ADVERTISEMENT

‘ಆರೋಗ್ಯ ಕವಚ–108’ಕ್ಕೆ ಬೇಕು ತುರ್ತು ‘ಚಿಕಿತ್ಸೆ’

ಕೋವಿಡ್‌ ಭೀಕರತೆಯಲ್ಲೂ ಜೀವರಕ್ಷಕವಾಗದ ‘ಆರೋಗ್ಯ ಕವಚ’

ರಾಜೇಶ್ ರೈ ಚಟ್ಲ
Published 20 ಜನವರಿ 2022, 20:33 IST
Last Updated 20 ಜನವರಿ 2022, 20:33 IST
ಕಲಬುರಗಿ ಆರೋಗ್ಯ ಇಲಾಖೆಯ ಕಾರ್ಯಾಲಯದ ಬಳಿ ಕೆಟ್ಟು ನಿಂತಿರುವ 108 ಆಂಬುಲೆನ್ಸ್‌ಗಳು– ಪ್ರಜಾವಾಣಿ ಚಿತ್ರ /ತಾಜುದ್ದೀನ್ ಆಜಾದ್‌
ಕಲಬುರಗಿ ಆರೋಗ್ಯ ಇಲಾಖೆಯ ಕಾರ್ಯಾಲಯದ ಬಳಿ ಕೆಟ್ಟು ನಿಂತಿರುವ 108 ಆಂಬುಲೆನ್ಸ್‌ಗಳು– ಪ್ರಜಾವಾಣಿ ಚಿತ್ರ /ತಾಜುದ್ದೀನ್ ಆಜಾದ್‌   

ಬೆಂಗಳೂರು: ರಾಜ್ಯದ ಯಾವುದೇ ಭಾಗದಿಂದ ‘108’ ಸಂಖ್ಯೆಗೆ ತುರ್ತು ಕರೆ ಮಾಡಿದರೆ ನಗರ ಪ್ರದೇಶದೊಳಗೆ 20 ನಿಮಿಷ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದ ಒಳಗೆ ಅಗತ್ಯ ಇರುವ ಆಂಬುಲೆನ್ಸ್‌ ತಲುಪುವ ವ್ಯವಸ್ಥೆಯೇ ‘ಆರೋಗ್ಯ ಕವಚ–108’. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಲಭ್ಯವಿರುವ ಈ ಸೇವೆಗೆ ಕೋವಿಡ್‌ ಮೂರನೇ ಅಲೆಯ ನೆಪದಲ್ಲಿಯಾದರೂ ಸರ್ಕಾರ ತುರ್ತು ‘ಚಿಕಿತ್ಸೆ’ ನೀಡಬೇಕಾದ ಸಂದರ್ಭ ಬಂದಿದೆ.

2008ರಲ್ಲಿ 150, 2009–10ರಲ್ಲಿ 367 ಆಂಬುಲೆನ್ಸ್‌ಗಳನ್ನು ‘108’ಕ್ಕೆ ಸೇರಿಸಿ ‘ಆರೋಗ್ಯ ಕವಚ’ ಯೋಜನೆ ಆರಂಭಿಸಲಾಗಿತ್ತು. 2014–15ರ ವೇಳೆಗೆ ಈ ವ್ಯವಸ್ಥೆಯಡಿ 710 ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ, ಬೇಸಿಕ್‌ ಲೈಫ್‌ ಸಪೋರ್ಟ್ (ಬಿಎಲ್‌ಎಸ್‌) ಸೌಲಭ್ಯದ 555, ಆಧುನಿಕ ಉಪಕರಣಗಳಿರುವ ಅಡ್ವಾನ್ಸ್ಡ್‌ಲೈಫ್‌ ಸಪೋರ್ಟ್‌ (ಎಎಲ್‌ಎಸ್‌) 155 ಆಂಬುಲೆನ್ಸ್‌ಗಳು. ಅವುಗಳಲ್ಲಿ 340 ಆಂಬುಲೆನ್ಸ್‌ಗಳು ಏಳು ವರ್ಷಕ್ಕಿಂತಲೂ ಹೆಚ್ಚು ಹಳೆಯವು. ಪ್ರತಿ 5 ವರ್ಷಗಳಿಗೊಮ್ಮೆ ಆಂಬುಲೆನ್ಸ್‌ಗಳನ್ನು ಬದಲಿಸಬೇಕೆಂಬ ನಿಯಮವೂ ಪಾಲನೆ ಆಗಿಲ್ಲ.

