ADVERTISEMENT

ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ: ಎಚ್‌.ಡಿ ಕುಮಾರಸ್ವಾಮಿ

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 11 ಅಕ್ಟೋಬರ್ 2021, 7:43 IST
Last Updated 11 ಅಕ್ಟೋಬರ್ 2021, 7:43 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ‘ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ’ ಎಂದಿದ್ದಾರೆ. 

ಈ ಕುರಿತು ಸೋಮವಾರ ಸಾಮಾಜಿಕ ತಾಣಗಳಲ್ಲಿ ಪೊಸ್ಟ್‌ ಪ್ರಕಟಿಸಿರುವ ಅವರು, ‘ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಸಂಸದರಿದ್ದ ವೇದಿಕೆಯಲ್ಲೇ ಕನ್ನಡವನ್ನು ಮೂರನೇ ಸ್ಥಾನಕ್ಕಿಳಿಸದಿರುವುದು ಅಕ್ಷಮ್ಯ’ ಎಂದಿದ್ದಾರೆ.

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ, ಇಂಗ್ಲೀಷ್ʼಗೆ ದ್ವಿತೀಯ ಸ್ಥಾನ, ಕನ್ನಡಕ್ಕೆ ಮೂರನೇ ಸ್ಥಾನ. ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ,’ ಎಂದು ಹೇಳಿದ್ದಾರೆ

ADVERTISEMENT

‘ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ, ಒಬ್ಬ ಸಚಿವರು, ಇಬ್ಬರು ಸಂಸದರು ಇದ್ದರು. ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು 3ನೇ ಸ್ಥಾನಕ್ಕಿಳಿಸಿದ್ದ ಆ ವೇದಿಕೆಯ ಮೇಲೆ ಕೂರಲು ಅವರಿಗೆ ಮನಸಾದರೂ ಹೇಗೆ ಬಂತು? ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ,‘ ಎಂದು ಅವರು ಬರೆದುಕೊಂಡಿದ್ದಾರೆ.

‘ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ. ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ? ಕನ್ನಡವನ್ನು ಕರ್ನಾಟದಿಂದಲೇ ಮೂಲೋತ್ಪಾಟನೆ ಮಾಡಬೇಕು ಎಂಬುದು ಬಿಜೆಪಿಯ ಹಿಡನ್ ಅಜೆಂಡಾವೇ,‘ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಕೇಂದ್ರ ಪರೀಕ್ಷೆಯಲ್ಲಿ ಅನ್ಯಾಯ, ನೇಮಕಾತಿಯಲ್ಲಿ ನಮ್ಮವರ ಕಡೆಗಣನೆ. ರಾಜಕಾರಣದಲ್ಲೂ ಕನ್ನಡಿಗರಿಗೆ ಪಂಗನಾಮ. ಒಕ್ಕೂಟ ವ್ಯವಸ್ಥೆಯಲ್ಲಿ ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಾಗಿ ನಾವು ಕೊಳೆಯಬೇಕಾ? ಸ್ವಾಭಿಮಾನಿ ಕನ್ನಡಿರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು,’ ಎಂದು ಕುಮಾರಸ್ವಾಮಿ ಅವರು  ಹೇಳಿದ್ದಾರೆ.

ಸಾರಾಂಶ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ‘ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.