ADVERTISEMENT

ಫೆಬ್ರುವರಿ ಅಂತ್ಯಕ್ಕೆ ಕೋವಿಡ್‌ ಪ್ರಕರಣಗಳ ಇಳಿಕೆ: ಸಚಿವ ಡಾ.ಕೆ. ಸುಧಾಕರ್‌

ನಿರಂತರ ಜಾಗೃತಿಗಾಗಿ ರಾತ್ರಿ ಕರ್ಫ್ಯೂ ಅಗತ್ಯ: ಸೋಂಕು ಪ್ರಕರಣಗಳು ಹೆಚ್ಚು, ತೀವ್ರತೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:18 IST
Last Updated 17 ಜನವರಿ 2022, 15:18 IST
ಡಾ.ಕೆ. ಸುಧಾಕರ್‌
ಡಾ.ಕೆ. ಸುಧಾಕರ್‌   

ಬೆಂಗಳೂರು: ‘ಫೆಬ್ರುವರಿ ಅಂತ್ಯಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯ ನಾಗರಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ‘ಮೂರನೇ ಅಲೆಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ತೀವ್ರತೆ ಮತ್ತು ಮರಣ ಪ್ರಮಾಣ  ಕಡಿಮೆ ಇದೆ. ಅಂತರರಾಷ್ಟ್ರೀಯ ಸಂಚಾರ ಮತ್ತು ಅಗತ್ಯ ಸೇವೆಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಹೀಗಾಗಿ, ಓಮೈಕ್ರಾನ್‌ ಸಂಪೂರ್ಣ ನಿಗ್ರಹ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರತಿ ವರ್ಷ ಡಿಸೆಂಬರ್‌, ಜನವರಿ ಮತ್ತು ಫೆಬ್ರುವರಿಯಲ್ಲಿ ಫ್ಲೂ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ನೆಗಡಿ, ಕೆಮ್ಮು ಬಂದರೆ ಆತಂಕಕ್ಕೆ ಒಳಗಾಗಬಾರದು. ಮೂರನೇ ಅಲೆಯಲ್ಲಿ ಕೆಲವರಲ್ಲಿ ವಿಭಿನ್ನ ಲಕ್ಷಣಗಳು ಸಹ ಕಾಣಿಸಿಕೊಂಡಿವೆ.  ಕೆಲವರಿಗೆ ನಿಶ್ಯಕ್ತಿ, ಭೇದಿಯ ಲಕ್ಷಣಗಳಿವೆ. ಹೀಗಾಗಿ, ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಖಚಿತಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಏಕೆ ಎನ್ನುವ ಹಲವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ‘ಕೊರೊನಾ ವೈರಸ್‌ ರಾತ್ರಿ ಮಾತ್ರ ಹಬ್ಬುವುದಿಲ್ಲ ಎನ್ನುವುದು ನಮಗೂ ಗೊತ್ತಿದೆ. ಆದರೆ, ಜನರನ್ನು ನಿರಂತರವಾಗಿ ಜಾಗೃತಗೊಳಿಸಲು ಇಂತಹ ಕ್ರಮಗಳು ಅಗತ್ಯ. ಹೆಚ್ಚಿನ ಜನರಿಗೆ ಸೋಂಕು ತಗುಲಿ ಶೇಕಡ 5ರಷ್ಟು ಆಸ್ಪತ್ರೆಗೆ ದಾಖಲಾದರೂ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾಗುತ್ತದೆ’ ಎಂದು ಪ್ರತಿಪಾದಿಸಿದರು.

ಆಯ್ದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ.

* ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ವರ್ಷ ಪ್ರವೇಶ ದೊರೆಯುವುದೇ?– ಲಿಂಗರಾಜು, ರಾಯಚೂರು.

ಈ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪತ್ರ ಬರೆಯಲಾಗಿದೆ. ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ನೇಮಕಾತಿ ಹಾಗೂ ಕಟ್ಟಡಗಳ ನಿರ್ಮಾಣದ ಬಗ್ಗೆ ಎನ್‌ಎಂಸಿ ವಿವರ ಕೋರಿತ್ತು. ಈಗ ತಾತ್ಕಾಲಿಕ ಕಟ್ಟಡ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನ ಕಾಲೇಜುಗಳಿಗೆ ಬೋಧಕರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಇನ್ನೆರಡು ಕಾಲೇಜುಗಳಲ್ಲಿಯೂ ಶೀಘ್ರ ಮುಗಿಯಲಿದೆ. ಹೀಗಾಗಿ, ಅನುಮತಿ ನೀಡುವಂತೆ ಕೋರಿ ಮನವಿ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಎಂಬಿಬಿಎಸ್‌ ಮೊದಲನೇ ವರ್ಷದ ತರಗತಿಗಳನ್ನು ಈ ನಾಲ್ಕು ಕಾಲೇಜುಗಳಲ್ಲಿ ಆರಂಭಿಸುವ ವಿಶ್ವಾಸ ಇದೆ. ಪ್ರಸಕ್ತ ವರ್ಷ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಿಸುವುದಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಹೊರೆ ಹೆಚ್ಚಿಸಲು ಸರ್ಕಾರ ಬಯಸುವುದಿಲ್ಲ.