ಸದ್ಯ 108 ಸೇವೆಯಲ್ಲಿ ಬಳಸುವ ತಂತ್ರಜ್ಞಾನ 13 ವರ್ಷಗಳಷ್ಟು ಹಳೆಯದು. ಸಾರ್ವಜನಿಕರಿಗೆ ಸುಗಮ ಸೇವೆ ನೀಡಲು ಸಾಧ್ಯ ಆಗದಿರಲು ಇದೂ ಕಾರಣ. ಹೀಗಾಗಿ, ಆಂಬುಲೆನ್ಸ್‌ ಸೇವೆಯಲ್ಲಿ ಬದಲಾವಣೆ ತಂದು, 108 ತುರ್ತು ವೈದ್ಯಕೀಯ ಪ್ರತಿಕ್ರಿಯೆ ತಂತ್ರಜ್ಞಾನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸಬೇಕಿದೆ. 108 ಕರೆ ಕೇಂದ್ರ, ತಂತ್ರಜ್ಞಾನ, ತರಬೇತಿ ಕೇಂದ್ರ ಮುಂತಾದವುಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಕೋವಿಡ್‌ ಭೀಕರತೆ ಈ ದಿಕ್ಕಿನತ್ತ ಕಾರ್ಯಪ್ರವೃತ್ತರಾಗುವಂತೆ ಸರ್ಕಾರವನ್ನು ಎಚ್ಚರಿಸಿದೆ. ಆಯ್ಕೆ ಈಗ ಸರ್ಕಾರದ ಮುಂದಿದೆ.

ADVERTISEMENT

ಸಿಕಂದರಾಬಾದ್‌ನ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ (ಜಿವಿಕೆ–ಇಎಂಆರ್‌ಐ) ಜೊತೆ ಒಪ್ಪಂದ ಮಾಡಿಕೊಂಡು 2008ರ ಆಗಸ್ಟ್‌ 14ರಂದು 10 ವರ್ಷ ಅವಧಿಗೆ ಸೇವೆ ಆರಂಭಿಸಲಾಗಿದೆ. ಆದರೆ, ಅವ್ಯವಹಾರ, ಅಸಮರ್ಪಕ ಸೇವೆ ಸೇರಿದಂತೆ ನಾನಾ ಕಾರಣಗಳಿಗೆ ಸಂಸ್ಥೆಯ ಜೊತೆಗಿನ ಒಡಂಬಡಿಕೆಯನ್ನು ಅವಧಿಗೆ ಮೊದಲೇ (2017ರ ಜುಲೈ 14) ರದ್ದುಗೊಳಿಸಲಾಗಿದೆ. ಆಂಬುಲೆನ್ಸ್‌ ತುರ್ತು ಸೇವೆಯಾಗಿರುವುದರಿಂದ ಮುಂದಿನ ಸೇವಾದಾರ
ರನ್ನು ಆಯ್ಕೆ ಮಾಡುವವರೆಗೆ ಜಿವಿಕೆ–ಇಎಂಆರ್‌ಐಗೆ ನೀಡಿದ್ದ ಅವಧಿಯನ್ನು ವಿಸ್ತರಿಸಿಕೊಂಡು ಬರಲಾಗುತ್ತಿದೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ರಾಜ್ಯದಾದ್ಯಂತ ಆಂಬುಲೆನ್ಸ್‌ ಸೇವೆ ಸಿಗದೇ ಜನ ಹೈರಾಣಾಗಿದ್ದರು. ಖಾಸಗಿ ಆಂಬುಲೆನ್ಸ್‌ಗಳು, ಟೆಂಪೊ ಟ್ರಾವಲರ್‌ಗಳನ್ನು ವಶಕ್ಕೆ ಪಡೆದು ಬಳಸಬೇಕಾದ ಅನಿವಾರ್ಯತೆ, ಸವಾಲು ಸರ್ಕಾರಕ್ಕೆ ಎದುರಾಗಿತ್ತು. ಈ ದಿನಗಳಲ್ಲಿ ಸಮರ್ಪಕವಾಗಿ ಸೇವೆ ನೀಡಬೇಕಿದ್ದ ‘ಆರೋಗ್ಯ ಕವಚ–108’, ತುರ್ತು ಕರೆಗೆ ಸ್ಪಂದಿಸದ, ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಂತ, ಜೀವರಕ್ಷಕ ಸಾಧನಗಳು, ಅಗತ್ಯ ಔಷಧಗಳು ಇಲ್ಲದ, ಚಾಲಕ, ಸಿಬ್ಬಂದಿ ವಸೂಲಿಗಿಳಿದ ಕಾರಣಗಳಿಗೆ ಹೆಚ್ಚು ಸುದ್ದಿಯಾಗಿತ್ತು. ಹಲವು ಪ್ರಕರಣಗಳಲ್ಲಿ ಆಂಬುಲೆನ್ಸ್‌ಗಳಲ್ಲೇ ಬಡಜೀವಗಳ ಪ್ರಾಣಪಕ್ಷಿ ಹಾರಿಹೋಗಿತ್ತು.

