ಬೆಂಗಳೂರು: ಡಿ.ಕೆ. ಶಿವಕುಮಾರ್ ಕುರಿತಂತೆ ಸಲೀಂ ಮತ್ತು ವಿ.ಎಸ್. ಉಗ್ರಪ್ಪ ಅವರ ಸಂಭಾಷಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಇದಕ್ಕೆ ಸರಣಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿಯ ಸಿಡಿ ಶಾಸಕರೊಬ್ಬರು ಹಾಸಿಗೆಯ ಮೇಲೂ ಬಿಜೆಪಿಯ ಭ್ರಷ್ಟಾಚಾರವನ್ನು ಕನವರಿಸಿದ್ದರು. ಅದರ ಬಗ್ಗೆ ಬಿಜೆಪಿ ಸ್ಪಷ್ಟನೆ ಕೊಡುವುದೇ!? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಆಧಾರ ರಹಿತವಾಗಿ ಮಾತನಾಡಿದ್ದ ಸಲೀಂ ಅವರನ್ನು ಅಮಾನತು ಮಾಡಿದ್ದೇವೆ. ತಮ್ಮ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆಗೈದ ಯತ್ನಾಳ್, ಹೆಚ್. ವಿಶ್ವನಾಥ್ ಅವರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳುವ ಧೈರ್ಯ ತೋರುವುದೇ ಅಥವಾ ಅವರ ಆರೋಪಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ತೋರುವುದೇ? ಎಂದು ಪ್ರಶ್ನಿಸಿದೆ.
ಆಪರೇಷನ್ ಕಮಲದಲ್ಲಿ ಭ್ರಷ್ಟ ಬಿಜೆಪಿ ಪಕ್ಷದಿಂದ ನನಗೆ ಹಣದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕ ಶ್ರೀಮಂತ್ ಪಾಟೀಲ್ ಹೇಳಿದ್ದರು. ಅವರ ಹೇಳಿಕೆಯಿಂದ ಬಿಜೆಪಿಯ ಅಧಿಕಾರ ದಾಹ, ಭ್ರಷ್ಟಾಚಾರ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳೆಲ್ಲವೂ ಬಹಿರಂಗವಾಗಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಖರ್ಚು ಮಾಡಿದ ಭ್ರಷ್ಟ ಹಣದ ಲೆಕ್ಕ ನೀಡುವುದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸರ್ಕಾರದ ಭ್ರಷ್ಟಾಚಾರವನ್ನು, ಕುಟುಂಬ ಹಸ್ತಕ್ಷೇಪವನ್ನು, ಬಿಜೆಪಿ ನಡೆಸಿದ ಹವಾಲ ದಂಧೆಯನ್ನು, ಬಿಜೆಪಿಗರ ಅಕ್ರಮ ಸಂಪತ್ತನ್ನು, ಮಾರಿಷನ್‌ನಲ್ಲಿ ಬಿಜೆಪಿಗರು ಇಟ್ಟಿರುವ ಬ್ಲಾಕ್ ಮನಿ ಎಲ್ಲದರ ಬಗ್ಗೆಯೂ ರಾಜಾರೋಷವಾಗಿ ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದರು. ಇದಕ್ಕೆ ಉತ್ತರಿಸಿ, ಬಿಜೆಪಿ ಜವಾಬ್ದಾರಿಯುತ ಆಡಳಿತ ಪಕ್ಷವೇನಿಸಿಕೊಳ್ಳಲಿ ಎಂದು ಯತ್ನಾಳ ಆರೋಪದ ವಿಡಿಯೊವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕರ್ನಾಟಕದ ತಾಲಿಬಾನಿಕರಣಕ್ಕೆ ಸಿಎಂ ಪರೋಕ್ಷ ಪರವಾನಗಿ ನೀಡಿದ್ದಾರೆ. ಸಮಾಜದಲ್ಲಿ ನಡೆಯುವ 'ಆಕ್ಷನ್, ರಿಯಾಕ್ಷನ್'ಗಳಿಗೆ ಮೃದು ಧೋರಣೆಯಲ್ಲಿ ಮಾತನಾಡಿ ಗಲಭೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಡಿಯೊ ಪೋಸ್ಟ್ ಮಾಡಲಾಗಿದೆ.
ಇದಕ್ಕೂ ಮುನ್ನ, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ವೇದಿಕೆ ಮೇಲೆ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿದ ಬಗ್ಗೆ ವೈರಲ್ ಆಗಿದ್ದ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿ ಹೈಕಮಾಂಡಿಗೆ ಸಲ್ಲಿಕೆಯಾದ ಕಪ್ಪ ಕಾಣಿಕೆ ಯಾವ ಲೂಟಿಯದ್ದು, ಯಾವ ಭ್ರಷ್ಟಾಚಾರದ್ದು ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸುವುದೇ? ಹೈಕಮಾಂಡಿಗೆ ಕಪ್ಪ ಸಲ್ಲಿಸಿದ್ದಕ್ಕಾಗಿಯೇ ಯಡಿಯೂರಪ್ಪನವರು ಜೈಲಿಗೆ ಹೋಗುವ ಸ್ಥಿತಿ ಬಂದಿದ್ದೇ? ಈಗ ಹೈಕಮಾಂಡ್ ಎಷ್ಟು ಕೋಟಿ ವಸೂಲಿ ಮಾಡುತ್ತಿದೆ ಎಂಬುದನ್ನ ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯ ಸಿಡಿ ಶಾಸಕರೊಬ್ಬರು ಹಾಸಿಗೆಯ ಮೇಲೂ ಬಿಜೆಪಿಯ ಭ್ರಷ್ಟಾಚಾರವನ್ನು ಕನವರಿಸಿದ್ದರು. ಅದರ ಬಗ್ಗೆ ಬಿಜೆಪಿ ಸ್ಪಷ್ಟನೆ ಕೊಡುವುದೇ!? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.