ಬೆಂಗಳೂರು: ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಜಿಲ್ಲೆಗಳಲ್ಲಿಯೂ ಹೆಚ್ಚಳವಾಗುತ್ತಿವೆ. ಹೀಗಾಗಿ, ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿನ ಸಿದ್ಧತೆ ಬಗ್ಗೆ ‘ಪ್ರಜಾವಾಣಿ’ ಪರಿಶೀಲನೆ ನಡೆಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸದೇ ಇರುವುದು ಪತ್ತೆಯಾಗಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿದ್ದರು. ಹಿಂದುಳಿದ ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳು ಮೂಲಸೌಕರ್ಯದ ಕೊರತೆಯಿಂದ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ ಎಡವಿದ್ದವು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮುರು ಅತ್ಯಂತ ಹಿಂದುಳಿದ ತಾಲ್ಲೂಕು. ಈ ಎರಡೂ ತಾಲ್ಲೂಕುಗಳಲ್ಲಿ ಹಂಚಿಕೆಯಾಗಿರುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರವನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುತ್ತಿದ್ದಾರೆ. ಎರಡೂ ಕಡೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಸ್ಥಾಪನೆಯಾಗಿವೆ. ಐಸಿಯು ನಿರ್ವಹಣೆಗೆ ಮೂವರು ವೈದ್ಯರನ್ನು ನಿಯೋಜಿಸಲಾಗಿದೆ. ಆದರೆ, ಆಮ್ಲಜನಕ ಉತ್ಪಾದನಾ ಘಟಕಗಳು ಇನ್ನೂ ಕಾರ್ಯಾರಂಭಗೊಂಡಿಲ್ಲ. ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ.
ಚಾಮರಾಜನಗರ ಜಿಲ್ಲೆಯ ಹನೂರು ಅನ್ನು ಪ್ರತ್ಯೇಕ ತಾಲ್ಲೂಕು ಎಂದು ಘೋಷಣೆ ಮಾಡಿ ಮೂರು ವರ್ಷ ಕಳೆದರೂ, ಅಲ್ಲಿನ ಆಸ್ಪತ್ರೆ ಇನ್ನೂ ಮೇಲ್ದರ್ಜೆಗೆ ಏರಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಇದೆ. ಇಲ್ಲಿ ಕೋವಿಡ್ ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಇಲ್ಲ. ಸೋಂಕಿತರು ಚಿಕಿತ್ಸೆಗಾಗಿ ಕೊಳ್ಳೇಗಾಲ ಇಲ್ಲವೇ ಚಾಮರಾಜನಗರಕ್ಕೆ ಬರಬೇಕು. ಇಲ್ಲವೇ ಕಾಮಗೆರೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕು.
ಹನೂರು ತಾಲ್ಲೂಕಿನ ರಾಮಾಪುರ ಹೋಬಳಿ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಎಲ್ಲ ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇನ್ನಷ್ಟೇ ಆಗಬೇಕಿದೆ. ಸಮುದಾಯ ಕೇಂದ್ರಕ್ಕೆ 300 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಮಂಜೂರಾಗಿದ್ದು, ಇನ್ನೂ ಅಳವಡಿಕೆ ಆಗಿಲ್ಲ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ, ಕೋವಿಡ್–19 ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣದ ಕೆಲಸ ಇತ್ತೀಚೆಗೆ ಆರಂಭಗೊಂಡಿದೆ.
ಇದ್ದೂ ಇಲ್ಲದಂತಾಗಿರುವ ಐಸಿಯು: ತಜ್ಞರು–ತಂತ್ರಜ್ಞರ ಕೊರತೆಯಿಂದಾಗಿ ಚಿಕ್ಕಮಗಳೂರು ಕೊಪ್ಪ ತಾಲ್ಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕವು (ಐಸಿಯು) ಇದ್ದೂ ಇಲ್ಲದಂತಾಗಿದೆ. ಈ ಆಸ್ಪತ್ರೆಯಲ್ಲಿ ವೈದ್ಯರು, ಅರವಳಿಕೆ ತಜ್ಞರು ಇಲ್ಲ. ಎಂಟು ವೆಂಟಿಲೇಟರ್‌ಗಳು ಇವೆ. ಆದರೆ, ತಂತ್ರಜ್ಞರು ಇಲ್ಲದೆ ಅವು ಕಾರ್ಯನಿರ್ವಹಿಸುತ್ತಿಲ್ಲ. ಶೃಂಗೇರಿ ತಾಲ್ಲೂಕು ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಇಲ್ಲ.
ತರೀಕೆರೆ, ಎನ್.ಆರ್.ಪುರ, ಕೊಪ್ಪ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಘಟಕದ ಸಿವಿಲ್ ಕಾಮಗಾರಿ ನಡೆಯುತ್ತಿದೆ.
ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ 5 ಹಾಸಿಗೆ ಇದೆ. ಎರಡನೇ ಅಲೆಯ ವೇಳೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ ಕಾರಣ ಒಟ್ಟು 50 ಆಮ್ಲಜನಕ ಬೆಡ್ ವ್ಯವಸ್ಥೆ ಮಾಡಲಾಗಿದೆ.
ಪಿಎಂ ಕೇರ್ ಅನುದಾನದಲ್ಲಿ ಒಂದು ಆಮ್ಲಜನಕ ಘಟಕವನ್ನು ಪ್ರಾರಂಭಿಸಲಾಗಿತ್ತು. 100 ಎಲ್‌ಪಿಎಂ (ಪ್ರತಿ ನಿಮಿಷಕ್ಕೆ ಸರಬರಾಜು) ಸಾಮರ್ಥ್ಯದ ಘಟಕ ಕಾರ್ಯ ನಿರ್ವಹಿಸುತ್ತಿದೆ.
(ಮಾಹಿತಿ– ಮೈಸೂರು, ಹುಬ್ಬಳ್ಳಿ, ಮಂಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರು ಗ್ರಾಮಾಂತರ ಬ್ಯುರೋ)
ಕೋವಿಡ್ ಮೂರನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಜಿಲ್ಲೆಗಳಲ್ಲಿಯೂ ಹೆಚ್ಚಳವಾಗುತ್ತಿವೆ. ಹೀಗಾಗಿ, ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿನ ಸಿದ್ಧತೆ ಬಗ್ಗೆ ‘ಪ್ರಜಾವಾಣಿ’ ಪರಿಶೀಲನೆ ನಡೆಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸದೇ ಇರುವುದು ಪತ್ತೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.