ಬೆಂಗಳೂರು: ‘ಸಿದ್ದರಾಮಯ್ಯ ಅವರ ಶಿಷ್ಯ ಪಡೆ ಡಿ.ಕೆ.ಶಿವಕುಮಾರ್ ಅವರಿಗೆ ಖೆಡ್ಡಾ ತೋಡಲು ಸಜ್ಜಾಗಿರುವಂತೆ ಕಾಣುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಕುರಿತು ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಮತ್ತು ಸಲೀಂ ಮಧ್ಯೆ ನಡೆದ ಸಂಭಾಷಣೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರವಿ, ‘ಒಂದು ಕಡೆ ತಮ್ಮ ನಾಯಕನನ್ನು ಹೊಗಳಿ, ಇನ್ನೊಂದು ಕಡೆ ನಿಮ್ಮನ್ನು ಜನತೆ ಮುಂದೆ ಬೆತ್ತಲು ಮಾಡಲು ಹೊರಟಂತಿದೆ. ಯಾವುದಕ್ಕೂ ನೀವು(ಡಿಕೆ) ಎಚ್ಚೆತ್ತುಕೊಳ್ಳುವುದು ಒಳಿತು’ ಎಂದು ವ್ಯಂಗಭರಿತ ಸಲಹೆ ನೀಡಿದ್ದಾರೆ.
‘ಕೊತ್ವಾಲ್ ರಾಮಚಂದ್ರನ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಕಚೇರಿಯಲ್ಲೇ ಬಹಿರಂಗಪಡಿಸಿದ್ದಾರೆ ಎಂದರೆ ಕೆಪಿಸಿಸಿಗೆ ಎಂಥ ದುರ್ಗತಿ ಬಂದಿರಬಹುದು. ಶಿವಕುಮಾರ್ ಕಲೆಕ್ಷನ್ ಗುಟ್ಟನ್ನು ಕೊನೆಗೂ ಅವರದೇ ಪಕ್ಷದ ಮುಖಂಡ ಗುಸುಗುಸಿನಲ್ಲೇ ಜಗಜ್ಜಾಹೀರು ಮಾಡಿದ್ದಾರೆ. ಕಾಣದ ಕಲೆಕ್ಷನ್ ಎಷ್ಟಿರಬಹುದು’ ಎಂದು ರವಿ ಪ್ರಶ್ನಿಸಿದ್ದಾರೆ.
ಸತ್ಯ ಹೊರಗೆ ಬರಲೇಬೇಕು
‘ಶಿವಕುಮಾರ್ ಅವರನ್ನು ಕುಡುಕ, ಕಲೆಕ್ಷನ್ ಗಿರಾಕಿ, ಭ್ರಷ್ಟಾಚಾರಿ, ತನಿಖೆ ಮಾಡಿದರೆ ತುಂಬಾ ಹಗರಣ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ. ಸತ್ಯ ಯಾವತ್ತಾದರೂ ಹೊರಗೆ ಬರಲೇಬೇಕು ಎಂಬುದು ಸಾಬೀತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
‘ಡಿಕೆಶಿ ಮೇಲೆ ಇಡಿ, ಸಿಬಿಐ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದ ಮುಖಂಡರು ಸಾಕ್ಷ್ಯ ನೀಡಿದ್ದಾರೆ. ಐಟಿ– ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಬೊಬ್ಬೆ ಹೊಡೆಯುವ ನಾಯಕರೇ ನಿಮ್ಮ ಅಧ್ಯಕ್ಷರ ಬ್ರಹ್ಮಾಂಡ ಭ್ರಷ್ಟಾಚಾರ ಬೆತ್ತಲಾಗಿದೆ. ಭ್ರಷ್ಟ ಅಧ್ಯಕ್ಷನನ್ನು ಇಟ್ಟುಕೊಂಡು ಉಪಚುನಾವಣೆಯಲ್ಲಿ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತೀರಿ’ ಎಂದೂ ಕಟಕಿಯಾಡಿದ್ದಾರೆ.
‘ಸಿದ್ದರಾಮಯ್ಯ ಅವರ ಶಿಷ್ಯ ಪಡೆ ಡಿ.ಕೆ.ಶಿವಕುಮಾರ್ ಅವರಿಗೆ ಖೆಡ್ಡಾ ತೋಡಲು ಸಜ್ಜಾಗಿರುವಂತೆ ಕಾಣುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.