* ಲಸಿಕೆಯ ಎರಡನೇ ಡೋಸ್‌ ಪಡೆಯುವ ಮುನ್ನವೇ ಸಂದೇಶ ಬಂದಿದೆ? ವಿಲಾಸ್‌, ದಾವಣಗೆರೆ

ಕೋವಿನ್‌ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಈ ರೀತಿಯ ಸಂದೇಶ ಬಂದಿರಬಹುದು. ಇದನ್ನು ಪರಿಶೀಲಿಸುತ್ತೇವೆ.

*ಪ್ಯಾರಾವೈದ್ಯಕೀಯ ಕೋರ್ಸ್‌ ಮುಗಿಸಿ ಐದು ವರ್ಷಗಳಾಗಿದ್ದರೂ ಉದ್ಯೋಗ ಸಿಗುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ಸೇರಿಸಿಕೊಳ್ಳಲು ಖಾಸಗಿ ಏಜೆನ್ಸಿಗಳು ₹2–3ಲಕ್ಷ ಕೇಳುತ್ತಿದ್ದಾರೆ. – ಮಕ್ಸೂದ್‌, ವಿಜಯಪುರ

ಹೊಸ ನೇಮಕಾತಿಗೆ ಪ್ರಸ್ತಾವ ಕಳುಹಿಸಲಾಗುವುದು. ನೇಮಕಾತಿಗೆ ಹಣಕಾಸು ಇಲಾಖೆಯ ಅನುಮೋದನೆ ಬೇಕಾಗುತ್ತದೆ. ಮುಖ್ಯಮಂತ್ರಿ ಜತೆ ಮಾತನಾಡಿ ಕೆಲವೇ ದಿನಗಳಲ್ಲಿ ನೇಮಕಾತಿಯ ಅಧಿಸೂಚನೆ ಪ್ರಕಟಿಸಲಾಗುವುದು.

ವೈದ್ಯರ ಕೊರತೆ: ಸ್ಥಳದಲ್ಲೇ ಮಾಹಿತಿ ಪಡೆದ ಸಚಿವ

ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿ ವೈದ್ಯರ ಕೊರತೆ ಇದೆ ಎಂದು ನೇಮಿಚಂದ್ರ ನಾಯಕ್‌ ಎನ್ನುವವರು ಗಮನಸೆಳೆದಾಗ ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದ ಸಚಿವ ಸುಧಾಕರ್‌, ಅವರಿಂದಲೇ ವಿವರವನ್ನೂ ಕೊಡಿಸಿದರು.

ಅಲ್ಲಿ ಡಾ. ಅನಂತಕುಮಾರ್‌ ಎನ್ನುವ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು. ಆಗ ಮಾತನಾಡಿದ ಸುಧಾಕರ್‌, ನಿಮ್ಮ ಊರಿನಲ್ಲಿ ಸಮಸ್ಯೆ ಇದ್ದರೆ ಹೇಳಿ; ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ. ವೈದ್ಯರು ಇದ್ದರೂ ಸುಖಾಸುಮ್ಮನೇ ರಾಜಕೀಯ ಕಾರಣಕ್ಕಾಗಿ ಈ ರೀತಿ ಕರೆ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.

‘ಮೆಡಿಕಲ್‌ ಮಾಫಿಯಾಗೆ ಮಣಿಯುವುದಿಲ್ಲ’

‘ಸರ್ಕಾರ ಯಾವುದೇ ರೀತಿಯ ಮಾಫಿಯಾಗೆ ಮಣಿಯುವುದಿಲ್ಲ. ವೈದ್ಯಕೀಯ ವಲಯವನ್ನು ಮಾಫಿಯಾ ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಸುಧಾಕರ್‌ ಸ್ಪಷ್ಟಪಡಿಸಿದರು.

ಕೋವಿಡ್‌ನ ಈ ಸಂದರ್ಭದಲ್ಲಿ ‘ಮೆಡಿಕಲ್‌ ಮಾಫಿಯಾ’ ಪ್ರಬಲವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ. ಈ ಮಾಫಿಯಾ ನಿಯಂತ್ರಿಸಲು ಸರ್ಕಾರ ಏನು ಕ್ರಮಕೈಗೊಳ್ಳುತ್ತದೆ ಎಂದು‌ ಬೆಂಗಳೂರಿನ ಉಷಾ ಎನ್ನುವವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.

‘ಮೆಡಿಕಲ್‌ ಮಾಫಿಯಾ ಎನ್ನುವುದೇ ಉತ್ಪ್ರೇಕ್ಷೆಯ ಮತ್ತು ಅಸಹನೀಯ ಮಾತು. ನಮ್ಮ ರಾಜ್ಯದಲ್ಲಿ ಮಾಫಿಯಾ ಹಾವಳಿ ಇರುವುದು ಗಮನದಲ್ಲಿ ಇಲ್ಲ. ನಿಮ್ಮ ಬಳಿ ಮಾಹಿತಿ ಇದ್ದರೆ ಕೊಡಿ’ ಎಂದು ಹೇಳಿದರು.

ಸಾರಾಂಶ

‘ಫೆಬ್ರುವರಿ ಅಂತ್ಯಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.