ADVERTISEMENT

₹ 2.84 ಕೋಟಿ ವಂಚನೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 21:37 IST
Last Updated 12 ಅಕ್ಟೋಬರ್ 2021, 21:37 IST
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಕಟ್ಟಾ ಸುಬ್ರಹ್ಮಣ್ಯ ನಾಯ್ಡು   

ಬೆಂಗಳೂರು: ನಿವೇಶನ ಹಾಗೂ ಫ್ಲ್ಯಾಟ್‌ ಖರೀದಿ ವಿಚಾರವಾಗಿ ₹ 2.84 ಕೋಟಿ ವ್ಯವಹಾರ ನಡೆಸಿ ವಂಚಿಸಿರುವ ಆರೋಪದಡಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಂಡ್‌ ಸಿಂಗ್ ಡೆವಲಪರ್ಸ್ ಕಂಪನಿ ನಿರ್ದೇಶಕ ಎಂ. ಕೃಷ್ಣ ಎಂಬುವರ ಖಾಸಗಿ ಮೊಕದ್ದಮೆ ವಿಚಾರಣೆ ನಡೆಸಿದ್ದ 4ನೇ ಎಸಿಎಂಎಂ ನ್ಯಾಯಾಲಯ, ಆರೋಪಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರನ್ವಯ ಕೃಷ್ಣ ಅವರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದ್ದು, ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಎಂ. ಕೃಷ್ಣ, ಹಲವು ವರ್ಷಗಳಿಂದ ಪರಿಚಿತರು. ಅವರ ನಡುವೆ ಹಣಕಾಸಿನ ವ್ಯವಹಾರ ಇತ್ತು. ನಿವೇಶನ ಹಾಗೂ ಫ್ಲ್ಯಾಟ್‌ಗಳನ್ನು ಖರೀದಿ ಮಾಡುವ ಸಲುವಾಗಿ ಆರೋಪಿ, ಕೃಷ್ಣ ಅವರಿಂದ ಹಂತ ಹಂತವಾಗಿ ₹ 2.84 ಕೋಟಿ ಪಡೆದಿದ್ದರು. ಕೆಲ ದಿನ ಬಿಟ್ಟು ದುಪ್ಪಟ್ಟು ಲಾಭ ನೀಡುವುದಾಗಿಯೂ ಭರವಸೆ ನೀಡಿದ್ದರು.’

ADVERTISEMENT

‘ಹಲವು ದಿನ ಕಳೆದರೂ ಆರೋಪಿ ಹಣ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ಕೃಷ್ಣ ವಿಚಾರಿಸಿದಾಗ ₹ 2 ಲಕ್ಷವನ್ನು ಮಾತ್ರ 2018ರಲ್ಲಿ ಹಿಂದಿರುಗಿಸಿದ್ದರು. ಬಾಕಿ ಹಣ ನೀಡುವಂತೆ ಕೃಷ್ಣ ಒತ್ತಾಯಿಸಿದ್ದರು. ಹಣ ನೀಡಲು ಸುಬ್ರಹ್ಮಣ್ಯ ಹಿಂದೇಟು ಹಾಕಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ತಿಳಿಸಿದರು.

ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿ ‘ಫೇಸ್‌ಬುಕ್‌’ನಲ್ಲಿ ಪೋಸ್ಟ್ ಪ್ರಕಟಿಸಿರುವ ಕಟ್ಟಾ ಸುಬ್ರಮಹ್ಮಣ್ಯ ನಾಯ್ಡು, ‘ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ. ನನಗೆ ನ್ಯಾಯಾಲಯದಲ್ಲಿ ನಂಬಿಕೆಯಿದ್ದು, ಕಾನೂನು ಹೋರಾಟ ನಡೆಸುತ್ತೇನೆ’ ಎಂದಿದ್ದಾರೆ.

ಸಾರಾಂಶ

ನಿವೇಶನ ಹಾಗೂ ಫ್ಲ್ಯಾಟ್‌ ಖರೀದಿ ವಿಚಾರವಾಗಿ ₹ 2.84 ಕೋಟಿ ವ್ಯವಹಾರ ನಡೆಸಿ ವಂಚಿಸಿರುವ ಆರೋಪದಡಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.