ADVERTISEMENT

‘ಅರಮನೆ’ಯೊಳಗಿನ ಜಂಬೂಸವಾರಿಗೆ ಕ್ಷಣಗಣನೆ- ‘ಪ್ರಜಾವಾಣಿ’ ಜಾಲತಾಣದಲ್ಲಿ ನೇರ ಪ್ರಸಾರ

ಆವರಣದಲ್ಲಿ 500 ಜನರಿಗೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:36 IST
Last Updated 13 ಅಕ್ಟೋಬರ್ 2021, 20:36 IST
ಮೈಸೂರು ಅರಮನೆ ಆವರಣದಲ್ಲಿ ಬುಧವಾರ ಜಂಬೂಸವಾರಿ ಅಂತಿಮ ತಾಲೀಮಿನ ವೇಳೆ ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಅವರು ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು. ಡಿಸಿಎಫ್‌ ವಿ.ಕರಿಕಾಳನ್‌, ಡಿಸಿಪಿಗಳಾದ ಗೀತಾ ಪ್ರಸನ್ನ, ಶಿವರಾಮು, ಪ್ರದೀಪ್‌ ಗುಂಟಿ ಇದ್ದಾರೆ –ಪ್ರಜಾವಾಣಿ ಚಿತ್ರ
ಮೈಸೂರು ಅರಮನೆ ಆವರಣದಲ್ಲಿ ಬುಧವಾರ ಜಂಬೂಸವಾರಿ ಅಂತಿಮ ತಾಲೀಮಿನ ವೇಳೆ ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಅವರು ಅಭಿಮನ್ಯು ನೇತೃತ್ವದ ಗಜಪಡೆಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು. ಡಿಸಿಎಫ್‌ ವಿ.ಕರಿಕಾಳನ್‌, ಡಿಸಿಪಿಗಳಾದ ಗೀತಾ ಪ್ರಸನ್ನ, ಶಿವರಾಮು, ಪ್ರದೀಪ್‌ ಗುಂಟಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ದೀಪಾಲಂಕಾರದ ವೈಭವದಲ್ಲಿ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿಯತ್ತ ಎಲ್ಲರ ಚಿತ್ತ ಹರಿದಿದ್ದು, ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ‌ ದಸರಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ (ಅ.15) ಅರಮನೆ ಆವರಣಕ್ಕೆ ಸೀಮಿತವಾಗಿ ವಿಜಯದಶಮಿ ಮೆರವಣಿಗೆ ನಡೆಯಲಿದೆ.

ಕೋವಿಡ್‌–19 ಕಾರಣ ಸತತ ಎರಡನೇ ವರ್ಷವೂ ಜಂಬೂಸವಾರಿಯನ್ನು ನೇರವಾಗಿ ಕಣ್ತುಂಬಿಕೊಳ್ಳಲು ಜನಸಾಮಾನ್ಯರಿಗೆ ಅವಕಾಶವಿಲ್ಲ. ಆವರಣದಲ್ಲಿ 500 ಜನರನ್ನು ಸೇರಿಸಲು ಮಾತ್ರ ಸರ್ಕಾರ ಅನುಮತಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡುತ್ತಿದೆ.

ಅಂದು ಸಂಜೆ 4.36ಕ್ಕೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5ಕ್ಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಚಾಮುಂಡಿಬೆಟ್ಟದಿಂದ ರಥದಲ್ಲಿ ಮೆರವಣಿಗೆಯಲ್ಲಿ ತರಲಾಗುತ್ತದೆ.

ADVERTISEMENT

ಕಾಡಾನೆ ಹಾಗೂ ಹುಲಿ ಸೆರೆ ಕಾರ್ಯಾಚರಣೆಯ ಮುಂದಾಳು ಎನಿಸಿರುವ ಅಭಿಮನ್ಯು ಆನೆಯು ಸತತ ಎರಡನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಕೇವಲ 250ರಿಂದ 300 ಮೀಟರ್‌ ದೂರಕ್ಕೆ ಸೀಮಿತವಾಗಿ ಜಂಬೂಸವಾರಿ ನಡೆಯಲಿದೆ. ಆರು ಆನೆಗಳು, ಆರು ಸ್ತಬ್ಧಚಿತ್ರ, 12 ಕಲಾ ತಂಡಗಳು, ಅಶ್ವಾರೋಹಿ ಪಡೆ ಪಾಲ್ಗೊಳ್ಳಲಿವೆ.

ಅರಮನೆಯಲ್ಲಿ ಆಯುಧಪೂಜೆ: ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಅರಮನೆಯ ರಾಜವಂಶಸ್ಥರ ಖಾಸಗಿ ನಿವಾಸದಲ್ಲಿ ಗುರುವಾರ, ಶುಕ್ರವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆ, ವಾಹನ ಹಾಗೂ ಆಯುಧಗಳಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.

ಪ್ರವಾಸೋದ್ಯಮ ಚೇತರಿಕೆ: ಏಳು ದಿನಗಳಿಂದ ಅರಮನೆ, ರಸ್ತೆಗಳು, ವೃತ್ತಗಳು, ಪಾರಂಪರಿಕ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಜನ ಮಳೆ ಲೆಕ್ಕಿಸದೆ ಕುಟುಂಬ ಸಮೇತರಾಗಿ ಬಂದು ವೀಕ್ಷಿಸುತ್ತಿರುವುದು ಪ್ರವಾಸೋದ್ಯಮ ಚೇತರಿಕೆಗೆ ಪುಷ್ಟಿ ನೀಡಿದೆ.

ಅರಮನೆ ಪ್ರವೇಶಕ್ಕೆ ನಿರ್ಬಂಧ

ಆಯುಧಪೂಜೆ ಪ್ರಯುಕ್ತ ರಾಜವಂಶಸ್ಥರು ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸುವುದರಿಂದ ಗುರುವಾರ (ಅ.14) ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಶುಕ್ರವಾರ (ಅ.15) ವಿಜಯದಶಮಿ ಕಾರಣ ಸಂಪೂರ್ಣ ದಿನ ಪ್ರವೇಶವಿರುವುದಿಲ್ಲ.

***

ಜಂಬೂಸವಾರಿಗೆ 6 ಆನೆ ಆಯ್ಕೆ ಮಾಡಿದ್ದು, 3 ಬಾರಿ ತಾಲೀಮು ನಡೆಸಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಮೆರವಣಿಗೆ ಯಶಸ್ವಿಗೊಳಿಸುತ್ತೇವೆ

- ವಿ.ಕರಿಕಾಳನ್‌, ಡಿಸಿಎಫ್‌ (ವನ್ಯಜೀವಿ)

ಸಾರಾಂಶ

ದೀಪಾಲಂಕಾರದ ವೈಭವದಲ್ಲಿ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿಯತ್ತ ಎಲ್ಲರ ಚಿತ್ತ ಹರಿದಿದ್ದು, ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ‌ ದಸರಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ (ಅ.15) ಅರಮನೆ ಆವರಣಕ್ಕೆ ಸೀಮಿತವಾಗಿ ವಿಜಯದಶಮಿ ಮೆರವಣಿಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.