ADVERTISEMENT

ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ: ಅತಿಥಿ ಉಪನ್ಯಾಸಕರು

ಹೋರಾಟದಿಂದ ಹಿಂದೆ ಸರಿಯದಿರಲು ಅತಿಥಿ ಉಪನ್ಯಾಸಕರ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 19:25 IST
Last Updated 15 ಜನವರಿ 2022, 19:25 IST
ಹನುಮಂತಗೌಡ ಆರ್‌. ಕಲ್ಮನಿ
ಹನುಮಂತಗೌಡ ಆರ್‌. ಕಲ್ಮನಿ   

ಬೆಂಗಳೂರು: ‘ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ. ಈ ತೀರ್ಮಾನ ನಮ್ಮನ್ನು ಇನ್ನಷ್ಟು ಅಭದ್ರಗೊಳಿಸಲಿದೆ. ಸರ್ಕಾರ ಇನ್ನಷ್ಟು ಮಂದಿಯ ತಿಥಿ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ, ಸೇವಾ ಭದ್ರತೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ.

ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿಯಲ್ಲಿರುವ ಮನೆಯ ಎದುರು ಪ್ರತಿಭಟನೆ ನಡೆಸಲು ಮುಂದಾಗಿದೆ.

ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ADVERTISEMENT

‘37 ದಿನಗಳ ನಮ್ಮ ಪ್ರತಿಭಟನೆಯ ಬಳಿಕ ರಾಜ್ಯ ಸರ್ಕಾರ ಗೌರವಧನ ಹೆಚ್ಚಿಸುವ ಘೋಷಣೆ ಮಾಡಿ, ಸಂಕ್ರಾಂತಿಯ ಸಿಹಿ ನೀಡಿರುವುದಾಗಿ ಹೇಳಿಕೊಂಡಿದೆ. ಗೌರವಧನ ಹೆಚ್ಚಿಸುವಂತೆ ನಾವು ಆಗ್ರಹಿಸಿಲ್ಲ. ಇದಕ್ಕಾಗಿ ಸಮಿತಿ ರಚಿಸುವ ಅಗತ್ಯವೂ ಇರಲಿಲ್ಲ. ಸರ್ಕಾರದ ಈ ತೀರ್ಮಾನದ ಸಾಧಕ ಬಾಧಕಗಳ ಬಗ್ಗೆ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದವರು ಚಕಾರ ಎತ್ತಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಹನುಮಂತಗೌಡ ಆರ್‌. ಕಲ್ಮನಿ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷ (2021–22) ಇನ್ನೂ ಮುಗಿದಿಲ್ಲ. ಆದಕ್ಕೂ ಮೊದಲೇ, ಇದೇ 17ರಿಂದ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ಬಾನಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರ್ಕಾರ ಗೌರವಧನ ಹೆಚ್ಚಿಸಿರುವ ತೀರ್ಮಾನಕ್ಕೆ ನಮ್ಮ ಅತೃಪ್ತಿಯನ್ನು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬಳಿ ವ್ಯಕ್ತಪಡಿಸಿದ್ದೇವೆ. ಅಲ್ಲದೆ, ಅರ್ಜಿ ಆಹ್ವಾನವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದೇವೆ. ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡುವುದಾಗಿ ಅವರು ಭರವಸೆ ನೀಡಿದ್ದಾರೆ. 2–3 ದಿನ ಕಾಯುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದೇ ಇದ್ದರೆ ಹೋರಾಟದ ಮುಂದಿನ ದಾರಿ ನೋಡಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಸೇವಾ ಭದ್ರತೆ ನೀಡದಿದ್ದರೆ ಜೈಲು ಭರೊ ಚಳುವಳಿ ಹಮ್ಮಿಕೊಳ್ಳುತ್ತೇವೆ‘ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರು ಹೇಳಿದರು.

ಕೆಲಸ ನಷ್ಟದ ಆತಂಕ: ‘ಎಂಟು ಗಂಟೆಯ ಕಾರ್ಯಭಾರಕ್ಕೆ ನೀಡುತ್ತಿದ್ದ ಗೌರವಧನ ₹ 11 ಸಾವಿರದಿಂದ ₹ 13 ಸಾವಿರವನ್ನು ಹೊಸ ಆದೇಶದ ಪ್ರಕಾರ, 15 ಗಂಟೆ ಕಾರ್ಯಭಾರಕ್ಕೆ ₹ 30 ಸಾವಿರದಿಂದ ₹ 32 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಾರ್ಯಭಾರ ಹೆಚ್ಚಿಸುವ ವ್ಯವಸ್ಥೆಯಿಂದ ಸುಮಾರು 14,500 ಅತಿಥಿ ಉಪನ್ಯಾಸಕರಲ್ಲಿ ಅರ್ಧದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಅರ್ಧದಷ್ಟು ಜನರನ್ನು ಮನೆಗೆ ಕಳುಹಿಸಿ, ಉಳಿದವರಿಗೆ ಅವರ ಗೌರವಧನವನ್ನು ಕೊಟ್ಟು ಯಾರು ಮಾಡದಿರುವ ಕೆಲಸ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. 15– 20 ವರ್ಷ ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಯುಜಿಸಿಯ ಎಲ್ಲ ಅರ್ಹತೆ ಇದ್ದು, ವಯೋಮಿತಿ ಮೀರುತ್ತಿರುವವರ ಬಗ್ಗೆಯೂ ಪ್ರಸ್ತಾಪ ಇಲ್ಲ’ ಎಂದು ದಾವಣಗೆರೆಯ ಅತಿಥಿ ಉಪನ್ಯಾಸಕ ಶಿವಕುಮಾರ್ ಯರಗಟ್ಟಿಹಳ್ಳಿ ಆಕ್ಷೇಪಿಸಿದರು.

