ADVERTISEMENT

ಕಲ್ಲಿದ್ದಲು ಕೊರತೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 8:39 IST
Last Updated 12 ಅಕ್ಟೋಬರ್ 2021, 8:39 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌    

ಬೆಂಗಳೂರು: ‘ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ– ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತ ವಿಚಾರವಾಗಿ ನಾನು ಕೂಡ ವಿಶ್ಲೇಷಣೆ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು’ ಎಂದರು.

‘ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂದು ಬಿಂಬಿಸಿದರೆ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಈ ಸರ್ಕಾರ ಸತ್ತವರಿಗೇ ಪರಿಹಾರ ನೀಡಿಲ್ಲ. ಇನ್ನು ಮಳೆ ಸಂತ್ರಸ್ತರಿಗೆ ಕೊಡುತ್ತಾರೆಯೇ? ಈ ಸರಕಾರಕ್ಕೆ ಬಡವರಿಗೆ ನೆರವಾಗುವ ಅನುಭವವಾಗಲಿ, ಮನಸ್ಥಿತಿಯಾಗಲಿ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ’ ಎಂದರು.

ADVERTISEMENT

ಕೇವಲ ಊಹಾಪೋಹ: ‘ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅದು ಕೇವಲ ಊಹಾಪೋಹ ಮಾತ್ರ. ನಾನು ಈ ವಿಯಷದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.

ಜವಾಬ್ದಾರಿ ವಹಿಸಿಕೊಳ್ಳಬೇಕು: ‘ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರೇ ಕೆಲಸ ಮಾಡುತ್ತಿದ್ದು, ಅವರ ಮುಂದಾಳತ್ವ ಬೇಕು ಎಂಬುದು ಇಡೀ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ಕೆಲವೊಂದು ಪ್ರಕ್ರಿಯೆಗಳಿವೆ. ಆ ಮೂಲಕ ಆಯ್ಕೆ ನಡೆಯುತ್ತದೆ’ ಎಂದರು.

ಉಪಚುನಾವಣೆ: ‘ಉಪಚುನಾವಣೆಯಲ್ಲಿ ಬಿಜೆಪಿಯವರು ತಮ್ಮ ಬಂಡಾಯ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಿರುವುದು ಅವರ ತಂತ್ರಗಾರಿಕೆ. ಅವರ ರಾಜಕೀಯ ತಂತ್ರಗಾರಿಕೆ ಅವರು ಮಾಡಿಕೊಳ್ಳಲಿ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ. ಯಾರ ಮನಸ್ಸಾದರೂ ಓಲೈಸಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಅವರ ಪಕ್ಷ ರಾಜಕಾರಣದ ಗೊಡವೆ ನಮಗೆ ಬೇಡ’ ಎಂದರು.

ಭೇಟಿ: ಬೆಳಗಾವಿ ಗೋಕಾಕ್‌ನ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಮಾಜಿ ಸಚಿವರಾದ ಮೋಟಮ್ಮ ಹಾಗೂ ಉಮಾಶ್ರೀ ಅವರು ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಪ್ರತ್ಯೇಕ, ಪ್ರತ್ಯೇಕವಾಗಿ  ಮಂಗಳವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಸಾರಾಂಶ

‘ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ– ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.