾದರೆ ಮಾತ್ರ ಬೆಲೆ ನಿಯಂತ್ರಣ ಸಾಧ್ಯ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ತೆರಿಗೆ ಸೋರಿಕೆಗೆ ಕಡಿವಾಣ ಬಿದ್ದಿದೆ. ಅಗತ್ಯ ವಸ್ತುಗಳು ಮೇಲಿನ ನಿಯಂತ್ರಣ ಮುಂದೆಯೂ ಸರ್ಕಾರದ ಹಿಡಿತದಲ್ಲೇ ಇರಲಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣ ಖಚಿತ.

- ವಿಶ್ವನಾಥ ಭಟ್, ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸದಸ್ಯ‌ 

ಸಾರಾಂಶ

‘ಮಧ್ಯವರ್ತಿಗಳು, ಕಾರ್ಪೊರೇಟ್‌ ಕಂಪನಿಗಳು ಲೂಟಿ ಮಾಡುತ್ತಿರುವುದೇ ಬೆಲೆ ಏರಿಕೆಗೆ ಕಾರಣ’ ಎಂದು ಕಾಂಗ್ರೆಸ್, ಜನವಾದಿ ಸಂಘಟನೆಗಳ ಪ್ರತಿನಿಧಿಗಳು ಪ್ರತಿಪಾದಿಸಿದರೆ, ‘ಬೆಲೆ ಏರಿಕೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರವೇ ಕಾರಣ. 2024ರ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಬಿಜೆಪಿ ಪ್ರತಿನಿಧಿ ಆಶಾಭಾವನೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.