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ 108 ಆಂಬ್ಯುಲೆನ್ಸ್‌ ಸೇವೆಯಲ್ಲಿ ಭಾರಿ ಲೋಪ ಆಗಿದೆ. ಸಮರ್ಪಕವಾಗಿ ಸೇವೆ ಸಲ್ಲಿಸಿದರೆ ಸಂಸ್ಥೆಗೆ ಪ್ರತಿ ಮೂರು ತಿಂಗಳಿಗೆ ₹ 40 ಕೋಟಿ ಸರ್ಕಾರ ನೀಡಬೇಕಿದೆ. ಆದರೆ, ಲೋಪದ ಕಾರಣಕ್ಕೆ ಎರಡು ಮತ್ತು ಮೂರನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ, ಈ ಸಾಲಿನಲ್ಲಿ ಈ ಸೇವೆಗೆ ಒದಗಿಸಿದ್ದ ಅಂದಾಜು ಮೊತ್ತದಲ್ಲಿ ಅರ್ಧದಷ್ಟು (₹ 86.31 ಕೋಟಿ) ಮಾತ್ರ ವೆಚ್ಚವಾಗಿದೆ.

ಹೊಸ ಆಂಬುಲೆನ್ಸ್‌ ಪ್ರಸ್ತಾಪಕ್ಕೆ ಅಸಮ್ಮತಿ

ಆರೋಗ್ಯ ಕವಚ– 108 ಆಂಬುಲೆನ್ಸ್‌ಗಳ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಬೇಕೆಂಬ ಆರೋಗ್ಯ ಇಲಾಖೆಯ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿಲ್ಲ. ಆಂಬುಲೆನ್ಸ್‌ಗಳ ಸಂಖ್ಯೆಯನ್ನು 710ರಿಂದ 750ಕ್ಕೆ ಹೆಚ್ಚಿಸಲು ಮಾತ್ರ ಒಪ್ಪಿದೆ. ಆದರೆ, ಕರೆ ಕೇಂದ್ರದಲ್ಲಿ ಕರೆ ಸ್ವೀಕರಿಸುವವರ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ. ಆ ಮೂಲಕ, 5 ವ‌ರ್ಷಗಳ ಅವಧಿಗೆ ಆರೋಗ್ಯ ಕವಚ ಸೇವೆಯನ್ನು ₹ 1,260.44 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಇದೇ ಡಿ. 7ರಂದು ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ. ಆದರೆ, ಅಂಬ್ಯುಲೆನ್ಸ್‌ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯದ ಬಗ್ಗೆ ಸಮರ್ಥನೆ ನೀಡಿ ಮತ್ತೆ ಕಡತ ಮಂಡಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