ಪ್ರತಿವರ್ಷ ಶೇ 3ರಷ್ಟು ಹೆಚ್ಚಿಸಲು ಅಸಮ್ಮತಿ

ಗೌರವಧನವನ್ನು ಪ್ರತಿವರ್ಷ ಶೇ 3ರಷ್ಟು ಹೆಚ್ಚಿಸಬೇಕು ಎಂದು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಪರಿಶೀಲಿಸಿ ವರದಿ ನೀಡಲು ರಚಿಸಿದ್ದ ಸಮಿತಿ ಶಿಫಾರಸು ಮಾಡಿದೆ. ಆದರೆ, ಈ ಶಿಫಾರಸನ್ನು ಆರ್ಥಿಕ ಇಲಾಖೆ ಒಪ್ಪಿಲ್ಲ. ಸಮಿತಿ ಮೂರು ಬಾರಿ ಸಭೆ ಸೇರಿ (ಡಿ. 28, ಜ. 5 ಮತ್ತು 12), ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ವಿಧಾನ, ಗೌರವಧನ, ಸೇವಾಭದ್ರತೆ ವಿಷಯಗಳನ್ನು ಚರ್ಚಿಸಿದ ಬಳಿಕ ಎಲ್ಲ ಶಿಫಾರಸುಗಳನ್ನು ಮಾಡಲಾಗಿದೆ’ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

‘ಮುಷ್ಕರ ಬಿಟ್ಟು ಬೋಧನೆಗೆ ಹಿಂದಿರುಗಿ’

‘ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಸರ್ಕಾರ ಪರಿಶೀಲಿಸಿದೆ.  ವೇತನವನ್ನು ಎರಡು ಪಟ್ಟಿಗೂ ಹೆಚ್ಚು ಏರಿಸಲಾಗಿದೆ. ಮುಷ್ಕರ ಮುಂದುವರಿಸದೆ ಸೇವೆಗೆ ಮರಳಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೋರಿದ್ದಾರೆ.

‘ಅತಿಥಿ ಉಪನ್ಯಾಸಕರಿಗೆ ಅತ್ಯುತ್ತಮವಾದ ಪ್ಯಾಕೇಜ್ ನೀಡಲಾಗಿದೆ. ವಿದ್ಯಾರ್ಥಿ ಸಮುದಾಯದ ಹಿತವನ್ನೂ ಅತಿಥಿ ಉಪನ್ಯಾಸಕರು ಪರಿಗಣಿಸಬೇಕು‘ ಎಂದಿದ್ದಾರೆ.

‘2022-23ರ ಶೈಕ್ಷಣಿಕ ವರ್ಷಕ್ಕೆ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಸೋಮವಾರ (ಜ.17) ಆರಂಭವಾಗಲಿದೆ. ಇದಕ್ಕಾಗಿ ಆನ್-ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಬೇಕು. ಅರ್ಜಿ ಸಲ್ಲಿಸಲು ಒಂದು ವಾರ ಸಮಯವಿದೆ. ಅಭ್ಯರ್ಥಿಗಳು ತಮ್ಮ ಇಷ್ಟದ ಐದು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದೂ ಹೇಳಿದ್ದಾರೆ.

ಸರ್ಕಾರದ ಈ ತೀರ್ಮಾನದಿಂದ ಅತಿಥಿ ಉಪನ್ಯಾಸಕರ ದುಗುಡ, ಆತಂಕ ಹೆಚ್ಚಿದೆ. ಕಾರ್ಯಾಭಾರ ಅವಧಿ ಹೆಚ್ಚಿಸಿದ್ದರಿಂದ ಕೆಲಸ ಕಳೆದುಕೊಳ್ಳುವ ಅಪಾಯ ಎದುರಾಗಿದೆ.

- ಹನುಮಂತಗೌಡ ಆರ್‌. ಕಲ್ಮನಿ, ಅತಿಥಿ ಉಪನ್ಯಾಸಕರ ಒಕ್ಕೂಟ ರಾಜ್ಯ ಘಟಕದ ಅಧ್ಯಕ್ಷ

ಸಾರಾಂಶ

‘ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ. ಈ ತೀರ್ಮಾನ ನಮ್ಮನ್ನು ಇನ್ನಷ್ಟು ಅಭದ್ರಗೊಳಿಸಲಿದೆ. ಸರ್ಕಾರ ಇನ್ನಷ್ಟು ಮಂದಿಯ ತಿಥಿ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ, ಸೇವಾ ಭದ್ರತೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.