ಬೆಂಗಳೂರು: ‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಆ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಘೋಷಿಸಲಿ. ಆಗ ನಾವೆಲ್ಲರೂ (ಅಲ್ಪಸಂಖ್ಯಾತರು) ಜೆಡಿಎಸ್ ಬೆಂಬಲಿಸುವ ಬಗ್ಗೆ ಯೋಚನೆ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಖಾನ್ ಸವಾಲು ಹಾಕಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಸಮಾಜ ಸಿದ್ದರಾಮಯ್ಯ ಅವರ ಮಾತು ಮಾತ್ರ ಕೇಳುತ್ತದೆ. ಬೇರೆ ಯಾವ ನಾಯಕರ ಮಾತನ್ನೂ ಒಪ್ಪಲ್ಲ. ನನ್ನ ಮಾತನ್ನೂ ಕೇಳಲ್ಲ. ಇದನ್ನು ಕುಮಾರಸ್ವಾಮಿಗೆ ಸಹಿಸಲು ಆಗುತ್ತಿಲ್ಲ. ತಿಪ್ಪರಲಾಗ ಹಾಕಿದರೂ ಕುಮಾರಸ್ವಾಮಿ ಮಾತನ್ನು ನಮ್ಮ ಸಮುದಾಯದವರು ಕೇಳುವುದಿಲ್ಲ’ ಎಂದರು.
‘ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಹಜ್ ಯಾತ್ರೆ ಉದ್ಘಾಟನೆಗೆ ಬರಲಿಲ್ಲ. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಬಂದಿದ್ದರು. ಬ್ಯಾಂಕ್ವೆಟ್ ಹಾಲ್‌ನಲ್ಲಿ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಮಾಡುತ್ತಿದ್ದರು. ಆದರೆ, ಕುಮಾರಸ್ವಾಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಸ್ಲಿಮರ ಮೇಲೆ ಪ್ರೀತಿ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ’ ಎಂದರು.
‘ಜಾಫರ್ ಷರೀಫ್ ಅವರ ಮೊಮ್ಮಗ ಚುನಾವಣೆಗೆ ನಿಂತಾಗ ಅಬ್ದುಲ್ ಅಜೀಂ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಿ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರ ಕಾಲು ಹಿಡಿದರೂ ಮಾಡಲಿಲ್ಲ. ಸೋಲುತ್ತೇವೆ ಎಂದು ಗೊತ್ತಾದಾಗ ಫಾರೂಕ್ ಅವರನ್ನು ನಿಲ್ಲಿಸಿದರು’ ಎಂದ ಜಮೀರ್, ‘ರಾಮನಗರ, ಚನ್ನಪಟ್ಟಣ, ಹಾಸನದಲ್ಲಿ ಅಲ್ಪಸಂಖ್ಯಾತರಿಗೆ ಯಾಕೆ ಟಿಕೆಟ್ ಕೊಡುವುದಿಲ್ಲ. ಬಿಜೆಪಿಗೆ ಸಹಾಯ ಮಾಡಲು ಉಪ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ದೂರಿದರು.
‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಆ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಘೋಷಿಸಲಿ. ಆಗ ನಾವೆಲ್ಲರೂ (ಅಲ್ಪಸಂಖ್ಯಾತರು) ಜೆಡಿಎಸ್ ಬೆಂಬಲಿಸುವ ಬಗ್ಗೆ ಯೋಚನೆ ಮಾಡುತ್ತೇವೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಖಾನ್ ಸವಾಲು ಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.