₹ 1,698 ಕೋಟಿ ವೆಚ್ಚದಲ್ಲಿ 1,000 ಆಂಬುಲೆನ್ಸ್

ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಯ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ ಒಂದು ಬಿಎಲ್‌ಎಸ್‌ ಆಂಬುಲೆನ್ಸ್‌, ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಎಎಲ್‌ಎಸ್ ಆಂಬುಲೆನ್ಸ್‌ ಒದಗಿಸಬೇಕಾಗಿದೆ. ಯಾವುದೇ ಆಂಬುಲೆನ್ಸ್‌ ಒಂದು ದಿನದಲ್ಲಿ ನಾಲ್ಕಕ್ಕಿಂತ ಹೆಚ್ಚಿನ ತುರ್ತು ಪ್ರಕರಣಗಳನ್ನು ಸಾಗಿಸಿದರೆ ಅಥವಾ 120 ಕಿ.ಮೀಗಿಂತ ಹೆಚ್ಚು ದೂರ ಕ್ರಮಿಸಿದರೆ ಅಂಥ ಸ್ಥಳಗಳಿಗೆ ಮತ್ತೊಂದು ಆಂಬುಲೆನ್ಸ್‌ ಒದಗಿಸಬೇಕಾಗಿದೆ. ಈಗ ರಾಜ್ಯದ ಜನಸಂಖ್ಯೆ 7 ಕೋಟಿ ಎಂದು ಅಂದಾಜಿಸಲಾಗಿದೆ. ಈ ಮಾರ್ಗಸೂಚಿ ಪ್ರಕಾರ, ರಾಜ್ಯದಲ್ಲಿ ಆಂಬುಲೆನ್ಸ್‌ಗಳನ್ನು 1,000ಕ್ಕೆ ಹೆಚ್ಚಿಸಲು ಮತ್ತು ಈಗಿರುವ 108 ಕರೆ ಕೇಂದ್ರದಲ್ಲಿ ಕರೆ ಸ್ವೀಕರಿಸುವವರ ಸಂಖ್ಯೆಯನ್ನು 54ರಿಂದ 75ಕ್ಕೆ ಹೆಚ್ಚಿಸಿ 5 ವರ್ಷಗಳ ಅವಧಿಗೆ ₹ 1,698.48 ಕೋಟಿ ವೆಚ್ಚದಲ್ಲಿ ಈ ಸೇವೆಯನ್ನು ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಉದ್ದೇಶಿಸಿದೆ. ಹೊಸತಾಗಿ 108–ಆರೋಗ್ಯ ಕವಚ ಸೇವೆಗೆ ಟೆಂಡರ್‌ ಆಹ್ವಾನಿಸಲು ಮತ್ತು ಟೆಂಡರ್‌ ವಹಿಸಿದ್ದ ಸಂಸ್ಥೆ ತೃಪ್ತಿಕರ ಸೇವೆ ನೀಡಿದರೆ ಮತ್ತೆ ಎರಡು ವರ್ಷಕ್ಕೆ ವಿಸ್ತರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

***

ಸದ್ಯದ ಆರೋಗ್ಯ ಕವಚ–108 ಆಂಬುಲೆನ್ಸ್‌ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಲು ಒದಗಿಸಲು ಸಿದ್ಧತೆ ನಡೆದಿದೆ.

-ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವ  

***
‘ಆರೋಗ್ಯ ಕವಚ’ದ ವಸ್ತುಸ್ಥಿತಿ

710

ಒಟ್ಟು ‘108‘ ಆಂಬ್ಯುಲೆನ್ಸ್‌ಗಳು

340

ಅವುಗಳಲ್ಲಿ 7 ವರ್ಷಕ್ಕಿಂತ ಹಳೆಯವು

555

ಬಿಎಲ್‌ಎಸ್‌ ಆಂಬುಲೆನ್ಸ್‌ಗಳು

155

ಎಎಲ್‌ಎಸ್‌ ಆಂಬುಲೆನ್ಸ್‌ಗಳು

489

ಸದ್ಯ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್‌ಗಳು

1,350

ಆಂಬುಲೆನ್ಸ್‌ಗಳಲ್ಲಿರುವ ಚಾಲಕರು, ಸಿಬ್ಬಂದಿ

ಸಾರಾಂಶ

ಬೆಂಗಳೂರು: ರಾಜ್ಯದ ಯಾವುದೇ ಭಾಗದಿಂದ ‘108’ ಸಂಖ್ಯೆಗೆ ತುರ್ತು ಕರೆ ಮಾಡಿದರೆ ನಗರ ಪ್ರದೇಶದೊಳಗೆ 20 ನಿಮಿಷ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದ ಒಳಗೆ ಅಗತ್ಯ ಇರುವ ಆಂಬುಲೆನ್ಸ್‌ ತಲುಪುವ ವ್ಯವಸ್ಥೆಯೇ ‘ಆರೋಗ್ಯ ಕವಚ–108’. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಲಭ್ಯವಿರುವ ಈ ಸೇವೆಗೆ ಕೋವಿಡ್‌ ಮೂರನೇ ಅಲೆಯ ನೆಪದಲ್ಲಿಯಾದರೂ ಸರ್ಕಾರ ತುರ್ತು ‘ಚಿಕಿತ್ಸೆ’ ನೀಡಬೇಕಾದ ಸಂದರ್ಭ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.